ಬೆಂಗಳೂರು, (www.bengaluruwire.com) : ಡ್ರೋಣ್ ಗಳು ಗುಂಪಾಗಿ ಆಗಸಕ್ಕೇರಿ ಶತ್ರುಪಾಳೇಯದ ಮೇಲೆ ನಿಖರವಾಗಿ ದಾಳಿ ನಡೆಸಿ, ವೈರಿ ನೆಲೆ ಧ್ವಂಸಗೊಳಿಸುವ ನೂತನ ದೇಶೀಯ ಸಮರ ತಂತ್ರಜ್ಞಾನದ ಪ್ರಾಯೋಗಿಕ ಪ್ರದರ್ಶನ ಭಾರತೀಯ ವಾಯುಪಡೆ (ಐಎಎಫ್)ಗೆ ಸೇರಿದ ಯಲಹಂಕ ವಾಯುನೆಲೆಯಲ್ಲಿ ಭಾನುವಾರ ಪ್ರದರ್ಶಿತವಾಯಿತು.
ಯುದ್ಧದ ಸಂದರ್ಭದಲ್ಲಿ ಸಾಮೂಹಿಕವಾಗಿ ಡ್ರೋಣ್ ಗಳಿಂದ ವೈಮಾನಿಕ ದಾಳಿ ನಡೆಸುವ ರೀತಿಗೆ ಪರ್ಯಾಯವಾಗಿ ಅಥವಾ ಪೂರಕವಾಗಿ ಬಳಸುವ ಮುಂದಿನ ತಲೆಮಾರಿನ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಸಿದ್ಧವಾಗಿದೆ.
ವಾಯುಪಡೆ ನಡೆಸಿದ ‘ಮೆಹರ್ ಬಾಬಾ ಸ್ವಾರ್ಮ್ ಡ್ರೋಣ್ ಸ್ಪರ್ಧೆ’ಯಲ್ಲಿ ಪಾಲ್ಗೊಂಡಿದ್ದ ತಂಡಗಳು ಈ ರೀತಿಯ ಆಧುನಿಕ ಸಮರ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದವು. 2018 ಅಕ್ಟೋಬರ್ ನಲ್ಲಿ ಆರಂಭವಾಗಿದ್ದ ಈ ಸ್ಪರ್ಧೆಯಲ್ಲಿ ಒಟ್ಟು 154 ತಂಡಗಳು ಅರ್ಜಿ ಸಲ್ಲಿಸಿದ್ದವು. 57 ತಂಡಗಳು ಮೊದಲ ಸುತ್ತು ಪ್ರವೇಶಿಸಿದ್ದರೆ, ಕೇವಲ 20 ಟೀಮ್ ಗಳು ಎರಡನೇ ಸುತ್ತು ಪ್ರವೇಶಿಸಲು ಅರ್ಹತೆ ಪಡೆದುಕೊಂಡಿದ್ದವು.
ಅಂತಿಮವಾಗಿ ಸಾಮೂಹಿಕ ಡ್ರೋಣ್ ದಾಳಿಯ ತಂತ್ರಜ್ಞಾನ ಅಭಿವೃದ್ಧಿಪಡಿಸಿದ 4 ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಆ ಪೈಕಿ ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯ ಮತ್ತು ದಕ್ಷ ಅನ್ ಮ್ಯಾನ್ಡ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಜಂಟಿಯಾಗಿ ರೂಪಿಸಿರುವ ಸಾಮೂಹಿಕ ಡ್ರೋಣ್ ದಾಳಿಯ ಪ್ರಾಯೋಗಿಕ ಪ್ರದರ್ಶನ ‘ಸ್ವರ್ಣಿಮ ವಿಜಯ ವರ್ಷ’ ಸಮಾರೋಪದ ಬಳಿಕ ಯಶಸ್ವಿಯಾಗಿ ನಡೆಯಿತು.
ಸಾಮೂಹಿಕ ದ್ರೋಣ್ ದಾಳಿಯ ಸಮರ ಹೇಗೆ ನಡೆಯಿತು?
ನಿಗಧಿತ ಸ್ಥಳದ ಕಣ್ಗಾವಲಿಗೆಂದು ಮೊದಲಿಗೆ ಡ್ರೋಣ್ ಒಂದು ಆಕಾಶದಲ್ಲಿ ಹಾರಾಟ ನಡೆಸುತ್ತೆ. ತನ್ನ ಸುತ್ತಮುತ್ತಲಿನ ಪ್ರದೇಶದ ಮಾಹಿತಿ ಸಂಗ್ರಹಿಸಿ, ವೈರಿ ಇರುವಿಕೆಯನ್ನು ಖಚಿತಪಡಿಸಿಕೊಂಡ ಬಳಿಕ ಆ ಮಾಹಿತಿಯನ್ನು ಇತರ ಡ್ರೋಣ್ ಗಳ ಸಮೂಹಕ್ಕೆ ರವಾನಿಸುತ್ತದೆ. ಕ್ಷಣಮಾತ್ರದಲ್ಲಿ 6 ದೊಡ್ಡ ಗಾತ್ರದ ‘ಯೋಧ’ ಡ್ರೋಣ್ ಗಳು ಹಾಗೂ 4 ಸಣ್ಣ ಗಾತ್ರದ ‘ಘಾತಕ್’ ಡ್ರೋಣ್ ಗಳು ಆಕಾಶಕ್ಕೆ ಹಾರಿದವು.
ಕೆಲ ಸಮಯ ಶತ್ರುವಿನ ಸುತ್ತ ಮೇಲಿಂದ ಹಾರಾಟ ನಡೆಸಿದ ‘ಯೋಧ’ ಡ್ರೋಣ್ ಗಳು ತನ್ನೊಳಗೆ ಅಳವಡಿಸಿದ್ದ ಬಾಂಬ್ ಗಳನ್ನು ಹಾಕಿದವು. ಇದೇ ಹೊತ್ತಿನಲ್ಲಿ ಸಣ್ಣ ಗಾತ್ರದ ‘ಘಾತಕ್’ ಡ್ರೋಣ್ ಗಳು ವೈರಿ ನೆಲೆಯತ್ತ ನುಗ್ಗಿ ತಮ್ಮನ್ನೇ ಸ್ವತಃ ಸ್ಪೋಟಿಸಿಕೊಂಡವು. ಇದರಿಂದಾಗಿ ವೈರಿ ನೆಲೆಯು ಸಂಪೂರ್ಣ ಭಸ್ಮವಾಯಿತು. ಈ ರೀತಿ ಸಾಮಾಹಿಕ ಡ್ರೋಣ್ ದಾಳಿ ಮೂಲಕ ಮೂರು ಟಾರ್ಗೆಟ್ ಗಳನ್ನು ಯಶಸ್ವಿಯಾಗಿ ಸ್ಪೋಟಿಸಲಾಯಿತು.
ವಾಯುನೆಲೆಯಲ್ಲಿ ಪ್ರದರ್ಶಿತವಾದ ಸಾಮೂಹಿಕ ಡ್ರೊಇಣ್ ದಾಳಿಯಲ್ಲಿ ಬಳಸಿದ ಮೂರು ವಿಧದ ಡ್ರೋಣ್ ಗಳು ಪರಸ್ಪರ ಸಂಪರ್ಕ ಕಲ್ಪಿಸಿದ್ದು, ಅವುಗಳು ಆಯಾ ಸಂದರ್ಭದಲ್ಲಿ ಒಂದಕ್ಕೊಂದು ಮಾಹಿತಿ ಹಂಚಿಕೆ ಮಾಡಿಕೊಂಡು ಮುಂದಿನ ನಡೆಯ ಬಗ್ಗೆ ನಿರ್ದೇಶನ ಮಾಡುತ್ತಲೇ ತಮ್ಮ ಕಾರ್ಯಾಚರಣೆ ಕೈಗೊಂಡವು. ಯಾವ ಹಂತದಲ್ಲೂ ನಿಗಧಿತ ವೈರಿ ನೆಲೆಯ ಟಾರ್ಗೆಟ್ ತಪ್ಪದಂತೆ ಕೃತಕ ಬುದ್ಧಿಮತ್ತೆ ಆಧರಿಸಿ ಈ ತಂತ್ರಜ್ಞಾನ ವನ್ನು ಅಭಿವೃದ್ಧಿಪಡಿಸಲಾಗಿತ್ತು.
ಸಾಮೂಹಿಕ ಡ್ರೋಣ್ ದಾಳಿ ಸಂದರ್ಭದಲ್ಲಿ ಈ ಮಾನವರಹಿತ ಪುಟ್ಟ ಡ್ರೋಣ್ ಗಳು ಅಕ್ಕಪಕ್ಕವೇ ಹಾರುತ್ತಿದ್ದರೂ ಒಂದಕ್ಕೊಂದು ಡಿಕ್ಕಿ ಹೊಡೆಯದ ರೀತಿ ರೂಪಿಸಲಾಗಿದೆ. ಇಷ್ಟೆಲ್ಲ ಸಾಮೂಹಿಕ ಡ್ರೋಣ್ ದಾಳಿಯನ್ನು ದೂರದ ನಿಯಂತ್ರಣ ಕೇಂದ್ರದಲ್ಲಿ ಕುಳಿತು ಸರಾಗವಾಗಿ ನಿಯಂತ್ರಿಸಲಾಗಿತ್ತು.
ಯುದ್ಧ ಸಂದರ್ಭದಲ್ಲಿ ಆಗಸದಿಂದ ಯುದ್ಧ ವಿಮಾನಗಳು ನೆಲಮಟ್ಟದಲ್ಲಿನ ವೈರಿ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿ ಶತ್ರುಗಳನ್ನು ಸಂಹರಿಸುವುದು ಸಾಮಾನ್ಯ. ಆದರೆ ಭಾನುವಾರ ಯಲಹಂಕ ವಾಯುನೆಲೆಯಲ್ಲಿ ಇದಕ್ಕೆ ವಿಭಿನ್ನವಾದಂತೆ ಸ್ಪೋಟಕಗಳನ್ನು ಹೊತ್ತ ಡ್ರೋಣ್ ಗಳ ಮೂಲಕ ಶತ್ರು ಪಾಳೇಯದ ಮೇಲೆ ದಾಳಿ ನಡೆಸಿದ ದೇಶೀಯವಾದ ಅತ್ಯಾಧುನಿಕ ಸಮರ ತಂತ್ರಜ್ಞಾನದ ಪ್ರಯೋಗ ಭವಿಷ್ಯದ ಯುದ್ಧದ ರೀತಿಗಳಿಗೆ ಸಾಕ್ಷಿಯಂತಿತ್ತು.
ಈ ಯಶಸ್ವಿ ಪ್ರದರ್ಶನವನ್ನು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಹಾಗೂ ಹಲವು ಹಿರಿಯ ಅಧಿಕಾರಿಗಳು ವೀಕ್ಷಿಸಿ ದೇಶಿಯವಾಗಿ ಅಭಿವೃದ್ಧಿಪಡಿಸಿದ ಹೊಸ ಯುದ್ಧ ತಂತ್ರಜ್ಞಾನದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
‘ಮೆಹರ್ ಬಾಬಾ ಸ್ವಾರ್ಮ್ ಡ್ರೋನ್ ಸ್ಪರ್ಧೆ’ ನಾಲ್ಕು ತಂಡಗಳಿಗೆ ಪ್ರಶಸ್ತಿ :
• ಅತ್ಯುತ್ತಮ ಗುಂಪು ವಿನ್ಯಾಸ – ಬೆಂಗಳೂರಿನ ನ್ಯೂಸ್ಪೇಸ್ ರಿಸರ್ಚ್ ಟೆಕ್ನಾಲಜೀಸ್ ಪ್ರೈ.ಲಿ.
• ಅತ್ಯುತ್ತಮ ಸಂವಹನ ವಿನ್ಯಾಸ – ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಪ್ಲೇರ್ ಅನ್ ಮ್ಯಾನ್ಡ್ ಸಿಸ್ಟಮ್ ಪ್ರೈ. ಲಿ.
• ಅತ್ಯುತ್ತಮ ಡ್ರೋಣ್ ವಿನ್ಯಾಸ – ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯ ಮತ್ತು ದಕ್ಷ ಅನ್ ಮ್ಯಾನ್ಡ್ ಸಿಸ್ಟಮ್ಸ್ ಪ್ರೈ. ಲಿ.
• ಅತ್ಯುತ್ತಮ ಅವಿಷ್ಕಾರ ವಿನ್ಯಾಸ – ನೋಯ್ಡಾದ ವೇದಾ ಡಿಫೆನ್ಸ್ ಸಿಸ್ಟಮ್ಸ್ ಪ್ರೈ. ಲಿ.