ಬೆಂಗಳೂರು, (www.bengaluruwire.com) :
ರಾಜ್ಯ ಪೊಲೀಸರು ಇನ್ನು ಮುಂದೆ ಪೊಲೀಸ್ ಠಾಣೆಯಲ್ಲಿ ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ, ಇನ್ನಿತರೆ ಖಾಸಗಿ ಆಚರಣೆ ಆಚರಿಸುವಂತಿಲ್ಲ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಇತ್ತಿಚೆಗಷ್ಟೆ ಸುತ್ತೋಲೆ ಹೊರಡಿಸಿದ್ದಾರೆ.
ಅಪರಾಧಿ ಹಿನ್ನೆಲೆಯುಳ್ಳ ವ್ಯಕ್ತಿಗಳ ಜೊತೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿರಬಾರದು. ಆ ಮೂಲಕ ಪೊಲೀಸರು ಕಡ್ಡಾಯವಾಗಿ ಶಿಸ್ತು ಹಾಗೂ ಶಿಷ್ಟಾಚಾರ ಕಾಯ್ದುಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಶಿಸ್ತು ಮತ್ತು ಶಿಷ್ಟಾಚಾರ ಕುರಿತು ಪೊಲೀಸ್ ಮಹಾನಿರೀಕ್ಷಕರು ಹೊರಡಿಸಿರುವ ಆದೇಶದ ಪತ್ರದಲ್ಲಿ, ಅಪರಾಧಗಳ ತಡೆ, ಅಪರಾಧ ಪ್ರಕರಣಗಳ ತನಿಖೆ, ಸಾರ್ವಜನಿಕರ ಪ್ರಾಣ ಹಾಗೂ ಆಸ್ತಿ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಪೊಲೀಸ್ ಇಲಾಖೆಯು ಶಿಸ್ತಿನ ಇಲಾಖೆಯಾಗಿದೆ.
ಸಮವಸ್ತ್ರದಲ್ಲಿನ ಪೊಲೀಸ್ ಅಧಿಕಾರಿಗಳ ವರ್ತನೆಯು ಇಡೀ ಪೊಲೀಸ್ ಸಮುದಾಯವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಪೊಲೀಸ್ ಅಧಿಕಾರಿಗಳು ಸದಾ ಅರಿಯುವುದು ಸೂಕ್ತ. ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸುವ ಮೂಲಕ ಸಮಾಜಘಾತುಕ ಚಟುವಟಿಕೆಗಳನ್ನು ತಟಸ್ಥಗೊಳಿಸಿ ಸಮಾಜದಲ್ಲಿ ಶಾಂತಿ ಸ್ಥಾಪನೆ ಮಾಡಬೇಕು.
ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ತಮ್ಮ ಕಛೇರಿಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಅವಶ್ಯಕ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕಡ್ಡಾಯವಾಗಿ ಈ ಕೆಳಕಂಡ ಕ್ರಮವನ್ನು ಎಲ್ಲಾ ಪೋಲಿಸರು ಅನುಸರಿಸಬೇಕೆಂದು ಪೊಲೀಸ್ ಮಹಾನಿರೀಕ್ಷಕರ ಕಚೇರಿ ಆದೇಶ ಪತ್ರದಲ್ಲಿ ತಿಳಿಸಿದೆ:
ಠಾಣೆಗಳಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಇನ್ನಿತರೆ ಖಾಸಗಿ ಆಚರಣೆ ಆಚರಿಸುವಂತಿಲ್ಲ, ಅಪರಾಧ ಹಿನ್ನೆಲೆಯುಳ್ಳ ಸಮಾಜ ಘಾತುಕ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿಲ್ಲ, ಸಮಾಜಘಾತುಕ ಶಕ್ತಿಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದಾಗಲಿ ಅಥವಾ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ.
ಖಾಸಗಿ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಮುನ್ನ ಸಂಘಟನೆ, ಸಂಸ್ಥೆಯ ವಿವರವನ್ನು ಸರಿಯಾಗಿ ತಿಳಿದು ಪಾಲ್ಗೊಳ್ಳಬೇಕು. ಇಲಾಖೆಯಿಂದ ಆಯೋಜಿಸಲಾಗುವ ಕಾರ್ಯಕ್ರಮಗಳು ಸಾರ್ವಜನಿಕರ ಅರಿವು ಮತ್ತು ಸಾರ್ವಜನಿಕ ಮತ್ತು ಪೊಲೀಸರ ಸಂಬಂಧ ವೃದ್ಧಿಸುವ ಉದ್ದೇಶ ಹೊಂದಿದ್ದಾಗಿರಬೇಕು.
ಪೊಲೀಸ್ ಠಾಣೆ ಅಥವಾ ಪೊಲೀಸ್ ಇಲಾಖೆಯ ವಿವಿಧ ಕಚೇರಿಗಳಿಗೆ ಆಗಮಿಸುವ ಮತ್ತು ನಿರ್ಗಮಿಸುವ ಪೊಲೀಸರು ಸ್ವಾಗತ, ಬೀಳ್ಕೊಡುಗೆ ಆಚರಣೆಯಿಂದ ದೂರವಿರುವಂತೆ ಸೂಚಿಸಲಾಗಿದೆ. ಒಂದೊಮ್ಮೆ ಸ್ವಾಗತ- ಬೀಳ್ಕೊಡುಗೆ ಸಮಾರಂಭ ಆಚರಿಸಿದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಉಳಿದವರು ಪಾಲ್ಗೊಳ್ಳದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.
ಹಿರಿಯ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದ ಯಾವುದೇ ಕಾರ್ಯಕ್ರಮಗಳಿಗಾಗಿ ಪೊಲೀಸರಿಂದ ಅಥವಾ ಸಾರ್ವಜನಿಕರಿಂದ ಒತ್ತಾಯಪೂರ್ವಕವಾಗಿ ಹಣ ಸಂಗ್ರಹಿಸಬಾರದು. ಈ ಎಲ್ಲಾ ಅಂಶಗಳು ಕಡ್ಡಾಯವಾಗಿ ಪಾಲಿಸಲು ಹಾಗೂ ಉಲ್ಲಾಂಘನೆಯಾಗದಂತೆ ಮೇಲ್ವಿಚಾರಣೆ ನಡೆಸುವಂತೆ ಸುತ್ತೋಲೆಯಲ್ಲಿ ಎಲ್ಲಾ ಜಿಲ್ಲೆಯ ಸೂಪರಿಂಟೆಂಡೆಂಟ್ ಗಳಿಗೆ ಡಿಜಿ ಮತ್ತು ಐಜಿಯಾಗಿರುವ ಪ್ರವೀಣ್ ಕುಮಾರ್ ಸೂದ್ ತಿಳಿಸಿದ್ದಾರೆ.
ಪೊಲೀಸ್ ಮಹಾನಿರ್ದೇಶಕರ ಹೊಸ ಸುತ್ತೋಲೆ ಹೊರಡಿಸಿದ ಕ್ರಮವನ್ನು ಕರ್ನಾಟಕ ರಾಷ್ಟ್ರಸಮಿತಿ ಪಕ್ಷ (ಕೆ.ಆರ್.ಎಸ್) ಸ್ವಾಗತಿಸಿದೆ.
ಕಳೆದ ಎರಡು- ಮೂರು ವರ್ಷಗಳಿಂದ ಈ ವಿಚಾರವಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಹಲವು ವೇದಿಕೆಗಳಲ್ಲಿ ಇದೇ ವಿಷಯವಾಗಿ ಪ್ರಸ್ತಾಪಿಸುತ್ತಾ, ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತಾ ಬಂದಿತ್ತು. ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಘಟನೆಯೊಂದರ ಹಿನ್ನೆಲೆಯಲ್ಲಿ ಕೆಆರ್ ಎಸ್ ಪಕ್ಷದ ವತಿಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರವನ್ನೂ ಬರೆದಿತ್ತು. ಈ ಬಗ್ಗೆ ನಮ್ಮ ಪಕ್ಷದ ಮುಖಂಡರು ಅವರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಂದಿದ್ದರು ಎಂದು ಕೆ.ಆರ್.ಎಸ್ ಪಕ್ಷ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದೆ.
“ಈ ವಿಚಾರವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮೊನ್ನೆ ತಾನೇ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಇದು ಅತ್ಯಂತ ತುರ್ತಿನ ಮತ್ತು ಮಹತ್ವದ ಸುತ್ತೋಲೆ. ನಮ್ಮ ಪಕ್ಷದ ಆಗ್ರಹವನ್ನು ಪರಿಗಣಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಧನ್ಯವಾದಗಳನ್ನು ತಿಳಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗಿಂತ ದೊಡ್ಡವರು ಯಾರೂ ಅಲ್ಲ.”
– ರವಿಕೃಷ್ಣಾ ರೆಡ್ಡಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಷ್ಟ್ರಸಮಿತಿ ಪಕ್ಷ
ಪೊಲೀಸ್ ಮಹಾ ನಿರ್ದೇಶಕರು ಈ ಎರಡು ವಿಷಯಗಳ ಬಗ್ಗೆಯೂ ಆದೇಶ ಹೊರಡಿಸುವಂತೆ ಕೆ.ಆರ್.ಎಸ್ ಪಕ್ಷ ಕೋರಿದೆ :
- ಸಾರ್ವಜನಿಕ ಸ್ಥಳದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವಾಗ ಅದನ್ನು ವಿಡಿಯೋ ಮಾಡುವ ಸಾರ್ವಜನಿಕರನ್ನು ತಡೆಯುವ, ಅವರ ಮೇಲೆ ದೌರ್ಜನ್ಯ ಎಸಗುವ, ಫೋನ್ ಕಿತ್ತುಕೊಳ್ಳುವ ಮತ್ತು ಅದರಲ್ಲಿಯ ಮಾಹಿತಿಯನ್ನು ಡಿಲೀಟ್ ಮಾಡುವ ಕಾನೂನುಬಾಹಿರ ಕೃತ್ಯಗಳನ್ನು ಪೊಲೀಸರು ಅವ್ಯಾಹತವಾಗಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಚಾರವಾಗಿಯೂ ಆದಷ್ಟು ಬೇಗ ಸುತ್ತೋಲೆ ಹೊರಡಿಸಬೇಕೆಂದು ಕೆ.ಆರ್.ಎಸ್ ಪಕ್ಷ ಆಗ್ರಹಿಸುತ್ತದೆ.
- ಪೊಲೀಸ್ ಠಾಣೆಗಳಲ್ಲಿ ಇರುವ ಸಿಸಿಟಿವಿ’ಯ ಒಂದು ಟಿವಿ ಸ್ಕ್ರೀನ್ ಅನ್ನು ಠಾಣೆಯ ಬಾಗಿಲ ಬಳಿ ಸಾರ್ವಜನಿಕರು ನೋಡಲು ಆಸ್ಪದ ಇರುವಂತಹ ಸ್ಥಳದಲ್ಲಿ ಇಡಬೇಕು. ಹಾಗೂ ಸಾರ್ವಜನಿಕರು ಅದನ್ನು ಚಿತ್ರೀಕರಿಸಿಕೊಳ್ಳಲೂ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸುತ್ತದೆ. ಆ ಮೂಲಕ ಠಾಣೆಗಳಲ್ಲಿ ನಡೆಯುವ ಹಲವು ಕಾನೂನುಬಾಹಿರ ಚಟುವಟಿಕೆಗಳು, ರಿಯಲ್ ಎಸ್ಟೇಟ್ ವ್ಯವಹಾರಗಳು, ದಲ್ಲಾಳಿ ಕೆಲಸಗಳು, ಅನಾಗರಿಕ ವರ್ತನೆಗಳು ಹತೋಟಿಗೆ ಬರುತ್ತವೆ ಎಂದು ನಾವು ನಂಬುತ್ತೇವೆ ಎಂದು ಕೆ.ಆರ್.ಎಸ್. ಪಕ್ಷದ ಫೇಸ್ ಬುಕ್ ಪೋಸ್ಟ್ ನಲ್ಲಿ ಹಂಚಿಕೊಂಡಿದೆ.
ಇನ್ನು ಮುಂದೆ ಪೊಲೀಸ್ ಅಧಿಕಾರಿಗಳು ಎಲ್ಲೆಂದರಲ್ಲಿ, ಬೇಕಾದ ಕಡೆ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮುಂಚೆ ಪೊಲೀಸ್ ಮಹಾನಿರ್ದೇಶಕರು ಹೊರಡಿಸಿದ ಈ ಸರ್ಕುಲ್ಯರ್ ಜ್ಞಾಪಿಸಿಕೊಂಡರೆ ಉತ್ತಮ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.