ಬೆಂಗಳೂರು, (www.bengaluruwire.com) : ಐಟಿಐ ತನ್ನ ಗುತ್ತಿಗೆ ಕಾರ್ಮಿಕರನ್ನು ಬುಧವಾರ ಬೆಳಗ್ಗೆ ಏಕಾ ಏಕಿ ಕೆಲಸಕ್ಕೆ ಬರದಂತೆ ತಡೆದಿದೆ. ಈ ಹಿನ್ನಲೆಯಲ್ಲಿ ಗುತ್ತಿಗೆ ಕಾರ್ಮಿಕರು ಕೆಆರ್ ಪುರದಲ್ಲಿನ ಸಂಸ್ಥೆಯ ಪ್ರವೇಶ ದ್ವಾರದ ಎದುರೇ ಪ್ರತಿಭಟನೆ ಕೈಗೊಂಡಿದ್ದಾರೆ.
ಐಟಿಐನಲ್ಲಿ ಕಳೆದ 30 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಎಂಜಿನಿಯರಿಂಗ್, ಗುಣಮಟ್ಟ ಖಾತರಿ, ಹಣಕಾಸು, ವಾಹನ ಚಾಲನೆ ಸೇರಿದಂತೆ ಮತ್ತಿತರ ವಿಭಾಗಗಳಲ್ಲಿ ಮಹಿಳೆಯರು, ಪುರುಷರು ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.
ಇಷ್ಟು ವರ್ಷ ಕಾರ್ಯನಿರ್ವಹಿಸಿದ್ದು, ತಮ್ಮನ್ನು ಖಾಯಂಮಾತಿ ಮಾಡುವಂತೆ ಒತ್ತಾಯಿಸಿ ಈ ಗುತ್ತಿಗೆ ನೌಕರರು ಎಐಸಿಸಿಟಿಯು (AICCTU) ಸಂಘಟನೆಗೆ ಸೇರಿ ಆ ಮೂಲಕ ಐಟಿಐ ಆಡಳಿತ ಮಂಡಳಿಯನ್ನು ಒತ್ತಾಯಿಸುತ್ತಿದ್ದರು.
ಇತ್ತೀಚೆಗೆ ಗುತ್ತಿಗೆ ಕಾರದಮಿಕರ ಖಾಯಂ ಮಾಡುವಂತೆ ಕಾರ್ಮಿಕ ಇಲಾಖೆಗೂ ಈ ಬಗ್ಗೆ ಮನವಿ ಮಾಡಿದ್ದರು. ಕಾರ್ಮಿಕ ಇಲಾಖೆ ಈ ವಿಷಯದ ಕುರಿತಂತೆ ಇನ್ನೂ ಪರಿಶೀಲನೆ ನಡೆಸುತ್ತಿರುವಾಗಲೇ 130 ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ಬರದಂತೆ ಐಟಿಐ ಆಡಳಿತ ಮಂಡಳಿ ತಡೆದಿದೆ.
ಈ ಹಿನ್ನಲೆಯಲ್ಲಿ ದಶಕಗಳಿಂದ ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದ 130 ಕಾರ್ಮಿಕರು ಈಗ ಬೀದಿ ಪಾಲಾಗುವಂತಾಗಿದೆ. ಐಟಿಐ ಕ್ರಮದ ಬಗ್ಗೆ ಎಐಸಿಸಿಟಿಯು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.