ಬೆಂಗಳೂರು, (www.bengaluruwire.com): ಬಿಬಿಎಂಪಿ ದಾಸರಹಳ್ಳಿ ವಲಯ ವ್ಯಾಪ್ತಿಯ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಹಾಳಾಗಿದ್ದ ರಸ್ತೆ ದುರಸ್ತಿ, ಬೀದಿ ದೀಪ, ರಾಜಕಾಲುವೆಗಳ ಅಭಿವೃದ್ಧಿ, ಕೈಗಾರಿಕಾ ತ್ಯಾಜ್ಯ ತೆರವುಗೊಳಿಸುವುದು ಸೇರಿದಂತೆ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದಾಸರಹಳ್ಳಿ ವಲಯ ಪೀಣ್ಯ ಕೈಗಾರಿಕಾ ಪ್ರದೇಶದ ಸ್ಥಿತಿಗತಿಗಳಿಗೆ ಸಂಬಂಧಿಸಿದಂತೆ ಶನಿವಾರ ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪೀಣ್ಯ ಕೈಗಾರಿಕಾ ಸಂಘದ ಪ್ರತಿನಿಧಿಗಳಿಂದ ಅಲ್ಲಿನ ಸಮಸ್ಯೆಗಳ ಬಗ್ಗೆ ಖುದ್ದು ಮಾಹಿತಿ ಪಡೆದುಕೊಂಡರು. ಇದೇ ವೇಳೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಕಂಡುಬಂದ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಮೌಖಿಕವಾಗಿ ಆದೇಶಿಸಿದರು.
ಬಳಿಕ ಪೀಣ್ಯ ಕೈಗಾರಿಕಾ ಸಂಘದ ಜೊತೆ ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿ ಎಲ್ಲೆಲ್ಲಿ ನ್ಯೂನ್ಯತೆಗಳಿವೆ ಅದನ್ನು ಸರಿಪಡಿಸಲಾಗುತ್ತದೆ. ಹಾಗೂ ಕೈಗಾರಿಕಾ ತ್ಯಾಜ್ಯವನ್ನು ತೆರವುಗೊಳಿಸುವ ಸಂಬಂಧ ಪಾಲಿಕೆಯಿಂದ ಪ್ರತ್ಯೇಕ ಅಧಿಕಾರಿಯನ್ನು ನಿಯೋಜನೆ ಮಾಡಲಾಗುವುದು ಎಂದರು.
ಕೈಗಾರಿಕಾ ಪ್ರದೇಶದಲ್ಲಿ ಶೀಘ್ರ ಬಗೆಹರಿಸಬಹುದಾದ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಒಂದು ವಾರದೊಳಗಾಗಿ ರಸ್ತೆ ಗುಂಡಿ ಹಾಗೂ ಬೀದಿ ದೀಪಗಳ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಜೊತೆಗೆ ಧೀರ್ಘಕಾಲದ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದರು.
ಎಲ್ಲಾ ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ 14ನೇ ಮುಖ್ಯ ರಸ್ತೆ ತಕ್ಷಣವೇ ಅಭಿವೃದ್ಧಿ ಆಗಬೇಕಿದೆ. ಅಲ್ಲದೆ ರಾಜಕಾಲುವೆಗಳ ಸಮಸ್ಯೆಯಿದ್ದು, ಮಳೆಗಾಲದಲ್ಲಿ ಎಲ್ಲೆಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ ಎಂಬುದನ್ನು ಗುರುತಿಸಿ ಕೂಡಲೇ 4 ರಿಂದ 5 ಕಿ.ಮೀ ಉದ್ದದ ರಾಜಕಾಲುವೆ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಇನ್ನು ರಾಜಕಾಲುವೆಗಳಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ದಾಸರಹಳ್ಳಿ ಶಾಸಕರಾದ ಮಂಜುನಾಥ್ ರವರು ಮಾತನಾಡಿ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಹಲವಾರು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿದೆ. ಜೊತೆಗೆ 110 ಹಳ್ಳಿಗಳು ಸೇರ್ಪಡೆಯಾಗಿರುವ ಪ್ರದೇಶದಲ್ಲಿ ರಸ್ತೆಗಳ ದುರಸ್ತಿ ಆಗಬೇಕಿದೆ. ನೆಲಗದರನಹಳ್ಳಿ ರಸ್ತೆ ಹಾಗೂ ಹೆಸರಘಟ್ಟ ಮುಖ್ಯ ರಸ್ತೆಗಳಲ್ಲಿ ಕಾವೇರಿ 5ನೇ ಹಂತದ ಪೈಪ್ ಲೈನ್ ಅಳವಡಿಸುತ್ತಿರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದನ್ನು ಸರಿಪಡಿಸಬೇಕಿದೆ ಎಂದು ಹೇಳಿದರು.
ಕೆಂಪೇಗೌಡ ಗಾರ್ಡನ್ ಹಾಗೂ ರಾಜ್ ಗೋಪಾಲ್ ನಗರ ವಾರ್ಡ್ ರಸ್ತೆ ತಪಾಸಣೆ:
ಸಭೆ ಮುಗಿದ ಬಳಿಕ ಕೆಂಪೇಗೌಡ ಗಾರ್ಡನ್ ಹಾಗೂ ರಾಜ್ ಗೋಪಾಲ್ ನಗರ ವಾರ್ಡ್ ರಸ್ತೆಗಳನ್ನು ತಪಾಸಣೆ ನಡೆಸಿ ರಸ್ತೆಗಳು ಸಾಕಷ್ಟು ಹದಗೆಟ್ಟಿದ್ದು, ಕೂಡಲೆ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ದಾಸರಹಳ್ಳಿ ವಲಯ ಆಯುಕ್ತರಾದ ರವೀಂದ್ರ, ಜಂಟಿ ಆಯುಕ್ತರಾದ ನರಸಿಂಹ ಮೂರ್ತಿ, ಪಾಲಿಕೆ ರಸ್ತೆ ಮೂಲಭೂತ ಸೌಕರ್ಯ ಮುಖ್ಯ ಇಂಜಿನಿಯರ್ ಪ್ರಹ್ಲಾದ್, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಕಾಶ್, ಸಂಘದ ಪದಾಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.