ನವದೆಹಲಿ, (www.bengaluruwire.com) : ಕೇಂದ್ರ ಸರ್ಕಾರ ರಾಷ್ಟ್ರ ವ್ಯಾಪಿ, ರೈತರ ಸುಧೀರ್ಘ ಪ್ರತಿಭಟನೆಗೆ ಕೊನೆಗೂ ಮಣಿದಿದೆ. ಈ ಹಿಂದೆ ಜಾರಿಗೆ ತಂದಿದ್ದ ಮೂರು ವಿವಾದಿತ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ವಾಪಸ್ ಪಡೆಯುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಈ ಘೋಷಣೆ ಮಾಡಿದ್ದಾರೆ.
ಗುರುನಾನಕರ ಜಯಂತಿ ದಿನದಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ, ಉತ್ತರಪ್ರದೇಶ ಹಾಗೂ ಪಂಜಾಬ್ ಸಾರ್ವತ್ರಿಕ ಚುನಾವಣೆಗೂ ಮುನ್ನ ಈ ಮಹತ್ವದ ವಿಷಯ ತಿಳಿಸಿದ್ದಾರೆ.
ಈ ತಿಂಗಳ ಅಂತ್ಯದಲ್ಲಿ ಸಂಸತ್ ಅಧಿವೇಶನ ನಡೆಯಲಿದ್ದು, ಈ ಮೂರು ಕೃಷಿ ಕಾಯ್ದೆ (Three Form Laws)ಗಳನ್ನು ಹಿಂಪಡೆಯಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಇಷ್ಟು ದಿನಗಳ ಕಾಲ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರು ಗುರುನಾನಕರ ಜಯಂತಿ (Gurunanak Jayanthi) ಯ ಪವಿತ್ರ ದಿನದಂದು ತಮ್ಮ ಮನೆಗಳಿಗೆ, ವ್ಯವಸಾಯ ಮಾಡುವ ಭೂಮಿಗೆ ತೆರಳಿ ಹೊಸ ಜೀವನ ಆರಂಭಿಸಿ” ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಮನವಿ ಮಾಡಿದ್ದಾರೆ.
ಇದೇ ವೇಳೆ ನೂತನ ಮೂರು ಕೃಷಿ ಕಾಯ್ದೆಗಳು ದೇಶದಲ್ಲಿನ ಸಣ್ಣ ಹಾಗೂ ಮಧ್ಯಮ ರೈತರು ಮಾಡುತ್ತಿರುವ ಕೃಷಿಯಲ್ಲಿ ಮಹತ್ವದ ಸುಧಾರಣೆ ತರುವ ಮಹೋನ್ನತ ಉದ್ದೇಶ ಹೊಂದಿದ್ದವು. “ಏನೆಲ್ಲಾ ತಾವು ಮಾಡಿದ್ದೇವೆಯೋ ಅದು ರೈತರಿಗಾಗಿ. ತಾವು ಏನು ಮಾಡುತ್ತೇವೆ ಅದು ಈ ದೇಶಕ್ಕಾಗಿ. ತಾವು ಎಲ್ಲಾ ರೈತರನ್ನು ಈ ಮೂರು ಕೃಷಿ ಕಾಯ್ದೆ ವಿಚಾರವಾಗಿ ಮನವರಿಕೆ ಮಾಡಿಕೊಡಲು ಸಾಧ್ಯವಾಗಲಿಲ್ಲ. ಕೆಲವು ವರ್ಗದ ರೈತರಷ್ಟೆ ಈ ಕಾಯ್ದೆಯನ್ನು ವಿರೋಧಿಸಿದ್ದರು. ಆದರೂ ತಾವು ಈ ಕಾಯ್ದೆ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸುತ್ತಾ, ತಿಳುವಳಿಕೆ ನೀಡುತ್ತಾ ಬಂದಿದ್ದೆವು” ಎಂದು ತಿಳಿಸಿದ್ದಾರೆ.
ಇದೇ ಸಂದರ್ಭಲ್ಲಿ ಶೂನ್ಯ ಬೆಲೆ ಆಧಾರಿತ ಕೃಷಿ ಪದ್ಧತಿ (Zero budgeting based agriculture) ಜಾರಿಗೆ ತರಲು ಒಂದು ಸಮಿತಿ ರಚಿಸಲು ನಿರ್ಧರಿಸಲಾಗಿದ್ದು, ಅದರಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಪ್ರತಿನಿಧಿಗಳು, ರೈತರು, ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಅರ್ಥಶಾಸ್ತ್ರಜ್ಞರು ಇರುತ್ತಾರೆ. ದೇಶದ ಅಗತ್ಯಕ್ಕೆ ಅನುಗುಣವಾಗಿ ಬೆಳೆ ಪದ್ಧತಿಗಳ ಬದಲಾವಣೆ ಹಾಗೂ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿ ಹಾಗೂ ಪಾರದರ್ಶಕತೆ ತರಲು ಪ್ರಯತ್ನಿಸುವುದಾಗಿ ಪ್ರಧಾನಿ ಮೋದಿ ಇದೇ ವೇಳೆ ಭರವಸೆ ನೀಡಿದರು.
ಕೇಂದ್ರ ಸರ್ಕಾರ ಈ ಹಿಂದೆ ಜಾರಿಗೆ ತಂದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಪಂಜಾಬ್, ಹರ್ಯಾಣ, ರಾಜಸ್ತಾನ ಹಾಗೂ ಉತ್ತರಪ್ರದೇಶ ರಾಜ್ಯಗಳ ರೈತರು ಕಳೆದ ವರ್ಷ ನವೆಂಬರ್ ನಿಂದ ನವದೆಹಲಿಯ ಹೊರಗೆ ನಿರಂತರ ಪ್ರತಿಭಟನೆ ಕೈಗೊಂಡಿದ್ದರು. ಉತ್ತರ ಭಾರತ ಹಲವು ರಾಜ್ಯಗಳಲ್ಲಿ ಇದೇ ಕಾರಣಕ್ಕೆ ಬಿಜೆಪಿ ಪಕ್ಷವು ರೈತರ ಕೆಂಗಣ್ಣಿಗೆ ಗುರಿಯಾಗಿತ್ತು. ಮುಂದೆ ಸಾರ್ವತ್ರಿಕ ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ (Assembly Election) ಹಾಗೂ 2024ರಲ್ಲಿ ರಾಷ್ಟ್ರದಲ್ಲಿ ಲೋಕಸಭೆ ಚುನಾವಣೆ (Lokasabha Election) ಹಿನ್ನಲೆಯಲ್ಲಿ ಅನಿವಾರ್ಯವಾಗಿ ರೈತರ ಒತ್ತಡಕ್ಕೆ ಮಣಿದು ಕಾಯ್ದೆ ಹಿಂಪಡೆಯುವ ನಿರ್ಧಾರಕ್ಕೆ ಬಂದಿದ್ದಾಗಿ ವಿಶ್ಲೇಷಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ ನಿರ್ಧಾರಕ್ಕೆ ವ್ಯಾಪಕ ಶ್ಲಾಘನೆ :
“ಜೂನ್ 2020ರಲ್ಲಿ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದ ಕಾರ್ಪೊರೇಟ್ ಪರ ಎಲ್ಲಾ ಮೂರು ರೈತ ವಿರೋಧಿ ಕರಾಳ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿರುವುದನ್ನು ಸಂಯುಕ್ತ ಕಿಸಾನ್ ಮೋರ್ಚಾ ಸ್ವಾಗತಿಸುತ್ತದೆ.”
“ಕಿಸಾನ್ ಮೋರ್ಚಾ, ಸಂಸದೀಯ ಪ್ರಕ್ರಿಯೆಗಳ ಮೂಲಕ ಈ ನಿರ್ಧಾರ ಕಾರ್ಯಗತವಾಗುವುದನ್ನು ನಿರೀಕ್ಷಿಸುತ್ತದೆ. ಹೀಗೆ ಇದು ಕಾರ್ಯಗತಗೊಂಡರೆ, ಭಾರತದಲ್ಲಿ ಒಂದು ವರ್ಷದ ಸುಧೀರ್ಘ ರೈತರ ಹೋರಾಟಕ್ಕೆ ಬಹುದೊಡ್ಡ ಐತಿಹಾಸಿಕ ವಿಜಯವಾಗಲಿದೆ. ಸುಮಾರು 700ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಲಖೀಂಪುರ್ ಖೇರಿ ಹತ್ಯಾಕಾಂಡ ಸೇರಿದಂತೆ ಈ ಎಲ್ಲಾ ತಡೆಯಬಹುದಾಗಿದ್ದ ಸಾವುಗಳಿಗೆ ಕೇಂದ್ರದ ಮೊಂಡು ಹಠಮಾರಿತನವೇ ಕಾರಣ” ಎಂದು ಸಂಯುಕ್ತ ಕಿಸಾನ್ ಮೋರ್ಚಾ (Samyukt Kisan Morcha)ದ ಬಲ್ ಬೀರ್ ಸಿಂಗ್ ರಾಜೀವಾಲ್, ಡಾ.ದರ್ಶನ್ ಪಾಲ್, ಗುರ್ ನಾಮ್ ಸಿಂಗ್ ಚುರಾನಿ, ಹನನ್ ಮೊಲ್ಲಾ, ಜಗಜಿತ್ ಸಿಂಗ್ ದಲ್ಲೇವಾಲ್, ಜೋಗಿಂದರ್ ಸಿಂಗ್ ಉಗ್ರಾಹನ್, ಶಿವಕುಮಾರ್ ಶರ್ಮ ಹಾಗೂ ಯಧುವೀರ್ ಸಿಂಗ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲೂ ಪ್ರಧಾನಿ ನಿರ್ಧಾರಕ್ಕೆ ವಿಪಕ್ಷ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಸ್ವಾಗತ :
“ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂಬ ದೇಶದ ಅನ್ನದಾತರ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿದೆ. ಇದು ದೇಶದ ಅನ್ನದಾತ ಮತ್ತು ಕಾಂಗ್ರೆಸ್ ಹೋರಾಟಕ್ಕೆ ತಂದ ಚಾರಿತ್ರಿಕ ಜಯ” ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
“ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದ ಮೂರು ಕೃಷಿ ಕಾಯ್ದೆಗಳು ಎಪಿಎಂಸಿ ಮಾರುಕಟ್ಟೆಗೆ ಮಾರಕವಾಗಿದ್ದವು. ಬೆಂಬಲ ಬೆಲೆಗೆ ಕಾನೂನು ರಕ್ಷಣೆ ನೀಡಿರಲಿಲ್ಲ. ದೇಶದ ಕೃಷಿ ಕ್ಷೇತ್ರದಲ್ಲಿ ಖಾಸಗಿಯವರ ಪ್ರವೇಶ, ಒಪ್ಪಂದ ಕೃಷಿ ಸೇರಿದಂತೆ ಇತರೆ ಅಂಶಗಳು ರೈತರ ಭವಿಷ್ಯವನ್ನೇ ಸಮಾಧಿ ಮಾಡುತ್ತಿದ್ದವು. ಈ ಹಿನ್ನೆಲಯ್ಲಿ ದೇಶದ ಅನ್ನದಾತರು ಚಳಿ, ಮಳೆ, ಬಿಸಿಲ್ಲೆನ್ನದೆ ಬೀದಿಗಿಳಿದು ಸುಧೀರ್ಘ ಹೋರಾಟ ಮಾಡಿದ್ದರು. ಈ ಹೋರಾಟ ಹತ್ತಿಕ್ಕಲು ಸರ್ಕಾರ ತನ್ನ ಅಧಿಕಾರ ಹಾಗೂ ಪೊಲೀಸ್ ಬಲ ಪ್ರಯೋಗಿಸಿತ್ತು. ಇದ್ಯಾವುದಕ್ಕೂ ಜಗ್ಗದ ರೈತರು ತಮ್ಮ ಭವಿಷ್ಯ ರಕ್ಷಣೆಗೆ ಬದ್ಧವಾಗಿ ನಿಂತರು” ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
“ರೈತರ ಆಕ್ರೋಶಕ್ಕೆ ಗುರಿಯಾಗಿದ್ದ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಕೊನೆಗೂ ಕೇಂದ್ರಕ್ಕೆ ಜ್ಞಾನೋದಯ ಆಗಿರುವುದು ಉತ್ತಮ ಬೆಳವಣಿಗೆ. ರೈತರ ಜೊತೆ ಚರ್ಚೆ ನಡೆಸದೇ ಈ ಕಾಯ್ದೆಗಳ ಏಕಪಕ್ಷೀಯ ಜಾರಿ ಮತ್ತು ಈಗ ಏಕಾಏಕಿ ರದ್ಧತಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಹಿರಿಯ ಮುಖಂಡ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
“ನಿಜಕ್ಕೂ ಕರಾಳ ಕಾಯ್ದೆಗಳ ವಾಪಸಾತಿ ರೈತರ ವಿಜಯ ಮತ್ತು ಐತಿಹಾಸಿಕ. ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯ ಗಡಿಯಲ್ಲಿ ಅನ್ನದಾತರು ಪ್ರತಿಭಟನೆ ನಡೆಸಿದರು. ಕೇಂದ್ರವು ಅವರ ಮೇಲೆ ಅಮಾನವೀಯ ಕ್ರೌರ್ಯ ನಡೆಸಿತು. ಅನೇಕ ಅಮೂಲ್ಯ ಜೀವಗಳ ನೆತ್ತರು ಹರಿಯಿತು. ಚಳಿ, ಮಳೆ, ಬಿಸಿಲೆನ್ನದೇ ರೈತರು ಹೋರಾಡಿದರು. ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇದೆ. ಕೇಂದ್ರದ ನಿರ್ಧಾರ ಪ್ರಾಮಾಣಿಕವಾಗಿರಲಿ. ಕೇವಲ ಮತ ಫಲಸಿಗೆ ಮಾಡಿದ ಹೈಡ್ರಾಮಾ ಆಗದಿರಲಿ. ಚುನಾವಣೆ ಮುಗಿದ ಮೇಲೆ ಆ ಕರಾಳ ಕಾಯ್ದೆಗಳನ್ನು ಬೇರೆ ರೂಪದಲ್ಲಿ ಪುನಃ ಜಾರಿ ಮಾಡುವುದಿಲ್ಲ ಎಂದು ಪ್ರಧಾನಿಗಳು ತಮ್ಮ ಭಾಷಣದಲ್ಲಿ ರೈತರಿಗೆ ಮಾತು ಕೊಡಬೇಕಿತ್ತು.” ಎಂದು ಎಚ್.ಡಿ.ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಅಚ್ಚರಿಯ ಈ ನಿರ್ಧಾರಕ್ಕೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ವಿಪಕ್ಷ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.