ಬೆಂಗಳೂರು, (www.bengaluruwire.com) : ತಮ್ಮದಲ್ಲದ ತಪ್ಪಿಗೆ ಪಾಲಿಕೆ ಅರಣ್ಯ ವಿಭಾಗದ ಮರ ಕಡಿತ ತಂಡದ ಬೇಜವ್ದಾರಿಯಿಂದ ಮರದ ಕೊಂಬೆ ಸಿದ್ದಪ್ಪ (49) ಎಂಬುವರ ಮೇಲೆ ಬಿದ್ದು ಸಾವನ್ನಪ್ಪಿ ಒಂದು ವರ್ಷವಾಗಿದೆ. ಪರಿಹಾರ ನೀಡಬೇಕಾದ ಬಿಬಿಎಂಪಿ ಅಧಿಕಾಗಳ ನಿರ್ಲಕ್ಷ್ಯದಿಂದ ಸಿದ್ದಪ್ಪ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.
ಕಳೆದ ವರ್ಷ ಸೆಪ್ಟೆಂಬರ್ 30 ರಂದು ಸಿದ್ದಪ್ಪ ಅವರು, ಬೈಕ್ ನಲ್ಲಿ ಹೋಗುವಾಗ ತಿಲಕ್ ನಗರದಲ್ಲಿ ಅವರ ಮೇಲೆ ಮರ ಬಿದ್ದು ಕೂಡಲೇ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ಸಿದ್ದಪ್ಪನವರು ಮೃತಪಟ್ಟಿದ್ದರು.
ಬಿಬಿಎಂಪಿ ಒಣಗಿದ ಮತ್ತು ಶಿಥಿಲಗೊಂಡಿರುವ ಮರಗಳನ್ನು ನಿರ್ವಹಣೆ ಮಾಡದಿರುವ ಕಾರಣ, ಒಣಗಿದ ಮರದ ಕೊಂಬೆ ಸಿದ್ದಪ್ಪ ಅವರ ತಲೆ ಮೇಲೆ ಬಿದ್ದು ಸಾವನ್ನಪ್ಪಿದ್ದರು.
ಈ ದುರ್ಘಟನೆ ನಡೆದು ಒಂದು ವರ್ಷ ಕಳೆದರೂ ಪಾಲಿಕೆಯಿಂದ ಸೂಕ್ತ ಪರಿಹಾರ ಧನ ಸಿಗದೆ ಮೃತ ಸಿದ್ದಪ್ಪನ ಪತ್ನಿ ಗೀತಾ ಹಾಗೂ ಮಗಳು ನಂದಿತ ಬಿಬಿಎಂಪಿಯ ಅಧಿಕಾರಿಗಳ ಮೊರೆ ಹೋದರು ಪ್ರಯೋಜನವಾಗಿಲ್ಲ. ಸಿದ್ದಪ್ಪ ಅಗಲಿದ ಎರಡು ತಿಂಗಳಲ್ಲೇ ಈ ಪುಟ್ಟ ಕುಟುಂಬಕ್ಕೆ ಮತ್ತೊಂದು ಅಘಾತ ಬಂದೊದಗಿತ್ತು. ಪತ್ನಿ ಗೀತಾಗೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು.
“ಇಷ್ಟಾದರೂ ಬಿಬಿಎಂಪಿಗೆ ಕರುಣೆ ಇಲ್ಲದಂತಾಗಿದೆ.
ನನಗೆ ಕ್ಯಾನ್ಸರ್ ಮೂರನೇ ಸ್ಟೇಜ್ ನಲ್ಲಿದೆ. ಪ್ರಾಯಕ್ಕೆ ಬಂದಿರೋ ನನ್ನ ಮಗುಳಿಗೆ ಯಾರೂ ದಿಕ್ಕಿಲ್ಲ. ಏನಾದರೂ ಸಹಾಯ ಮಾಡುವಂತೆ ಪಾಲಿಕೆ ಅಧಿಕಾರಿಗಳಲ್ಲಿ ಕೇಳುತ್ತಿದ್ದೇನೆ. ಆದರೂ ಯಾವುದೇ ಪರಿಹಾರ ದೊರೆತಿಲ್ಲ.“
– ಗೀತಾ, ಮೃತ ಸಿದ್ದಪ್ಪನ ಪತ್ನಿ
“ಬಿಬಿಎಂಪಿ ವತಿಯಿಂದ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಇಲ್ಲದಿದ್ದಲ್ಲಿ ಕಾನೂನು ಹೋರಾಟ ಮಾಡಲಾಗುವುದು.”
– ಅಮರೇಶ್, ಸಾಮಾಜಿಕ ಕಾರ್ಯಕರ್ತ