ಬೆಂಗಳೂರು, (www.bengaluruwire.com) :
“ನೀರಾವರಿ ಇಲಾಖೆ” ಯಿಂದ ಪಾಲಿಕೆಗೆ ನಿಯೋಜನೆಗೊಂಡ ಪ್ರಭಾರಿ ಸಹಾಯಕ ಎಂಜನಿಯರ್ ಅಶೋಕ್ ಬಾಗಿ ಅವರನ್ನು “ವೃಂದ ಮತ್ತು ನೇಮಕಾತಿ ನಿಯಮ” ಗಳಿಗೆ ವಿರುದ್ಧವಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಲಂಚ ಹಣ ಪಡೆದು ಆಯಕಟ್ಟಿನ ಸ್ಥಳಕ್ಕೆ ನೇಮಕ ಮಾಡಿದ್ದಾರೆ ಎಂದು ಬೆಂಗಳೂರು ದಕ್ಷಿಣ ನಗರ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಅಶೋಕ್ ಬಾಗಿ ರವರನ್ನು ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ ಮುಖ್ಯ ಅಭಿಯಂತರರಾಗಿರುವ ಬಿ. ಎಸ್. ಪ್ರಹ್ಲಾದ್ ರವರ ಶಿಫಾರಸ್ಸಿನಂತೆ ಪಾಲಿಕೆಯಲ್ಲಿ ನೂರಾರು ಕೋಟಿ ರೂ. ಕಾಮಗಾರಿ ನಡೆಯುತ್ತಿರುವ ಸಂಚಾರಿ ಎಂಜಿನಿಯರಿಂಗ್ ಕೋಶ (ಟ್ರಾಫಿಕ್ ಎಂಜಿನಿಯರಿಂಗ್ ಸೆಲ್) ದ ಕಾರ್ಯಪಾಲಕ ಅಭಿಯಂತರರಾಗಿ ಅಧಿಕ ಪ್ರಭಾರದಲ್ಲಿ ನಿಯೋಜನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ವಾಸ್ತವವಾಗಿ ಯಾವುದೇ ಒಬ್ಬ ಅಧಿಕಾರಿಯ ವರ್ಗಾವಣೆಯನ್ನು ಅಥವಾ ಯಾವುದೇ ಒಂದು ಹುದ್ದೆಗೆ ನಿಯೋಜನೆ ಮಾಡಬೇಕಾದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರ ಅಧೀನದಲ್ಲಿರುವ ಆಡಳಿತ ವಿಭಾಗದ ಸಂಬಂಧಪಟ್ಟ ಗುಮಾಸ್ತರು ಕಡತವನ್ನು ತಯಾರಿಸುತ್ತಾರೆ.
ಮೊದಲು ಆಡಳಿತ ಶಾಖೆಯ ಸಹಾಯಕ ಆಯುಕ್ತರು, ನಂತರ ಆಡಳಿತ ಉಪ ಆಯುಕ್ತರು, ಆನಂತರ ಆಡಳಿತ ವಿಭಾಗದ ವಿಶೇಷ ಆಯುಕ್ತರಿಂದ ಅನುಮೋದನೆ ಪಡೆದು ಅಂತಿಮವಾಗಿ ಮುಖ್ಯ ಆಯುಕ್ತರ ಅನುಮೋದನೆ ಪಡೆದುಕೊಳ್ಳಬೇಕಿರುವುದು ಕಡ್ಡಾಯವಾಗಿರುತ್ತದೆ.
ಆದರೆ, ಈ ಪ್ರಕರಣದಲ್ಲಿ ಆಡಳಿತ ವಿಭಾಗದಿಂದ ಕಡತವು ಮಂಡನೆಯಾಗಿಲ್ಲ. ಬದಲಿಗೆ ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ ಚೀಫ್ ಎಂಜಿನಿಯರ್ ಪ್ರಹ್ಲಾದ್ ತಮ್ಮ ಪರಮ ಶಿಷ್ಯ ಅಶೋಕ್ ಬಾಗಿಯನ್ನ ಕರೆತರಲು ಸ್ವತಃ ತಾವೇ ತಯಾರಿಸಿದ ಟಿಪ್ಪಣಿ ಹಾಳೆಗಳ ಕಡತವನ್ನು ನೇರವಾಗಿ ತೆಗೆದುಕೊಂಡು ಮುಖ್ಯ ಆಯುಕ್ತರ ಬಳಿ ಅನುಮೋದನೆ ಪಡೆದಿದ್ದಾರೆ. ಇದು ಹಲವಾರು ಅನುಮಾನಗಳಿಗೆ ಮತ್ತು ಮುಖ್ಯ ಆಯುಕ್ತರ ಕಾನೂನು ಬಾಹಿರ ನಡೆಗೆ ಪ್ರಮುಖ ಸಾಕ್ಷಿಯಾಗಿರುತ್ತದೆ ಎಂದು ಎನ್.ಆರ್.ರಮೇಶ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಅಶೋಕ್ ಬಾಗಿ ರವರಿಂದ ಬಿ.ಎಸ್. ಪ್ರಹ್ಲಾದ್ ರವರ ಮೂಲಕ ಲಕ್ಷಾಂತರ ರೂಪಾಯಿ ಅಕ್ರಮ ಹಣವನ್ನು ಮುಖ್ಯ ಆಯುಕ್ತ ಗೌರವ್ ಗುಪ್ತಾ ಪಡೆದಿರುವುದೂ ಕೂಡ ಅತ್ಯಂತ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
“ಎರವಲು ಸೇವಾ ನಿಯಮ” ಗಳಂತೆ ಪಾಲಿಕೆಯಲ್ಲಿ ಮೂರು ವರ್ಷಗಳು ಸಂಪೂರ್ಣವಾಗಿರುವ ಅಧಿಕಾರಿಗಳನ್ನು ಅವರ ಮಾತೃ ಇಲಾಖೆಗೆ ವಾಪಸ್ಸು ಕಳುಹಿಸಬೇಕೆಂಬ ನಿಯಮವಿದೆ. ಕೇವಲ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾತ್ರವೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಎರವಲು ಸೇವೆ ಅಡಿಯಲ್ಲಿ ನಿಯೋಜನೆಗೊಳ್ಳಬೇಕು. “ವೃಂದ ಮತ್ತು ನೇಮಕಾತಿ ನಿಯಮ” ಗಳ ಅನ್ವಯ ಈ ಅವಕಾಶವಿದ್ದರೂ, ಹಲವಾರು ಗುರುತರ ಆರೋಪಗಳನ್ನು ಎದುರಿಸುತ್ತಿರುವ ನೀರಾವರಿ ಇಲಾಖೆಯ ಎಂಜಿನಿಯರ್ ಅಶೋಕ್ ಬಾಗಿ ರವರನ್ನು ಟ್ರಾಫಿಕ್ ಎಂಜನಿಯರಿಂಗ್ ಸೆಲ್ ನಲ್ಲಿ ನಿಯೋಜನೆಗೊಳಿಸಲಾಗಿದೆ.
ಗುತ್ತಿಗೆ ಕಾಮಗಾರಿ ಬಿಲ್ ನಲ್ಲೂ ಭ್ರಷ್ಟಾಚಾರ?
ಕಳೆದ ಎರಡು ಮೂರು ವರ್ಷಗಳಿಂದ ತಮ್ಮ ಪಾಲಿನ ಹಣದ ಬಿಡುಗಡೆಗಾಗಿ ಗುತ್ತಿಗೆದಾರರು ಸರದಿಯಲ್ಲಿ ಕಾಯುತ್ತಿದ್ದಾರೆ. ಆದರೆ ಇಲ್ಲಿ ಜೇಷ್ಠತೆ (ಹಿರಿತನ) ಯನ್ನು ಕಡೆಗಣಿಸಿ ಹತ್ತಾರು ಮಂದಿ ಪ್ರಭಾವಿ ಗುತ್ತಿಗೆದಾರರಿಗೆ ಜೇಷ್ಠತೆ ಇಲ್ಲದಿದ್ದರೂ ಸಹ ವಿಶೇಷ ಮಂಜೂರಾತಿ (ಸ್ಪೆಷಲ್ ಎಲ್ ಒಸಿ) ಎಂಬ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮುಖ್ಯ ಆಯುಕ್ತರು ನೇರವಾಗಿ ಭ್ರಷ್ಟಾಚಾರಗಳಲ್ಲಿ ತೊಡಗಿಕೊಂಡಿರುವುದು ಅತ್ಯಂತ ಸ್ಪಷ್ಟವಾಗಿದೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾನೂನು ಬಾಹಿರವಾಗಿ ಟಿಇಸಿ ಕಾರ್ಯಪಾಲಕ ಅಭಯಂತರರಾಗಿ ಅಶೋಕ್ ಬಾಗಿ ರವರನ್ನು ನಿಯೋಜನೆ ಮಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಪಾಲಿಕೆ ಆಡಳಿತ ಉಪ ಆಯುಕ್ತ ಲಿಂಗ ಮೂರ್ತಿ, ಚೀಫ್ ಎಂಜಿನಿಯರ್ ಬಿ. ಎಸ್. ಪ್ರಹ್ಲಾದ್ ಹಾಗೂ ಅಶೋಕ್ ಬಾಗಿ ರವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ ನಿರಂತರವಾಗಿ ಹಲವಾರು ಅಕ್ರಮಗಳಲ್ಲಿ ಬಾಗಿಯಾಗಿರುವ ಗೌರವ್ ಗುಪ್ತ ರವರನ್ನು ಪಾಲಿಕೆಯ ಮುಖ್ಯ ಆಯುಕ್ತರ ಹುದ್ದೆಯಿಂದ ಬದಲಿಸಿ, ಅರ್ಹರಾದ ಹಿರಿಯ ಅಧಿಕಾರಿಯನ್ನು ಪಾಲಿಕೆಯ ಮುಖ್ಯ ಆಯುಕ್ತರ ಹುದ್ದೆಗೆ ನಿಯೋಜಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಮೇಶ್ ಪತ್ರ ಬರೆದು ಆಗ್ರಹಿಸಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
ತಮ್ಮ ನಿರ್ಧಾರ ಸಮರ್ಥಿಸಿಕೊಂಡ ಮುಖ್ಯ ಆಯುಕ್ತ ಗೌರವ್ ಗುಪ್ತಾ :
ತಮ್ಮ ಮೇಲೆ ಬಂದಿರೋ ಆರೋಪಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಬೆಂಗಳೂರು ವೈರ್ ಗೆ ಪ್ರತಿಕ್ರಿಯಿಸಿದ್ದು, ಎನ್.ಆರ್.ರಮೇಶ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಲ್ಲ. ಟಿಇಸಿ ಸೆಲ್ ಕಾರ್ಯಪಾಲಕ ಅಭಿಯಂತರರ ಹುದ್ದೆಯಲ್ಲಿದ್ದವರು ನಿವೃತ್ತಿಯಾಗಿದ್ದರು. ಆ ತೆರವಾದ ಸ್ಥಾನಕ್ಕೆ ಆ ವಿಭಾಗದ ಚೀಫ್ ಎಂಜಿನಿಯರ್, ಸೂಕ್ತ ವ್ಯಕ್ತಿಯನ್ನು ತಾತ್ಕಾಲಿಕವಾಗಿ ನೇಮಿಸಿದ್ದಾರೆ. ಆಡಳಿತ ವಿಭಾಗ ತದನಂತರ ಟಿಇಸಿ ಸೆಲ್ ನ ಇಇ ಹುದ್ದೆಗೆ ಖಾಯಂ ಆಗಿ ನೇಮಕ ಮಾಡಲಿದೆ. ಯಾವುದೇ ನೇಮಕಾತಿ ಆಗಿದ್ದರೂ ಅಭಿವೃದ್ಧಿ ದೃಷ್ಟಿಯಿಂದ ಆಗಿರುತ್ತೆ ಎಂದು ಅವರು ಹೇಳಿದ್ದಾರೆ.