ಬೆಂಗಳೂರು, (www.bengaluruwire.com) : ಇದನ್ನು ನಂಬಬೇಕೋ? ಬಿಡಬೇಕೋ ಗೊತ್ತಾಗ್ತಿಲ್ಲ. ಬೆಂಗಳೂರಿನಲ್ಲಿನ ವರ್ತುಲ ಹಾಗೂ ಹೊರವರ್ತುಲ ರಸ್ತೆಯಲ್ಲಿ ಬಿದ್ದಿರುವ ಗುಂಡಿಯ ಪ್ರಮಾಣವನ್ನು ಲೆಕ್ಕ ಹಾಕಿದ್ರೆ ಅಂದಾಜು ಒಂದಿಡೀ ಕಂಠೀರವ ಸ್ಟೇಡಿಯಂ ಎತ್ತರ ಹಾಗೂ ವ್ಯಾಸದಷ್ಟು ಅಂದ್ರೆ 2 ಲಕ್ಷ ಚದರ ಮೀಟರ್ ನಷ್ಟು ಗುಂಡಿಗಳನ್ನು ಬಿಬಿಎಂಪಿ ಮುಚ್ಚಿದೆಯಂತೆ.
ಜು.27ನೇ ತಾರೀಖಿನಿಂದ ಅ.25ರವರೆಗೆ ನಗರದಲ್ಲಿರುವ 8 ವಲಯಗಳು, ಪಾಲಿಕೆ ಪ್ರಾಜೆಕ್ಟ್-1 ಕೈಗೊಂಡಿರುವ ಸೇತುವೆ, ವೈಟ್ ಟಾಪಿಂಗ್ ಕಾಮಗಾರಿ ಸೇರಿದಂತೆ ಬರೋಬ್ಬರಿ 760 ಟ್ರಕ್ ಲೋಡ್ ನಷ್ಟು ಅಂದರೆ ಬರೋಬ್ಬರಿ 21,155.36 ಮೆಟ್ರಿಕ್ ಟನ್ ಡಾಂಬರ್ ಅನ್ನು ನಗರದ ರಸ್ತೆಗೆ ಹಾಕಲಾಗಿದೆ ಎಂದು ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಎಂಜನಿಯರ್ ಗಳು ಹೇಳುತ್ತಾರೆ.
18 ಸಾವಿರ ಮೆಟ್ರಿಕ್ ಟನ್ ಗೂ ಅಧಿಕ ಡಾಂಬರ್ ಗಳನ್ನು 1434 ಕಿ.ಮೀ ಉದ್ದದ 437 ಆರ್ಟಿರಿಯಲ್ ಹಾಗೂ ಸಬ್ ಆರ್ಟಿಯಲ್ ರಸ್ತೆಗಳನ್ನು ಹೊಂದಿರುವ ಕಡೆಗಳಲ್ಲಿ ರಸ್ತೆಗುಂಡಿ ಮುಚ್ಚಲು ಬಳಕೆ ಮಾಡಲಾಗಿದೆ. ಅದೂ ಅಲ್ಲದೆ ರಸ್ತೆಗುಂಡಿ ಆಳವಿದ್ದು, ಸಾಕಷ್ಟು ದೊಡ್ಡದಾಗಿದ್ದರೆ ಜಲ್ಲಿಕಲ್ಲು, ಕಲ್ಲುಪುಡಿ ಮಿಶ್ರಿತ ವೆಟ್ ಮಿಕ್ಸ್ ಮಿಶ್ರಣವನ್ನು ಹಾಕಿ ಅದರ ಮೇಲೆ ಡಾಂಬರ್ ಹಾಕಿ ಮುಚ್ಚಲಾಗಿದೆ. ಹೀಗೆ ಜು.27 ರಿಂದ ಈತನಕ 452 ಲೋಡ್ ಗೂ ಅಧಿಕ ವೆಟ್ ಮಿಕ್ಸ್ ಹಾಕಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ನಗರದಲ್ಲಿ 1,434 ಕಿ.ಮೀ ಉದ್ದದ 470ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಿವೆ. Pothole ಲೆಕ್ಕ ಇಡೋದು ಕಷ್ಟ ಮತ್ತು ಮಳೆಗಾಲದಲ್ಲಿ ರಸ್ತೆ ಗುಂಡಿ ಸಂಖ್ಯೆ ಹೆಚ್ಚಾಗುತ್ತೆ. ಅದೇ ಕಾರಣಕ್ಕೆ ರಸ್ತೆ ಗುಂಡಿಯನ್ನು ಕಿ.ಲೋ ಮೀಟರ್ ಉದ್ದ ಹಾಗೂ ಚದರ ಮೀಟರ್ ನಲ್ಲಿ ಡಾಂಬರು ಹಾಕಿರೋ ಲೆಕ್ಕ ಇಡುತ್ತೇವೆ. ಅದೇ ರೀತಿಯಲ್ಲಿ ಗುತ್ತಿಗೆದಾರರಿಗೆ ಹಣ ಪಾವತಿ ಮಾಡುತ್ತೇವೆ.”
– ಪ್ರಹ್ಲಾದ್ ರಾವ್, ಚೀಫ್ ಎಂಜಿನಿಯರ್, ರಸ್ತೆ ಮತ್ತು ಮೂಲಭೂತ ಸೌಕರ್ಯ ಇಲಾಖೆ, ಬಿಬಿಎಂಪಿ
ನಗರದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಯರ್ರಾಬಿರ್ರಿ ಮಳೆಯಾಗಿದೆ. ಹೀಗಾಗಿ ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗಿರಲಿಲ್ಲ. ಜೊತೆಗೆ ಹಾಟ್ ಮಿಕ್ಸ್ ಪ್ಲಾಂಟ್ ಇರುವ ಕನ್ನೂರು ಪ್ಲಾಂಟ್ ನಲ್ಲಿಯೂ ಜಲ್ಲಿ, ಕಲ್ಲುಪುಡಿ ಒದ್ದೆಯಾಗಿತ್ತು. ಆದ್ದರಿಂದ ಅ.6 ರಿಂದ 20ನೇ ತಾರೀಖಿನವರೆಗೆ ನಗರದಾದ್ಯಂತ ರಸ್ತೆ ಗುಂಡಿ ಮುಚ್ಚುವ ಉಸಾಬರಿಗೆ ಅಧಿಕಾರಿಗಳು ಹೋಗಿರಲಿಲ್ಲ. ಈಗ ನಾಲ್ಕೈದು ದಿನಗಳಿಂದ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿನ ಬಾಯ್ತೆರೆದ ಪಾಟ್ ಹೋಲ್ ಗಳನ್ನು ಮುಚ್ಚಲಾಗ್ತಿದೆ.
“ನಗರದಲ್ಲಿ ಜುಲೈ ಅಂತ್ಯದಿಂದ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗುಂಡಿ ಮುಚ್ಚಿದರೂ ಭಾರತೀಯ ರೋಡ್ ಕಾಂಗ್ರೆಸ್ ನಿಯಮಾವಳಿ ರೀತಿ ರಸ್ತೆಗುಂಡಿ ಮುಚ್ಚಲಾಗುತ್ತಿಲ್ಲ. ಹಾಗಾಗಿ ಪದೇ ಪದೇ ನಗರದ ರಸ್ತೆಯಲ್ಲಿ ಗುಂಡಿ ಕಾಣಿಸಿಕೊಳ್ಳುತ್ತಿದೆ. ರಸ್ತೆಗೆ ಬಳಸುವ ಡಾಂಬರ್ ನಲ್ಲಿ ಟಾರ್ ಅಥವಾ ಬಿಟುಮಿನಸ್ ಪ್ರಮಾಣ ಶೇ.5.5ರಷ್ಟಿರಬೇಕು. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜೋಬು ತುಂಬಿಸಲು ಕೇವಲ ಶೇ.2 ರಿಂದ 3 ರಷ್ಟು ಟಾರ್ ಅಗ್ರಿಗೇಟ್ ಜೊತೆ ಸೇರಿಸಲಾಗುತ್ತಿದೆ. ಆದ್ದರಿಂದ ಎರಡು ವರ್ಷ ಬಾಳಿಕೆ ಬರಬೇಕಾದ ರಸ್ತೆ ನವೀಕರಣ ಕಾಮಗಾರಿ ಎರಡು ತಿಂಗಳೂ ಬಾಳಿಕೆ ಬರುತ್ತಿಲ್ಲ”
– ಫ್ರೊ.ಶ್ರೀಹರಿ, ಸಂಚಾರ ತಜ್ಞರು
ಯಾವುದೇ ರಸ್ತೆಗುಂಡಿ ಮುಚ್ಚುವ ಮೊದಲು ಟಾಕ್ ಕೋಟ್ ಬಳಸಿ ಹಾಟ್ ಪ್ಲಾಂಟ್ ಮಿಕ್ಸ್ ಅನ್ನು ಮೂರು ಹಂತದಲ್ಲಿ ಹಾಕಿ ಡಾಂಬರ್ ಅನ್ನು ಸರಿಯಾಗಿ ಕೂರಿಸಿ ಮೇಲಿಂದ ಕಬ್ಬಿಣದ ಸಮತಟ್ಟು ರಾಡ್ ನಿಂದ ಗುದ್ದಬೇಕು. ತದನಂತರ ರಸ್ತೆಗುಂಡಿಯ ಎಲ್ಲಾ ಬಿರುಕುಗಳನ್ನು ತುಂಬಬೇಕು. ಅದಾದ ಬಳಿಕ ಕಲ್ಲುಪುಡಿ ಅಥವಾ ಎಂ.ಸ್ಯಾಂಡ್ ಅನ್ನು ಡಾಂಬರ್ ಹಾಕಿ ಮುಚ್ಚಿದ ಸ್ಥಳದ ಮೇಲೆ ಹರಡಿ ಮತ್ತೆ ಮೇಲಿಂದ ಕಬ್ಬಿಣದ ಸಮತಟ್ಟು ರಾಡ್ ನಿಂದ ಹದವಾಗಿ ಗುದ್ದಬೇಕು. ಇದರಿಂದ ಡಾಂಬರ್ ಹಾಕಿ ಮುಚ್ಚಿದ ರಸ್ತೆ ಬಹಳ ಕಾಲ ಬಾಳಿಕೆ ಬರುತ್ತದೆ.
1.94 ಲಕ್ಷ ಚ.ಮೀ ರಸ್ತೆಗುಂಡಿ ಮುಚ್ಚಲು 7 ಕೋಟಿ ರೂ. ವೆಚ್ಚ :
1,434 ರಸ್ತೆಗಳಲ್ಲಿ ಇಂತಹ ಯಾವುದೇ ಸ್ಯಾಂಡರ್ಡ್ ಪದ್ಧತಿಯನ್ನು ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗ ಅನುಸರಿಸುತ್ತಿಲ್ಲ ಎಂದು ತಜ್ಞರು, ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ನಗರದಲ್ಲಿ ಜು.27ರಿಂದ ಬರೋಬ್ಬರಿ 1.94 ಲಕ್ಷ ಚರದ ಮೀಟರ್ ವಿಸ್ತೀರ್ಣದಷ್ಟು ರಸ್ತೆಗುಂಡಿಯನ್ನು ಡಾಂಬರ್ ಹಾಕಿ ಮುಚ್ಚಲಾಗಿದೆ. ಇದಕ್ಕೆ ಬರೋಬ್ಬರಿ 7 ಕೋಟಿ ರೂ. ಕರ್ಚಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಹಣ ಕರ್ಚು ಮಾಡಿದಷ್ಟು ರಸ್ತೆಗುಂಡಿ ರಿಪೇರಿಯಾಗಿಲ್ಲ, ಗುಣಮಣ್ಣ ಕಾಪಾಡಿಲ್ಲ ಎಂಬುದು ಸೂರ್ಯನಷ್ಟೆ ಸತ್ಯವಾಗಿದೆ.
ರಸ್ತೆಗುಂಡಿ ಮೋಸದ ಜಾಲಕ್ಕೆ ಹೀಗೆ ಕಡಿವಾಣ ಹಾಕಿ :
ರಸ್ತೆಗುಂಡಿ ಮೋಸದ ಜಾಲಕ್ಕೆ ಕಡಿವಾಣ ಹಾಕಬೇಕಾದರೆ ಪಾಟ್ ಹೋಲ್ ಫಿಲ್ಲಿಂಗ್ ಮಾಡುವ ಸಂದರ್ಭದಲ್ಲಿ ಮೂರನೇ ಸಂಸ್ಥೆಯ ಲ್ಯಾಬ್ ನಿಂದ ಗುಂಡಿಮುಚ್ಚುವ ಡಾಂಬರ್ ಹಾಟ್ ಮಿಕ್ಸ್ ನಲ್ಲಿ ಶೇಕಡ ಎಷ್ಟು ಪ್ರಮಾಣದ ಬಿಟುಮಿನ್ ಬಳಸಲಾಗಿದೆ? ಎಂಬುದನ್ನು ಪರೀಕ್ಷೆಗೆ ಒಳಪಡಿಸಬೇಕು. ತಜ್ಞರಿಂದ ರಸ್ತೆಗುಂಡಿ ಮುಚ್ಚಿದ ಕಡೆಗಳಲ್ಲಿ ಯಾದೃಚ್ಛಿಕವಾಗಿ ಪರೀಕ್ಷೆ ಕೈಗೊಳ್ಳಬೇಕು. ಇವುಗಳ ಆಧಾರದ ಮೇಲೆ ಕಾಂಟ್ರಾಕ್ಟರ್ ಗಳಿಗೆ ಕಾಮಗಾರಿ ಬಿಲ್ ಪಾವತಿಸಬೇಕು. ಆಗ ಗುತ್ತಿಗೆದಾರರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳುತ್ತಾರೆ ಸಂಚಾರಿ ಮತ್ತು ನಗರಯೋಜನಾ ತಜ್ಞರು.