ಬೆಂಗಳೂರು, (www.bengaluruwire.com) : ನಗರದಲ್ಲಿ ಮಳೆ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಈ ನಡುವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶಾಕಿಂಗ್ ನ್ಯೂಸ್ ನೀಡಿದೆ. ಬೆಂಗಳೂರಿನ 8 ವಲಯಗಳ ವ್ಯಾಪ್ತಿಯಲ್ಲಿ ಒಟ್ಟು 571 ಅಪಾಯಕಾರಿ ಸ್ಥಿತಿಯಲ್ಲಿರುವ ಶಿಥಿಲ ಕಟ್ಟಡಗಳಿದೆಯಂತೆ.
ಬಿಬಿಎಂಪಿ (BBMP) ಯ ಎಂಟು ವಲಯಗಳ ಜಂಟಿ ಆಯುಕ್ತರು, ನಗರ ವ್ಯಾಪ್ತಿಯಲ್ಲಿನ ಶಿಥಿಲವಾದ ಕಟ್ಟಡಗಳ ಸಮೀಕ್ಷೆ ನಡೆಸಿ ಪಾಲಿಕೆ ಯೋಜನಾ ಇಲಾಖೆ ವಿಶೇಷ ಆಯುಕ್ತರಿಗೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು 2019 ನೇ ಇಸವಿಯಲ್ಲಿ ಪತ್ತೆಹಚ್ಚಿದ 185 ಕಟ್ಟಡಗಳು ಹಾಗೂ 2021ರ ಅಕ್ಟೋಬರ್ ನಲ್ಲಿ ಹೊಸದಾಗಿ 396 ಶಿಥಿಲ ಕಟ್ಟಡಗಳನ್ನು ಪಾಲಿಕೆಯ 8 ವಲಯಗಳಲ್ಲಿ ಪ್ರಾಥಮಿಕ ಹಂತದಲ್ಲಿ ಪಟ್ಟಿ ಮಾಡಲಾಗಿದೆ.
2019 ರಲ್ಲಿ ಪಟ್ಟಿ ಮಾಡಿದ ಪೈಕಿ 10 ಕುಸಿತದ ಭೀತಿಯಲ್ಲಿರುವ ಕಟ್ಟಡಗಳನ್ನು ಪಾಲಿಕೆ ಈಗಾಗಲೇ ತೆರವು ಮಾಡಿದ್ದು ಬಾಕಿ 571 ಕಟ್ಟಡಗಳು ನಗರದಲ್ಲಿವೆ ಎಂದು ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ.
ಆ ಪ್ರಕಾರ ಪ್ರತಿ ವಾರ್ಡ್ ನಲ್ಲಿ ಸಮೀಕ್ಷೆ ನಡೆಸಿರುವ ಸಹಾಯಕ ಇಂಜಿಜಿನಿಯರ್ ಗಳು ತಮ್ಮ ವ್ಯಾಪ್ತಿಯಲ್ಲಿರುವ ಈಗಲೋ ಆಗಲೋ ಬಿದ್ದು ಹೋಗುವ ಸ್ಥಿತಿಯಲ್ಲಿರುವ ಕಟ್ಟಡ, ನಿರ್ಮಾಣಗಳನ್ನು ಗುರುತಿಸಿದ್ದಾರೆ. ಅಗತ್ಯವಿರುವ ಕಡೆಗಳಲ್ಲಿ ವಲಯ ಮುಖ್ಯ ಎಂಜಿನಿಯರ್ ಗಳು ಸ್ಥಳಕ್ಕೆ ತರಳಿ ಪರಿಶೀಲನೆ ಸಮೀಕ್ಷೆಯಲ್ಲಿ ಪಾಲ್ಗೊಂಡು ಪ್ರಾಥಮಿಕ ವರದಿ ಸಿದ್ಧಪಡಿಸಿದ್ದಾರೆ. 2019ರಲ್ಲಿ 198 ವಾರ್ಡ್ ಗಳಲ್ಲಿ ಒಟ್ಟು 185 ಶಿಥಿಲ ಕಟ್ಟಡಗಳನ್ನು ಗುರುತಿಸಿದ್ದ ಪಾಲಿಕೆ ಆ ಪೈಕಿ ಕೇವಲ 10 ಕಟ್ಟಡಗಳನ್ನು ಮಾತ್ರ ನೆಲಸಮಗೊಳಿಸಲು ಕ್ರಮ ಕೈಗೊಂಡಿತ್ತು.
ಈಗ 2021ರಲ್ಲಿ ಹೊಸದಾಗಿ ಸಮೀಕ್ಷೆ ನಡೆಸಿ ಕೇವಲ 396 ಶಿಥಿಲ ನಿರ್ಮಾಣಗಳನ್ನು ಪಾಲಿಕೆ ಅಧಿಕಾರಿಗಳು ಗಡಿಬಿಡಿಯಲ್ಲಿ ಗುರುತಿಸಿದ್ದಾರೆ. ಏಕೆಂದರೆ ಸೆ.30 ರಂದು ವಿಧಾನಸೌಧದಲ್ಲಿ ಬಿಬಿಎಂಪಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಕಂದಾಯ ಸಚಿವ ಆರ್.ಅಶೋಕ್ 15 ದಿನದಲ್ಲಿ ನಗರ ವ್ಯಾಪ್ತಿಯಲ್ಲಿನ ಹಳೆಯ ಮತ್ತು ಅಪಾಯಕಾರಿ ಕಟ್ಟಡಗಳ ಸಮೀಕ್ಷೆ ನಡೆಸಿ ಆ ಕುರಿತ ವರದಿ ನೀಡುವಂತೆ ಗಡವು ನೀಡಿದ್ದರು. ಇದರಿಂದಾಗಿ ಒತ್ತಡಕ್ಕೆ ಒಳಗಾದ ಪಾಲಿಕೆ ಅಧಿಕಾರಿಗಳು ಲಗುಬಗೆಯಲ್ಲಿ ಸಮೀಕ್ಷೆ ಶಾಸ್ತ್ರ ಮುಗಿಸಿ ಪ್ರಾಥಮಿಕ ವರದಿ ನೀಡಿದ್ದಾರೆ.
ಮೊದಲಿಗೆ ಶಿಥಿಲ ಕಟ್ಟಡಗಳನ್ನು ಗುರುತಿಸಿ ನಂತರ ಆ ಕಟ್ಟಡಗಳ ಮಾಲೀಕರಿಗೆ ವಲಯ ಮಟ್ಟದ ಜಂಟಿ ಆಯುಕ್ತರ ನೇತೃತ್ವದಲ್ಲಿ ನೋಟಿಸ್ ನೀಡಲಾಗುತ್ತದೆ. ಬಳಿಕ ಆಯಾ ಕಟ್ಟಡಗಳ ದೃಢತೆ ಬಗ್ಗೆ ಪಾಲಿಕೆಯ ಅಂಗೀಕೃತ ಸ್ಟ್ರಕ್ಚರಲ್ ಇಂಜಿನಿಯರ್ ಗಳಿಂದ ವರದಿ ಪಡೆದು ಆ ಕಟ್ಟಡಗಳನ್ನು ನೆಲಸಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಈ ಪ್ರಕ್ರಿಯೆಗಳು ಬಾಯಲ್ಲಿ ಹೇಳಿದಷ್ಟು ಸುಲಭವಿಲ್ಲ. ಕಟ್ಟಡ ಮಾಲೀಕರು ಕಾನೂನು ಹೋರಾಟ ಕೈಗೊಂಡಲ್ಲಿ ಕಟ್ಟಡ ನೆಲಸಮಗೊಳಿಸಲು ಮತ್ತಷ್ಟು ಸಮಯ ಹಿಡಿಯಬಹುದು.
ಈ ಹಿಂದೆ 2019 ರಲ್ಲಿ ಬೆಂಗಳೂರಿನಾದ್ಯಂತ 185 ಶಿಥಿಲ ಕಟ್ಟಡಗಳನ್ನು ಗುರುತಿಸಿದ್ದರೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕೇವಲ 10 ಬಿಲ್ಡಿಂಗ್ ಗಳನ್ನು ಮಾತ್ರ ತೆರವು ಮಾಡಲು ಸಾಧ್ಯವಾಗಿದೆ.
2019 ಹಾಗೂ 2021 ಇಸವಿಯಲ್ಲಿ ವಲಯ ಮಟ್ಟದಲ್ಲಿ ಸಮೀಕ್ಷೆ ವೇಳೆ ಕಂಡುಬಂದ ಶಿಥಿಲ ಕಟ್ಟಡಗಳ ವಿವರ ಈ ಕೆಳಕಂಡಂತಿದೆ :
ಪಾಲಿಕೆ ವಲಯ —2019 ಇಸವಿ —2021ಇಸವಿ –ಒಟ್ಟಾರೆ
ದಕ್ಷಿಣ 33 103 132
ಪಶ್ಚಿಮ 34 95 129
ಪೂರ್ವ 46 67 113
ಮಹದೇವಪುರ 03 24 27
ಆರ್.ಆರ್.ನಗರ 01 11 12
ಬೊಮ್ಮನಹಳ್ಳಿ 00 09 09
ಯಲಹಂಕ 60 84 144
ದಾಸರಹಳ್ಳಿ 08 03 11
ಒಟ್ಟಾರೆ : 185 396 581
ಈ ಅಂಕಿಸಂಖ್ಯೆಗಳನ್ನು ನೋಡುತ್ತಿದ್ದರೆ ಯಾವುದೋ ಲಾಟರಿ ಟಿಕೆಟ್ ನಂಬರ್ ಇದ್ದಂಗಿದೆ. ಬೆಂಗಳೂರಿನಲ್ಲಿ 19 ಲಕ್ಷಕ್ಕೂ ಹೆಚ್ಚಿನ ಆಸ್ತಿಗಳಿವೆ. ಅವುಗಳ ಪೈಕಿ ಎಷ್ಟೋ ಕಟ್ಟಡಗಳು, ಅಪಾರ್ಟ್ ಮೆಂಟ್ ಗಳು ರಾಜಕಾಲುವೆ ಬಳಿ, ಕೆರೆ ಒತ್ತುವರಿ ಮಾಡಿಕೊಂಡು ಕಟ್ಟಿರುವಂತದ್ದು ಸಾಕಷ್ಟಿದೆ. ಕಳಪೆ ಗುಣಮಟ್ಟದ ಸಾಮಗ್ರಿ ಬಳಸಿ ಕಟ್ಟಿದ ಮನೆಗಳು ಯಾವತ್ತಿದ್ದರೂ ಅಪಾಯಕಾರಿಯೇ.
ಅದನ್ನು ಕಣ್ಣಳತೆ ಅಥವಾ ಬರಿಗಣ್ಣಿನಲ್ಲಿ ಶಿಥಿಲ ಕಟ್ಟಡಗಳೆಂದು ತಿಳಿದು ಬರುವುದಿಲ್ಲ. ತಾಂತ್ರಿಕ ಪರೀಕ್ಷೆ ನಡೆಸಿಯೇ ನಿರ್ಧರಿಸಬೇಕು. ಹಾಗಾಗಿ ಆ ದೃಷ್ಟಿಯಿಂದ ನೋಡುವುದಾದರೆ ಪಾಲಿಕೆ ಅಧಿಕಾರಿಗಳು ಪ್ರಾಥಮಿಕ ಸಮೀಕ್ಷೆ ನಡೆಸಿ ನೀಡಿರುವ ಶಿಥಿಲ ಕಟ್ಟಡಗಳ ಸಂಖ್ಯೆ ಕೇವಲ ಸರ್ಕಾರ ಹಾಗೂ ಪಾಲಿಕೆ ಮುಖ್ಯ ಆಯುಕ್ತರ ಕಣ್ಣೊರೆಸಲು ನೀಡಿದ ಮಾಹಿತಿಯಂತಿದೆ.
ಶಿಥಿಲ ಕಟ್ಟಡಗಳನ್ನು ಗುರುತಿಸಿ, ತಾಂತ್ರಿಕ ಪರಿಶೀಲನೆ ಕೈಗೊಂಡು ಅವುಗಳು ಸಾರ್ವಜನಿಕರಿಗೆ ಅಪಾಯಕಾರಿ ಎಂಬುದು ಸಾಬೀತಾದಲ್ಲಿ ಅವುಗಳನ್ನು ಕಾನೂನು ಪ್ರಕಾರ ಕೆಡವುದರಲ್ಲಿ ತಪ್ಪೇನಿಲ್ಲ ಎಂಬ ಅಭಿಪ್ರಾಯಗಳು ನಾಗರೀಕ ವಲಯದಲ್ಲಿ ಇತ್ತೀಚೆಗೆ ನಗರದಲ್ಲಿ ಮಳೆ ಬಂದು ಕಟ್ಟಡ ಕುಸಿತ ಪ್ರಕರಣಗಳು ಸಂಭವಿಸಿದಾಗ ವ್ಯಕ್ತವಾಗಿದೆ.