ಬೆಂಗಳೂರು, (www.bengaluruwire.com) :
ಅಪರೂಪದ ನಶಿಸಿಹೋಗುತ್ತಿರುವ ಪ್ರಭೇದದ (Indian pangolin) ಚಿಪ್ಪುಹಂದಿಯನ್ನು ಬೆಂಗಳೂರು ನಗರದಲ್ಲಿ ಬುಧವಾರ ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ತಂಡದ ಕಾರ್ಯಕರ್ತರು ಸಂರಕ್ಷರಣೆ ಮಾಡಿದ್ದಾರೆ.
ತುಮಕೂರು ರಸ್ತೆ ಅಂಚೆಪಾಳ್ಯದಲ್ಲಿ ಎರಡೂವರೆ ವರ್ಷದ ಚಿಪ್ಪುಹಂದಿ ಇರುವ ಬಗ್ಗೆ ಸಾರ್ವಜನಿಕರು ಬಿಬಿಎಂಪಿ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ ತಿಳಿಸಿದ್ದರು. ಸ್ಥಳಕ್ಕೆ ಧಾವಿಸಿದ ವನ್ಯಜೀವಿ ಕಾರ್ಯಕರ್ತ ಕುಮಾರ್ ಸುರಕ್ಷಿತವಾಗಿ ಈ ಚಿಪ್ಪುಹಂದಿಯನ್ನು ರಕ್ಷಿಸಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಟ್ಟು ಬಂದಿದ್ದಾರೆ.
ಸುಮಾರು ಏಳು ವರ್ಷದ ಹಿಂದೆ ಹೆಸರುಘಟ್ಟದಲ್ಲಿ ಹಾಗೂ
2009ರ ಇಸವಿಯಲ್ಲಿ, ದೇವನಹಳ್ಳಿಯಲ್ಲಿ ಇದೇ ರೀತಿಯ ಚಿಪ್ಪುಹಂದಿಯನ್ನು ರಕ್ಷಣೆ ಮಾಡಿದ್ದೆ. ಅಂಚೆಪಾಳ್ಯದಲ್ಲಿ ಸಿಕ್ಕಿರುವ ಚಿಪ್ಪುಹಂದಿ
ಎರಡೂವರೆ ಅಡಿ ಉದ್ದವಿದೆ. ಒಂದು ಫುಟ್ ಬಾಲ್ ಗಾತ್ರದಷ್ಟಿದ್ದು, ನಾಲ್ಕೂವರೆ ಕೆಜಿ ತೂಕ ಹೊಂದಿದೆ ಎಂದು ಹೇಳುತ್ತಾರೆ ಕುಮಾರ್.
ವಿಶ್ವಾದ್ಯಂತ ಬಹಳ ಕಳ್ಳಸಾಗಣೆಯಾಗುವ ವನ್ಯಜೀವಿಗಳಲ್ಲಿ ಈ ಚಿಪ್ಪುಹಂದಿ ಚಿಪ್ಪು ಕೂಡ ಒಂದು. ಸಾಮಾನ್ಯವಾಗಿ ಗೆದ್ದಲುಹುಳ ತಿಂದು ಬದುಕುವ ಈ ಪುಟ್ಟ ಪ್ರಾಣಿಯ ಮಾಂಸ ಬ್ಲಾಕ್ ಮಾರ್ಕೆಟ್ ನಲ್ಲಿ ಔಷಧಿಗೆ ಬಳಕೆಯಾಗುತ್ತೆ. ಶೆಡ್ಯುಲ್-1 ವರ್ಗಕ್ಕೆ ಸೇರಿದ ಅಳಿವಿನಂಚಿನ ಪ್ರಾಣಿಯಾಗಿರುವ ಈ ಚಿಪ್ಪುಹಂದಿ, ಹುಲಿ- ಸಿಂಹದಂತೆ ಅಳಿವಿನಂಚಿನಲ್ಲಿರುವ ಅಪರೂಪದ ಪ್ರಾಣಿಯಾಗಿದೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಗೆದ್ದಲುಹುಳ ತಿಂದು ಬದುಕುವ ಇಂತಹದೊಂದು ಅಪರೂಪದ ವನ್ಯಪ್ರಾಣಿ ಸಿಕ್ಕಿರುವುದು ಪ್ರಾಣಿಪ್ರಿಯರಿಗೆ ಸಂತಸ ಮೂಡಿಸಿದೆ.