ಬೆಂಗಳೂರು, (www.bengaluruwire.com) : ರಾಜ್ಯದಲ್ಲಿ ಮಂಗಗಳಿಗೆ ವಿಷ ಹಾಕಿ ಸಾಯಿಸಿರುವ ಅನುಮನಾಸ್ಪದ ಘಟನೆ ನಡೆದಿದೆ. ಸೆಪ್ಟೆಂಬರ್ ನಲ್ಲಿ ಇಂತಹುದೇ ಘಟನೆ ಮಾಸುವ ಮುನ್ನ ಈ ಮಾರಣಹೋಮ ನಡೆದಿದೆ.
ತಮ್ಮ ಪಾಡಿಗೆ ಆಹಾರ ಅರಸಿ ಬಂದ ಎರಡು ಮಂಗಗಳು ಮೃತಪಟ್ಟಿರುವ ದುರ್ಘಟನೆ ಬಸವೇಶ್ವರ ನಗರದಲ್ಲಿ ವರದಿಯಾಗಿದೆ. ಈ ಮಂಗಗಳಿಗೆ ವಿಷಪ್ರಾಶಾನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣ ಸಂಬಂಧ ಪ್ರತ್ಯಕ್ಷಿದರ್ಶಿಯೊಬ್ಬರು ಕೇಂದ್ರ ಸಚಿವೆ ಹಾಗೂ ಪ್ರಾಣಿಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿರಿಯ ಅರಣ್ಯಾಧಿಕಾರಿಗಳಿಗೆ ಇ-ಮೇಲ್ ಮುಖಾಂತರ ದೂರು ನೀಡಿದ್ದಾರೆ.
ಬಸವೇಶ್ವರ ನಗರದ ಕಟ್ಟಡವೊಂದರ ಮೇಲ್ಭಾಗದಲ್ಲಿ ಸತ್ತ ಸ್ಥಿತಿಯಲ್ಲಿ ಒಂದು ಮಂಗ ಪತ್ತೆಯಾದರೆ, ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಂಗವೊಂದನ್ನು ಕಂಡ ಸ್ಥಳೀಯರು ಬಿಬಿಎಂಪಿ ವನ್ಯಜೀವಿ ಕಾರ್ಯಕರ್ತರ ಮೂಲಕ ಪೀಪಲ್ಸ್ ಫಾರ್ ಎನಿಮಲ್ (ಪಿಎಫ್ ಎ) ಸಂಸ್ಥೆಯ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗದೆ ಅಲ್ಲಿ ಮೃತಪಟ್ಟಿದೆ.
ಬಸವೇಶ್ವರ ನಗರದ ಶೋಭಾ ಎಲೈಟ್ ಹೋಟೆಲ್ ನ ಇಬ್ಬರು ಸಿಬ್ಬಂದಿ ಈ ಮಂಗಗಳಿಗೆ ಆಹಾರದಲ್ಲಿ ವಿಷ ಹಾಕಿರುವ ಸಾಧ್ಯೆತೆಯಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಮಂಗಗಳಿಗೆ ವಿಷ ಹಾಕಿದ ಶಂಕೆ ಕುರಿತಂತೆ ಬೆಂಗಳೂರು ವೈರ್ ಆ ಮನಕಲುಕುವ ಘಟನೆಯ ಪ್ರತ್ಯಕ್ಷದರ್ಶಿ ಮೀನಾಕ್ಷಿ ನಾರಾಯಣ್ ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ “ಭಾನುವಾರ ಬೆಳಗ್ಗೆ ಒಂದು ಮರಿಮಂಗ ಬಹುಮಹಡಿ ಕಟ್ಟಡದ ಸಜ್ಜದ ಮೇಲೆ ಬಹಳ ಕಷ್ಟಪಟ್ಟು ಹತ್ತಿ ದೊಪ್ಪೆಂದು ಸಜ್ಜದ ಮೇಲೆ ಕುಸಿದು ಸತ್ತುಹೋಯ್ತು. ಮತ್ತೊಂದು ದೊಡ್ಡ ಮಂಗ ಕಾಂಪೌಂಡ್ ಮೇಲೆ ಕಣ್ಣುಮುಚ್ಚಿ ಕುಳಿತು ನರಳಾಡುತ್ತಿತ್ತು. ಬಹುಶಃ ವಿಷ ಹಾಕಿದ ಆಹಾರ ತಿಂದ ಕಾರಣಕ್ಕೇನೋ ಎಲ್ಲೂ ಚಲಿಸದೆ ಕೂತಿತ್ತು. ಅದನ್ನು ಗಮನಿಸಿ ಪಿಎಫ್ ಎ ಸಂಸ್ಥೆಗೆ ತಿಳಿಸಿದೆ. ಚಿಕಿತ್ಸೆಗೆ ಆ ಮಂಗವನ್ನು ಕೊಂಡು ಹೋದರು ಅದು ಬದುಕುಳಿಯಲಿಲ್ಲ.”
“ಹತ್ತಿರದಲ್ಲೆ ಶೋಭಾ ಎಲೈಟ್ ಹೋಟೆಲ್ ಇದ್ದು, ಅಲ್ಲಿನ ಇಬ್ಬರು ಸಿಬ್ಬಂದಿ ಈ ಮಂಗಗಳಿಗೆ ಆಹಾರದಲ್ಲಿ ವಿಷಹಾಕಿ ಕೊಟ್ಟಿರುವ ಬಗ್ಗೆ ಗುಮಾನಿಯಿದೆ. ಪಕ್ಕದ ಕಟ್ಟಡದ ಸೆಕ್ಯುರಿಟಿ ಗಾರ್ಡ್ ಕೂಡ ಇದೇ ಅನುಮಾನ ವ್ಯಕ್ತಪಡಿಸಿದ್ದಾರೆ. ಕಣ್ಣ ಮುಂದೆಯೇ ಮೂಕಜೀವಿಗಳು ಸತ್ತು ಹೋಗಿದ್ದನ್ನು ಕಂಡು ಬಹಳ ಬೇಸರವಾಗಿದೆ. ಈ ಘಟನೆ ಸಂಬಂಧ ಮುಖ್ಯಮಂತ್ರಿ, ಕೇಂದ್ರ ಸಚಿವೆ ಮೇನಕಾಗಾಂಧಿ, ಅರಣ್ಯ ಇಲಾಖೆಗೆ ಇ-ಮೇಲ್ ಮೂಲಕ ದೂರು ನೀಡಿದ್ದೇನೆ. ಈ ಪ್ರಕರಣವನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬಹಳ ದಿನಗಳಿಂದ ಈ ಭಾಗದಲ್ಲಿ ಹಿಂಡಿನಲ್ಲಿ 10-15 ಮಂಗಗಳು ಬರುತ್ತಿದ್ದವು. ನಮ್ಮ ಮನೆ ಹಾಗೂ ಅಕ್ಕಪಕ್ಕದ ಮನೆ ಹಿಂಭಾಗದ ಗಿಡ – ಮರ ಹತ್ತಿ ಹೂ- ಹಣ್ಣು, ತೆಂಗಿನಕಾಯಿ ಕಿತ್ತು ಹೋಗುತ್ತಿದ್ದವು. ಅವು ಎಂದೂ ಯಾರಿಗೂ ತೊಂದರೆ ಕೊಟ್ಟಿರಲಿಲ್ಲ. ಈ ಘಟನೆಯಿಂದ ತಮಗೆ ಬಹಳ ವೇದನೆಯಾಗುತ್ತಿದೆ” ಎಂದು ಘಟನೆ ಪ್ರತ್ಯಕ್ಷದರ್ಶಿ ಮೀನಾಕ್ಷಿ ನಾರಾಯಣ್ ನೊಂದು ನುಡಿದಿದ್ದಾರೆ.
“ಬಸವೇಶ್ವರನಗರದಲ್ಲಿ ಕಟ್ಟಡದ ಹಿಂಭಾಗದ ಸಜ್ಜದ ಮೇಲೆ ಸತ್ತ ಸ್ಥಿತಿಯಲ್ಲಿರುವ ಮಂಗದ ಕಳೇಬರದ ಸ್ಥಳ ಮಹಜರು ಮಾಡಿ,ಮೃತದೇಹವನ್ನು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ನೀಡಿದ್ದು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಇನ್ನೊಂದೆಡೆ ಪಿಎಫ್ ಎ ಸಂಘಟನೆಯವರು ಚಿಕಿತ್ಸೆ ಫಲಕಾರಿಯಾಗದೆ ಸತ್ತ ಮತ್ತೊಂದು ಮಂಗದ ಮರಣೋತ್ತರ ಪರೀಕ್ಷೆ ವರದಿ ಅರಣ್ಯ ಇಲಾಖೆಗೆ ನೀಡಲಿದ್ದಾರೆ. ಈತನಕ ಅರಣ್ಯ ಇಲಾಖೆಗೆ ಯಾರೂ ದೂರು ನೀಡಿಲ್ಲ. ಅಗತ್ಯವಾದರೆ ಹೊರರಾಜ್ಯದ ಲ್ಯಾಬ್ ಗೆ ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗುತ್ತದೆ” ಎಂದು ಹೇಳಿದ್ದಾರೆ ಕಾಡುಮಲ್ಲೇಶ್ವರ ವಲಯ ಅರಣ್ಯಾಧಿಕಾರಿ ಮಂಜುನಾಥ್.
ಜುಲೈ- ಸೆಪ್ಟೆಂಬರ್ ನಲ್ಲಿ ವಿಷಹಾಕಿ 54 ಕೋತಿಗಳನ್ನು ಕೊಲ್ಲಲಾಗಿತ್ತು :
ಜುಲೈ ತಿಂಗಳಿನಲ್ಲಿ ಹಾಸನ ಜಿಲ್ಲೆ ಚೌಡೇನಹಳ್ಳಿಯಲ್ಲಿ ದುಷ್ಕರ್ಮಿಗಳು ಮಂಗಗಳಿಗೆ ವಿಷ ಹಾಕಿ 38 ಮಂಗಗಳು ಮೃತಪಟ್ಟಿದ್ದು ಸಾಕಷ್ಟು ಸುದ್ದಿಯಾಗಿತ್ತು. ಈ ಮನ ಕಲುಕುವ ಅಮಾನವೀಯ ಘಟನೆ ಮರೆಯುವ ಮುನ್ನವೇ ಸೆಪ್ಟೆಂಬರ್ ನಲ್ಲಿ 16 ಮಂಗಗಳಿಗೆ ಇದೇ ರೀತಿ ವಿಷ ಹಾಕಿ ಕೊಂದು ಅವುಗಳ ಶವವನ್ನು ದುಷ್ಕರ್ಮಿಗಳು ಹೆದ್ದಾರಿಯಲ್ಲಿ ಎಸೆದು ಹೋಗಿದ್ದರು. ಈಗ ಮತ್ತದೇ ರೀತಿಯ ಪ್ರಕರಣ ವರದಿಯಾಗಿದೆ.
ಎರಡು ಕೋತಿಗಳ ಸಾವನ್ನಪಿರುವ ಪ್ರಕರಣ ಸಂಬಂಧ ಮಲ್ಲೇಶ್ವರದಲ್ಲಿರುವ ಕಾಡುಮಲ್ಲೇಶ್ವರ ವಲಯಾಧಿಕಾರಿಗಳು ಅರಣ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.