ತಿರುಪತಿ, (www.bengaluruwire.com) : ದೇಶದ ಅತ್ಯಂತ ಶ್ರೀಮಂತ ದೇವರಾದ ತಿರುಪತಿಯ ಶ್ರೀ ವೆಂಕಟೇಶ್ವರನಿಗೆ ಭಕ್ತರೊಬ್ಬರು ಮೂರು ಕೋಟಿ ರೂ. ಬೆಲೆಬಾಳುವ ಬಂಗಾರದ ಆಭರಣವನ್ನು ದೇವಸ್ಥಾನಕ್ಕೆ ದಾನ ಮಾಡಿದ್ದಾರೆ. ಈ ವಿಷಯ ಸಾಕಷ್ಟು ಸುದ್ದಿ ಮಾಡಿದೆ.
ಶ್ರೀ ದೇವರಿಗೆ ಬರೋಬ್ಬರಿ 5.3 ಕೆ.ಜಿ. ತೂಕದ ಚಿನ್ನದ ಕೈಗಳನ್ನು ದೇವರಿಗೆ ಅರ್ಪಿಸಿ ಭಕ್ತಿ ಮೆರೆದಿದ್ದಾರೆ. ಬೆಲೆ ಬಾಳುವ ವಜ್ರ ಹಾಗೂ ಮಾಣಿಕ್ಯಗಳನ್ನು ಒಳಗೊಂಡ ವರದ ಹಸ್ತ ಮತ್ತು ಕಟಿಕ ಹಸ್ತ ಎಂದು ಕರೆಯಾಗುವ ಈ ಬಂಗಾರದ ಕೈಗಳನ್ನು ತಿರುಪತಿ ತಿರುಮಲ ದೇವಸ್ಥಾನದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮ ರೆಡ್ಡಿ ಅವರಿಗೆ ರಂಗನಾಯಕುಲ ಮಂಟಪದಲ್ಲಿ ಹಸ್ತಾಂತರಿಸಿದ್ದಾರೆ.
ಹೀಗೆ ಭಾರೀ ಬೆಲೆ ಬಾಳುವ ಈ ವಜ್ರಕಚಿತ ಚಿನ್ನದ ಕೈಗಳನ್ನು ನೀಡಿರುವ ತಮ್ಮ ಹೆಸರನ್ನು ಎಲ್ಲೂ ಬಹಿರಂಗಪಡಿಸದಂತೆ ಷರತ್ತು ಹಾಕಿದ್ದಾರೆ ಎಂದು ಟಿಟಿಡಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜಕಾರಣಿಗಳು, ಉದ್ಯಮಿಗಳು ಹೀಗೆ ನಾನಾ ಕ್ಷೇತ್ರಗಳಲ್ಲಿರುವ ಶ್ರೀ ವೆಂಕಟೇಶ್ವರನ ಭಕ್ತರು ಏಳು ಬೆಟ್ಟಗಳ ಒಡೆಯನಿಗೆ ಕೆಜಿಗಟ್ಟಲೆ ಚಿನ್ನ, ವಜ್ರ ಕಚಿತ ಆಭರಣಗಳನ್ನು ಆಗಾಗ ನೀಡುತ್ತಲೇ ಇರುತ್ತಾರೆ. ದೇಶದಲ್ಲಿರುವ ಶ್ರೀಮಂತ ದೇವಸ್ಥಾನಗಳಲ್ಲಿ ತಿರುಪತಿ ದೇವಸ್ಥಾನವು ಅಗ್ರಪಂಕ್ತಿಯಲ್ಲಿದೆ.
ಡಿ.16ರಿಂದ ಧನುರ್ಮಾಸ ಆರಂಭ :
ಡಿ.16ರ ಮಧ್ಯಾಹ್ನ 12.26ರಿಂದ ಶ್ರೇಷ್ಠವಾದ ಧನುರ್ಮಾಸ ಆರಂಭವಾಗಲಿದ್ದು, ಈ ಪರ್ವ ಕಾಲದ ದಿನಗಳಲ್ಲಿ ಮುಂಜಾನೆ ಶ್ರೀದೇವರಿಗೆ ನಡೆಯುತ್ತಿದ್ದ ಸುಪ್ರಭಾತ ಸೇವೆಗೆ ಬದಲಾಗಿ ತಿರುಪ್ಪಾವೈ ಸ್ತ್ರೋತ್ರಗಳ ಪಾರಾಯಣ ಸೇವೆ ನಡೆಯಲಿದೆ.