ಬೆಂಗಳೂರು, (www.bengaluruwire.com) : ಸಿಲಿಕಾನ್ ಸಿಟಿಯ ಸ್ಮಾರ್ಟ್ ಸಿಟಿ ಯೋಜನೆಯು ತನ್ನ ಹೆಸರಿನಂತೆ ಇನ್ನು ಸ್ಮಾರ್ಟ್ ಆಗಿಲ್ಲ. ಈ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಮಲಹೊರುವ ಪದ್ಧತಿ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿರುವ ಸಂಗತಿ ಬಹಿರಂಗವಾಗಿದೆ.
ಈ ಸಂಬಂಧ ಸಾಮಾಜಿಕ ಹೋರಾಟಗಾರರಾದ ವಿನಯ್ ಶ್ರೀನಿವಾಸ್, ಸ್ವಾತಿ ಶಿವಾನಂದ್ ಎನ್ನುವವರು ಸ್ಮಾರ್ಟ್ ಸಿಟಿ ಯೋಜನೆಯಡಿ ಅಮೃತ ಕನ್ಸ್ ಸ್ಟ್ರಕ್ಷನ್ ಗುತ್ತಿಗೆದಾರರು ಕೆಲಸಕ್ಕೆ ನೇಮಿಸಿಕೊಂಡ ಕಾರ್ಮಿಕರಿಂದ, ಸೂಕ್ತ ಸ್ವಚ್ಛತಾ ಪರಿಕರಗಳಿಲ್ಲದೆ ಮ್ಯಾನ್ ಹೋಲ್ ಚರಂಡಿಗೆ ಇಳಿಸಿದ್ದಾರೆ. ಅಲ್ಲದೆ ತ್ಯಾಜ್ಯ ಹೊರಹಾಕಿ ಸ್ವಚ್ಛತೆ ಕಾರ್ಯಕ್ಕೆ ಬಳಸಿದ್ದಾರೆಂದು ಸ್ಮಾರ್ಟಿ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ.
ಶಿವಾಜಿನಗರದ ಇನ್ ಫೆಂಟ್ರಿ ರಸ್ತೆಯಲ್ಲಿ ರಾಜ್ಯ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಂಕ್ರಿಟ್ ರಸ್ತೆ, ಒಳಚರಂಡಿ, ಸಾರ್ವಜನಿಕ ಉಪಯೋಗಿ ಪೈಪ್ ಗಳನ್ನು ಅಳವಡಿಸಲಾಗಿದೆ.
“ಸೋಮವಾರ ಬೆಳಗ್ಗೆ ಇನ್ ಫೆಂಟ್ರಿ ರಸ್ತೆಯ ಸ್ಮಾರ್ಟ್ ಸಿಟಿ ರಸ್ತೆಯಲ್ಲಿ ಪೌರಕಾರ್ಮಿಕರಿಂದ ಅಗತ್ಯ ಉಪಕರಣಗಳನ್ನು ಬಳಸದೆ ಇಬ್ಬರು ಕಾರ್ಮಿಕರನ್ನು ಬರಿಗೈಲಿ ಒಳಚರಂಡಿಯಲ್ಲಿನ ತ್ಯಾಜ್ಯವನ್ನು ತೆಗೆಸಿದ್ದಾರೆ. ಅಮೃತ ಕನ್ಸ್ ಸ್ಟ್ರಕ್ಷನ್ ಎಂಜಿನಿಯರ್ ಗಳನ್ನು ಈ ಬಗ್ಗೆ ಪ್ರಶ್ನಿಸಿದರೆ ನಮಗೆ ಧಮಕಿ ಹಾಕಿದರು. ಆ ಮ್ಯಾನ್ ಹೋಲ್ ನಲ್ಲಿ ಚರಂಡಿ ನೀರು ಇನ್ನೂ ಬಿಟ್ಟೇ ಇಲ್ಲ ಎಂದು ವಾದಿಸಿದರು. ಈ ಬಗ್ಗೆ ಸ್ಮಾರ್ಟ್ ಸಿಟಿ ಎಂಡಿ ಗೆ ಸೂಕ್ತ ತನಿಖೆ ನಡೆಸುವಂತೆ ದೂರು ನೀಡಿದ್ದೇವೆ.”
– ವಿನಯ್ ಶ್ರೀನಿವಾಸ, ಸಾಮಾಜಿಕ ಕಾರ್ಯಕರ್ತರು
ಬೆಂಗಳೂರಿನಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರ ಸ್ಮಾರ್ಟಿ ಸಿಟಿ ಯೋಜನೆ ಕೈಗೊಂಡಿದೆ. ಹೀಗಿರುವಾಗ ಒಳಚರಂಡಿ ಶುಚಗಾಗಿ ಅತ್ಯಾಧುನಿಕ ಯಂತ್ರ ಬಳಸದೆ ಪೌರಕಾರ್ಮಿಕರನ್ನು ಒಳಚರಂಡಿಯಲ್ಲಿ ಇಳಿಸಿರುವ ದೃಶ್ಯವನ್ನು ಸಾಮಾಜಿಕ ಕಾರ್ಯಕರ್ತ ವಿನಯ್ ಶ್ರೀನಿವಾಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಇನ್ ಫೆಂಟ್ರಿ ರಸ್ತೆಯ ಮ್ಯಾನ್ ಹೋಲ್ ಗುಂಡಿಯಲ್ಲಿ ಸೂಕ್ತ ಯಂತ್ರೋಪಕರಣ, ಶುಚಿತ್ವದ ಪರಿಕರಗಳಿಲ್ಲದೆ ಒಳಚರಂಡಿ ಸ್ವಚ್ಛತೆ ಮಾಡಿಸುತ್ತಿರುವುದನ್ನು ವಿನಯ್ ಶ್ರೀನಿವಾಸ್ ಪ್ರಶ್ನಿಸಿದರೆ ಅಮೃತ ಕನ್ಸ್ ಸ್ಟ್ರಕ್ಷನ್ ಗುತ್ತಿಗೆದಾರರ ಕಡೆಯ ಎಂಜಿಯರ್ ಗಳು ಧಿಮಾಕಿನಿಂದ ಉತ್ತರಿಸಿದರು. ಅಲ್ಲದೆ ಈ ಒಳಚರಂಡಿಗೆ ಇನ್ನು ಕೊಳಚೆ ನೀರು ಹರಿಯಲು ಬಿಟ್ಟಿಲ್ಲ ಎಂದು ಗುತ್ತಿಗೆದಾರರ ಕಡೆಯ ಎಂಜಿನಿಯರ್ ಹೇಳಿದರು. ಅದಿಕ್ಕೆ ವಿನಯ್ ಶ್ರೀನಿವಾಸ್, ಇದೇ ಚರಂಡಿ ಗುಂಡಿಯಿಂದ 50 ಮೀಟರ್ ದೂರದಲ್ಲಿ ಕೆಲವು ದಿನಗಳ ಹಿಂದಯಷ್ಟೆ ಮತ್ತೊಂದು ಪಿಟ್ ನಲ್ಲಿ ಚರಂಡಿ ನೀರು ಉಕ್ಕಿ ಹರಿಯುತ್ತಿತ್ತು₹ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಇ-ಮೇಲ್ ಮೂಲಕ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.
“ಇನ್ ಫೆಂಟ್ರಿ ರಸ್ತೆಯಲ್ಲಿನ ಒಳಚರಂಡಿಗೆ ಇನ್ನೂ ತ್ಯಾಜ್ಯ ನೀರು ಹರಿಸಲಾಗುತ್ತಿಲ್ಲ ಎಂದು ಸ್ಮಾರ್ಟಿ ಸಿಟಿ ಚೀಫ್ ಎಂಜಿನಿಯರ್ ಮತ್ತು ಸೈಟ್ ಎಂಜಿನಿಯರ್ ಹೇಳಿದ್ದಾರೆ. ಅಮೃತ ಕನ್ಸ್ ಸ್ಟ್ರಕ್ಷನ್ ಗುತ್ತಿಗೆದಾರರು ಒಳಚರಂಡಿ ಸ್ವಚ್ಛತೆ ಕೆಲಸಗಾರರಿಗೆ ಸೂಕ್ತ ಸ್ವಚ್ಛತಾ ಪರಿಕರಗಳಾದ ಗ್ಲೌಸ್, ಬೂಡ್ಸ್ ಮತ್ತಿತರ ವಸ್ತುಗಳನ್ನು ನೀಡದ ಬಗ್ಗೆ ದೂರು ಬಂದಿದ್ದು ಅವರಿಗೆ ನೋಟಿಸ್ ಕೊಡಲು ಸಿಇ ಗೆ ತಿಳಿಸಿದ್ದೇನೆ. ಮೂರನೇ ವ್ಯಕ್ತಿಯಿಂದ ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದೆ. ಆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.”
– ರಾಜೇಂದ್ರ ಚೋಳನ್, ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಸ್ಮಾರ್ಟ್ ಸಿಟಿ ಪ್ರೈ.ಲಿ.
ರಾಜ್ಯದಲ್ಲಿ ಮಲ ಹೊರುವ ಪದ್ಧತಿ ನಿಷೇಧಿಸಿದ್ದರೂ ಕೆಲವು ಕಡೆ ಇಂಥ ಘಟನೆಗಳು ನಡೆಯುತ್ತಿದೆ. ಅದನ್ನು ತಡೆಯಲು ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಕ್ರಮ ಜಾರಿಗೆ ತರಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮಾರ್ಚ್ ನಲ್ಲಿ ಅಧಿವೇಶನದ ವೇಳೆ
ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ಸಿನ ಬಿ.ಕೆ. ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸುವ ವೇಳೆ ಹೀಗೆ ಹೇಳಿದ್ದರು.
ಕಡ್ಡಾಯವಾಗಿ ಆಧುನಿಕ ಯಂತ್ರಗಳನ್ನು ಬಳಸಿ ಶೌಚಾಲಯ ಶೌಚಗುಂಡಿ, ಒಳಚರಂಡಿ ಸ್ವಚ್ಚಗೊಳಿಸಬೇಕೆಂಬ ನಿಯಮವಿದ್ದರೂ ಕೆಲವು ಕಡೆ ಇಂಥ ಅಮಾನವೀಯ ಘಟನೆಗಳು ನಡೆಯುತ್ತಲೇ ಇವೆ. ಇದಕ್ಕೆ ಕಡಿವಾಣ ಹಾಕುವ ಜೊತೆಗೆ ಪೌರ ಕಾರ್ಮಿಕರಿಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಆದರೂ ಬೆಂಗಳೂರಿನ ಹೃದಯ ಭಾಗದಲ್ಲೇ ಮಲಹೊರುವ ಪದ್ಧತಿ ಜೀವಂತವಾಗಿದೆ ಎಂದಾದರೆ ಇದು ನಿಜಕ್ಕೂ ನಾಗರೀಕ ಸಮಾಜ ತಲೆತಗ್ಗಿಸುವಂತ ವಿಷಯವಾಗಿದೆ.