ಬೆಂಗಳೂರು ( www.bengaluruwire.com ) : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮರಗಳ ವ್ಯವಸ್ಥಿತ ನಿರ್ವಹಣೆ ಹೆಸರಿನಲ್ಲಿ 21 ಟ್ರೀಮ್ ಟೀಮ್ ಗಾಗಿ ವರ್ಷಂಪ್ರತಿ ಕೋಟ್ಯಾಂತರ ರೂಪಾಯಿ ಹಣವನ್ನು ಬಿಬಿಎಂಪಿ ವೆಚ್ಚ ಮಾಡುತ್ತಿದೆ. ಆದರೂ ನಗರ ವ್ಯಾಪ್ತಿಯಲ್ಲಿ ಬಿದ್ದ ಅಥವಾ ಕಡಿದ ಮರಗಳಿಂದ ಆದಾಯ ಬರುವುದಕ್ಕಿಂತ ಪಾಲಿಕೆಗೆ ನಷ್ಠವಾಗುತ್ತಿರುವುದು ಬೆಳಕಿಗೆ ಬಂದಿದೆ.
ಈ ನಷ್ಠಕ್ಕೆ ಮೂಲ ಕಾರಣ ಭ್ರಷ್ಟ ಅರಣ್ಯಾಧಿಕಾರಿಗಳು, ಮರ ಕಡಿಯುವ ಪಾಲಿಕೆ ಗುತ್ತಿಗೆ ತಂಡ ಮತ್ತು ಖಾಸಗಿ ಡಿಪೋಗಳ ನಡುವಿನ ಅಪವಿತ್ರ ಮೈತ್ರಿ.
ಬಿಬಿಎಂಪಿ ಅರಣ್ಯ ಇಲಾಖೆಯ ಕರ್ಮಕಾಂಡ ಒಂದೆರಡಲ್ಲ. ಮೊನ್ನೆಯಷ್ಟೆ ಬೆಂಗಳೂರು ವೈರ್ ಬಿಬಿಎಂಪಿಯ ಅರಣ್ಯ ಘಟಕದಲ್ಲಿ ಗಿಡ ನೆಡುವ ಹೆಸರಲ್ಲಿ ಹಣದ ಲೂಟಿ ನೆಡೆದಿರುವ ಬಗ್ಗೆ ವಾಸ್ತವನ್ನು ಜನರ ಮುಂದೆ ತೆರೆದಿಟ್ಟಿತ್ತು. ಅದರ ಮುಂದಿನ ಭಾಗವಾಗಿ ಕಾಂಟ್ರಾಕ್ಟರ್ಸ್ ಲಾಭಿಗೆ ಬಿಬಿಎಂಪಿ ಅರಣ್ಯ ಇಲಾಖೆ ಬಲಿಯಾಗುತ್ತಿದೆ. ಪಾಲಿಕೆ ಅರಣ್ಯ ವಿಭಾಗದ ಸಮಗ್ರ ಶುದ್ಧೀಕರಣದ ಅಗತ್ಯವಿದೆ ಎಂದು ದಾಖಲೆ ಸಮೇತ ವರದಿ ಮಾಡಿತ್ತು. ಇದೀಗ ಅದರ ಮುಂದಿನ ಭಾಗವನ್ನು ನಿಮ್ಮ ಮುಂದಿಡುತ್ತಿದೆ.
ಮಳೆಗಾಲ ಬಂದರೆ ಇವರಿಗೆ ಹಬ್ಬವೋ ಹಬ್ಬ :
ಮಳೆಗಾಲ ಬಂದರೆ ಬಿಬಿಎಂಪಿಯ ಅರಣ್ಯ ಘಟಕದ ಮರ ಕಡಿಯುವ ತಂಡದ ಗುತ್ತಿಗೆದಾರರಿಗೆ ಹೆಚ್ಚು ಕೆಲಸ ಇರುತ್ತೆ. ಏಕೆಂದರೆ ನಗರದ ಕೇಂದ್ರ ಭಾಗದಲ್ಲಿರುವ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯ ಪ್ರದೇಶದಲ್ಲಿ 20-25 ವರ್ಷಗಳ ಹಿಂದೆ ಹಾಕಿದ ಸಾವಿರಾರು ಮರಗಳಿದ್ದು, ಮಳೆಗಾಲದಲ್ಲಿ ಆಗಾಗ ಬೀಳುತ್ತಲೇ ಇರುತ್ತೆ. ಅವುಗಳಲ್ಲಿ ಸಿಲ್ವರ್ ಓಕ್, ತುರಬೇವು, ಬೇವು, ತೇಗ, ಮಾವು ಮತ್ತಿತರ ಬೆಲೆಬಾಳುವ ಮರಗಳು ಬಿದ್ದರಂತೂ ಗುತ್ತಿಗೆದಾರರು ಮೊದಲಿಗೆ ಹಾಜರಾಗುತ್ತಾರೆ.
ಕೆಲವೊಮ್ಮೆ ಆ ಮರಗಳ ದೊಡ್ಡ ಕೊಂಬೆಗಳು ಮುರಿದರೂ, ದೊಡ್ಡಮರ ಮತ್ತೆಲ್ಲಿ ಬೀಳುತ್ತೋ ಎಂಬ ಭಯ ಮೂಡಿಸಿ ಪೂರ್ತಿ ಮರವನ್ನೇ ಕಡಿದು, ಅವುಗಳನ್ನು ಕೂಡಲೇ ತೆರವುಗೊಳಿಸಿ ನಿಗೂಢ ಸ್ಥಳಗಳಿಗೆ ಸಾಗಿಸುತ್ತಾರೆ. ಅಲ್ಲಿಂದ ಅವು ನಗರದ ಖಾಸಗಿ ಟಿಂಬರ್ ಯಾರ್ಡ್ ಗಳಿಗೆ ಗುಪ್ತವಾಗಿ ರವಾನೆಯಾಗಿ ದುಬಾರಿ ಬೆಲೆಗೆ ಮಾರಾಟವಾಗುತ್ತೆ. ಬಿದ್ದ ಮರಗಳು ಉಪಯೋಗಕ್ಕೆ ಬರಲ್ಲ ಅಂತ ಗೊತ್ತಾದರೆ ವಾರಗಟ್ಟಲೆ ರಸ್ತೆ ಬದಿಯಲ್ಲೇ ಅನಾಥವಾಗಿ ಬಿದ್ದಿರುತ್ತೆ.
ಕಡಿಮೆ ದರದ ಸೌದೆ ಲೆಕ್ಕದಲ್ಲಿ ಬೆಲೆ ಬಾಳುವ ಮರಗಳ ಮಾರಾಟ ದಂಧೆ :
ನಗರದಲ್ಲಿ 2017ರಲ್ಲೇ 14.78 ಲಕ್ಷ ಮರಗಳಿರುವುದನ್ನು ಐಐಎಸ್ ಸಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮರಗಳ ಬಗ್ಗೆ ನಡೆಸಿರುವ ಅಧ್ಯಯನ ವರದಿ ಹೇಳಿತ್ತು. ಆ ಪೈಕಿ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಟಿಂಬರ್ ಮರಗಳಿರುವುದು ವಾಸ್ತವ. ಬಿಬಿಎಂಪಿಯು ನಗರದಲ್ಲಿ ಮರ ಸಂರಕ್ಷಣಾ ಕಾಯಿದೆ ಜಾರಿಗೆ ಬಂದು ನಾಲ್ಕು ದಶಕಗಳನ್ನು ಕಳೆದರೂ ನಗರದಲ್ಲಿರುವ ಮರಗಳ ಗಣತಿಯನ್ನು ನಡೆಸಿಲ್ಲ. ಇದೇ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳನ್ನು ಹೈಕೋರ್ಟ್ ಹಲವು ಬಾರಿ ತರಾಟೆಗೆ ತೆಗೆದುಕೊಂಡಿದೆ.
ಒಂದೊಮ್ಮೆ ನಗರದಲ್ಲಿ ಶೇಕಡ 100ಕ್ಕೆ 100ರಷ್ಟು ಮರಗಣತಿ ಮಾಡಿದ್ದರೆ, ಸಿಲಿಕಾನ್ ಸಿಟಿಯಲ್ಲಿರುವ ಬೆಲೆ ಬಾಳುವ ಟೆಂಬರ್ ಮರಗಳು, ಸೌದೆ, ಉರುವಲು ಸೌದೆಗಳಾಗುವ ಮರಗಳು, ಹೂವು- ಹಣ್ಣಿನ ಮರಗಳ ಲೆಕ್ಕ ಸಿಗುತ್ತಿತ್ತು. ಈಗ ಇವುಗಳ ಲೆಕ್ಕವಿಲ್ಲದ ಕಾರಣ ಬೆಲೆ ಬಾಳುವ ಮರಗಳನ್ನು ಒಂದಲ್ಲ ಒಂದು ಕಾರಣಕ್ಕೆ ಕಡಿದರೂ ಅವುಗಳ ಮೌಲ್ಯವನ್ನು ಮುಚ್ಚಿಟ್ಟು, ಕಡಿಮೆ ಬೆಲೆಗೆ ಸೌದೆ ಮರದ ಲೆಕ್ಕದಲ್ಲಿ ಇ- ಹರಾಜು ಮಾಡಿ, ಆನಂತರ ಬೆಲೆ ಬಾಳುವ ಮರಗಳನ್ನು ಖಾಸಗಿ ಟಿಂಬರ್ ಮಿಲ್ ಗಳಿಗೆ ಮಾರಿ ಕೋಟ್ಯಾಂತರ ರೂಪಾಯಿ ಹಣವನ್ನು ಅರಣ್ಯಾಧಿಕಾರಿಗಳು, ಗುತ್ತಿಗೆದಾರರು ಜೋಬಿಗೆ ಇಳಿಸುತ್ತಿದ್ದಾರೆ.
ವಿವಿಧ ವಾರ್ಡ್ ಗಳಿಂದ ಕಡಿದ ಬೃಹತ್ ಮರ, ರೆಂಬೆ-ಕೊಂಬೆಗಳನ್ನು ಆಯಾ ಜಾತಿಯ ಮರಗಳ ಜೊತೆ ಈ ಕಾರಣಕ್ಕೆ ವಿಂಗಡಿಸಿಡುವುದಿಲ್ಲ. ಇಂತದೊಂದು ದಂಧೆಗೆ ಈತನಕ ಕಡಿವಾಣ ಹಾಕಲು ಬಿಬಿಎಂಪಿಯ ಹಿರಿಯ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಈ ವಿಷಯದ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.
“ಬಿಬಿಎಂಪಿಯಲ್ಲಿ ನಗರದ ಪ್ರತಿಯೊಂದು ಮರದ ಟ್ರೀ ಆಡಿಟ್ ನಡೆಸಿದರೆ ಹಾಗೂ ಮರ ತೆರವು ಮಾಡುವಾಗ ಅರಣ್ಯಾಧಿಕಾರಿಗಳು ಸ್ಥಳ ಮಹಜರು ಮಾಡಿ ಆ ಮರದ ಜಾತಿ, ಎತ್ತರ, ಸುತ್ತಳತೆ ಮತ್ತಿತರ ಮಾಹಿತಿಯ ಆಡಿಟ್ ರಿಪೋರ್ಟ್ ಸೂಕ್ತ ರೀತಿ ನಿರ್ವಹಣೆ ಮಾಡಿದ್ದರೆ ನಗರದಲ್ಲಿ ಟಿಂಬರ್ ಮಾಫಿಯಾ ಮತ್ತು ಅರಣ್ಯ ಅಧಿಕಾರಿಗಳು ಭ್ರಷ್ಟಾಚಾರ ನಡೆಸಲು ಆಗುತ್ತಿರಲಿಲ್ಲ. ಕಳೆದ 20 ವರ್ಷಗಳಿಂದಲೂ ನಗರದಲ್ಲಿ ಬೀಳುವ ಅಥವ ಕಡಿಯುವ ಬೆಲೆ ಬಾಳುವ ಮರಗಳ ಮೌಲ್ಯ ಕಡಿಮೆ ತೋರಿಸಿ ಹರಾಜು ಹಾಕುವ, ಕಡಿಮೆ ಮರದ ಪ್ರಮಾಣ ತೋರಿಸಿ ಖಾಸಗಿ ಟಿಂಬರ್ ಡಿಪೋಗೆ ಸಾಗಿಸುವ ಪ್ರಕ್ರಿಯೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ಭ್ರಷ್ಟಾಚಾರಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ತಡೆ ಹಾಕಬೇಕು ಅಂತ ಆಗ್ರಹಿಸುತ್ತೇನೆ.”
– ಜೋಸೆಫ್ ಹೂವರ್, ಪರಿಸರ ಹೋರಾಟಗಾರರು
ಕಡಿದ ಮರ- ಮರದ ಕೊಂಬೆಗಳನ್ನು ಎಲ್ಲಿ ಸಂಗ್ರಹಿಸಿಡಲಾಗುತ್ತೆ? :
ಬಿಬಿಎಂಪಿಯ 8 ವಲಯದಲ್ಲಿ ಸದ್ಯ 21 ಮರ ಕಡಿಯುವ ತಂಡಗಳಿದ್ದು, ಆ ತಂಡಗಳು ತೆರವು ಮಾಡುವ ಒಣಗಿದ ಮರ, ಕಡಿದು ತಂದ ಅಪಾಯಕಾರಿ ಮರ ಅಥವಾ ಮರದ ರೆಂಬೆ- ಕೊಂಬೆಗಳನ್ನು ಆಯಾ ವಲಯ ಮಟ್ಟದಲ್ಲಿರುವ ಸಸ್ಯ ಕ್ಷೇತ್ರ, ಉದ್ಯಾನವನ, ಪಾರ್ಕ್ ಗಳಲ್ಲಿ ಸಂಗ್ರಹಿಸಿಟ್ಟಿದೆ.
ಬಿಬಿಎಂಪಿಯ ಪಶ್ಚಿಮ ವಲಯ ಹಾಗೂ ರಾಜರಾಜೇಶ್ವರಿ ನಗರ ವಲಯಗಳಲ್ಲಿನ ಮರಗಳನ್ನು ಮಾಗಡಿ ರಸ್ತೆಯ ಸುಮನಹಳ್ಳಿ ಸಿಎಂಎಫ್ ಚರ್ಚ್ ಆವರಣದಲ್ಲಿ, ಯಲಹಂಕ ವಲಯದಲ್ಲಿ ತೆರವುಗೊಳಿಸಿದ ಮರಗಳನ್ನು ಬ್ಯಾಟರಾಯನಪುರದಲ್ಲಿ, ಬೊಮ್ಮನಹಳ್ಳಿ ವಲಯದಲ್ಲಿ ಕಡಿದು ತಂದ ಒಣಗಿದ ಮರಗಳನ್ನು ಕೂಡ್ಲು ಸಸ್ಯ ಕ್ಷೇತ್ರ, ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಕೆಂಪಾಪುರ ನರ್ಸರಿ, ದಾಸರಹಳ್ಳಿ ವಲಯದಲ್ಲಿ ಶೆಟ್ಟಿಹಳ್ಳಿ ಪಾರ್ಕ್ ಹಾಗೂ ಬೆಂಗಳೂರು ದಕ್ಷಿಣ ವಲಯದಲ್ಲಿ ಕತ್ತರಿಸಿ ಸಂಗ್ರಹಿಸಿದ ಮರ ಅಥವಾ ಮರದ ಭಾಗಗಳನ್ನು ಗಿರಿನಗರದಲ್ಲಿ ಸಂಗ್ರಹಿಸಲಾಗುತ್ತಿದೆ.
ಒಣಗಿದ ಟಿಂಬರ್ ಮರ- ಸೌದೆ ದಂಧೆ ನಡೆಯುವ ಪರಿ ಹೇಗೆ?
ಬಿಬಿಎಂಪಿ 27 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿದಿನ ಬಿದ್ದು ಹೋಗುವ ಮರ, ಮರದ ಕೊಂಬೆ, ಟೊಂಗೆಗಳನ್ನು ಕಡಿಯುವ ಅಥವಾ ಅಪಾಯಕಾರಿ ಮರ- ಮರದ ಟೊಂಗೆಗಳನ್ನು ತೆರವುಗೊಳಿಸಲು 21 ಹೊರಗುತ್ತಿಗೆ ತಂಡಗಳಿವೆ. ಆ ತಂಡಗಳಲ್ಲಿ ತಲಾ ಒಂದೊಂದು ತಂಡಗಳು ಪ್ರತಿದಿನ ತಮ್ಮ ವಾಹನಗಳಲ್ಲಿ ಕನಿಷ್ಠ 500 ಕೆಜಿ ಮರ ಅಥವಾ ಮರದ ಕೊಂಬೆಗಳನ್ನು ಸಂಗ್ರಹಿಸುತ್ತವೆ. ಆದರೆ ಅರಣ್ಯ ಇಲಾಖೆಯ ರಿಜಿಸ್ಟರ್ ನಲ್ಲಿ ಕೇವಲ 25- 50 ಕೆಜಿ ಲೆಕ್ಕದಲ್ಲಿ ಬರೆಸುತ್ತಾರೆ.
ಮರ ಕಡಿಯುವ ಸೂಕ್ತ ಉಪಕರಣದೊಂದಿಗೆ ಒಬ್ಬ ಸೂಪರ್ ವೈಸರ್ ಸೇರಿ 8 ಮಂದಿ ಕೆಲಸ ಮಾಡುವುದಕ್ಕೆ ಪಾಲಿಕೆಯು ಪ್ರತಿದಿನಕ್ಕೆ 10,350 ರೂ.ಗಳನ್ನು ಗುತ್ತಿಗೆದಾರರಿಗೆ ಪಾವತಿಸುತ್ತದೆ. ಆ ಕಾರಣಕ್ಕಾದರೂ ಕನಿಷ್ಠ ಕೆಲಸ ಮಾಡಿದ್ದನ್ನು ತೋರಿಸಲಾದರೂ ರಿಜಿಸ್ಟರ್ ನಲ್ಲಿ ಒಣಗಿದ, ಹಸಿ ಮರ, ಮರದ ದಿಮ್ಮಿ, ಟೊಂಗೆಗಳ ಪ್ರಮಾಣವನ್ನು ಕೆಜಿ ಲೆಕ್ಕದಲ್ಲಿ ನಮೂದಿಸುತ್ತಾರೆ.
21 ತಂಡದಿಂದ ವರ್ಷಕ್ಕೆ 3,832 ಟನ್ ಸೌದೆ, ಮರದ ದಿಮ್ಮಿ ಸಂಗ್ರಹ….! :
ಒಂದು ಟೀಮ್ ದಿನಕ್ಕೆ 500 ಕೆಜಿ ಒಣಗಿದ ಮರ ಅಥವಾ ಕಟ್ಟಿಗೆಗಳನ್ನು ಸಂಗ್ರಹಿಸಿದರೂ 21 ಟೀಮ್ ಗಳಿಂದ ಪ್ರತಿದಿನ 10,500 ಕೆಜಿಯಾಗುತ್ತೆ. ಅದನ್ನೇ ವರ್ಷಕ್ಕೆ ಲೆಕ್ಕಹಾಕಿದರೆ ಬರೋಬ್ಬರಿ 3,832.5 ಟನ್ ನಷ್ಟು ಒಣಗಿದ, ಹಸಿ ಸೌದೆ, ಟೆಂಬರ್ ಮರಗಳನ್ನು ಪಾಲಿಕೆ ಅರಣ್ಯ ವಿಭಾಗದ ಗುತ್ತಿಗೆ ತಂಡ ಸಂಗ್ರಹಿಸುತ್ತದೆ. ಹಾಗೆಯೇ ಸಂಗ್ರಹವಾಗುವ ಮರಗಳ ಪೈಕಿ ಶೇಕಡ 30ರಷ್ಟು ಮರದ ಪೀಠೋಪಕರಣಗಳನ್ನು ತಯಾರಿಸಲು ಬಳಸುವ ಟೆಂಬರ್ ಎಂದು ಪರಿಗಣಿಸಿದರೂ 884.42 ಟನ್ ಗಳಾಗುತ್ತೆ.
ಉರುವಲು ಸೌದೆಗೆ ಒಂದು ಟನ್ ಗೆ ಕನಿಷ್ಠ 1,800 ರೂಪಾಯಿಗೆ ಅಂದರೂ 2,948.08 ಟನ್ ಹರಾಜು ಹಾಕಿದರೆ 15.88 ಲಕ್ಷ ರೂಪಾಯಿ ಆಗುತ್ತೆ. ಇನ್ನು ಟೆಂಬರ್ ಮರ ಅಥವಾ ಮರದ ದಿಮ್ಮಿಗೆ ಟನ್ ಗೆ 3,500 ರೂ. ಎಂದು ಹರಾಜು ಹಾಕಿದರೂ 884.42 ಟನ್ ಟೆಂಬರ್ ಮರದಿಂದ 30.95 ಲಕ್ಷ ರೂಪಾಯಿ ಸಂಗ್ರಹವಾಗಬೇಕು.
2020-21ನೇ ಸಾಲಿನ ಇ- ಹರಾಜಿನಲ್ಲಿ 28 ಲಕ್ಷ ರೂ. ಆದಾಯ :
2020-21ನೇ ಸಾಲಿನಲ್ಲಿ ಇಡೀ 750 ಚದರ ಕಿ.ಮೀ ವಿಸ್ತೀರ್ಣದ ಬೆಂಗಳೂರಿನಲ್ಲಿ ಪಾಲಿಕೆ ಅರಣ್ಯಾಧಿಕಾರಿಗಳು ನಗರದ ವಿವಿಧ ಸಸ್ಯ ಕ್ಷೇತ್ರ, ಉದ್ಯಾನವನ ಅಥವಾ ಯಾರ್ಡ್ ಗಳಲ್ಲಿ ಸಂಗ್ರಹಿಸಿಟ್ಟ ಮರಗಳನ್ನು ಇ- ಹರಾಜು ಹಾಕಿ ಕೇವಲ 28 ಲಕ್ಷ ರೂ.ಗಳ ಆದಾಯವನ್ನು ಸಂಗ್ರಹಿಸಲಾಗಿದೆ ಎಂದು ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ.
ಹೀಗೆ ಇ- ಹರಾಜು ಮಾಡಲಾದ ಪ್ರಕ್ರಿಯೆಯಲ್ಲಿ ಯಾವೆಲ್ಲ ಜಾತಿಯ ಮರಗಳು ಎಷ್ಟು ಪ್ರಮಾಣದಲ್ಲಿತ್ತು? ಅವುಗಳನ್ನು ಯಾವ ದರಗಳಲ್ಲಿ ಮಾರಾಟ ಮಾಡಲಾಗಿದೆ ಎಂಬುದನ್ನು ತಿಳಿಸಿಲ್ಲ. ಪಾಲಿಕೆ ಅರಣ್ಯ ಅಧಿಕಾರಿಗಳ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೇಲಿನ ಲೆಕ್ಕವನ್ನಾಧರಿಸಿ ಹೇಳುವುದಾದರೆ ಅರಣ್ಯಾಧಿಕಾರಿಗಳು ವರ್ಷಂಪ್ರತಿ ಸಂಗ್ರಹವಾಗುವ 3,832.5 ಟನ್ ಆಗಿದ್ರೂ, ಇ- ಹರಾಜಿನಲ್ಲಿ ಕೇವಲ 1,555.55 ಟನ್ ನಷ್ಟು ಮರವನ್ನು ಮಾತ್ರ ಹರಾಜು ಹಾಕಿ, ಉಳಿದ ಟಿಂಬರ್ ಅಥವಾ ಸೌದೆ ಖಾಸಗಿ ಟಿಂಬರ್ ಗಳಿಗೆ ಮಾರಾಟವಾಗಿ, ಅರಣ್ಯಾಧಿಕಾರಿಗಳು, ಮರ- ಕೊಂಬೆ ಕಡಿಯುವ ಗುತ್ತಿಗೆದಾದರರ ನಡುವೆ ಹಣ ಹಂಚಿಕೆಯಾಗ್ತಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
“ಬಿಬಿಎಂಪಿಯಲ್ಲಿ ನಡೆಯುತ್ತಿದೆ ಎನ್ನಲಾದ ಟಿಂಬರ್ ಮಾಫಿಯಾ ಹಾಗೂ ಮರಗಳ ವಾಸ್ತವ ಸಂಗ್ರಹ ಮರೆಮಾಚಿ ಅದನ್ನು ಖಾಸಗಿಯವರಿಗೆ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಾನು ಪಾಲಿಕೆ ಮುಖ್ಯ ಆಯುಕ್ತರಿಂದ ಈ ಬಗ್ಗೆ ಮಾಹಿತಿ ಪಡೆಯುತ್ತೇನೆ.”
– ಅನಂತ ಹೆಗಡೆ ಅಶೀಸರ, ಅಧ್ಯಕ್ಷರು, ಕರ್ನಾಟಕ ಜೀವವೈವಿಧ್ಯ ಮಂಡಳಿ
177 ಮರಗಳನ್ನು ಕಡಿಯಲಷ್ಟೇ ಅನುಮತಿ ನೀಡಿತ್ತಂತೆ ಪಾಲಿಕೆ :
ಬಿಬಿಎಂಪಿ ವ್ಯಾಪ್ತಿಯಲ್ಲಿ 2020-21ನೇ ಸಾಲಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಅಪಾಯ ಸ್ಥಿತಿಯಲ್ಲಿರುವ ಮರ ಅಥವಾ ಮರದ ರೆಂಬೆ- ಕೊಂಬೆಗಳನ್ನು ಕಡಿಯಲು ಒಟ್ಟು 1,451 ಅರ್ಜಿ ಬಂದಿದ್ದು ಆ ಪೈಕಿ 575 ಅರ್ಜಿಗಳಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಈ ಪ್ರಕರಣಗಳಲ್ಲಿ ರಸ್ತೆ ಬದಿಗಳಲ್ಲಿರುವ ಒಟ್ಟು 177 ಮರಗಳನ್ನು ಹಾಗೂ 1,085 ರೆಂಬೆ- ಕೊಂಬೆಗಳನ್ನು ತೆಗೆಯಲಾಗಿದೆ ಎಂದು ಪಾಲಿಕೆ ಅರಣ್ಯ ಘಟಕ ತಿಳಿಸಿದೆ.
ವಾಸ್ತವದಲ್ಲಿ ಎಷ್ಟೋ ಕಡೆಗಳಲ್ಲಿ ಮನೆ, ಕಟ್ಟಡಗಳ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆಂದು ರಾತ್ರೋ ರಾತ್ರಿ ಮರಗಳನ್ನು ಕಡಿಯಲಾಗುತ್ತಿದೆ. ಅವುಗಳಿಗೆ ಆಸಿಡ್ ಹಾಕುವ, ಅವುಗಳನ್ನು ಸಾಯಿಸುವ ಪ್ರಕರಣಗಳು ವರದಿಯಾಗುತ್ತಿದೆ. ಅವುಗಳನ್ನೆಲ್ಲಾ ಪಾಲಿಕೆ ಅರಣ್ಯ ವಿಭಾಗ ಅಧಿಕೃತವಾಗಿ ಗಣನೆಗೆ ಪರಿಗಣಿಸಿಲ್ಲ. ಹೀಗಿರುವಾಗ ಪಾಲಿಕೆ ನೀಡಿರುವ ಈ ಮಾಹಿತಿ ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಗಮನಿಸಬೇಕು.
ಖಾಸಗಿ ಟೆಂಬರ್ ಯಾರ್ಡ್ ಗಳೇ ಅರಣ್ಯಾಧಿಕಾರಿಗಳ ಹಣದ ಮೂಲ :
ಒಂದೊಮ್ಮೆ ಕಡಿದ ಅಥವಾ ಧರೆಗೆ ಉರುಳಿದ ಮರಗಳು, ದೊಡ್ಡದಾಗಿದ್ದು ಅಥವಾ ಟಿಂಬರ್ ಮರವಾದರೆ ಅದು ಅರಣ್ಯ ಇಲಾಖೆಯ ಗುತ್ತಿಗೆದಾರರ ವಾಹನದಲ್ಲೇ ನೇರವಾಗಿ ಖಾಸಗಿ ಟೆಂಬರ್ ಯಾರ್ಡ್ ಗಳಿಗೆ ನೇರವಾಗಿ ಬಿಕರಿಯಾಗಿ ಅರಣ್ಯಾಧಿಕಾರಿಗಳ ಅಜೆಸ್ಟ್ ಮೆಂಟ್ ಲೆಕ್ಕಕ್ಕೆ ಜಮೆಯಾಗುತ್ತೆ.
ಸಾಮಾನ್ಯವಾಗಿ ಅರಣ್ಯಾಧಿಕಾರಿಗಳ ಟಿಂಬರ್ ಮರಗಳ ಅಡ್ಜೆಸ್ಟ್ ಮೆಂಟ್ ಗಳು ಮೈಸೂರು ರಸ್ತೆ ಬ್ಯಾಟರಾಯನಪುರ ಬಳಿಯ ಟಿಂಬರ್ ಯಾರ್ಡ್ ಲೇಔಟ್ ನಲ್ಲಿ ಖಾಸಗಿ ಡಿಪೋ, ಮಾಗಡಿ ರಸ್ತೆ, ಯಲಹಂಕ ಹಾಗೂ ಹೊಸಕೋಟೆಯಲ್ಲಿನ ಖಾಸಗಿ ಡಿಪೋ ಗಳಿಗೆ ಪೂರೈಕೆಯಾಗುತ್ತೆ. ಈತನಕವೂ ಇಂತಹ ಕಳ್ಳದಂಧೆಗೆ ರಾಜ್ಯ ಅರಣ್ಯ ಇಲಾಖೆಯಾಗಲಿ, ಬಿಬಿಎಂಪಿಯ ಆಡಳಿತವಾಗಲಿ ಬ್ರೇಕ್ ಹಾಕದಿರುವುದು ವಿಪರ್ಯಾಸ. ಈ ಬಗ್ಗೆ ಸರ್ಕಾರದ ಮಟ್ಟದ ವಿವಿಧ ತನಿಖಾ ಸಂಸ್ಥೆ ಅಥವಾ ನ್ಯಾಯಾಂಗದ ತನಿಖೆಯಾದರೆ ಸತ್ಯ ಬೆಳಕಿಗೆ ಬರಲಿದೆ.