ಬೆಂಗಳೂರು, (www.bengaluruwire.com) :
ರಾಜ್ಯದಲ್ಲಿ ಕರೋನಾ ಸೋಂಕು, ಬೆಲೆ ಏರಿಕೆ ಇದ್ಯಾವುದೂ ಮದ್ಯ ಮಾರಾಟಕ್ಕೆ ತೊಂದರೆಯಾಗಿಲ್ಲ. ಈ ವರ್ಷದ ಏಪ್ರಿಲ್‌ನಿಂದ ಆಗಸ್ಟ್ ವರೆಗಿನ ಐದು ತಿಂಗಳ ಅವಧಿಯಲ್ಲಿ ಭರ್ಜರಿ ಗುಂಡು ಮಾರಾಟವಾಗಿ ಅಬಕಾರಿ ಇಲಾಖೆಗೆ 10,197 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಗುಂಡು ಪ್ರಿಯರು ಈ ಐದು ತಿಂಗಳಲ್ಲಿ 22.60 ಕೋಟಿ ಲೀಟರ್ (261.60 ಲಕ್ಷ ಬಾಕ್ಸ್) ನಷ್ಟು ಭಾರತೀಯ ತಯಾರಿತ ಮದ್ಯ (ಐಎಮ್ ಎಲ್)ವನ್ನು ಖರೀದಿಸಿದ್ದಾರೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 62.72 ಲಕ್ಷದಷ್ಟು ಹೆಚ್ಚಿನ ಬಾಕ್ಸ್ ಮದ್ಯ ಮಾರಾಟವಾಗಿದೆ.
ಇನ್ನು ವಿವಿಧ ಬ್ರಾಂಡ್ ಗಳ ಬಿಯರ್ ಖರೀದಿಗೆ ರಾಜ್ಯದಲ್ಲಿನ ಹೆಚ್ಚಿನ ಒಲವು ತೋರಿದ್ದಾರೆ. ಕಳೆದ ವರ್ಷ ಏಪ್ರಿಲ್ ನಿಂದ ಆಗಸ್ಟ್ ವರೆಗಿನ ಐದು ತಿಂಗಳಲ್ಲಿ 5.44 ಕೋಟಿ ಲೀಟರ್ ಬಿಯರ್ (63 ಲಕ್ಷ ಬಾಕ್ಸ್) ಮಾರಾಟವಾಗಿದ್ದರೆ, ಈ ವರ್ಷ 6.82 ಕೋಟಿ ಲೀಟರ್ ಬಿಯರ್ (87.56 ಲಕ್ಷ ಪೆಟ್ಟಿಗೆಗಳು) ಸೇಲ್ ಆಗಿದೆ.
ಅಬಕಾರಿ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮದ್ಯ ಮಾರಾಟವಾಗಿ ಈ ಅವಧಿಯಲ್ಲಿ 2,442.20 ಕೋಟಿ ರೂ. ಆದಾಯ ಸಂಗ್ರಹವಾಗಿ ಶೇ.31.49ರಷ್ಟು ಇಲಾಖೆಯು ಬೆಳವಣಿಗೆ ದಾಖಲಿಸಿದೆ.
ಕರೋನಾ ಕಾರಣದಿಂದ ರಾಜ್ಯದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಸಾರಿಗೆ ಮತ್ತಿತರ ಪ್ರಮುಖ ಇಲಾಖೆಗಳಲ್ಲಿ ಆರ್ಥಿಕ ಸಂಪನ್ಮೂಲ ಕಡಿಮೆಯಾಗಿರುವಾಗ ಅಬಕಾರಿ ಇಲಾಖೆ ಈ ಬೆಳವಣಿಗೆ ದಾಖಲಿಸಿದೆ.
2020-21ನೇ ಸಾಲಿನಲ್ಲಿ 22,700 ಕೋಟಿ ರೂ ಆರ್ಥಿಕ ಗುರಿ ನೀಡಲಾಗಿತ್ತು. ಆದರೆ 23,332.10 ಕೋಟಿ ರೂ. ಗುರಿ ಮೀರಿದ ಸಾಧನೆ ಮಾಡಲಾಗಿದೆ. 2021-22ರ ಈ ವರ್ಷದ ಬಜೆಟ್ ನಲ್ಲಿ 24,580 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹದ ಗುರಿ ನೀಡಲಾಗಿದ್ದು, ಈತನಕ ವಾರ್ಷಿಕ ಗುರಿಯ ಪೈಕಿ ಶೇ.41.49ರಷ್ಟು ಇಲಾಖೆಯು ರಾಜಸ್ವ ಸಂಗ್ರಹಿಸಿದೆ.
“ಕರೋನಾ ಸೋಂಕು ಸಾವಿರಾರು ಮನೆಯಲ್ಲಿ ಜೀವಹಾನಿ, ಅನಾರೋಗ್ಯಕ್ಕೆ ಕಾರಣವಾಗಿ ಜನರು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್ ಗಳಲ್ಲಿ ಕೇವಲ ಪಾರ್ಸಲ್ ಗೆ ಅವಕಾಶವಿದೆ. ಆದರೆ ಅಬಕಾರಿ ನಿಯಮ ಉಲ್ಲಂಘಿಸಿ ಸ್ಥಳದಲ್ಲೇ ಕುಡಿಯಲು ಅವಕಾಶ ಕಲ್ಪಿಸುತ್ತಿದ್ದಾರೆ. ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮದ್ಯ ಕುಡಿಯಲು ಅನುವು ಮಾಡಿಕೊಡುತ್ತಿದ್ದಾರೆ. ಅಬಕಾರಿ ಕಾಯ್ದೆ 1965 ರಂತೆ ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆವರೆಗೆ ಮದ್ಯದಂಗಡಿ ತೆಗೆದಿರಬೇಕು. ಆದರೀಗ ಕೆಲವೆಡೆ ಬೆಳಗ್ಗೆ 6 ಗಂಟೆ, 8 ಗಂಟೆಗೆಲ್ಲ ಅಂಗಡಿ ತೆಗೆಯುತ್ತಿದ್ದಾರೆ. ಹೀಗಾಗಿಯೇ ಅಬಕಾರಿ ಆದಾಯ ಹೆಚ್ಚಾಗಿದೆ.”
– ಕೆ.ಭವಾನಿ ಪ್ರಸಾದ್, ರಾಜ್ಯಾಧ್ಯಕ್ಷ, ಜನಹಿತ ಸಮಿತಿ
ಲಾಕ್ ಡೌನ್ ನಿಂದ ಮೇ ತಿಂಗಳಿನಲ್ಲಿ ಮದ್ಯ ಮಾರಾಟ ಡಲ್ :
ಸದ್ಯ ರಾಜ್ಯದಲ್ಲಿ ಕರೋನಾ ಕಡಿಮೆಯಿದೆ. ಆದರೆ ಏಪ್ರಿಲ್ ಎರಡನೇ ವಾರದ ನಂತರ ಮತ್ತು ಮೇ ತಿಂಗಳಿನಲ್ಲಿ ಕೋವಿಡ್ ಸೋಂಕಿನ ರೌದ್ರ ನರ್ತನ ತೋರಿಸಿತ್ತು. ಹಾಗಾಗಿ ಐಎಂಎಲ್ ಮದ್ಯ ಹಾಗೂ ಬಿಯರ್ ಮಾರಾಟದಿಂದ ಏಪ್ರಿಲ್ ತಿಂಗಳಿನಲ್ಲಿ ಅಬಕಾರಿ ಇಲಾಖೆಯ ಆದಾಯ ಬದಲಾಗದೆ ಕಳೆದ ವರ್ಷದಷ್ಟೆ ಅಂದರೆ 2,202.77 ಕೋಟಿಯಷ್ಟೆ ಇತ್ತು. ಆದರೆ ಮೇ ತಿಂಗಳಿನಲ್ಲಿ ಕರೋನಾ ಸೋಂಕಿನ ಎಫೆಕ್ಟ್ ನಿಂದ ಮಾಸಿಕ ಆದಾಯ 1,474 ಕೋಟಿಯಷ್ಟು ಮಾತ್ರ ಸಂಗ್ರಹವಾಗಿದೆ. ಏಪ್ರಿಲ್ ಗೆ ಹೋಲಿಕೆ ಮಾಡಿದರೆ ಈ ಮೇ ತಿಂಗಳಲ್ಲಿ 728.77 ಕೋಟಿ ರೂ. ಕಡಿಮೆ ಅಬಕಾರಿ ರಾಜಸ್ವ ಸಂಗ್ರಹವಾಗಿದೆ.
ಇದಕ್ಕೆ ಪ್ರಮುಖ ಕಾರಣ ಕರೋನಾ ಸೋಂಕು ವಿಪರೀತ ಹೆಚ್ಚಳವಾಗಿದ್ದರಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿ ಮದ್ಯ ಮಾರಾಟಕ್ಕೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿತ್ತು. ಕೇವಲ ಪಾರ್ಸಲ್ ತೆಗೆದುಕೊಂಡು ಹೋಗಬಹುದಿತ್ತು. ಕೆಲ ದಿನಗಳ ನಂತರ ಈ ಅವಧಿಯನ್ನು ಮಧ್ಯಾಹ್ನ 2 ಗಂಟೆವರೆಗೆ ವಿಸ್ತರಿಸಿ ಬಳಿಕ ಲಾಕ್ ಡೌನ್ ನಿಂದ ಸಡಿಲಿಕೆ ಮಾಡಲಾಗಿತ್ತು.