ಬೆಂಗಳೂರು, (www.bengaluruwire.com) : ಕೋವಿಡ್ ಸೋಂಕು ನಿಯಮಗಳ ಬಗ್ಗೆ ನಾಗರೀಕರಿಗೆ ಜಾಗೃತಿ ಮುಡಿಸಿದ ಬಳಿಕವೂ ನಿಯಮಗಳನ್ನು ಪಾಲಿಸದಿದ್ದಲ್ಲಿ ದಂಡ ವಿಧಿಸುವ ಹಾಗೂ ನಿಯಮಗಳನ್ನು ಪಾಲಿಸದಿರುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಕೆಲಸ ಮಾಡಬೇಕು ಎಂದು ಬಿಬಿಎಂಪಿ ಆಡಳಿತಗಾರರಾದ ರಾಕೇಶ್ ಸಿಂಗ್ ಅಧಿಕಾರಿಗಳಿಗೆ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಮಗಳ ಪಾಲನೆ (Covid Appropriate Behaviour-CAB) ಮಾಡುವ ಸಂಬಂಧ ಸೋಮವಾರ, ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜೊತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ನಡೆದ ಸಮನ್ವಯ ಸಭೆಯನ್ನು ಉದ್ದೇಶಿಸಿ ಆಡಳಿತಗಾರರು ಮಾತನಾಡಿದರು.
ನಗರದಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಪಾಲಿಕೆ ಹಾಗೂ ಪೊಲಿಸ್ ಇಲಾಖೆಗಳು ಸಮನ್ವಯದೊಂದಿಗೆ ಎಲ್ಲಾ ನಾಗರೀಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಲು ಜಾಗೃತಿ ಮೂಡಿಸಬೇಕು. ಇಲ್ಲದಿದ್ದರೆ ಕೋವಿಡ್ ನಿಯಂತ್ರಣಕ್ಕೆ ದಂಡ ಪ್ರಯೋಗಿಸುವಂತೆ ಸೂಚನೆ ನೀಡಿದರು.
ನಗರದಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ತಳಮಟ್ಟದಲ್ಲಿ ಸರಿಯಾಗಿ ಕೆಲಸ ಮಾಡಬೇಕು. ಆಯಾ ವಲಯ ಮಟ್ಟದಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ನಗರದ ಮಾರುಕಟ್ಟೆ, ಮಾಲ್, ಹೋಟೆಲ್, ದೇವಸ್ಥಾನ, ರೆಸ್ಟೋರೆಂಟ್ ಸೇರಿದಂತೆ ಇನ್ನಿತರೆ ಕಡೆ ಹೆಚ್ಚು ಜನಸಂದಣಿಯಾಗುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು. ಪಾಲಿಕೆ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಇದಕ್ಕೆ ದನಿಗೂಡಿಸಿದರು.
ಕೇರಳ, ಮಹಾರಾಷ್ಟ್ರದಿಂದ ಸಾಕಷ್ಟು ಪ್ರಯಾಣಿಕರು ನಗರರಕ್ಕೆ ಬರುತ್ತಿದ್ದಾರೆ. ಅದಕ್ಕಾಗಿ ಪ್ರಮುಖ ಬಸ್ ನಿಲ್ದಾಣಗಳು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಪ್ರತ್ಯೇಕ ತಂಡಗಳನ್ನು ನಿಯೋಜನೆ ಮಾಡಲಾಗಿದ್ದು, ಎರಡೂ ರಾಜ್ಯಗಳಿಂದ ಬರುವ ವಲಸಿಗರು 72 ಗಂಟೆಯೊಳಗೆ ಮಾಡಿಸಿರುವ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತರವುದು ಕಡ್ಡಾಯವಾಗಿದೆ ಎಂದು ಸಭೆಯಲ್ಲಿ ಗೌರವ್ ಗುಪ್ತ ತಿಳಿಸಿದರು.
ಒಂದು ವೇಳೆ ಆರ್‌ಟಿಪಿಸಿಆರ್ ವರದಿ ತರದಿದ್ದರೆ ಪಾಲಿಕೆಯ ಆರೋಗ್ಯ ತಂಡವು ಸ್ವಾಬ್ ಸಂಗ್ರಹಿಸಲಿದ್ದು, ವರದಿ ಬರುವವರೆಗೆ ಸಾಂಸ್ಥಿಕ ಕ್ವಾರಂಟೈನಲ್ಲಿರಿಸಲಾಗುವುದು. ಅದಲ್ಲದೆ ಚೆಕ್‌ಪೋಸ್ಟ್ ಹಾಗೂ ವಿಮಾನ ನಿಲ್ದಾನದಿಂದ ಬರುವವರಿಗೂ ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ರಾತ್ರಿ ಕರ್ಫ್ಯೂ ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗಿದ್ದು, ಅದನ್ನು ಸರಿಯಾಗಿ ಅನುಸರಿಸಬೇಕಿದೆ. ಅದಕ್ಕೆ ಪೊಲೀಸ್ ಸಹಕಾರ ಪ್ರಮುಖವಾಗಿದ್ದು, ನೈಟ್ ಕರ್ಫ್ಯೂವನ್ನು ಸರಿಯಾಗಿ ಜಾರಿಗೊಳಿಸಲು ವಿವರಿಸಿದರು.
ಕೋವಿಡ್ ನಿಯಂತ್ರಿಸುವ ಸಲುವಾಗಿ, ಕೊವಿಡ್ ಪಾಸಿಟಿವ್ ಬಂದವರಿಗೆ ಕಡ್ಡಾಯವಾಗಿ ಫಿಸಿಕಲ್ ಟ್ರಯಾಜ್ ಮಾಡುವುದು, ಕಾಂಟ್ಯಾಕ್ಟ್ ಟ್ರೇಸಿಂಗ್, ಐಸೋಲೇಟ್, 3 ಹಾಗೂ ಅದಕ್ಕಿಂತ ಹೆಚ್ಚು ಕೇಸ್ ಕಂಡುಬಂದ ಪ್ರದೇಶವನ್ನು ಕಂಟೈನ್ಮೆಂಟ್ ವಲಯವನ್ನಾಗಿ ಗುರುತಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ನಗರ ಚೆಕ್ ಪೋಸ್ಟ್ ಗಳಲ್ಲಿ ತಪಾಸಣಾ ತಂಡಗಳ ನಿಯೋಜನೆ :
ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್.ಜೆ ರವರು ಮಾತನಾಡಿ, ಕೇರಳ ಹಾಗೂ ಮಹಾರಾಷ್ಟ್ರದಿಂದ ನಗರಕ್ಕೆ ರಸ್ತೆಗಳ ಮೂಲಕ ಆಗಮಿಸುವರನ್ನು ಚೆಕ್ ಪೋಸ್ಟ್ ಗಳ ಬಳಿ ತಪಾಸಣಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ. 72 ಗಂಟೆಯೊಳಗೆ ಮಾಡಿಸಿರುವ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಪರಿಶೀಲಿಸಲಾಗುವುದು.
ಆರ್‌ಟಿಪಿಸಿಆರ್ ವರದಿ ಇಲ್ಲದ್ದಿದ್ದರೆ ಸ್ವಾಬ್ ಸಂಗ್ರಹ ಮಾಡಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಿಸಲಾಗುವುದು. ಈ ಸಂಬಂಧ ಈಗಾಗಲೇ ಗ್ರಾಮಾತಂರ ಎಸ್.ಪಿ ಜೊತೆ ಮಾತನಾಡಿದ್ದು, ತಪಾಸಣಾ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿ ಅಧಿಕಾರಿಗಳು – ಪೊಲೀಸ್ ಸಿಬ್ಬಂದಿ ನಡುವೆ ಉತ್ತಮ ಸಮನ್ವಯ :
ಬೆಂಗಳೂರು ನಗರ ಪೊಲೀಸ್ ಆಯುಕ್ತರು ಕಮಲ್ ಪಂತ್ ರವರು ಮಾತನಾಡಿ, ನಗರದಲ್ಲಿ ಕೋವಿಡ್ ನಿಯಂತ್ರಿಸುವ ಸಲುವಾಗಿ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯ ಜೊತೆ ಉತ್ತಮ ಸಮನ್ವಯವಿದ್ದು, ಪೊಲೀಸ್ ಇಲಾಖೆಯಿಂದ ಬೇಕಾದಂತಹ ಸಹಕಾರ ನಿಡಲಾಗುವುದು. ಕೊವಿಡ್ ನಿಯಮಗಳನ್ನು ಪಾಲಿಸದಿರುವವರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದರು.
ಸಭೆಯಲ್ಲಿ ವಲಯ ವಿಶೇಷ ಆಯುಕ್ತರುಗಳಾದ ಡಿ.ರಂದೀಪ್, ಮನೋಜ್ ಜೈನ್, ಡಾ. ಹರೀಶ್ ಕುಮಾರ್, ರವೀಂದ್ರ, ದಯಾನಂದ್, ರೆಡ್ಡಿ ಶಂಕರ ಬಾಬು, ತುಳಸಿ ಮದ್ದಿನೇನಿ, ರವೀಂದ್ರ, ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಎಲ್ಲಾ ವಲಯ ಜಂಟಿ ಆಯುಕ್ತರುಗಳು, ವಲಯ ಡಿಸಿಪಿಗಳು, ಮುಖ್ಯ ಆರೋಗ್ಯ ಅಧಿಕಾರಿ ಡಾ.ವಿಜೇಂದ್ರ, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.