ಬೆಂಗಳೂರು ( www.bengaluruwire.com ) : ಉದ್ಯಾನ ನಗರಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬೇರೇ ಬೇರೆ ಸಂದರ್ಭದಲ್ಲಿ ಅಭಿವೃದ್ಧಿಪಡಿಸಿದ 64 ಬಡಾವಣೆಗಳಲ್ಲಿ ಬರೋಬ್ಬರಿ 92,299 ಕೋಟಿ ರೂಪಾಯಿ ಮೌಲ್ಯದ 18,459.83 ಎಕರೆ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳನ್ನು ಕಟ್ಟಲಾಗಿದೆ….! ಬಿಡಿಎ ಖಾಸಗಿ ಸಂಸ್ಥೆಯಿಂದ ಕೈಗೊಂಡ ಭೂಮಿ ಲೆಕ್ಕಪರಿಶೋಧನೆ (ಲ್ಯಾಂಡ್ ಆಡಿಟ್) ಅಂತಿಮ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. “ಬೆಂಗಳೂರು ವೈರ್”ಗೆ ಇದರ ಅಧಿಕೃತ ವಿವರ ಲಭ್ಯವಾಗಿದೆ.
ಒತ್ತುವರಿಯಾದ 18,459.83 ಎಕರೆ ಪ್ರದೇಶದಲ್ಲಿ ಬಿಡಿಎ ವಿವಿಧ ಪ್ರದೇಶದಲ್ಲಿ ಲೇಔಟ್ ನಿರ್ಮಾಣಕ್ಕಾಗಿ ಅಂತಿಮ ಅಧಿಸೂಚನೆ ಮೂಲಕ ಭೂಸ್ವಾಧೀನಪಡಿಸಿಕೊಂಡು ಐತೀರ್ಪು ರಚನೆ ಮೂಲಕ ಪಡೆದ ಜಮೀನನ ಪೈಕಿ 7,059.6 ಎಕರೆ ವಿಸ್ತೀರ್ಣದ ಕಂದಾಯ ಜಮೀನಿನಲ್ಲಿ, ಮನೆ, ಕಟ್ಟಡ, ವಾಣಿಜ್ಯ ಸಂಕೀರ್ಣ ಹೀಗೆ ವಿವಿಧ ನಿರ್ಮಾಣಗಳಿರುವುದನ್ನು ಲ್ಯಾಂಡ್ ಆಡಿಟ್ ಟೀಮ್ ಪತ್ತೆ ಹಚ್ಚಿದೆ. ಅದೇ ರೀತಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆ ಐತೀರ್ಪು ರಚನೆಯಾಗದ 11,400 ಎಕರೆ ಪ್ರದೇಶದಲ್ಲಿ ಒತ್ತುವರಿ ಮಾಡಿ ಅನಧಿಕೃತ ಕಟ್ಟಡ ಕಟ್ಟಿರುವುದನ್ನು ಭೂ ಲೆಕ್ಕಪರಿಶೋಧನೆಯಲ್ಲಿ ಗುರ್ತಿಸಲಾಗಿದೆ.
ಆರ್ಥಿಕ ಸಂಪನ್ಮೂಲವಿಲ್ಲದೆ ಅನಿವಾರ್ಯವಾಗಿ ತಾನು ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿನ ಕಾರ್ನರ್ ಸೈಟ್ ಗಳನ್ನು ಮಾರಿ ಹಣ ಹೊಂದಿಸಿಕೊಳ್ಳಬೇಕಾದ ಸ್ಥಿತಿಯಲ್ಲಿದ್ದ ಬಿಡಿಎಗೆ ಈಗ ತನ್ನ ನಿಜವಾದ ಆಸ್ತಿಯೆಷ್ಟು? ತನ್ನ ಭೂಮಿಯ ಮೌಲ್ಯವೆಷ್ಟು ಎಂಬ ನಿಖರ ಮಾಹಿತಿಯು ಲ್ಯಾಂಡ್ ಆಡಿಟ್ ನಿಂದ ಲಭ್ಯವಾಗಿದೆ. ಈ ಲ್ಯಾಂಡ್ ಆಡಿಟ್ ವರದಿಯ ಅನ್ವಯ ನಿಖರವಾದ ಕಾರ್ಯತಂತ್ರ ರೂಪಿಸಿ, ಒತ್ತುವರಿಯಲ್ಲಿ ತನ್ನ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಅಥವಾ ಸಕ್ರಮ ಮಾಡುವ ಮೂಲಕ ಸಾವಿರಾರು ಕೋಟಿ ರೂಪಾಯಿ ಆದಾಯವನ್ನು ಸಂಗ್ರಹಿಸಬಹುದಾಗಿದೆ.
ಇಐ ಟೆಕ್ನಾಲಜೀಸ್ ಸಂಸ್ಥೆಯು 2019ರಿಂದ ನಗರದ ವಿವಿಧ ಪ್ರದೇಶದಲ್ಲಿ ಬಿಡಿಎ ಅಭಿವೃದ್ಧಿಪಡಿಸಿರುವ ಲೇಔಟ್ ಗಳಲ್ಲಿನ ಪ್ರದೇಶದ ಅಥವಾ ಕಟ್ಟಡಗಳ ನಿರ್ದಿಷ್ಟ ಅಳತೆಯನ್ನು ಅಳೆಯಬಹುದಾದ ಟೋಟಲ್ ಸ್ಟೇಷನ್ ಸರ್ವೆ, ದ್ರೋಣ್ ಕ್ಯಾಮರಾದಂತಹ ಆಧುನಿಕ ತಂತ್ರಜ್ಞಾನ, ಕಂದಾಯ ಇಲಾಖೆಯ ಸರ್ವೆ ನಕ್ಷೆ, ಬಿಡಿಎ ನಿವೇಶನ ಮಂಜೂರಾತಿ ದಾಖಲೆ, ಬಡಾವಣೆಯ ನಕ್ಷೆಗಳು ಹಾಗೂ ಸ್ಥಳ ಪರಿಶೀಲನೆ ನಡೆಸಿ ಕ್ಲಿಷ್ಟ ಮತ್ತು ತಾಂತ್ರಿಕ ಮಾಹಿತಿಯನ್ನ ವಿಶ್ಲೇಷಣೆ ನಡೆಸಿ ಬಿಡಿಎಗೆ ತನ್ನ ಅಂತಿಮ ವರದಿಯನ್ನು ನೀಡಿದೆ.
“2019ರಲ್ಲಿ ಖಾಸಗಿ ಸಂಸ್ಥೆಗೆ ಬಿಡಿಎ 64 ಲೇಔಟ್ ನಿರ್ಮಾಣಕ್ಕೆಂದು ಸ್ವಾಧೀನಪಡಿಸಿಕೊಂಡ ಭೂಮಿ ಲಭ್ಯತೆ, ಬಳಕೆ, ಅನಧಿಕೃತ ಮತ್ತು ಅಧಿಕೃತ ಸೈಟ್ ಗಳ ಬಗ್ಗೆ ಮಾಹಿತಿ ಕಲೆಹಾಕಲು ಭೂಮಿ ಲೆಕ್ಕಪರಿಶೋಧನೆ ಜವಾಬ್ದಾರಿಯನ್ನು ವಹಿಸಲಾಗಿತ್ತು. ಅದರಂತೆ ಸುಮಾರು 20 ವಿವಿಧ ಬಗೆಯ ಮೂಲಗಳಿಂದ ಮಾಹಿತಿ ಕಲೆ ಹಾಕಿ, ಆಧುನಿಕ ತಂತ್ರಜ್ಞಾನ ಬಳಸಿ ಸರ್ವೆ ಮಾಡಿ, ವಿಶ್ಲೇಷಣೆ ನಡೆಸಿ ಸಂಸ್ಥೆಯು ಬಿಡಿಎಗೆ ಅಂತಿಮ ವರದಿ ನೀಡಿದೆ. ಹೀಗಾಗಿ ಬಿಡಿಎ ಆಸ್ತಿಗಳು ಎಷ್ಟಿದೆ? ಎಲ್ಲೆಲ್ಲಿದೆ? ಎಂಬುದು ತಿಳಿಯಿತು. ಇನ್ನು ಮುಂದೆ ತನ್ನ ಆಸ್ತಿಗಳನ್ನು ಪತ್ತೆಹಚ್ಚಲು ಬಿಡಿಎ ಗೆ ಸಾಧ್ಯವಾಗಲಿದೆ. ಒಟ್ಟಾರೆ ಬಿಡಿಎ ಭೂಸ್ವಾಧೀನಪಡಿಸಿಕೊಂಡ 33,249 ಎಕರೆ ಪ್ರದೇಶದ ಪೈಕಿ, 18,500 ಎಕರೆ ಜಾಗದಲ್ಲಿ ಅನಧಿಕೃತ ಕಟ್ಟಡಗಳು ತಲೆ ಎತ್ತಿರುವುದು ಕಂಡು ಬಂದಿದೆ. ಬಿಡಿಎ ಅವಾರ್ಡ್ ಮಾಡಲಾದ 7,059 ಎಕರೆ ಪ್ರದೇಶದಲ್ಲಿ ಕಟ್ಟಿದ ಕಟ್ಟಡಗಳನ್ನು ಸಕ್ರಮ ಮಾಡಿದರೂ ಕಡಿಮೆಯೆಂದರೂ 25 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹವಾಗಲಿದೆ. ಈ ಮಧ್ಯೆ ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಮಾರ್ಗಸೂಚಿ ದರ ನಿಗಧಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಬಿಡಿಎ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಿದೆ.”
– ಶಾಂತಾ ರಾಜಣ್ಣ, ಬಿಡಿಎ ಅಭಿಯಂತರ ಸದಸ್ಯರು
ನಿವೇಶನಗಳ ಸಿಡಿ ರಿಪೋರ್ಟ್ ಪಡೆಯಲು ಇದ್ದ ಭ್ರಷ್ಟಾಚಾರಕ್ಕೆ ಬ್ರೇಕ್?
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ವಿಭಾಗಗಳಿವೆ. ಆ ವಿಭಾಗಗಳಲ್ಲಿ ಕೋರಮಂಗಲ, ಎಚ್ಎಸ್ ಆರ್, ದೊಮ್ಮಲೂರು, ಚಂದ್ರಲೇಔಟ್, ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್, ನಾಡಪ್ರಭು ಕೆಂಪೇಗೌಡ, ಜ್ಞಾನಭಾರತಿ, ಎಚ್ಆರ್ ಬಿಆರ್ ಲೇಔಟ್, ಒಎಂಬಿಆರ್ ಬಡಾವಣೆ, ಆರ್ ಎಂವಿ, ಅರ್ಕಾವತಿ, ಬಿಎಸ್ ಕೆ, ಬಿಟಿಎಂ ಬಡಾವಣೆ ಸೇರಿದಂತೆ 64 ಬಡಾವಣೆಗಳನ್ನು ರಚಿಸಿದೆ. ಇಷ್ಟು ದಿನಗಳ ಕಾಲ ಹಲವು ಪ್ರತಿಷ್ಠಿತ ಬಡಾವಣೆಗಳಲ್ಲಿ ಬದಲಿ ಸೈಟ್ ಗಳನ್ನು ಪಡೆಯಲು, ಎಲ್ಲೆಲ್ಲಿ ಖಾಲಿ ನಿವೇಶನಗಳಿವೆ? ಅವುಗಳ ಖಚಿತ ಅಳತೆಯೆಷ್ಟು ? ಎಂಬುದರ ಸಿಡಿ ರಿಪೋರ್ಟ್ ಪಡೆಯಲು ಸಾಮಾನ್ಯ ಜನರು ಲಕ್ಷಾಂತರ ರೂಪಾಯಿ ಲಂಚ ಹಣವನ್ನು ಭ್ರಷ್ಟ ಎಂಜಿನಿಯರ್ ಗಳ ಬಾಯಿಗೆ ಹಾಕಬೇಕಿತ್ತು. ನೂತನ ಲ್ಯಾಂಡ್ ರಿಪೋರ್ಟ್ ಭ್ರಷ್ಟಾಚಾರಕ್ಕೆ ಕೊಂಚ ಬ್ರೇಕ್ ಹಾಕಬಹುದನ್ನು ನಿರೀಕ್ಷಿಸಬಹುದಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಮಿ ಲೆಕ್ಕಪರಿಶೋಧನೆ ಮುಖ್ಯಾಂಶಗಳು | |
ಅಂತಿಮ ಅಧಿಸೂಚಿತ ಒಟ್ಟು ಪ್ರದೇಶ (ಸರ್ಕಾರಿ ಕರಾಬ್ ಸೇರಿ) | 37,168.38 ಎಕರೆ |
ಅಂತಿಮ ಅಧಿಸೂಚನೆ ಮೇರೆಗೆ ಬಿಡಿಎ ಸ್ವಾಧೀನಕ್ಕೆ ಪಡೆದ ಭೂಮಿ ವಿಸ್ತೀರ್ಣ (ಸರ್ಕಾರಿ ಭೂಮಿ ಸೇರಿ) | 33,249.42 ಎಕರೆ |
ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿ ಐತೀರ್ಪು ರಚಿಸಿದ ಬಳಿಕ ಬಿಡಿಎ ಪಡೆದ ಜಮೀನಿನ ವಿಸ್ತೀರ್ಣ | 21,208.23 ಎಕರೆ |
ಅಂತಿಮ ಅಧಿಸೂಚನೆಯಾಗಿ, ಐತೀರ್ಪು ರಚಿಸದೆ ಇರುವ ಭೂಮಿ ವಿಸ್ತೀರ್ಣ | 12,568.36 ಎಕರೆ |
ಬಿಡಿಎ 64 ಬಡಾವಣೆಗಳನ್ನು ರಚಿಸಿದ ಒಟ್ಟು ಪ್ರದೇಶ | 11,504 ಎಕರೆ |
ಐತೀರ್ಪು ರಚಿಸಿದ ಹಾಗೂ ರಚಿಸದ ಪ್ರಕರಣದಲ್ಲಿ ವಿವಾದಿತ ಹಾಗೂ ವಿವಾದಿತವಲ್ಲದ ಒಟ್ಟು ಸಗಟು ಖಾಲಿ ಭೂಮಿ | 2,337.18 ಎಕರೆ |
“ಬೆಂಗಳೂರಿನಲ್ಲಿ 1980ರವರೆಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಸಾಕಷ್ಟು ಬಡಾವಣೆಗಳು ರಚನೆಯಾದವು. ಆನಂತರ 10-12 ವರ್ಷಗಳ ಕಾಲ ಯಾವ ಲೇಔಟ್ ಗಳನ್ನು ಬಿಡಿಎ ನಿರ್ಮಾಣ ಮಾಡಲಿಲ್ಲ. ಇನ್ನೊಂದೆಡೆ ಹೌಸಿಂಗ್ ಸೊಸೈಟಿಗಳು ಬಡಾವಣೆ ನಿರ್ಮಿಸದ ಕಾರಣ ಮನೆ, ನಿವೇಶನ ಅಗತ್ಯವಿರುವ ನಾಗರೀಕರು ಕಂದಾಯ ನಿವೇಶನಗಳನ್ನು ಖರೀದಿಸಿ ಮನೆ ಕಟ್ಟಿಕೊಂಡರು. ಆನಂತರ ಬಿಡಿಎ ಲೇಔಟ್ ನಿರ್ಮಾಣ ಮಾಡುವ ಮುಂಚೆ ಈ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿದವರನ್ನು, ರೈತರ ಜಮೀನನ್ನು ಸೇರಿಸಿಕೊಂಡು ಭೂಸ್ವಾಧೀನ ಮಾಡಿದ್ದರಿಂದಲೇ ಈಗಲೂ ಖಾತೆ, ಕಂದಾಯ, ಆಸ್ತಿ ದಾಖಲೆಯಿದ್ದರೂ, ಪಹಣಿಯಲ್ಲಿ ಮಾತ್ರ ಬಿಡಿಎ ಅಂತ ಬರುತ್ತಿದೆ. ಯಾರೋ ಅಧಿಕಾರಿಗಳು ಮಾಡಿದ ತಪ್ಪಿಗೆ ಸಾಮಾನ್ಯ ಜನರು ನರಳುವಂತಾಗಿದೆ.”
– ರಾಮಲಿಂಗಾರೆಡ್ಡಿ, ಮಾಜಿ ಬೆಂಗಳೂರು ಅಭಿವೃದ್ಧಿ ಸಚಿವರು ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಂತಿಮ ಅಧಿಸೂಚನೆ ಮೂಲಕ ಐತೀರ್ಪು ರಚಿಸಿ ಭೂಸ್ವಾಧೀನಪಡಿಸಿಕೊಂಡ ಜಮೀನನ ಪೈಕಿ 7,059.6 ಎಕರೆ ವಿಸ್ತೀರ್ಣದ ಕಂದಾಯ ಜಮೀನಿನಲ್ಲಿ, ಮನೆ, ಕಟ್ಟಡ, ವಾಣಿಜ್ಯ ಸಂಕೀರ್ಣ ಹೀಗೆ ವಿವಿಧ ನಿರ್ಮಾಣಗಳು ಈಗಾಗಲೇ ಆಗಿದೆ. ಇಂತಹ ರೆವೆನ್ಯೂ ಪ್ರದೇಶದಲ್ಲಿ ಕಟ್ಟಿಕೊಂಡ ಸಾವಿರಾರು ಮನೆ, ಕಟ್ಟಡಗಳನ್ನು ಏಕಾಏಕಿ ತೆರವು ಮಾಡಿ ಅದನ್ನು ಬಿಡಿಎ ತನ್ನ ವಶಕ್ಕೆ ಪಡೆಯುವುದು ಸುಲಭದ ಮಾತಲ್ಲ. ಹೀಗಾಗಿ ಕಳೆದ ವರ್ಷವೇ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ 1976ರ ಬಿಡಿಎ ಕಾಯ್ದೆಗೆ 38ಡಿ ಸೆಕ್ಷನ್ ಸೇರ್ಪಡೆ ಮಾಡಿ ಅದನ್ನು ರಾಜ್ಯಪತ್ರದಲ್ಲಿ ಹೊರಡಿಸಿ ಜಾರಿಗೆ ತಂದಿತ್ತು.
ರಾಜ್ಯಪತ್ರ ಹೊರಡಿಸಿದ ದಿನಾಂಕದಿಂದ 12 ವರ್ಷದ ಮುಂಚೆ ಬಿಡಿಎ ಐತೀರ್ಪು ರಚಿಸಿ ಭೂಸ್ವಾಧೀಪಡಿಸಿಕೊಂಡ ಭೂಮಿಯಲ್ಲಿ ಈಗಾಗಲೇ ಕಟ್ಟಿದ ವಿವಿಧ ಅಳತೆಯ ಕಟ್ಟಡಗಳನ್ನು ಸಕ್ರಮ ಮಾಡಲು ಭೂಮಿಯ ಪ್ರಸಕ್ತ ಮೌಲ್ಯದ ನಿರ್ದಿಷ್ಟ ಮಾರ್ಗಸೂಚಿ ಅನ್ವಯ ದರ ನಿಗಧಿಪಡಿಸಿ, ದಂಡದೊಂದಿಗೆ ಹಣ ಕಟ್ಟಲು ಬಿಡಿಎ ಅವಕಾಶ ಕಲ್ಪಿಸಿತ್ತು. ಇದು ಬಿಡಿಎ ಲೇಔಟ್ ಗುರ್ತಿಸಿದ ಜಾಗದ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡ ಸಾವಿರಾರು ಜನರಿಗೆ ಬಿಗ್ ರಿಲೀಫ್ ಒದಗಿಸಿದ್ದೇನೋ ನಿಜ. ಆನಂತರ ಬಿಡಿಎ ಕಾಯ್ದೆಗೆ ತಿದ್ದುಪಡಿ ತಂದ ವಿಷಯವು ನ್ಯಾಯಾಲಯದ ಮೆಟ್ಟಿಲೇರಿತು.
ಉಳಿದಂತೆ ಬಿಡಿಎ ಸ್ವಾಧೀನಪಡಿಸಿಕೊಂಡು ಐತೀರ್ಪು ಪ್ರಕಟವಾಗದ 11,400 ಎಕರೆ ಪ್ರದೇಶದಲ್ಲಿ ಮನೆ ಕಟ್ಟಿಕೊಂಡವರಿಗೂ ಕಾನೂನಿನಲ್ಲಿ ಸ್ಪಷ್ಟ ತಿದ್ದುಪಡಿ ತಂದು ಅವುಗಳನ್ನು ಸಕ್ರಮಗೊಳಿಸಿದರೆ ನೂರಾರು ಕೋಟಿ ರೂಪಾಯಿ ಬಿಡಿಎ ವರಮಾನವಾಗಿ ಬರಲಿದೆ ಎಂದು ಬಿಡಿಎ ಅಧಿಕಾರಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಬಿಡಿಎನಲ್ಲಿ ಭೂಸ್ವಾಧೀನ ಮಾಡಿಕೊಂಡ 18,500 ಎಕರೆಯಷ್ಟು ಜಮೀನು ಅನಧಿಕೃತವಾಗಿ ಅತಿಕ್ರಮಣ ಮಾಡಿಕೊಂಡಿರುವುದು ಲ್ಯಾಂಡ್ ಆಡಿಟ್ ನಿಂದ ತಿಳಿದುಬಂದಿರುವುದನ್ನು ನಂಬಲಿಕ್ಕಾಗುತ್ತಿಲ್ಲ. ಈ ಪ್ರಮಾಣದಲ್ಲಿ ಭೂಮಾಫೀಯಾ ಬೆಳೆಯೋಕೆ ರಾಜಕಾರಣಿಗಳು ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿಯಿಂದ ಮಾತ್ರ ಸಾಧ್ಯ. ಭೂಮಾಫಿಯಾ, ಅತಿಕ್ರಮಣವನ್ನು ಈ ಅಪವಿತ್ರ ಮೈತ್ರಿ ಮುರಿಯುವುದರಿಂದ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ನಗರದಲ್ಲಿ ಐಟಿ ಬೂಮ್ ಆದಮೇಲಂತೂ ಸಾಮಾನ್ಯ ಜನರು ನಿವೇಶನ ಖರೀದಿಸಿ ಮನೆ ಕಟ್ಟುವುದೇ ನಿಜಕ್ಕೂ ಸವಾಲಾಗಿದೆ. ಸರ್ಕಾರಿ ಜಮೀನು ಕೆಜಿಎಪ್ ಚಿನ್ನದ ಗಣಿಗಿಂತ ಹೆಚ್ಚಿನ ಮೌಲ್ಯದ್ದಾಗಿದೆ. ನ್ಯಾಯಾಂಗದ ಮೇಲುಸ್ತುವಾರಿಯಲ್ಲಿ ನಡೆಯುವ ತನಿಖೆಗೆ ಬಿಟ್ಟು ಉಳಿದ ಸರ್ಕಾರಿ ತನಿಖಾ ಇಲಾಖೆಗಳ ಮೇಲಿನ ನಂಬಿಕೆಯೇ ಇಲ್ಲದಂತಾಗಿದೆ.”
– ಪ್ರಥ್ವಿರೆಡ್ಡಿ, ರಾಜ್ಯ ಸಂಚಾಲಕರು, ಆಮ್ ಆದ್ಮಿ ಪಕ್ಷ
ಬಿಡಿಎ ವ್ಯಾಪ್ತಿಯಲ್ಲಿ 2,337 ಎಕರೆ ಖಾಲಿ ಜಾಗ ಪತ್ತೆ….!
ಐತೀರ್ಪು ರಚಿಸಿದ ಹಾಗೂ ರಚಿಸದ ಪ್ರಕರಣದಲ್ಲಿ ವಿವಾದಿತ ಹಾಗೂ ವಿವಾದಿತವಲ್ಲದ ಒಟ್ಟು 2,337.18 ಎಕರೆ ಸಗಟು ಖಾಲಿ ಭೂಮಿಯಿದ್ದು, ಅವುಗಳಲ್ಲಿ ಎಷ್ಟು ಜಮೀನನ್ನು ಸೈಟ್ ಗಳಾಗಿ ಅಲಾಟ್ ಆಗಿವೆ? ಎಷ್ಟು ಜಾಗದಲ್ಲಿ ಬಡಾವಣೆ ನಿರ್ಮಾಣವಾಗಿದೆ? ವಿವಾದಿತ ಭೂಮಿಯನ್ನು ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಬಹುದಾದ ಪ್ರಕರಣಗಳು, ಮರುವಶಕ್ಕೆ ಪಡೆಯಬಹುದಾದ ಜಮೀನುಗಳೆಷ್ಟು? ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ.
ಬಿಡಿಎ ನಿರ್ಮಿಸಿದ ಸಿಎ, ಪಾರ್ಕ್ ವಿಸ್ತೀರ್ಣ ಏನಕ್ಕೂ ಸಾಲದು :
ಬಿಡಿಎ 11,504 ಎಕರೆ ಪ್ರದೇಶದಲ್ಲಿ ಬಡಾವಣೆನ್ನೇನೊ ನಿರ್ಮಿಸಿತು, ಆದರೆ ಆ ಪ್ರದೇಶದಲ್ಲಿ ನಾಗರೀಕ ಸೌಲಭ್ಯಕ್ಕಾಗಿ ಮೀಸಲಿಟ್ಟ ಸಿಎ ನಿವೇಶನ ಕೇವಲ 604.25 ಎಕರೆ ಮಾತ್ರ. ಅದೇ ರೀತಿ ಉದ್ಯಾನವನಗಳಿಗಾಗಿ 1,034.35 ಎಕರೆ ವಿಸ್ತೀರ್ಣದ ಜಾಗವನ್ನು ಮಾತ್ರ ಮೀಸಲಿಟ್ಟಿರುವುದು ಲ್ಯಾಂಡ್ ಆಡಿಟ್ ರಿಪೋರ್ಟ್ ನಿಂದ ಬಹಿರಂಗವಾಗಿದೆ.
ಬಿಡಿಎ ತನ್ನ ಹಳೆತಪ್ಪುಗಳನ್ನು ಸರಿಪಡಿಸಲು ಸೂಕ್ತ ಕಾಲ :
ಹಲವು ವರ್ಷಗಳಿಂದ ಬಿಡಿಎ ಬಳಿ ಎಷ್ಟು ಭೂಮಿಯಿದೆ? ಅವುಗಳಲ್ಲಿ ಎಷ್ಟು ಬಳಕೆಯಾಗಿದೆ? ಎಷ್ಟು ಸೈಟ್ ಗಳು ಅಧಿಕೃತವಾಗಿದೆ? ಎಷ್ಟು ನಿವೇಶನಗಳು ಅನಧಿಕೃತವಾಗಿವೆ? ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿದ ಜಾಗವೆಷ್ಟು? ಅವುಗಳ ಪೈಕಿ ಎಷ್ಟು ಎಕರೆ ಭೂಮಿಯನ್ನು ಅಂತಿಮವಾಗಿ ಬಿಡಿಎ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ? ಅಂತಿಮ ಅಧಿಸೂಚನೆ ಹೊರಡಿಸಿ ಐತೀರ್ಪು ನೀಡಿರುವ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಎಷ್ಟು ಜಮೀನಿನಲ್ಲಿ ಅನಧಿಕೃತ ಕಟ್ಟಡಗಳನ್ನು ಕಟ್ಟಲಾಗಿದೆ? ಎಂಬಿತ್ಯಾದಿ ಹಲವು ಪ್ರಶ್ನೆಗಳಿಗೆ ಬಿಡಿಎ ಬಳಿ ಉತ್ತರವಿರಲಿಲ್ಲ.
ಆದರೆ ಈಗ ಲ್ಯಾಂಡ್ ಆಡಿಟ್ ರಿಪೋರ್ಟ್ ಕೈಗೆ ಸೇರುತ್ತಿದ್ದಂತೆ ಬಿಡಿಎ ತನ್ನಲ್ಲಿನ ಜಮೀನಿನ ಲಭ್ಯತೆ, ಒತ್ತುವರಿ ವಿಸ್ತೀರ್ಣ ಮತ್ತಿತರ ಮಾಹಿತಿಗಳನ್ನು ಪಡೆದುಕೊಂಡು ಅವುಗಳನ್ನು ಪುನಃ ಸ್ವಾಧೀನಕ್ಕೆ ತೆಗೆದುಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುನ್ನಡಿಯಿಟ್ಟಿದೆ. 64 ಬಡಾವಣೆ ನಿರ್ಮಾಣಕ್ಕಾಗಿ, ಸೂಕ್ತ ರೀತಿಯಲ್ಲಿ ಕಂದಾಯ ಭೂಮಿ, ನಿವೇಶನಗಳನ್ನು ಕೈಬಿಟ್ಟು ಆನಂತರ ಅಂತಿಮ ಅಧಿಸೂಚನೆ ಹೊರಡಿಸಿದ್ದರೆ, ಬಹುಶಃ ಲಕ್ಷಾಂತರ ಜನರು ತಮ್ಮ ಸ್ವಂತ ಭೂಮಿ, ನಿವೇಶನದಲ್ಲಿ ಮನೆ ಹೊಂದಿದರೂ ಅದರ ಮೇಲೆ ಬಿಡಿಎ ಅಧಿಸೂಚಿತ ಪ್ರದೇಶ ಎಂಬ ಲೇಬೆಲ್ ಇರುವ ಪರಿಸ್ಥಿತಿ ಬರುತ್ತಿರಲಿಲ್ಲ. ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಇಂದು ಲಕ್ಷಾಂತರ ಭೂಮಾಲೀಕರು ತೊಂದರೆಗೆ ಒಳಗಾಗಿದ್ದಾರೆ. ಆ ತಪ್ಪನ್ನು ಲ್ಯಾಂಡ್ ಆಡಿಟ್ ಮೂಲಕ ಹೊರಬಂದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ತಪ್ಪು ಸರಿಪಡಿಸುವ ಕೆಲಸವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾಡಬೇಕಿದೆ ಎಂದು ಪ್ರಜ್ಞ ನಾಗರೀಕರ ಅಭಿಪ್ರಾಯವಾಗಿದೆ.