ಬೆಂಗಳೂರು, (www.bengaluruwire.com) : ರಾಜ್ಯ ಸರ್ಕಾರದ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಯ ಬೆಂಗಳೂರು ಮೂಲದ ಮೂವರು ಪ್ರಮುಖ ಗುತ್ತಿಗೆದಾರರು ಹಾಗೂ ಅವರಿಗೆ ಸಂಬಂಧಿಸಿದ ವ್ಯಕ್ತಿಗಳ ಮನೆ ಹಾಗೂ ಕಚೇರಿಗಳ ಮನೆ ಮೇಲೆ ಅ.7ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು 750 ಕೋಟಿ ರೂಪಾಯಿ ಮೊತ್ತದ ಘೋಷಿಸದ ಆದಾಯವಿರುವುದನ್ನು ಪತ್ತೆ ಹಚ್ಚಿದೆ.
ಈ ಮೂವರು ಗುತ್ತಿಗೆದಾರರಿಗೆ ಸಂಬಂಧಿಸಿದ ಸಂಸ್ಥೆಗಳ ಭೌತಿಕ ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳು ಹಾಗೂ ಇತ್ಯಾದಿಗಳ ರೂಪದಲ್ಲಿ ಲಭ್ಯವಿರುವ ಸಾಕ್ಷ್ಯಗಳನ್ನು ಪತ್ತೆ ಹಚ್ಚಿರುವ ಕರ್ನಾಟಕ ಹಾಗೂ ಗೋವಾ ವಲಯದ ಆದಾಯ ತೆರಿಗೆ ಅಧಿಕಾರಿಗಳು, ಇಷ್ಟು ಬೃಹತ್ ಮೊತ್ತವನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆ ಪೈಕಿ 487 ಕೋಟಿ ರೂಪಾಯಿ ಬಹಿರಂಗಪಡಿಸದ ಅಘೋಷಿತ ಆದಾಯವೆಂದು ಸ್ವತಃ ಆ ಮೂರು ಸಮೂಹ ಸಂಸ್ಥೆಗಳ ಗುತ್ತಿಗೆದಾರರು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ತನಿಖೆಯು ಪ್ರಗತಿಯಲ್ಲಿದೆ ಎಂದು ಆದಾಯ ತೆರಿಗೆ ಇಲಾಖೆ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಗುತ್ತಿಗೆದಾರರ ಬಳಿ ಕೆಜಿ ಗಟ್ಟಲೆ ಚಿನ್ನ- ಬೆಳ್ಳಿ ಆಭರಣ ಪತ್ತೆ :
ಅಕ್ಟೋಬರ್ 7 ರಂದು ಮುಂಜಾನೆಯಿಂದಲೇ ಬೆಂಗಳೂರು ಸೇರಿದಂತೆ ನಾಲ್ಕು ರಾಜ್ಯಗಳ 47 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸಿ ಶೋಧ ಕಾರ್ಯದಲ್ಲಿ ತೊಡಗಿದ್ದರು. ಈ ಕಾರ್ಯಾಚರಣೆ ವೇಳೆ 4.96 ಕೋಟಿ ರೂ. ಮೌಲ್ಯದ ಅಘೋಷಿತ ನಗದು, ಲೆಕ್ಕಕ್ಕೆ ಸಿಗದ 8.67 ಕೋಟಿ ಮೌಲಯದ ಚಿನ್ನ ಆಭರಣ ಹಾಗೂ ಚಿನ್ನದ ಗಟ್ಟಿ, 29.83 ಕೋಟಿ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.
ಆದಾಯ ಮುಚ್ಚಿಡಲು ನಕಲಿ ಖರೀದಿ, ಬೋಗಸ್ ಸಬ್- ಕಾಂಟ್ರಾಕ್ಟ್ ಟ್ರಿಕ್ :
ಐಟಿ ಟೀಮ್ ರಾಜ್ಯದ ಹಲವು ಕಡೆ ಹಾಗೂ ರಾಜ್ಯದ ಹೊರ ಭಾಗಗಳಲ್ಲಿ ಶೋಧ ಕಾರ್ಯ ನಡೆಸಿ ದಾಖಲೆಗಳನ್ನು ಶೋಧನೆ ಕಾರ್ಯ ನಡೆಸಿದಾಗ, ಈ ಮೂರು ಸಮೂಹ ಸಂಸ್ಥೆಗಳ ಗುತ್ತಿಗೆದಾರರು ನಕಲಿ ಖರೀದಿಗಳನ್ನು ಆಶ್ರಯಿಸುವ ಮೂಲಕ ತಮ್ಮ ಆದಾಯವನ್ನು ಮುಚ್ಚಿಟ್ಟಿರುವುದು ಕಂಡು ಬಂದಿದೆ. ಅಲ್ಲದೆ ನಕಲಿ ಕಾರ್ಮಿಕರ ಹೆಸರಿನಲ್ಲಿ ಹಣ ವೆಚ್ಚ ಮಾಡಿರುವುದು, ಬೋಗಸ್ ಸಬ್ ಕಾಂಟ್ರಾಕ್ಟ್ ನೀಡಿ ಅದಕ್ಕೆ ಹಣ ವೆಚ್ಚ ಮಾಡಿರುವುದು ಸೇರಿದಂತೆ ಇತ್ಯಾದಿ ಕೃತ್ಯಗಳನ್ನು ಎಸಗಿರುವುದನ್ನು ಐಟಿ ತಂಡ ಪತ್ತೆ ಹಚ್ಚಿದೆ.
ಮೂರು ಗುತ್ತಿಗೆದಾರರ ಪೈಕಿ ಒಂದು ಗುಂಪಿನವರು ನಿರ್ಮಾಣ ವ್ಯವಹಾರಕ್ಕೆ ಸಂಬಂಧವಿಲ್ಲದ 40 ವೈಯುಕ್ತಿಕ ವ್ಯಕ್ತಿಗಳ ಹೆಸರಿನಲ್ಲಿ ಬೋಗಸ್ ಸಬ್- ಕಾಂಟ್ರಾಕ್ಟ್ ವೆಚ್ಚವನ್ನು ತೋರಿಸಿದ್ದು, ಆ ಬೋಗಸ್ ಹೆಸರಿನಲ್ಲಿದ್ದ ವ್ಯಕ್ತಿಗಳು ತನಿಖೆಯ ವೇಳೆ ತಾವು ಅವ್ಯವಹಾರ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಇನ್ನೊಂದು ಬಳಗವು ಅನಗತ್ಯವಾಗಿ ಸುಮಾರು 382 ಕೋಟಿ ರೂ.ಗಳಷ್ಟು ಕಾರ್ಮಿಕ ವೆಚ್ಚಗಳಲ್ಲಿ ಹಣದುಬ್ಬರವಾಗಿರುವಂತೆ ದಾಖಲೆ ಸೃಷ್ಟಿಸಿದ್ದನ್ನು ಐಟಿ ತಂಡ ಶೋಧಕಾರ್ಯದ ವೇಳೆ ಬಹಿರಂಗಪಡಿಸಿದೆ. ಮತ್ತೊಂದು ಗುತ್ತಿಗೆದಾರರ ಗುಂಪು ಅಸ್ಥಿತ್ವದಲ್ಲಿಯೇ ಇಲ್ಲದ ಪೇಪರ್ ಕಂಪನಿಗಳಿಂದ ಸುಮಾರು 105 ಕೋಟಿ ರೂ.ವರೆಗೆ ಬಾಡಿಗೆಗೆ ವಸತಿಗಳನ್ನು ಪಡೆದಿರುವುದನ್ನು ಒಪ್ಪಿಕೊಂಡಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿ.ಎಸ್.ವೈ ಆಪ್ತ ಬಳಗದ ಮೇಲೆ ಐಟಿ ಬಲೆ ?
ಆದರೆ ಈ ಬೃಹತ್ ಐಟಿ ದಾಳಿಯು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕುಟುಂಬದ ನಿಕಟವರ್ತಿ ಹಾಗೂ ಮುಖ್ಯಮಂತ್ರಿ ಸಚಿವಾಲಯದ ಸಿಬ್ಬಂದಿಯಾಗಿದ್ದ ಬಿಎಂಟಿಸಿ ಚಾಲಕ ಕಂ ನಿರ್ವಾಹಕ ಆಯನೂರು ಉಮೇಶ್ ಹಾಗೂ ಜಲಸಂಪನ್ಮೂಲ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ನಿಕಟ ನಂಟು ಹೊಂದಿದ್ದ ಗುತ್ತಿಗೆದಾರ ಸೋಮಶೇಖರ್, ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸಹಪಾಠಿ ಅರವಿಂದ್ ಮತ್ತಿತರ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು ಎನ್ನಲಾಗಿದೆ. ರಾಜ್ಯದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ಪ್ರಭಾವವನ್ನು ಕುಗ್ಗಿಸಲೆಂದೇ ಹೈಕಮಾಂಡ್ ಮೂಲಕ ಬಿಎಸ್ ವೈ ಆಪ್ತ ಬಳಗದ ಸುತ್ತ ಐಟಿ ಬಲೆ ಹಾಕಲಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಪತ್ರಿಕಾ ಪ್ರಕಟಣೆಯ ಯಾವ ಭಾಗದಲ್ಲಿಯೂ ಆದಾಯ ತೆರಿಗೆ ಇಲಾಖೆಯು, ತನಿಖೆಯ ದೃಷ್ಟಿಯಿಂದ ಯಾರ ಮೇಲೆ ಐಟಿ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಬಗ್ಗೆ ತಿಳಿಸಿಲ್ಲ.