ಬೆಂಗಳೂರು ( www.bengaluruwire.com ) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 53ನೆಯ ಮೇಯರ್ ಗೌತಮ್ ಕುಮಾರ್, ಅವಧಿಯಲ್ಲಿ ಬರೋಬ್ಬರಿ 273.25 ಕೋಟಿ ರೂ. ಮೊತ್ತದ ಮೇಯರ್ ಫಂಡ್ ಹಣವನ್ನು 198 ವಾರ್ಡ್ ಗಳ ಪೈಕಿ 75 ವಾರ್ಡ್ ಗಳಿಗಷ್ಟೆ ಹಂಚಿಕೆ ಮಾಡಿದ್ದಾರೆ. ಆ ಕಾಮಗಾರಿಗಳು ಶೇ.5 ರಿಂದ 10ರಷ್ಟು ಪರ್ಸೆಂಟೇಜ್ ಗೆ ಮಾರಾಟವಾಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ವ್ಯಾಪಕ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಅಗತ್ಯ ಕೆಲಸಗಳಿಗೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮೇಯರ್ ಫಂಡ್, ಮಹಾಪೌರರ ವಿವೇಚನಾ ಕೋಟಾದಡಿ ಬಳಸಲಾಗುತ್ತದೆ. ಆದರೆ ಜಾಬ್ ಕೋಡ್ ಹಂಚಿಕೆಯಲ್ಲಿ ಪರ್ಸಂಟೇಜ್ ಪಡೆದು ಮೇಯರ್ ಗೌತಮ್ ಕುಮಾರ್ ಅವಧಿಯಲ್ಲಿ 273.25 ಕೋಟಿ ರೂ.ಗಳ 352 ಕಾಮಗಾರಿಗಳ ಜಾಬ್ ಕೋಡ್ ಗಳನ್ನು ಹಂಚಿಕೆ ಮಾಡಿರುವುದು ಮಾಹಿತಿ ಹಕ್ಕು ದಾಖಲೆಗಳನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಕಂಡು ಬಂದಿದೆ.
ಬೆಂಗಳೂರು ವೈರ್ ಜೂ.7 ರಂದು BW INVESTIGATION | MAYOR FUND MISUSE? | ಮೇಯರ್ ಫಂಡ್ ಹಂಚಿಕೆಯಲ್ಲಿ “ಪರ್ಸಂಟೇಜ್” ಪಾರ್ಕ್ ಪ್ರೀತಿ ಎಂದು ಪ್ರಕಟಿಸಿದ ಸುದ್ದಿಯಲ್ಲಿ ನಗರದಲ್ಲಿ 198 ವಾರ್ಡ್ ಗಳಿದ್ದರೂ ಕೇವಲ 37 ವಾರ್ಡ್ ಪಾರ್ಕ್ ಗಳ ಅಭಿವೃದ್ಧಿಗೆ 137 ಕಾಮಗಾರಿಗಳನ್ನು ಹಂಚಿಕೆ ಮಾಡಿರುವುದರಲ್ಲಿ ಅಕ್ರಮ ನಡೆದಿರುವ ಸಾಧ್ಯತೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ಇದೀಗ ಮೇಯರ್ ಗೌತಮ್ ಕುಮಾರ್ ಅವಧಿಯಲ್ಲಿ ಮಹಾಪೌರರ ವಿವೇಚನೆ ಅಡಿಯಲ್ಲಿ 273.25 ಕೋಟಿ ರೂ.ಗಳ 352 ಕಾಮಗಾರಿಗಳ ಜಾಬ್ ಕೋಡ್ ಗಳನ್ನು ಹಂಚಿಕೆ ಮಾಡಿರುವ ಪರಿಯನ್ನು ನಿಮ್ಮ ಮುಂದಿಡಲಿದೆ.
ಗೌತಮ್ ಕುಮಾರ್ ಪಾಲಿಕೆಯ 15ನೇ ಅವಧಿಯ ಕೊನೆಯ ಮೇಯರ್ ಆಗಿದ್ದು, 1 ಅಕ್ಟೋಬರ್ 2019 ರಿಂದ ಸೆಪ್ಟೆಂಬರ್ 2020 ನೆಯ ಒಂದು ವರ್ಷದ ಅವಧಿವರೆಗೆ ಆ ಹುದ್ದೆಯಲ್ಲಿದ್ದರು. ಈ ಸಂದರ್ಭದಲ್ಲಿ ರಸ್ತೆ ಮೂಲಭೂತ ಸೌಕರ್ಯ, ಕಾಂಕ್ರಿಟ್ ರಸ್ತೆ, ಚರಂಡಿಗಳ ಅಭಿವೃದ್ಧಿ, ಅವುಗಳ ಮೇಲೆ ಸ್ಲಾಬ್ ಅಳವಡಿಕೆ, ಕುಡಿಯುವ ನೀರು ಪೂರೈಕೆ, ಸಮುದಾಯ ಕೇಂದ್ರಗಳ ಒಳಾಂಗಣ ವಿನ್ಯಾಸ, ಫುಟ್ ಪಾತ್ ಅಭಿವೃದ್ಧಿ, ಬೋರ್ ವೆಲ್ ಕೊರೆಸುವಿಕೆ ಹಾಗೂ ಪ್ಯಾಕೇಜ್ ಕೆಲಸ ಕೊಡಬೇಕೆನ್ನುವ ಕಡೆ ರಸ್ತೆ, ಚರಂಡಿ, ಕಾಂಕ್ರಿಟ್, ಡಾಂಬರ್ ಹಾಕುವ ಕಾಮಗಾರಿ ಸೇರಿದಂತೆ ಸಮಗ್ರ ಅಭಿವೃದ್ಧಿ ಕೆಲಸದ ಹೆಸರಿನಲ್ಲಿ ಜಾಬ್ ಕೋಡ್ ಹಂಚಿಕೆ ಮಾಡಿದ್ದಾರೆ.
ಜಾಬ್ ಕೋಡ್ ಹಂಚಿಕೆ ಮಾಡುವಾಗ ಬಹಳ ಜಾಣತನದಿಂದ ಎಲ್ಲ ಕ್ಷೇತ್ರಗಳನ್ನು ಕವರ್ ಅಪ್ ಏನೋ ಮಾಡಿದ್ದಾರೆ. ಆದರೆ ಇಂತಿಷ್ಟು ಪರ್ಸಂಟೇಜ್ ಇಲ್ಲದೆ ಅಂತಹ ಕಾಮಗಾರಿಗಳನ್ನು ಸೇರಿಸೋಕೆ ಗೌತಮ್ ಕುಮಾರ್ ಮೇಯರ್ ಕಚೇರಿ ಸುತಾರಾಮ್ ಒಪ್ಪಿಲ್ಲ ಎಂದು ಹೇಳುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಗುತ್ತಿಗೆದಾರರೊಬ್ಬರು.
ಪರ್ಸಂಟೇಜ್ ಹಣ ಕೊಟ್ಟು ಇಕ್ಕಟಿಗೆ ಸಿಲುಕಿರುವ ಕಾಂಟ್ರಾಕ್ಟರ್ಸ್ :
ಬಿಬಿಎಂಪಿ ಮೇಯರ್ ಗೌತಮ್ ಅವಧಿಯ ಬಹಳಷ್ಟು ಕಾಮಗಾರಿಗಳನ್ನು ಕ್ರೆಡೆಲ್ ಮೂಲಕ ಟೆಂಡರ್ ಕರೆಯದೆ ಪರೋಕ್ಷವಾಗಿ ಗುತ್ತಿಗೆದಾರರಿಗೆ ನೀಡಲಾಗಿದೆ. ಕಾಮಗಾರಿ ಜಾಬ್ ಕೋಡ್ ಪಡೆಯಲು ಪ್ರಭಾವಿ ಕಾಂಟ್ರಾಕ್ಟರ್ ಗಳು ಆಯಾ ಕಾಮಗಾರಿ ಸ್ವರೂಪದ ಆಧಾರದ ಮೇಲೆ ಶೇ.5 ರಿಂದ 10ರಷ್ಟು
ಲಂಚದ ಹಣ ಮೇಯರ್ ಕಚೇರಿಗೆ ನೀಡಿ ಈಗ ಕಾಮಗಾರಿ ಆರಂಭಕ್ಕೆ ಪಾಲಿಕೆಯಲ್ಲಿ ಟೆಂಡರ್ ಕರೆಯದ ಕಾರಣ ಹಣಕೊಟ್ಟು ಹಲವು ಕಾಂಟ್ರಾಕ್ಟರ್ ಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ಪಾಲಿಕೆಯ ಹಣಕಾಸು ವಿಭಾಗದಲ್ಲಿ ಬಿಬಿಎಂಪಿ ಲೆಕ್ಕಶೀರ್ಷಿಕೆಯಡಿ ಕಾಮಗಾರಿ ಮುಗಿಸಿ 26 ತಿಂಗಳು ಕಳೆದು ಹಿರಿಯ ಕ್ರಮಾಂಕದಲ್ಲಿರುವ ಗುತ್ತಿಗೆದಾರರಿಗೆ ಹಣ ಪಾವತಿಸಲಾಗುತ್ತಿದೆ. ಸದ್ಯ ಪಾಲಿಕೆ ಕಾಂಟ್ರಾಕ್ಟರ್ ಗಳಿಗೆ 2,900 ಕೋಟಿ ರೂ.ಗಳಷ್ಟು ಬಿಲ್ ಪಾವತಿ ಮಾಡಬೇಕಾಗಿದೆ ಎಂದು ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ.
“ಪ್ರಭಾವಿ ಗುತ್ತಿಗೆದಾರರು ಆಯಾ ವಾರ್ಡ್ ಗಳಲ್ಲಿ ಕಾಮಗಾರಿ ಅವಶ್ಯಕತೆ ಇಲ್ಲದಿದ್ದರೂ ಮೇಯರ್ ಫಂಡ್ ಅಡಿ ಕಾಮಗಾರಿ ಪಡೆದುಕೊಳ್ಳಲು ಒಟ್ಟಾರೆ ಕಾಮಗಾರಿ ಮೊತ್ತದಲ್ಲಿ ಇಂತಿಷ್ಟು ಪರ್ಸಂಟೇಜ್ ನೀಡಿ ಸ್ಥಳೀಯ ಶಾಸಕರು ಹಾಗೂ ಆಗಿನ ಕಾರ್ಪೊರೇಟರ್ ಗಳ ಗಮನಕ್ಕೆ ತಂದು ಮೇಯರ್ ಫಂಡ್ ತೆಗೆದುಕೊಂಡಿದ್ದರು. ಆದರೆ ಜಾಬ್ ಕೋಡ್ ಹಂಚಿಕೆ ವಿಚಾರದಲ್ಲಿ ಗೌತಮ್ ಜೈನ್ ಕೇವಲ ಬಿಜೆಪಿ ವಾರ್ಡ್ ಗಳಿಗೆ ಹೆಚ್ಚಿನ ಮೇಯರ್ ಫಂಡ್ ನೀಡಿ, ಅಸಮಾನತೆ ತೋರಿದ್ದರು. ಕಾಂಗ್ರೆಸ್ ಕಾರ್ಪೊರೇಟರ್ ಇರುವ ವಾರ್ಡ್ ಗಳಿಗೆ ಕಣ್ಣೊರೆಸಲು ಅನುದಾನ ಹಂಚಿಕೆ ಮಾಡಿದ್ದರು. ಮಾಜಿ ಮೇಯರ್ ಆದ ತಮಗೆ ಸ್ವತಃ ತಮ್ಮ ವಾರ್ಡ್ ಕಾಮಗಾರಿಯೊಂದರ ಪ್ರಸ್ತಾವನೆಗೆ ಜಾಬ್ ಕೋಡ್ ನೀಡಲು ಮನವಿ ಮಾಡಿದ್ದರೂ ಸ್ಪಂದಿಸಿರಲಿಲ್ಲ. ”
–ಮಂಜುನಾಥರೆಡ್ಡಿ, ಬಿಬಿಎಂಪಿ ಮಾಜಿ ಮೇಯರ್
ಅತಿಹೆಚ್ಚು ಮೇಯರ್ ಫಂಡ್ ಪಡೆದ ಟಾಪ್ 10 ವಿಧಾನಸಭಾ ಕ್ಷೇತ್ರಗಳು :
ವಿಧಾನಸಭಾ ಕ್ಷೇತ್ರ/ಬಿಬಿಎಂಪಿ ಕೇಂದ್ರ ಕಚೇರಿ | ಜಾಬ್ ಕೋಡ್ ಗಳ ಸಂಖ್ಯೆ | ಕಾಮಗಾರಿ ಮೌಲ್ಯ ಕೋಟಿ ರೂ.ಗಳಲ್ಲಿ | ಕಾಮಗಾರಿ ಹಂಚಿಕೆಯಾದ ಒಟ್ಟು ವಾರ್ಡ್ ಗಳು |
ಯಶವಂತಪುರ | 35 | 68.96 | 4 |
ಕೆ.ಆರ್.ಪುರ | 53 | 41 | 5 |
ಬೆಂಗಳೂರು ಕೇಂದ್ರ (ಪಾಲಿಕೆ ಕೇಂದ್ರ ಕಚೇರಿ) | 21 | 19.25 | |
ಚಾಮರಾಜಪೇಟೆ | 20 | 15.98 | 3 |
ದಾಸರಹಳ್ಳಿ | 29 | 15.74 | 4 |
ಬೊಮ್ಮನಹಳ್ಳಿ | 13 | 14.17 | 3 |
ಯಲಹಂಕ | 6 | 12.75 | 4 |
ಸಿ.ವಿ.ರಾಮನ್ ನಗರ | 12 | 8.95 | 2 |
ಪದ್ಮನಾಭನಗರ | 15 | 8.39 | 4 |
ಗಾಂಧಿನಗರ | 6 | 8.20 | 3 |
ಒಟ್ಟಾರೆ | 210 | 213.29 | 32 |
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 27 ವಿಧಾನಸಭಾ ಕ್ಷೇತ್ರಗಳಿದ್ದರೂ ಆಗಿನ ಮೇಯರ್ ಗೌತಮ್ ತಮ್ಮ ವಿವೇಚನಾ ಕೋಟಾದಲ್ಲಿ ಸರ್ವಜ್ಞನಗರ, ರಾಜಾಜಿನಗರ ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿನ ಒಂದೇ ಒಂದು ವಾರ್ಡಿಗೂ ಮೇಯರ್ ಫಂಡ್ ಕಾಮಗಾರಿ ಹಂಚಿಕೆ ಮಾಡಿಲ್ಲ. ಇಡೀ ಬೆಂಗಳೂರಿಗೆ ಹಂಚಿಕೆ ಮಾಡಲಾದ 273.25 ಕೋಟಿ ರೂ. ಮೇಯರ್ ಫಂಡ್ ನಲ್ಲಿ ಶೇ.77.88 ರಷ್ಟು ಮೊತ್ತದ 210 ಕಾಮಗಾರಿಗಳನ್ನು ಕೇವಲ 9 ವಿಧಾನಸಭಾ ಕ್ಷೇತ್ರದಲ್ಲಿ 63 ವಾರ್ಡ್ ಗಳಿದ್ದರೂ ಅವುಗಳ ಪೈಕಿ ಕೇವಲ 32 ವಾರ್ಡ್ ಗಳಿಗೆ ಮೇಯರ್ ಗೌತಮ್ ಕುಮಾರ್ ಜೈನ್ ಹಂಚಿಕೆ ಮಾಡಿದ್ದಾರೆ. ಒಟ್ಟಾರೆ 27 ವಿಧಾನಸಭಾ ಕ್ಷೇತ್ರದಲ್ಲಿ 198 ವಾರ್ಡ್ ಗಳಿದ್ದರೂ ಕೇವಲ 75 ವಾರ್ಡ್ ಗಳಿಗೆ ತಮ್ಮ ಅನುದಾನ ಹಂಚಿಕೆ ಮಾಡಿರೋದು ಕಿಕ್ ಬ್ಯಾಕ್ ಪಡೆದಿರುವ ಸಾಧ್ಯತೆ ಬಗ್ಗೆ ಇಂಬು ನೀಡುವಂತಿದೆ.
“ರಾಜ್ಯ ಸರ್ಕಾರ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್ ಐಡಿಎಲ್) ಮೂಲಕ ಟೆಂಡರ್ ಕರೆಯದೇ ನೇರವಾಗಿ ಕಾಮಗಾರಿ ನೀಡಲು ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಸೂಚಿಸಿದೆ. ಆದರೆ ಬಿಬಿಎಂಪಿ ಮುಖ್ಯ ಆಯುಕ್ತರು 2019-20ನೇ ಸಾಲಿನ ಮೇಯರ್, ಉಪಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಆಡಳಿತ ಮತ್ತು ವಿರೋಧ ಪಕ್ಷದ ನಾಯಕ ವಿವೇಚನಾ ಕೋಟಾದಡಿಯಲ್ಲಿ ಜಾಬ್ ಕೋಡ್ ಹಂಚಿಕೆ ಮಾಡಲಾಗಿದೆ. ಆದರೆ ಆ ಅನುದಾನವನ್ನು ಬಳಸಿ ಕಾಮಗಾರಿಗಳನ್ನು ಆರಂಭಿಸಲು ಕಚೇರಿ ಆದೇಶ ಮಾಡಿಲ್ಲ. ಇದರಿಂದ ವಾರ್ಡ್ ಕಾಮಗಾರಿಗಳು ಕುಂಠಿತಗೊಂಡಿದೆ.”
–ಕೆ.ಟಿ.ಮಂಜುನಾಥ್, ಅಧ್ಯಕ್ಷ, ಬಿಬಿಎಂಪಿ ಗುತ್ತಿಗೆದಾರರ ಸಂಘ
ಕಳಪೆ ಬೆಂಗಳೂರು ನಿರ್ಮಾಣಕ್ಕೆ ನಾಂದಿ ಹಾಡಿರುವ ರಾಜ್ಯ ಸರ್ಕಾರ :
ಕೆಆರ್ ಐಡಿಎಲ್ ಮೂಲಕ ಕಾಮಗಾರಿಗಳನ್ನು ನಿರ್ವಹಿಸುವುದು ಅನ್ನೋದು ಕಾರ್ಪೊರೇಟರ್ ಹಾಗೂ ಶಾಸಕರ ಹಿಂಬಾಲಕರಿಗೆ ಪ್ರಾಜೆಕ್ಟ್ ಹಂಚಿಕೆ ಮಾಡೋದು ಅಥವಾ ಪರೋಕ್ಷವಾಗಿ ಗುತ್ತಿಗೆದಾರರ ಮುಖೇನ ಕಾಮಗಾರಿಯನ್ನು ಜನಪ್ರತಿನಿಧಿಗಳು ಕೈಗೊಳ್ಳುವುದು ಅಂತ ಬಹುತೇಕರಿಗೆ ತಿಳಿದಿರುವ ವಿಚಾರ. ಕ್ರೆಡಲ್ ನಿಂದ ಕೈಗೊಂಡ ನೂರಾರು ಕೋಟಿ ರೂಪಾಯಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಅಂತ ಈ ಹಿಂದೆ ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ. ಹೀಗಿದ್ದರೂ ಪುನಃ ರಾಜ್ಯ ಸರ್ಕಾರ, ಪರ್ಸಂಟೇಜ್ ಕೊಟ್ಟು ಕಮಿಟ್ ಆದ ಕಾಂಟ್ರಾಕ್ಟರ್ ಆ ಮೂಲಕ ಜನಪ್ರತಿನಿಧಿಗಳ ಜೋಬು ತುಂಬಿಸಲು ಟೆಂಡರ್ ನಿಂದ ವಿನಾಯಿತಿ ನೀಡಿ ಕ್ರೆಡಲ್ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸಲು ಅಧಿಕೃತ ಒಪ್ಪಿಗೆ ನೀಡಿದೆ. ಇದು ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳು ಮತ್ತಷ್ಟು ಕಳಪೆಯಾಗಿ “ಕಳಪೆ ಬೆಂಗಳೂರು” ಎಂದು ಅಪಖ್ಯಾತಿ ಪಡೆಯಲು ಮತ್ತೆ ದಾರಿ ಮಾಡಿಕೊಡಲಿದೆ ಎಂಬ ಅಭಿಪ್ರಾಯಗಳು ನಾಗರೀಕರಿಂದ ವ್ಯಕ್ತವಾಗುತ್ತಿದೆ.
ಎರಡು ವರ್ಷದೊಳಗೆ ಟೆಂಡರ್ ಕರೆಯದಿದ್ದರೆ ಆ ಕಾಮಗಾರಿ ಫ್ರೀಜ್ :
ಬಿಬಿಎಂಪಿ ವ್ಯಾಪ್ತಿಯಲ್ಲಿ “ಜಾಬ್ ಕೋಡ್ ವಿತರಿಸಿದ ಎರಡು ವರ್ಷದ ಒಳಗಾಗಿ ಕಾಮಗಾರಿಗೆ ಟೆಂಡರ್ ಕರೆದು, ಕಾರ್ಯಾದೇಶ ನೀಡದಿದ್ದಲ್ಲಿ ಅಂತಹ ಕಾಮಗಾರಿಯ ಜಾಬ್ ಕೋಡ್ ಸಂಖ್ಯೆಯನ್ನು ಐ.ಎಫ್.ಎಂ.ಎಸ್. ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಬ್ಲಾಕ್ ಆಗುವಂತೆ ಮಾರ್ಪಾಡು ಮಾಡುವುದು. ಎರಡು ವರ್ಷ ಮೀರಿದ ಪ್ರಕರಣಗಳಿಗೆ ಸಂಬಂಧಿಸಿಂತೆ ಅನ್ ಬ್ಲಾಕ್ ಮಾಡಲು ಯಾವುದೇ ಪ್ರಸ್ತಾವನೆಗಳನ್ನು ಸಲ್ಲಿಸದೇ ಇರುವಂತೆ ವಿಭಾಗೀಯ ಕಾರ್ಯಪಾಲಕ ಅಭಿಯಂತರುಗಳಿಗೆ ಸೂಚಿಸಿದೆ.”
“ವಿಶೇಷ ಪ್ರಕರಣಗಳ ಸಂದರ್ಭದಲ್ಲಿ ಮಾತ್ರ ಅನ್ ಬ್ಲಾಕ್ ಮಾಡುವ ಪ್ರಸ್ತಾವನೆಗಳನ್ನು ಸೂಕ್ತ ವಿವರಣೆಗಳೊಂದಿಗೆ ಸಲ್ಲಿಸುವುದು. ಇಂತಹ ಕಾಮಗಾರಿಗಳ ಪ್ರಸ್ತಾವನೆಗಳನ್ನು ಅನುಷ್ಠಾನದ ಅವಶ್ಯಕತೆಯಿದ್ದಲ್ಲಿ ಮಾತ್ರ ಸ್ಥಳ ಪರಿಶೀಲನೆ ಮಾಡಿ, ಈ ಬಗ್ಗೆ ಸಂಬಂಧಪಟ್ಟ ಮುಖ್ಯ ಅಭಯಂತರರಿಂದ ಪರಿಶೀಲಿಸಿ, ದೃಢೀಕರಿಸಿಕೊಂಡು ಪ್ರಧಾನ ಅಭಯಂತರರ ಶಿಫಾರಸ್ಸಿನ ಮೇರೆಗೆ ವಿಶೇಷ ಆಯುಕ್ತರು (ಯೋಜನೆ)ರವರ ಹಂತದಲ್ಲಿ ಅನ್ ಬ್ಲಾಕ್ ಮಾಡುವ ಪ್ರಕರಣಗಳನ್ನು ತೀರ್ಮಾನಿಸಿ, ಇತ್ಯರ್ಥಗೊಳಿಸಲು ಅಧಿಕಾರ ಪ್ರತ್ಯಾಯೋಜನೆ ಮಾಡಿ, ಆದೇಶಿಸಲಾಗಿದೆ.” ಎಂದು ಆದೇಶ ಸಂಖ್ಯೆ : ಮುಲೆಅ/ಪಿಆರ್/4415/2017-18 ರಂತೆ ಬಿಬಿಎಂಪಿಯ ಈ ಹಿಂದಿನ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಕಚೇರಿ ಆದೇಶ ಹೊರಡಿಸಿದ್ದರು.
ಕ್ರೆಡಲ್ ಮೂಲಕ ಕಾಮಗಾರಿ ಪಡೆದುಕೊಳ್ಳಲು ಹಿಂಬಾಗಿಲ ಸರ್ಕಸ್ :
ಇದರಂತೆ 2019-20ನೇ ಅವಧಿಯಲ್ಲಿ ಮೇಯರ್ ಗೌತಮ್ ಅವಧಿಯಲ್ಲಿನ ಮೇಯರ್ ಫಂಡ್, ಡೆಪ್ಯುಟಿ ಮೇಯರ್ ಸೇರಿದಂತೆ ಮತ್ತಿತರ ಫಂಡ್ ಗಳ ಜಾಬ್ ಕೋಡ್ ಗಳಿಗೆ ಟೆಂಡರ್ ಕರೆದು ಕಾರ್ಯಾದೇಶ ನೀಡದಿದ್ದರೆ ಆ ಕಾಮಗಾರಿಗಳು ಸ್ವಯಂಚಾಲಿತವಾಗಿ ಬ್ಲಾಕ್ ಆಗಲಿದೆ. ಹೀಗಾಗಿಯೇ ಪರ್ಸೆಂಟೇಜ್ ಪಡೆದ ಗುತ್ತಿಗೆದಾರರು ಹಾಗೂ ಅವರ ಬೆಂಬಲಕ್ಕೆ ನಿಂತ ಜನಪ್ರತಿನಿಧಿಗಳು ಸರ್ಕಾರದ ಮಟ್ಟದಲ್ಲಿ ಪ್ರಭಾವ ಬಳಸಿ ಕ್ರೆಡಲ್ ಮೂಲಕ ಈ ಕಾಮಗಾರಿಗಳನ್ನು ನಿರ್ವಹಿಸಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಅತಿಮುಖ್ಯವಲ್ಲದ ಜಾಬ್ ಕೋಡ್ ಬ್ಲಾಕ್ ಆದರೆ ಅನ್ ಬ್ಲಾಕ್ ಅಗತ್ಯವಿಲ್ಲ :
ಜಾಬ್ ಕೋಡ್ ಹಂಚಿಕೆಯಲ್ಲೂ ಪ್ರಭಾವೀ ಕೌನ್ಸಿಲರ್, ಗುತ್ತಿಗೆದಾರರಿಗೆ ಮಣೆ ಹಾಕಿದ್ದಾರೆ ಎಂದು ಪಾಲಿಕೆ ಅಂಗಳದಲ್ಲಿ ಕೇಳಿಬಂದಿದೆ. ಒಟ್ಟಾರೆ 53ನೆಯ ಮೇಯರ್ ಅವಧಿಯಲ್ಲಿ ಮೇಯರ್ ಫಂಡ್ ಅನುದಾನದಡಿ ಹಂಚಿಕೆಯಾದ ಜಾಬ್ ಕೋಡ್ ಗಳ ಬಗ್ಗೆ ಸಮಗ್ರ ತನಿಖೆ ನಡೆದರೆ ಜಾಬ್ ಕೋಡ್ ಹಂಚಿಕೆಯಲ್ಲಿ ಪರ್ಸಂಟೇಜ್ ಕಿಕ್ ಬ್ಯಾಕ್ ಅವ್ಯವಹಾರ ಬೆಳಕಿಗೆ ಬರುವ ಸಾಧ್ಯತೆಯಿದೆ. ಸಾಕಷ್ಟು ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಅತಿಮುಖ್ಯ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿಗಳಿಗೆ ಟೆಂಡರ್ ಕರೆಯದೇ ಪಾಲಿಕೆಯ ಐ.ಎಫ್.ಎಂ.ಎಸ್ ತಂತ್ರಾಂಶದಲ್ಲಿ ಬ್ಲಾಕ್ ಆದ ನಂತರ ಅನ್ ಬ್ಲಾಕ್ ಮಾಡದಿರುವುದೇ ಒಳಿತು ಎನ್ನುವ ಮಾತುಗಳು ಕೇಳಿಬರುತ್ತಿದೆ.
ಈ ಬಗ್ಗೆ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತಾ, ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ, ಯೋಜನೆ ವಿಭಾಗದ ವಿಶೇಷ ಆಯುಕ್ತ ಮನೋಜ್ ರವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ನಾಗರೀಕ ಸಮಾಜ ಎದುರು ನೋಡುತ್ತಿದೆ.