ಬೆಂಗಳೂರು, (www.bengaluruwire.com) : ಆಭರಣ ಖರೀದಿಸುವ ಗ್ರಾಹಕರ ಜಾಡು ಹಿಡಿದು ಚಿನ್ನದ ವ್ಯಾಪಾರ ವಹಿವಾಟಿಗೆ ಧಕ್ಕೆ ತರುವ ಹಾಗೂ ಖಾಸಗಿ ತನಕ್ಕೆ ಅಡ್ಡಿಯುಂಟು ಮಾಡುವ ಎಚ್.ಯು.ಐ.ಡಿ (ಹಾಲ್ ಮಾರ್ಕ್ ಯುನಿಕ್ ಐಡಿ) ವ್ಯವಸ್ಥೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಜುವೆಲ್ಲರಿ ಅಸೋಸಿಯೇಷನ್ ಸದಸ್ಯರು, ಅಸೋಸಿಯೇಷನ್ ಅಧ್ಯಕ್ಷ ಡಾ. ಟಿ.ಎ. ಸರವಣ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ಬಳಿ ಪ್ರತಿಭಟನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಟಿ.ಎ. ಸರವಣ, ಆಭರಣ ಖರೀದಿದಾರರ ಜಾಡು ಪತ್ತೆ ಮಾಡುವ ತಂತ್ರಜ್ಞಾನದಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ.
ಗ್ರಾಹಕರು ಮತ್ತು ಆಭರಣ ಖರೀದಿದಾರರ ನಡುವಣ ಬಾಂಧವ್ಯಕ್ಕೆ ಇದರಿಂದ ಧಕ್ಕೆಯಾಗುತ್ತಿದೆ. ನಮಗೆ ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜತೆಗೆ ಎಚ್.ಯು.ಐ.ಡಿ ಜಾರಿ ಮಾಡಿ ಪರೋಕ್ಷವಾಗಿ ಮಾನಸಿಕ ಒತ್ತಡ ಹೇರುವ ಜತೆಗೆ ಅಧಿಕಾರಿಗಳು ದುಡ್ಡು ಮಾಡಲು ಸರ್ಕಾರವೇ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆಭರಣಗಳಿಗೆ ಹಾಲ್ ಮಾರ್ಕ್ ಅಳವಡಿಸುವ ಸರ್ಕಾರದ ತೀರ್ಮಾನಕ್ಕೆ ನಮ್ಮ ತಕರಾರಿಲ್ಲ. ಈಗಾಗಲೇ ಇದನ್ನು ಸ್ವಾಗತಿಸಿ ಅನುಷ್ಠಾನಕ್ಕೆ ತಂದಿದ್ದೇವೆ. ಆದರೆ ಕೆಲವೊಂದು ತುರ್ತು ಸಂದರ್ಭಗಳಲ್ಲಿ ಮದುವೆ ಮತ್ತಿತರ ಸಮಾರಂಭಗಳಿಗೆ ಮಾಂಗಲ್ಯ, ಬಳೆ, ಉಂಗುರ ಮತ್ತಿತರ ಆಭರಣಗಳನ್ನು ಖರೀದಿಸಲು ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಚಿನ್ನ ತಯಾರಿಸಿದ ನಂತರ ಹಾಲ್ ಮಾರ್ಕ್ ಹಾಕಲು ವಿಳಂಬವಾಗುತ್ತಿದೆ. ಇದರಿಂದ ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಡಾ. ಟಿ.ಎ. ಸರವಣ ಹೇಳಿದರು.
ದೇಶಾದ್ಯಂತ ಎಚ್.ಯು.ಐ.ಡಿ ಹಾಲ್ ಮಾರ್ಕ್ ಯೋಜನೆ
ಜಾರಿ ಮಾಡಿರುವ ಕೇಂದ್ರದ ತೀರ್ಮಾನದ ವಿರುದ್ಧ ಕಾನೂನು ಹೋರಾಟಕ್ಕೆ ಅಣಿಯಾಗಿದ್ದೇವೆ. ದೇಶದ ಎಲ್ಲಾ ಕಡೆಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ.
ಆಭರಣ ಕೈಗಾರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಆದಾಯ ದೊರೆಯುತ್ತಿದೆ. ಗ್ರಾಹಕರು ಮತ್ತು ಆಭರಣ ಮಾರಾಟಗಾರರ ವಿರುದ್ಧವಾಗಿರುವ ಈ ನಿಯಮವನ್ನು ಕೈಬಿಡದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆರಂಭಿಕ ಹಂತದಲ್ಲಿ ಇಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ.
ಎರಡು ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತದ ಖರೀದಿ ಮಾಡುವವರಿಂದ ಸೂಕ್ತ ದಾಖಲೆ ಪಡೆದು ಆಭರಣ ಮಾರಾಟ ಮಾಡುತ್ತಿದ್ದೇವೆ. ಚಿನ್ನದ ಚೈನ್ ಗೆ ಬೇರೆ, ಡಾಲರ್ ಗೆ ಬೇರೆ ಹಾಲ್ ಮಾರ್ಕ್ ಹಾಕಿಸುವಂತೆ ಒತ್ತಡ ಹೇರಲಾಗುತ್ತಿದೆ. ದುರಂತವೆಂದರೆ ಹಾಲ್ ಮಾರ್ಕ್ ಕೇಂದ್ರಗಳಲ್ಲಿ ಸೂಕ್ತ ಮೂಲ ಸೌಕರ್ಯ ಇಲ್ಲ. ಸಿಬ್ಬಂದಿ ಸಂಖ್ಯೆ ಹೆಚ್ಚಿಲ್ಲ. ಇದರಿಂದ ಹಬ್ಬದ ಸಂದರ್ಭಗಳಲ್ಲಿ ಗ್ರಾಹಕರು ಹಾಗೂ ಮಾಲಿಕರಿಗೆ ಸಮಸ್ಯೆ ಎದುರಾಗುತ್ತಿದೆ ಎಂದು ಸಮಸ್ಯೆಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಚ್ಚಿಟ್ಟರು.
ಹೀಗಾಗಿ ಕರ್ನಾಟಕ ರಾಜ್ಯ ಜುವೆಲ್ಲರಿ ಅಸೋಸಿಯೇಷನ್ ಪ್ರತಿನಿಧಿಗಳು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ನವದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ನಮ್ಮ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ದೇಶದಲ್ಲಿ ಇನ್ನೂ 6 ರಿಂದ 7 ಕೋಟಿ ಆಭರಣಗಳಿಗೆ ಹಾಲ್ ಮಾರ್ಕ್ ಹಾಕುವುದು ಬಾಕಿ ಉಳಿದಿದೆ. ದಿನಕ್ಕೆ ಕೇವಲ 2 ಲಕ್ಷ ಆಭರಣಗಳಿಗೆ ಮಾತ್ರ ಹಾಲ್ ಮಾರ್ಕ್ ಹಾಕುವ ಸಾಮರ್ಥ್ಯವನ್ನು ಈ ಸಂಸ್ಥೆ ಹೊಂದಿದೆ. ಇದರಿಂದ ವ್ಯಾಪಾರ ವಹಿವಾಟಿನಲ್ಲಿ ಭಾರೀ ನಷ್ಟ ಉಂಟಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.
ನಗರದಲ್ಲಿನ ಆಭರಣ ಮಾರಾಟಗಾರರು ಮಧ್ಯಾಹ್ನ 1 ಗಂಟೆಯ ನಂತರ ಸಾಂಕೇತಿಕವಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಇನ್ನೊಂದೆಡೆ ಕೇಂದ್ರ ಸರ್ಕಾರದ ಬಿಐಎಸ್ ಹಾಲ್ ಮಾರ್ಕ್ ಸಂಸ್ಥೆಯ ಮಹಾ ನಿರ್ದೇಶಕರು ಹಾಲ್ ಮಾರ್ಕ್ ದೇಶಾದ್ಯಂತ ಎಚ್.ಯು.ಐ.ಡಿ ಹಾಲ್ ಮಾರ್ಕ್ ಯೋಜನೆ ಕುರಿತಂತೆ ಆ.21ರಂದೇ ಕೆಲವು ಸ್ಪಷ್ಟನೆಗಳನ್ನು ನೀಡಿದ್ದಾರೆ :
• ಹಾಲ್ ಮಾರ್ಕಿಂಗ್ ವ್ಯವಸ್ಥೆ ಹೊಂದಿದ ಕೇವಲ 256 ಜಿಲ್ಲೆಗಳಲ್ಲಿ ಮಾತ್ರವೇ ಚಿನ್ನಾಭರಣಗಳಿಗೆ ಹಾಲ್ ಮಾರ್ಕಿಂಗ್ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ.
• ಆರಂಭದಲ್ಲಿ ಎಚ್.ಯು.ಐ.ಡಿ ( ಪ್ರತಿ ಆಭರಣಕ್ಕೂ ನಿರ್ದಿಷ್ಟ ಸಂಖ್ಯೆ/ಸಂಕೇತ ನೀಡುವ ವ್ಯವಸ್ಥೆ) ಯನ್ನು ಹಾಲ್ ಮಾರ್ಕಿಂಗ್ ಕೇಂದ್ರಗಳ ಮಟ್ಟದಲ್ಲಿ ಮಾತ್ರ ಅಳಡಿಸುತ್ತೇವೆ. ಸಂಪೂರ್ಣ ವ್ಯವಸ್ಥೆ ನಂತರ ಆಭರಣಕಾರರು ಹಾಗೂ ಗ್ರಾಹಕರ ಮಟ್ಡದಲ್ಲಿ ಅನುಷ್ಠಾನ ಮಾಡಲಾಗುತ್ತೆ.
• ಹಾಲ್ ಮಾರ್ಕಿಂಗ್ ನೋಂದಣಿ ಪ್ರಕ್ರಿಯೆ ಸರಳ ಹಾಗೂ ಶುಲ್ಕ ವಿನಾಯಿತಿ ಇರಲಿದೆ.
• ಬಿಐಎಸ್ ಹಾಲ್ ಮಾರ್ಕ್ ಆದ ಆಭರಣಗಳ ವ್ಯವಹಾರಗಳ ಟ್ರಾಕಿಂಗ್ ಮಾಡಲಾಗುತ್ತಿದೆ ಎಂದು ತಪ್ಪು ಮಾಹಿತಿ ಪ್ರಸಾರವಾಗುತ್ತಿದೆ. ಆ ರೀತಿ ಆಭರಣಗಳ ಜಾಡು ಹಿಡಿಯುತ್ತಿಲ್ಲ. ಚಿನ್ನದ ವ್ಯಾಪಾರಿಗಳು ಬಿಐಎಸ್ ಪೋರ್ಟಲ್ ನಲ್ಲಿ ತಮ್ಮ ವ್ಯಾಪಾರದ ಮಾರಾಟದ ವಿವರ ಅಪಲೋಡ್ ಮಾಡುವ ಅವಶ್ಯಕತೆಯಿಲ್ಲ.
• 1 ಕೋಟಿಗೂ ಹೆಚ್ಚು ಆಭರಣಗಳಿಗೆ ಹಾಲ್ ಮಾರ್ಕ್ ಮಾಡುದ ಬಳಿಕ ಆ ಯೋಜನೆ ಮುಂದೂಡುವ ಅಥವಾ ಹಿಂಪಡೆಯುವ ಪ್ರಶ್ನೆಯಿಲ್ಲ.
• ಹೊಸ ಯೋಜನೆಯಿಂದ ಗ್ರಾಹಕರು ತಮ್ಮ ಹಣಕ್ಕೆ ಸರಿಯಾದ ಆಭರಣ ಪಡೆಯುವ ಹಕ್ಕನ್ನು ಖಾತ್ರಿ ಪಡಿಸುತ್ತದೆ.
• ಇದು ಚಿನ್ನಾಭರಣ ಉದ್ಯಮದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರುತ್ತದೆ.
• ದೇಶಾದ್ಯಂತ ಪ್ರತಿನಿತ್ಯ 4 ಲಕ್ಷ ಆಭರಣಗಳಿಗೆ ಹಾಲ್ ಮಾರ್ಕ್ ಅಚ್ಚು ಹಾಕಲಾಗುತ್ತಿದೆ.
• 90,000 ಅಧಿಕ ಆಭರಣ ವ್ಯಾಪಾರಿಗಳು ಬಿಐಎಸ್ ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಒಟ್ಟಾರೆ ಹಾಲ್ ಮಾರ್ಕ್ ಯೋಜನೆ ಅನುಷ್ಠಾನ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಆಭರಣದ ಉದ್ಯಮದವರ ನಡುವೆ ಹಗ್ಗಜಗ್ಗಾಟ ನಡೆದಿದ್ದು, ಚಿನ್ನಾಭರಣ ಕೊಂಡ ಸಾಮಾನ್ಯ ನಾಗರೀಕ ಅನಗತ್ಯ ಗೊಂದಲದಿಂದ ಪೇಚಿಗೆ ಸಿಲುಕಿದ್ದಾನೆ.