ಬೆಂಗಳೂರು, ಸೆ.20 (www.bengaluruwire.com) : ಕೋವಿಡ್ ಮಹಾಮಾರಿ ಸೋಂಕು ನಿರ್ಮೂಲನೆ ಹಾಗೂ ಜಾಗತಿಕ ಶಾಂತಿಗಾಗಿ ಪ್ರಾರ್ಥಿಸಿ ನಗರದ ಬಸವನಗುಡಿಯ ದೊಡ್ಡಗಣೇಶನಿಗೆ ಮಂಗಳವಾರ 108 ಬಗೆಯ ನೈವೇದ್ಯವನ್ನು (ಪ್ರತಿ ಪದಾರ್ಥವು 108 ಸಂಖ್ಯೆಯಲ್ಲಿದ್ದು) ಒಟ್ಟು 11,664 ಪದಾರ್ಥಗಳು ಶ್ರೀದೇವರಿಗೆ ಸಮರ್ಪಿಸಲಾಗುತ್ತಿದೆ.
ಚಾಮರಾಜಪೇಟೆಯ ಕನ್ನಡ ಸಾಂಸ್ಕೃತಿಕ ಕೇಂದ್ರವು 108 ಬಗೆಯ ತಿನಿಸುಗಳ ನೈವೇದ್ಯ ಹಾಗೂ ವಿವಿಧ ಬಗೆಯ ಹಣ್ಣುಗಳನ್ನು ವಿಘ್ನನಿವಾರಕನಿಗೆ ಸೆಂ.21ರಂದು ಸಂಜೆ 6 ಗಂಟೆಗೆ ಸಮರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಯತಿಶ್ರೇಷ್ಠರು, ಸ್ವಾಮೀಜಿಗಳು, ಮಂತ್ರಿಗಳು ಹಾಗೂ ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ.
ನಾಡಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ, ರಾಜ್ಯದ ಜನತೆ ಸಂಕಷ್ಠಕ್ಕೆ ಸಿಲುಕಿದಾಗ, ಭಾರತ ಕ್ರಿಕೆಟ್ ನಿರ್ಣಾಯಕ ಪಂದ್ಯ ಆಡುವಾಗ ಹೀಗೆ ನಾನಾ ಸಂದರ್ಭದಲ್ಲಿ ಚಾಮರಾಜಪೇಟೆಯ ಕನ್ನಡ ಸಾಂಸ್ಕೃತಿಕ ಕೇಂದ್ರವು ಸಮಾಜದ ಉನ್ನತಿಗಾಗಿ ಒಂದಿಲ್ಲೊಂದು ಸಮಾಜಮುಖಿ ಕಾರ್ಯವನ್ನು ಕೈಗೊಳ್ಳುತ್ತಾ ಬಂದಿದೆ. ಡಾ.ಕೆ.ವಿ.ರಾಮಚಂದ್ರ ಹಾಗೂ ಅವರ ಸಹೋದರರಾದ ಅಶ್ವಥ್ ಅವರುಗಳು ಹಲವು ವರ್ಷಗಳಿಂದ ಕನ್ನಡದ ತಿಂಡಿಕೇಂದ್ರದ ಮೂಲಕ ಹಸಿದವರಿಗೆ, ಬಡವರಿಗೆ ಅತಿ ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬುವಷ್ಟು ಊಟ- ತಿಂಡಿ ವಿತರಿಸುತ್ತಾ ಬಂದಿದೆ.
“ಕನ್ನಡ ನಾಡಿಗಾಗಿ, ಕನ್ನಡ ಭಾಷೆಗಾಗಿ ಏನಾದರೂ ಮಾಡಬೇಕೆಂಬ ತುಡಿತ ಸಹಜವಾಗಿ ನಮ್ಮ ಸಹೋದರರಲ್ಲಿತ್ತು. ಹಾಗಾಗಿ ಕಡಿಮೆ ಬೆಲೆಯಲ್ಲಿ ಕನ್ನಡ ತಿಂಡಿ ಕೇಂದ್ರದ ಮೂಲಕ ಗುಣಮಟ್ಟದ ಆಹಾರ ವಿತರಿಸುತ್ತಾ ಬಂದಿದ್ದೇವೆ. ಅದೇ ರೀತಿ ಕನ್ನಡಕ್ಕೆ ಕುತ್ತು ಬಂದಾಗಲೆಲ್ಲಾ ಈ ಎರಡೂ ಸಂಸ್ಥೆಗಳ ಮೂಲಕ ಕನ್ನಡಗರೊಂದಿಗೆ, ಕನ್ನಡದ ವಿವಿಧ ಸಂಘಟನೆಗಳೊಂದಿಗೆ ಸೇರಿ ಹೋರಾಟ ಮಾಡಿದ್ದೇವೆ. ನಾಡಿನ ಜನರ ಏಳ್ಗೆಯಾಗಬೇಕು, ಕನ್ನಡ ಭಾಷೆ ಬೆಳೆಯಬೇಕು ಎಂಬುದು ನಮ್ಮ ಉದ್ದೇಶವಷ್ಟೆ. ಕೋವಿಡ್ ಸೋಂಕಿನ ನಿವಾರಣೆ ಹಾಗೂ ಜಾಗತಿಕ ಶಾಂತಿಗಾಗಿ ಬಸವನಗುಡಿಯ ದೊಡ್ಡಗಣೇಶನಿಗೆ 108 ಬಗೆಯ ನೈವೇದ್ಯ ಹಾಗೂ ಹಣ್ಣುಗಳನ್ನು ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.”
– ಡಾ.ಕೆ.ವಿರಾಮಚಂದ್ರ, ಸಂಸ್ಥಾಪಕರು, ಚಾಮರಾಜಪೇಟೆ ಕನ್ನಡ ಸಾಂಸ್ಕೃತಿಕ ಕೇಂದ್ರ ಹಾಗೂ ಕನ್ನಡ ತಿಂಡಿ ಕೇಂದ್ರ
ಕೋವಿಡ್ ಸಂಕಷ್ಠ ಕಾಲದಲ್ಲೂ ಆಟೋ ಚಾಲಕರು, ಕೂಲಿ ಕಾರ್ಮಿಕರು, ಕೊಳಚೆ ನಿವಾಸಿಗಳು, ಭಿಕ್ಷುಕರು ಹೀಗೆ ಸಾವಿರಾರು ಮಂದಿಗೆ ಉಚಿತ ಊಟ- ತಿಂಡಿ ಪೊಟ್ಟಣಗಳನ್ನು ವಿತರಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಜೊತೆಗೆ ಬಿಬಿಎಂಪಿ ಸಹಯೋಗದಲ್ಲಿ ಕೋವಿಡ್ ಜಾಗೃತಿ ಕಾರ್ಯಕ್ರಮ, ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದಾರೆ.
“ಸಮಾಜಮುಖಿ ಸೇವೆ ಮಾಡುವುದರಲ್ಲೇ ನಮಗೊಂಥರಾ ಆತ್ಮತೃಪ್ತಿ ಹಾಗೂ ನೆಮ್ಮಿದಿಯಿದೆ. ಬೆಲೆ ಏರಿಕೆಯ ದಿನಗಳಲ್ಲೂ ಬಡವರಿಗೆ ಕಡಿಮೆ ಬೆಲೆಯಲ್ಲಿ ಊಟ- ತಿಂಡಿ ನೀಡುವುದು ನಮಗೆ ಸಾಮಾಜಿಕ ಕರ್ತವ್ಯ ನೆರವೇರಿಸುತ್ತಿದ್ದೇವೆ ಎಂಬ ಹೆಮ್ಮೆಯನ್ನು ಹೆಚ್ಚಿಸುತ್ತದೆ. ಕನ್ನಡ ನಾಡಿನ ಗಣ್ಯರೆಲ್ಲರೂ ಕನ್ನಡ ತಿಂಡಿ ಕೇಂದ್ರಕ್ಕೆ ಭೇಟಿಕೊಟ್ಟು ಇಲ್ಲಿನ ಕೆಲಸ ಕಾರ್ಯಗಳ ಬಗ್ಗೆ ನಾಲ್ಕು ಒಳ್ಳೆ ಮಾತನಾಡಿದ್ದಾರೆ. ಇದು ನಮ್ಮ ಕೆಲಸಕ್ಕೆ ಮತ್ತಷ್ಟು ಸ್ಪೂರ್ತಿ ಕೊಟ್ಟಿದೆ.”
– ಅಶ್ವಥ್, ಸಂಸ್ಥಾಪಕರು, ಚಾಮರಾಜಪೇಟೆ ಕನ್ನಡ ಸಾಂಸ್ಕೃತಿಕ ಕೇಂದ್ರ ಹಾಗೂ ಕನ್ನಡ ತಿಂಡಿ ಕೇಂದ್ರ
ಚಾಮರಾಜಪೇಟೆಯಂತಹ ನಗರದ ಅತಿ ಹಳೆಯ ಪ್ರದೇಶದಲ್ಲಿ ಕನ್ನಡ ಕಂಪನ್ನು ಸಾರುತ್ತಾ, ಇದೇ ವೇಳೆ ಬೆಂಗಳೂರಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ತಿಂಡಿಕೇಂದ್ರ ಹಾಗೂ ಕನ್ನಡ ಸಾಂಸ್ಕೃತಿಕ ಕೇಂದ್ರವು ಕನ್ನಡಿಗರ ಸಾಕ್ಷಿಪ್ರಜ್ಞೆಯಂತೆ ಕೆಲಸ ಮಾಡುತ್ತಾ ಬಂದಿದೆ. ಕನ್ನಡದ ಕವಿಗಳ ಚಿತ್ರಗಳು ಕನ್ನಡ ತಿಂಡಿ ಕೇಂದ್ರದ ತುಂಬಾ ನಿರಂತರವಾಗಿ ರಾರಾಜಿಸುತ್ತಿರುತ್ತೆ. ಪ್ರಮುಖ ಕವಿಗಳ ಹುಟ್ಟುಹಬ್ಬವನ್ನು ನಾಡಹಬ್ಬದಂತೆ ಆಚರಿಸುವುದು ಇಲ್ಲಿನ ವಾಡಿಕೆ.
ಈ ಎರಡೂ ಕೇಂದ್ರಗಳ ಮೂಲಕ ಡಾ.ಕೆ.ವಿ.ರಾಮಚಂದ್ರ ಹಾಗೂ ಅಶ್ವಥ್ ಮಾಡುತ್ತಿರುವ ನಿಸ್ವಾರ್ಥ ಸಮಾಜ ಸೇವೆಗೆ ನಾಡಿನ ಪ್ರಮುಖ ಸಂಘ ಸಂಸ್ಥೆಗಳು, ಗಣ್ಯರು ಶ್ಲಾಘನೆ ವ್ಯಕ್ತಪಡಿಸುತ್ತಾ, ಸದಾ ಬೆಂಬಲ ನೀಡುತ್ತಾ ಬಂದಿದ್ದಾರೆ.