ನವದೆಹಲಿ, ಜು.31 (www.bengaluruwire.com) : ಕೋವಿಡ್ 3 ನೇ ಅಲೆ ತಡೆಗಟ್ಟಲು ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ, ಐಸಿಯು, ಆಕ್ಸಿಜನ್, ಔಷಧಿ ಖರೀದಿಗೆಂದು ರಾಜ್ಯಕ್ಕೆ 800 ಕೋಟಿ ರೂ. ಮಂಜೂರು ಮಾಡಲು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಸಮ್ಮತಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನವದೆಹಲಿಯಲ್ಲಿ ಶನಿವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ ಸುಖ್ ಮಾಂಡವೀಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯಕ್ಕೆ 1.5 ಕೋಟಿ ಲಸಿಕೆ ಪೂರೈಸಲು ಕೋರಿಕೆ ಸಲ್ಲಿಸಿದ್ದು, 1 ಕೋಟಿ ಲಸಿಕೆ ಪೂರೈಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದರು. ಇದರಿಂದ ರಾಜ್ಯದಲ್ಲಿ ಪ್ರತಿದಿನ 2 ರಿಂದ 3 ಲಕ್ಷ ಲಸಿಕೆ ಒದಗಿಸಲು ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೋವಿಡ್ 3 ನೇ ಅಲೆ ನಿಯಂತ್ರಣ, ಲಸಿಕೆ ಅಭಿಯಾನ ಹಾಗೂ ನೆರೆರಾಜ್ಯವಾದ ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ನಿಂದಾಗಿ ರಾಜ್ಯದ ಸರಹದ್ದು ಪ್ರವೇಶ ನಿಯಂತ್ರಿಸುವ ಕುರಿತು ಮಾರ್ಗಸೂಚಿ ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿರುವುದಾಗಿ ಮುಖ್ಯಮಂತ್ರಿಗಳು ವಿವರಿಸಿದರು.
ಹಣಕಾಸು ಸಚಿವೆ ಭೇಟಿ ಮಾಡಿದ ಸಿಎಂ : ಜಿಎಸ್ ಟಿ ಪರಿಹಾರ ಬಿಡುಗಡೆಗೆ ಮನವಿ
ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಶನಿವಾರ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಜಿಎಸ್ ಟಿ ಪರಿಹಾರ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಕಳೆದ ವರ್ಷ ಕೇಂದ್ರ ಸರ್ಕಾರವು 12 ಸಾವಿರ ಕೋಟಿ ರೂ. ಜಿ.ಎಸ್.ಟಿ ಪರಿಹಾರ ನೀಡಿದ್ದು, ಇನ್ನು 11 ಸಾವಿರ ಕೋಟಿ ರೂ. ಗಳಷ್ಟು ಪರಿಹಾರ ಬಿಡುಗಡೆಯಾಗಬೇಕಿದೆ. ಈ ಪರಿಹಾರದ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.
ಈ ವರ್ಷ ಸುಮಾರು 18 ಸಾವಿರ ಕೋಟಿ ಪರಿಹಾರವನ್ನು ಸಾಲ ರೂಪದಲ್ಲಿ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಅಡಚಣೆ ಎದುರಾಗಿರುವುದರಿಂದ ಇದನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೋರಿದರು.
ಮೇಕೆದಾಟು ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ :
ರಾಜ್ಯವು ಮೇಕೆದಾಟು ಯೋಜನೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ತಮಿಳುನಾಡಿನ ಬಿಜೆಪಿ ಮುಖಂಡ ಅಣ್ಣಾಮಲೈ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಿರುವ ಬಗ್ಗೆ ಮಾಧ್ಯಮದವರು ಬೊಮ್ಮಾಯಿ ಅವರ ಗಮನ ಸೆಳೆದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಾರು ಎಷ್ಟೇ ಉಪವಾಸ ಮಾಡಲು, ಊಟ ಮಾಡಲಿ, ರಾಜ್ಯದ ಪಾಲಿನ ನೀರನ್ನು ಬಳಸಿಕೊಂಡು ಯೋಜನೆಯನ್ನು ಮಾಡಿ ಮುಗಿಸುತ್ತೇವೆ. ಮೇಕೆದಾಟು ಯೋಜನೆ ಸಂಬಂಧ ಸಮಗ್ರ ಯೋಜನಾ ವರದಿ ಸಿದ್ದಪಡಿಸಿದ್ದು, ಯೋಜನೆಗೆ ಒಪ್ಪಿಗೆ ಪಡೆದು ನಮ್ಮ ರಾಜ್ಯಕ್ಕೆ ಲಭ್ಯವಾದ ನೀರಿನ ಪಾಲು ಬಳಸಿ ಕಾಮಗಾರಿ ನಡೆಸುತ್ತೇವೆ ಎಂದು ಹೇಳಿದರು.