ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರಿನಲ್ಲಿ ಕರೋನಾ ವಿರುದ್ಧ ಹೋರಾಡಲು ಲಸಿಕೆ ಕಾರ್ಯಕ್ರಮ ಚುರುಕುಗೊಳಿಸಲಾಗಿದೆ. ಈ ಮಧ್ಯೆ ಕರೋನಾ ವಿರುದ್ಧ ಲಸಿಕೆ ಪಡೆದವರಲ್ಲಿ ಹಾಗೂ ಲಸಿಕೆ ಪಡೆಯದವರಲ್ಲಿ ಯಾವ ರೀತಿ ಪ್ರತಿಕಾಯ ವೃದ್ಧಿಯಾಗಿದೆ ಎಂದು ತಿಳಿಯಲು ಬಿಬಿಎಂಪಿಯು ಕಿದ್ವಾಯಿ ಆಸ್ಪತ್ರೆ ಮೂಲಕ ನಗರದ 1,800 ಜನರಿಂದ ರಕ್ತದ ದ್ರವ ಸಂಗ್ರಹಿಸಿ ನಡೆಸಿದ ಸೆರೋ ಸಮೀಕ್ಷೆ ಅಪೂರ್ಣವಾಗಿದೆ. ಕೆಲವೇ ಜನರಿಂದ ಸಂಗ್ರಹಿಸಿದ ಮಾದರಿಯನ್ನು ನಗರದ ಇಡೀ ಸಮುದಾಯಕ್ಕೆ ಅನ್ವಯಿಸಲಾಗದು ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಸಿಲಿಕಾನ್ ಸಿಟಿಯ ವಿವಿಧ ಏರಿಯಾಗಳಲ್ಲಿನ ನಿವಾಸಿಗಳಲ್ಲಿ 18 ವಯೋಮಾನದ ಒಳಗಿನ ಶೇ.30ರಷ್ಟು ಮಂದಿ, 18 ರಿಂದ 45 ವಯೋಮಾನದ ಒಳಗಿನ ಶೇ.50ರಷ್ಟು ಹಾಗೂ 45 ವರ್ಷ ವಯಸ್ಸು ಮೇಲ್ಪಟ್ಟ ಶೇ.29 ರಷ್ಟು ಮಂದಿಯ ರಕ್ತದ ದ್ರವ (ಸೀರಂ) ಅನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. 1,800 ಮಂದಿಯಲ್ಲಿ ಅರ್ಧದಷ್ಟು ಕೋವಿಡ್ ಲಸಿಕೆ ಪಡೆದವರು ಹಾಗೂ ಅರ್ಧದಷ್ಟು ಕೋವಿಡ್ ಲಸಿಕೆ ಪಡೆಯದವರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಸಮೀಕ್ಷೆಯಲ್ಲಿ ಸಂಗ್ರಹಿಸಿದ ಸೀರಂ ಪರೀಕ್ಷೆಯಲ್ಲಿ ಶೇ.75ರಷ್ಟು ಮಂದಿಯಲ್ಲಿ ಕೋವಿಡ್ ಪ್ರತಿಕಾಯ ವೃದ್ಧಿಯಾಗಿರುವುದನ್ನು ಕಿದ್ವಾಯಿ ಸಂಸ್ಥೆಯ ವೈದ್ಯರು ಬಿಬಿಎಂಪಿಗೆ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿದೆ.
“ಸೆರೋ ಸಮೀಕ್ಷೆಗೆ ಕೇವಲ 1,800 ಮಂದಿಯ ರಕ್ತ ದ್ರವನ್ನು ಮಾತ್ರ ಪಡೆದು ಪರೀಕ್ಷೆಗೆ ಒಳಪಡಿಸಿರುವುದರಿಂದ ಕೋವಿಡ್ ಸೋಂಕಿನ ವಿರುದ್ಧ ಜನರಲ್ಲಿ ಯಾವ ರೀತಿ ರೋಗ ಪ್ರತಿರೋಧಕ ಶಕ್ತಿ ಉತ್ಪತ್ತಿಯಾಗಿದೆ ಎಂದು ಸ್ಪಷ್ಟವಾಗಿ ತಿಳಿಯಲಾಗದು. ಈ ಸಮೀಕ್ಷೆಯ ವರದಿಯನ್ನು ಪೂರ್ಣ ರೂಪದಲ್ಲಿ ಆಧಾರವಾಗಿ ಬಳಸಿಕೊಳ್ಳಲಾಗದು. ಅದರ ಬದಲು ಬಿಬಿಎಂಪಿ ವ್ಯಾಪ್ತಿಯಲ್ಲಿನ 198 ವಾರ್ಡ್ ಗಳಲ್ಲಿ ಪ್ರತಿ ವಾರ್ಡ್ ನಲ್ಲಿನ ಸ್ಥಳೀಯ 500 ನಿವಾಸಿಗಳನ್ನು ರಾಂಡಮ್ ಆಗಿ ಆರಿಸಿ ಅವರ ಒಪ್ಪಿಗೆ ಪಡೆದು ರಕ್ತದ ದ್ರವ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಅಧ್ಯಯನ ನಡೆಸಿದ ನಂತರ ಬರುವ ಫಲಿತಾಂಶವು ಸೂಕ್ತವಾಗಿರುತ್ತದೆ. ಆ ಸಮೀಕ್ಷೆಯು ನಗರದ ನಾಗರೀಕಲ್ಲಿ ಕೋವಿಡ್ ವಿರುದ್ಧದ ರೋಗ ನಿರೋಧಕ ಶಕ್ತಿಯ ಬಗ್ಗೆ ಸೂಕ್ತ ಚಿತ್ರಣ ನೀಡುತ್ತದೆ.”
– ಡಾ.ಪ್ರಸನ್ನ.ಎಚ್.ಎಂ, ಅಧ್ಯಕ್ಷರು, ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಗಳ ಸಂಘ
ಈ ಮಧ್ಯೆ ನಗರದಲ್ಲಿ 12.38 ಲಕ್ಷ ಮಂದಿ ಕರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಆ ಪೈಕಿ 12.15 ಲಕ್ಷ ಜನರು ಕೋವಿಡ್ ಸೋಂಕಿನ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ. ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಈತನಕ 18 ವರ್ಷ ಮೇಲ್ಪಟ್ಟ 70.65 ಲಕ್ಷ ಜನರಿಗೆ ಕೋವಿಡ್ ಮೊದಲ ಡೋಸ್ ಹಾಗೂ 27.03 ಲಕ್ಷ ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಒಟ್ಟಾರೆ 97.68 ಲಕ್ಷ ಡೋಸ್ ಗಳನ್ನು ಜನರು ತೆಗೆದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಬಿಬಿಎಂಪಿ ಕೋವಿಡ್ ನಿರ್ವಹಣೆ ನಡೆಸುತ್ತಿರುವ ಆರೋಗ್ಯ ವಿಭಾಗವು ಕಿದ್ವಾಯಿ ವೈದ್ಯರ ಮೂಲಕ ಆಗಸ್ಟ್ 4 ರಿಂದ ಸಮೀಕ್ಷೆ ಆರಂಭಿಸಿ ಕೇವಲ 1,800 ನಗರದ ನಿವಾಸಿಗಳಿಂದ ಸೀರಂ (ರಕ್ತದ ದ್ರವ)ವನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಸಮೀಕ್ಷೆಗೆ ಒಳಪಡಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
“ಬಿಬಿಎಂಪಿಯು ನಡೆಸಿದ ಸೆರೊ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.75ರಷ್ಟು ಮಂದಿಯಲ್ಲಿ ಕೋವಿಡ್ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ ಎಂದು ಫಲಿತಾಂಶ ಬಂದಿರುವುದು ಖುಷಿಯ ಸಂಗತಿ. ಆದರೆ ಯಾವುದೇ ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾದಲ್ಲಿ ಮೂರರಿಂದ ನಾಲ್ಕು ತಿಂಗಳು ಮಾತ್ರ ಆ ಶಕ್ತಿಯಿರುತ್ತದೆ. ನಗರದಲ್ಲಿನ ಕೇವಲ ಕೆಲವೇ ಕೆಲವು ನಿವಾಸಿಗಳಿಂದ ಸೀರಂ ಸಮೀಕ್ಷೆ ನಡೆಸಿ ಅದನ್ನು ಆಧಾರವಾಗಿಟ್ಟುಕೊಂಡು ಜನರಲ್ಲಿ ರೋಗ ನಿರೋಧಕ ಶಕ್ತಿಯಾಗಿದೆ. ಜನರಿಗೆ ಯಾವುದೇ ತೊಂದರೆಯಾಗದು ಎಂದು ಹೇಳೋದು ತಪ್ಪಾಗುತ್ತದೆ. ಕೋವಿಡ್ ಹೊಸ ತಳಿಯು ಬಂದಾಗ ಈ ರೋಗನಿರೋಧಕ ಶಕ್ತಿಯಿಂದ ವ್ಯಕ್ತಿ ಸಂಪೂರ್ಣ ಸುರಕ್ಷಿತನಾಗಿರುತ್ತಾನೆ ಎಂದು ಹೇಳಲು ಆಗದು. ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಂಡು, ಖಡ್ಡಾಯವಾಗಿ ಮಾಸ್ಕ್ ಧರಿಸಿದರೆ ಕೋವಿಡ್ ಸೋಂಕಿನಿಂದಾಗುವ ಗಂಭೀರ ಸ್ಥಿತಿ ಹಾಗೂ ಸೋಂಕಿನಿಂದ ಸಾವು ಸಂಭವಿಸುವುದು ಕಡಿಮೆಯಾಗುತ್ತದೆ.”
– ಡಾ.ವಿ.ರವಿ, ಸದಸ್ಯರು, ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ
ಪ್ರತಿ ಬುಧವಾರ ವಿಶೇಷ ಲಸಿಕೆ ಅಭಿಯಾನ ಹೀಗೆ ಮುಂದುವರೆದರೆ ಡಿಸೆಂಬರ್ ವೇಳೆಗೆ ರಾಜ್ಯಾದ್ಯಂತ ಶೇಕಡ 75ರಷ್ಟು ಜನರು ಎರಡನೇ ಡೋಸ್ ಪಡೆದುಕೊಳ್ಳಬಹುದು. ಕೋವಿಡ್ ಲಸಿಕೆಯ ಅಡ್ಡಪರಿಣಾಮ ಶೇ.005 ರಷ್ಟಿದೆ. ಹಾಗಾಗಿ ಭಯಬಿಟ್ಟು ಎಲ್ಲರೂ ಲಸಿಕೆ ಪಡೆದರೆ ಉತ್ತಮ. ಬೆಂಗಳೂರಿನಲ್ಲಿ ಎಷ್ಟು ಜನರಿಗೆ ಲಸಿಕೆ ಹಾಕಲಾಗಿದೆ? ಕೋವಿಡ್ ಎರಡನೇ ಅಲೆಯಲ್ಲಿ ಎಷ್ಟು ಜನರು ಕೋವಿಡ್ ಪಾಸಿಟಿವ್ ಆಗಿದ್ದರು. ಇವನ್ನೆಲ್ಲವೂ ಸೆರೋ ಸಮೀಕ್ಷೆಯಲ್ಲಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
“ಕಿದ್ವಾಯಿ ಆಸ್ಪತ್ರೆಯಿಂದ ಸೆರೊ ಸಮೀಕ್ಷೆ ವರದಿ ಬಿಬಿಎಂಪಿ ಕೈಸೇರಿದೆ. ಈ ಸಮೀಕ್ಷಾ ವರದಿಯನ್ನು ಬಿಬಿಎಂಪಿಯ ಆರೋಗ್ಯ ತಜ್ಞರ ಸಮಿತಿ ಮುಂದೆ ಮಂಡಿಸುತ್ತೇವೆ. ಆ ವರದಿಯಲ್ಲಿನ ಅಂಶವನ್ನು ಪರಿಶೀಲನೆ ನಡೆಸಿ, ಸಾರ್ವಜನಿಕವಾಗಿ ಪ್ರಕಟಣೆ ಮಾಡುತ್ತೇವೆ”
– ರಂದೀಪ್, ವಿಶೇಷ ಆಯುಕ್ತರು, ಬಿಬಿಎಂಪಿ ಆರೋಗ್ಯ ವಿಭಾಗ
ನಗರದಲ್ಲಿ ಸದ್ಯ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 7,718 ಮಾತ್ರ ಇದೆ. ಒಟ್ಟು 1,031 ಕಂಟೈನ್ ಮೆಂಟ್ ಜೋನ್ ಗಳೆಂದು ಪಾಲಿಕೆ ಘೋಷಿಸಿದ್ದು, ಆ ಪೈಕಿ ಸದ್ಯ 99 ಜೋನ್ ಗಳು ಮಾತ್ರ ಸಕ್ರಿಯವಾಗಿದೆ. ಅದೇ ರೀತಿ ಕೋವಿಡ್ ಚಿಕಿತ್ಸೆಗೆಂದು ನಿಗಧಿಪಡಿಸಿದ 27 ಆಸ್ಪತ್ರೆಗಳಲ್ಲಿ 2,086 ವಿವಿಧ ರೀತಿಯ ಹಾಸಿಗೆಗಳಿದ್ದು ಆ ಪೈಕಿ 139 ಹಾಸಿಗೆಗಳು ಮಾತ್ರ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವುದು ಸಮಾಧಾನದ ಸಂಗತಿ. ಹಾಗೆಂದು ಬಿಬಿಎಂಪಿ ಮೈಮರೆತು ಕೂರುವಂತಿಲ್ಲ. ಹೊರ ರಾಜ್ಯ ಕೇರಳದಿಂದ ಬೆಂಗಳೂರಿಗೆ ಬಂದವರ ಮೇಲೆ ಹದ್ದುಗಣ್ಣಿಟ್ಟು ಕೋವಿಡ್ ಪರೀಕ್ಷೆ, ಸಾಂಸ್ಥಿಕ ಕ್ವಾರಂಟೈನ್ ಒಳಪಡಿಸುವುದು ಸೇರಿದಂತೆ ಮತ್ತಿತರ ಬಿಗಿಯಾದ ಕ್ರಮ ಕೈಗೊಳ್ಳಲೇ ಬೇಕಾದ ಅನಿವಾರ್ಯತೆಯಿದೆ.
ಕೋವಿಡ್ ಡೆತ್ ಆಡಿಟ್ ರಿಪೋರ್ಟ್ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ ಯಾಕೆ?
ಸಾಂದರ್ಭಿಕ ಚಿತ್ರ
ಕಳೆದ ವರ್ಷ ಕರೋನಾ ಸೋಂಕು ಆರಂಭವಾದಾಗಿನಿಂದ ಇಲ್ಲಿಯ ತನಕ ನಗರದಲ್ಲಿ 16,013 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿ ಅಧಿಕೃತವಾಗಿ ಹೇಳುತ್ತಿದೆ. ಆದರೆ ಕೋವಿಡ್ ಸೋಂಕಿನಿಂದ ಸಂಭವಿಸಿದ ಕರೋನಾ ಸಾವಿನ ಕುರಿತ ಮರಣ ಪರಿಶೋಧನಾ ವರದಿಯನ್ನು ಇಲ್ಲಿಯವರೆಗೂ ಸಾರ್ವಜನಿಕವಾಗಿ ಬಿಬಿಎಂಪಿಯು ಬಹಿರಂಗಪಡಿಸಿಲ್ಲ. ಈ ಕುರಿತಂತೆ ಆರ್ ಟಿಐ ಕಾರ್ಯಕರ್ತರು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿದರೂ, ಮಾಧ್ಯಮದವರು, ಸಾಮಾಜಿಕ ಕಾರ್ಯಕರ್ತರು, ನಾಗರೀಕ ಸಂಘ ಸಂಸ್ಥೆಗಳು ಕೇಳಿದರೂ ಅದಕ್ಕೆ ಸೂಕ್ತ ಮಾಹಿತಿ ಒದಿಗಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಫಲರಾಗಿದ್ದಾರೆ.
ಇದು ನಗರದಲ್ಲಿ ವಾಸ್ತವವಾಗಿ ಕೋವಿಡ್ ನಿಂದ ಸಂಭವಿಸಿದ ಸಾವಿನ ಲೆಕ್ಕಕ್ಕೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕೊಡುತ್ತಿರುವ ಸಾವಿನ ಲೆಕ್ಕಕ್ಕೂ ಅಜಗಜಾಂತರ ವ್ಯತ್ಯಾಸವಿರುವ ಸಾಧ್ಯತೆ ಹೆಚ್ಚಿದೆ. ಈ ಕಾರಣಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಕೋವಿಡ್ ಡೆತ್ ಆಡಿಟ್ ವರದಿಯನ್ನು ಈತನಕ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ ಎಂಬ ಬಲವಾದ ಆರೋಪಗಳು ಕೇಳಿಬರುತ್ತಿದೆ. ಇದು ಹಲವು ಅನುಮಾನಗಳಿಗೆ ಕೂಡ ಕಾರಣವಾಗಿದೆ.