ಉತ್ತರಕನ್ನಡ, (www.bengaluruwire.com) : ಪೈಂಟ್ ತಯಾರಿಸುವ ಕಾರ್ಖಾನೆಯಲ್ಲಿ ಬಳಕೆಯಾಗುವ ಬೆಂಜೀನ್ ರಾಸಾಯನಿಕ ಹೊತ್ತ ಟ್ಯಾಂಕರ್ ವೊಂದು ಬುಧವಾರ ಬೆಳಗ್ಗೆ ಉತ್ತರಕನ್ನಡದ ಅಂಕೋಲ- ಯಲ್ಲಾಪುರ ಹೆದ್ದಾರಿಯ ಅರಬೈಲ್ ಘಾಟಿಯಲ್ಲಿ ಪಲ್ಟಿಯಾಗಿ ಟ್ಯಾಂಕರ್ ನಲ್ಲಿದ್ದ ರಾಸಾಯನಿಕ ಸೋರಿಕೆಯಾದ ಘಟನೆ ಜರುಗಿದೆ.
ಟ್ಯಾಂಕರ್ ಪಲ್ಟಿಯಾಗಿ ರಾಸಾಯನಿಕ ಸೋರಿಕೆಯಾಗಿ ಎರಡು ಬಾರಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್ ಎನ್ ಡಿಎಂಸಿ) ದ ಅಧಿಕಾರಿಗಳು ತಿಳಿಸಿದ್ದಾರೆ.
ಎಂಆರ್ ಪಿಎಲ್ ಉಪಸಂಸ್ಥೆಯಾದ ಒಎಪಿಎಲ್ ಗೆ ಸೇರಿದ ರಾಸಾಯನಿಕ ಟ್ಯಾಂಕರ್ ವಾಹನವು ಬೆಂಜೀನ್ ಕೆಮಿಕಲ್ ಅನ್ನು ತುಂಬಿಕೊಂಡು ಗುಜರಾತಿನ ಪೈಂಟ್ ಫ್ಯಾಕ್ಟರಿಗೆ ಕೊಂಡುಯ್ಯುವಾಗ ಈ ದುರ್ಘಟನೆ ಸಂಬಂಧಿಸಿದೆ. ಸದ್ಯ ಬೆಂಕಿಯನ್ನು ನಂದಿಸಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ.
ರಾಸಾಯನಿಕ ಟ್ಯಾಂಕರ್ ನಲ್ಲಿ ಒಂದು ಕಂಪಾರ್ಟ್ ಮೆಂಟ್ ಗಷ್ಟೆ ಹಾನಿ :
ಉತ್ತರಕನ್ನಡ ಜಿಲ್ಲಾಡಳಿತ ಕಾರವಾರದ ಎಂಆರ್ ಪಿಎಲ್ ನೊಂದಿಗೆ ಸಮನ್ವಯ ಸಾಧಿಸಿ, ಅಲ್ಲಿಂದ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಿಕೊಟ್ಟಿದೆ. ಆ ತಂಡವು ಬೆಂಜೀನ್ ರಾಸಾಯನಿಕದಿಂದ ಮತ್ತಷ್ಟು ಹಾನಿಯಾಗದಂತೆ ತಟಸ್ಥಗೊಳಿಸುವ ವಸ್ತುವನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ಅಲ್ಲದೆ ಹುಬ್ಬಳ್ಳಿಯಿಂದ ಫ್ಯಾಕ್ಟರೀಸ್ ಎಂಡ್ ಬಾಯ್ಲರ್ಸ್ ನಿಂದ ತಂತ್ರಜ್ಞರು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ರಾಸಾಯನಿಕ ಟ್ಯಾಂಕರ್ ನಲ್ಲಿ ಒಟ್ಟು ನಾಲ್ಕು ಕಂಪಾರ್ಟ್ ಮೆಂಟ್ ಗಳಿದ್ದು ಆ ಪೈಕಿ ಕೇವಲ ಒಂದು ಕಂಪಾರ್ಟ್ ಮೆಂಟ್ ನಲ್ಲಿ ಬೆಂಜೀನ್ ಕೆಮಿಕಲ್ ಸೋರಿಕೆಯಾಗಿದೆ. ಉಳಿದ ಮೂರು ಕಂಪಾರ್ಟ್ ಮೆಂಟ್ ನಲ್ಲಿರುವ ಬೆಂಜೀನ್ ರಾಸಾಯನಿಕವನ್ನು ಬೇರೆ ಟ್ಯಾಂಕರ್ ಗೆ ತುಂಬಲು ಮತ್ತೊಂದು ವಾಹನವನ್ನು ಎಂಆರ್ ಪಿಎಲ್ ಕಳುಹಿಸಿ ಕೊಟ್ಟಿದೆ.
ಬುಧವಾರ ಬೆಳಗ್ಗೆ 7.30ಕ್ಕೆ ಈ ದುರ್ಘಟನೆ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ತೆರಳಿ ಬೆಂಕಿಯನ್ನು ನಂದಿಸುವ ಹಾಗೂ ಹೆದ್ದಾರಿಯಲ್ಲಿ ಇನ್ನಿತರ ವಾಹನಗಳು ಸಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು. ಟ್ಯಾಂಕರ್ ವಾಹನ ಪಲ್ಟಿಯಾಗಿ ರಾಸಾಯನಿಕ ಸೋರಿಕೆಯಾದ ವಾಹನದಲ್ಲಿನ ಇತರ ಕಂಪಾರ್ಟ್ ಮೆಂಟ್ ನಲ್ಲಿನ ಕೆಮಿಕಲ್ ಅನ್ನು ಬೇರೆ ಟ್ಯಾಂಕರ್ ಗೆ ಬದಲಾಯಿಸಲಾಗುತ್ತದೆ. ಇದಕ್ಕೆ ಒಎಪಿಎಲ್ ಹಾಗೂ ಫ್ಯಾಕ್ಟರೀಸ್ ಎಂಡ್ ಬಾಯ್ಲರ್ಸ್ ನಿಂದ ತಂತ್ರಜ್ಞರು ಇದಕ್ಕೆ ನೆರವಾಗಲಿದ್ದಾರೆ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ರಾಸಾಯನಿಕ ಸೋರಿಕೆಯಿಂದಾದ ದುರ್ಘಟನೆಯ ಕಾರ್ಯಾಚರಣೆಯಲ್ಲಿ ಮಾದರಿ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ ಎಂದು ಕೆಎಸ್ ಎನ್ ಡಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.