ಬೆಂಗಳೂರು, ಸೆ.1 (www.bengaluruwire.com) :
ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಗಣೇಶೋತ್ಸವ ಸರಳ ಆಚರಣೆಗೆ ಸರ್ಕಾರ ಅವಕಾಶ ನೀಡುವಂತೆ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಮನವಿ ಮಾಡಿದೆ. ಒಂದೊಮ್ಮೆ ಅವಕಾಶ ನೀಡದಿದ್ದಲ್ಲಿ ಕೋವಿಡ್ ನಿಯಮಾವಳಿ ಪಾಲನೆ ಮಾಡಿ ಗಣೇಶ ಉತ್ಸವವನ್ನು ಮಾಡಿಯೇ ತೀರುತ್ತೇವೆ ಎಂದು ತಿಳಿಸಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು,
ಸರಳವಾದ ಗಣೇಶೋತ್ಸವಕ್ಕೆ ಆಚರಣೆಗೆ ಅವಕಾಶಕ್ಕಾಗಿ ಮನವಿ ಮಾಡುತ್ತಿದ್ದೇವೆ. ಬಿಬಿಎಂಪಿ ಅಧಿಕಾರಿಗಳು ತಿಳಿಸಿದಂತೆ ಮಾಸ್ಕ್, ಸ್ಯಾನಿಟೈಜರ್ ವ್ಯವಸ್ಥೆ ಮಾಡಿ ಆಚರಣೆಗೆ ಸಿದ್ಧತೆ ಮಾಡಿಕೊಳ್ತೀವಿ. ಷರತ್ತು ಬದ್ದ ಗಣೇಶ ಉತ್ಸವಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.
ಒಂದು ವೇಳೆ ಸರ್ಕಾರ ಅನುಮತಿ ನೀಡಲಿಲ್ಲ ಎಂದಾದಲ್ಲಿ ನಾನು ಅಂದುಕೊಂಡಂತೆ ಗಣೇಶನ ಉತ್ಸವ ಆಚರಣೆ ಮಾಡುತ್ತೇವೆ ಎಂದು ಕಡ್ಡಿ ತುಂಡರಿಸಿದಂತೆ ಅವರು ಹೇಳಿದರು.
ಈಗಾಗಲೇ ಶಾಲೆಗಳು ಆರಂಭವಾಗಿದೆ. ಉದ್ಯಮಗಳು ಸಹಜ ಸ್ಥಿತಿಗೆ ಬಂದಿದೆ. ಜನಜೀವನ ಸಾಮಾನ್ಯವಾಗಿದೆ. ಕರೋನಾ ನಿಯಮ ಪಾಲನೆ ಮಾಡುವ ಕುರಿತು ಜನರಲ್ಲಿ ಜಾಗೃತಿ ಬಂದಿದೆ. ಈಗಾಗಲೇ ಸಾರ್ವಜನಿಕರು ಸರ್ಕಾರದ ನಿಯಮ ಪಾಲನೆ ಮಾಡುತ್ತಿದ್ದಾರೆ. ಹೀಗಿದ್ದರೂ ಗಣೇಶ ಆಚರಣೆಗೆ ನಿರ್ಭಂಧ ಹೇರಿರೋದು ಎಷ್ಟು ಸರಿ..? ಎಂದು ಪ್ರಕಾಶ್ ರಾಜು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅರಿಶಿಣ ಗಣಪತಿ ಮಾಡುವಂತೆ ನಿರ್ದೇಶನ ನೀಡಿದೆ. ಇಂತಹ ಸೂಚನೆಗೆ ಗಣೇಶ ಸಮಿತಿ ವಿರೋಧವಿದೆ. ವರ್ಷಪೂರ್ತಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂಲಕ ಮಾಲಿನ್ಯ ಆಗುತ್ತಿದೆ. ಆಗ ಈ ಬಗ್ಗೆ ಚಕಾರ ಎತ್ತದ ಮಾಲಿನ್ಯ ಮಂಡಳಿ, ಈಗ ಗಣೇಶನ ಹಬ್ಬ ಬಂದಾಗ ಅರಿಶಿನದ ಗಣಪತಿಗೆ ಸೂಚನೆ ನೀಡಿರುವುದನ್ನು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಸಾರಾಸಗಟಾಗಿ ತಿರಸ್ಕರಿಸುತ್ತದೆ. ನೀವು ಹೇಳಿದಂತೆ ನಾವು ಗಣೇಶಹಬ್ಬ ಆಚರಣೆ ಮಾಡಲು ಬರುವುದಿಲ್ಲ. ಹಿಂದೂ ಸಂಪ್ರದಾಯದ ರೀತಿ ನಾವು ಆಚರಣೆ ಮಾಡುತ್ತೇವೆ ಎಂದು ಪ್ರಕಾಶ್ ರಾಜು ಹೇಳಿದ್ದಾರೆ.
ಸರ್ಕಾರ ಸೂಚನೆ ಕೊಡಲಿ ಬಿಡಲಿ, ನಾವು ಗಣೇಶ ಪ್ರತಿಷ್ಟಾಪನೆ ಮಾಡುತ್ತೇವೆ. ಸರಳವಾಗಿಯಾದ್ರು ಆಚರಿಸುತ್ತೇವೆ. ಸರ್ಕಾರ ನಮ್ಮ ಮೇಲೆ ಕೇಸ್ ಹಾಕಿದ್ರೂ ಹಾಕಲಿ. ಗಣೇಶ ಪ್ರತಿಷ್ಟಾಪನೆ ಮಾಡಿ ಕೇಸ್ ಹಾಕಿಸಿಕೊಳ್ಳಲು ನಾವು ಸಿದ್ದರಿದ್ದೇವೆ ಎಂದು ಪತ್ರಿಕಾಗೋಷ್ಟಿಯಲ್ಲಿ ಘಂಟಾಘೋಷವಾಗಿ ತಿಳಿಸಿದರು.
ಈ ಬಾರಿ ಎಲ್ಲ ಸಮಿತಿಯವರು ಗಣೇಶ್ ಪ್ರತಿಷ್ಪಾಪನೆ ಮಾಡಿಯೇ ಮಾಡುತ್ತೇವೆ. ಸರಳವಾಗಿಯಾದರೂ ಮಾಡುತ್ತೇವೆ. ಎರಡು ದಿನ, ಐದು ದಿನ, ಹನ್ನೊಂದು ದಿನಕ್ಕಾದರೂ ಮಾಡುತ್ತೇವೆ. ಅದು ಆಯಾ ಗಣೇಶ ಸಮಿತಿಗೆ ಬಿಟ್ಟ ವಿಚಾರ ಎಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಈ.ಅಶ್ವತ್ಥನಾರಾಯಣ ಹೇಳಿದ್ದಾರೆ.