ಬೆಂಗಳೂರು ( www.bengaluruwire.com ) : ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದ ಹಿನ್ನಲೆಯಲ್ಲಿ ಅನ್ ಲಾಕ್ 3.0 ನಲ್ಲಿ ಇಂದಿನಿಂದ ಸಾರಿಗೆ ಸಂಚಾರಕ್ಕೆ ಸಂಪೂರ್ಣ ಅವಕಾಶ ಹಿನ್ನೆಲೆಯಲ್ಲಿ ಕೆಎಸ್ಆರ್ ಟಿಸಿ, ಬಿಎಂಟಿಸಿ ಹಾಗೂ ಮೆಟ್ರೋ ಮತ್ತು ಖಾಸಗಿ ಬಸ್ಸುಗಳ ಪೂರ್ಣ ಕಾರ್ಯಾಚರಣೆ ನಡೆಸಿದವು.
ಸೋಮವಾರದಿಂದ 100% ರಷ್ಟು ಕೆಲಸ ಕಾರ್ಯಗಳಿಗೆ ಸರ್ಕಾರ ಅವಕಾಶ ನೀಡಿದೆ. ಹಾಗಾಗಿ ಹೆಚ್ಚಿನ ಪ್ರಯಾಣಿಕರು ಬಿಎಂಟಿಸಿ ಬಸ್ಸಿನಲ್ಲಿ ಓಡಾಡುವ ಸಾಧ್ಯತೆ ಹಿನ್ನೆಲೆಯಲ್ಲಿ 5,000 ಬಿಎಂಟಿಸಿ ಬಸ್ ಗಳು ಕಾರ್ಯಾಚರಣೆ ನಡಸುತ್ತಿದೆ. ಅನ್ಲಾಕ್ 2.0 ನಲ್ಲಿ ಬಿಎಂಟಿಸಿಯ 3000 ಸಾವಿರ ಬಸ್ಸುಗಳು ಮಾತ್ರ ಕಾರ್ಯಾಚರಣೆ ಕೈಗೊಂಡಿತ್ತು.
ಅನ್ ಲಾಕ್ 3.0 ರಲ್ಲಿ ಪ್ರಯಾಣಿಕರು ಸೀಟ್ ನಲ್ಲಿ ಮಾತ್ರ ಕುಳಿತು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಬಸ್ ನಲ್ಲಿ ನಿಂತುಕೊಂಡು ಪ್ರಯಾಣ ಮಾಡಲು ಅವಕಾಶ ಇಲ್ಲ. ಬೆಂಗಳೂರಿನಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶವಿಲ್ಲ. ರಾತ್ರಿ 9 ಗಂಟೆಯವರೆಗೆ ಮಾತ್ರ ಬಿಎಂಟಿಸಿ ಬಸ್ ಗಳು ಕಾರ್ಯಾಚರಣೆ ಮಾಡಲಿವೆ. ನೈಟ್ ಕರ್ಫ್ಯೂ ಕಾರಣದಿಂದ ರಾತ್ರಿ ಪಾಳಿಯ ಬಸ್ ಓಡಾಟವಿರುವುದಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರು ಮತ್ತು ಚಾಲಕರು, ನಿರ್ವಾಹಕರಿಗೆ ಮಾಸ್ಕ್ ಕಡ್ಡಾಯ. ಕೋವಿಡ್ ರೂಲ್ಸ್ ಪಾಲನೆ ಮಾಡದ ಪ್ರಯಾಣಿಕರಿಗೆ ಬಸ್ ನಿಲ್ದಾಣಗಳಲ್ಲಿ ಅಧಿಕಾರಿಗಳು ದಂಡ ಹಾಕುವ ಕಾರ್ಯದಲ್ಲಿ ತೊಡಗಿದ್ದರು.
ಇಂದಿನಿಂದ ಪೂರ್ಣ ಪ್ರಯಾಣದಲ್ಲಿ ಕಂಪನಿ, ಕಾರ್ಖಾನೆ ಪ್ರಾರಂಭವಾಗಿತ್ತು. ಹೀಗಾಗಿ ಮೆಜೆಸ್ಟಿಕ್ ನತ್ತ ನೂರಾರು ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ಸುಗಳು ಬಂದು ಹೋಗುತ್ತಿದ್ದವು.
ಪ್ರಯಾಣಿಕರನ್ನು ನಿಲ್ಲಿಸಿಕೊಂಡು ಕರೆದುಕೊಂಡು ಹೋಗುವಂತೆ ಇಲ್ಲ. ಆದ್ದರಿಂದ ಬಿಎಂಟಿಸಿ ಸಾರಥಿ ವಾಹನದಲ್ಲಿದ್ದ ಸಾರಿಗೆ ಇಲಾಖೆ ಅಧಿಕಾರಿಗಳು ಸೈರನ್ ನಲ್ಲಿ ಮಾಹಿತಿ ನೀಡುತ್ತಿದ್ದರು. ಬಿಎಂಟಿಸಿ ಸೆಕ್ಯುರಿಟಿ ಮತ್ತು ಅಧಿಕಾರಿಗಳು
ಪ್ರತಿ ಬಿಎಂಟಿಸಿ ಬಸ್ ಗಳನ್ನು ಹತ್ತಿ ಡ್ರೈವರ್ ಮತ್ತು ಕಂಡಕ್ಟರ್ ಗಳಿಗೆ ಮಾಹಿತಿ ನೀಡಿತ್ತಿದ್ದರು. ಬಸ್ಸಿನ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿರುವ ಬಸ್ ಗಳನ್ನು ತಪಾಸಣೆ ಮಾಡುತ್ತಿದ್ದರು.
ಅನ್ ಲಾಕ್ 3.O ಜಾರಿ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮೂಲಕ ಸಾವಿರಾರು ಜನರು ರಾಜ್ಯದ ವಿವಿಧ ಮೂಲೆಗಳಿಂದ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಲವು ಮಂದಿ, ಕರೋನಾ ಸೋಂಕು ಹೆಚ್ಚಳವಾಗಿ ಲಾಕ್ ಡೌನ್ ಮಾಡಿದ್ದರಿಂದ ಬೆಂಗಳೂರು ಬಿಟ್ಟು ಊರುಗಳಿಗೆ ತೆರಳಿದ್ದ ಜನರು ವಾಪಸ್ ಬರುತ್ತಿದ್ದರು. ಆದ ಕಾರಣ ವಿವಿಧ ನಿಲ್ದಾಣದ ಆವರಣದಲ್ಲೆ ಕೊರೋನಾ ಟೆಸ್ಟ್ ಮಾಡಲಾಗುತ್ತಿತ್ತು. ಬಿಬಿಎಂಪಿ ಮಾರ್ಷಲ್ ಗಳು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದವರ ಮೇಲೆ ನಿಗಾ ಇರಿಸಿ ದಂಡ ವಿಧಿಸುತ್ತಿದ್ದರು.
ಬಿಎಂಟಿಸಿ ಟಿಕೇಟ್ ದರ 20% ರಷ್ಟು ಹೆಚ್ಚಳ ಪ್ರಸ್ತಾಪ:
ಇನ್ನು ಎರಡು ತಿಂಗಳ ಬಳಿಕ ರಾಜ್ಯ- ರಾಜಾಧಾನಿ ಸಹಜ ಸ್ಥಿತಿಗೆಮರಳುತ್ತಿದೆ ಎಂದು ಖುಷಿ ಪಡುವ ಹೊತ್ತಿಗೆ ಬಿಎಂಟಿಸಿ ನಿಗಮ ಪ್ರಯಾಣಿಕರಿಗೆ ಶಾಕ್ ನೀಡಿದೆ. ಈ ವಾರದಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮತ್ತೊಂದು ಪ್ರಸ್ತಾವನೆ ಸಲ್ಲಿಸಲಿದ್ದು, ಶೇ.20 ರಷ್ಟು ಟಿಕೆಟ್ ದರ ಹೆಚ್ಚಳ ಮಾಡುವಂತೆ ಕೋರಲಾಗಿದೆ.
ಈ ಬಗ್ಗೆ ಕಳೆದ ಜನವರಿಯಲ್ಲೂ ಇದೇ ರೀತಿಯಲ್ಲಿ ಟಿಕೆಟ್ ದರ ಪರಿಷ್ಜರಣೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಆದರೆ ಸರ್ಕಾರ ಅದಕ್ಕೆ ಒಪ್ಪಿಕೊಂಡಿರಲಿಲ್ಲ. ಆದ್ರೆ ಈ ವರ್ಷ ಭಾರಿ ನಷ್ಟದ ಹಿನ್ನಲೆಯಲ್ಲಿ ಮತ್ತೆ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನ್ ಲಾಕ್ ಆದ ಬಳಿಕ ಎಲ್ಲಾ ಬಸ್ ಕಾರ್ಯಾಚರಣೆ ಯಿಂದ ನಿರ್ವಹಣೆ ವೆಚ್ಚ ಇನ್ನಷ್ಟು ಹೆಚ್ಚಳವಾಗಲಿದೆ. ಸದ್ಯದ ಪರಿಸ್ಥಿತಿಗೆ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಬಿಎಂಟಿಸಿ ಎಂಡಿ ಶಿಖಾ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಇಂದಿನಿಂದ ರಾಜ್ಯ- ರಾಜಾಧಾನಿ ಎಂದಿನ ಸ್ಥಿತಿಗೆ ತಲುಪುದತ್ತಿದೆ ಅನ್ನೋದು ಒಂದು ಕಡೆ ಖುಷಿಯಾದ್ರೆ ಮತ್ತೊಂಡೆದೆ ಟಿಕೆಟ್ ದರ ಹೆಚ್ಚಳವಾಗುತ್ತಿರುವುದು ಪ್ರಯಾಣಿರನ್ನು ಮತ್ತಷ್ಟು ತೊಂದರೆಗೆ ಸಿಲುಕಿಸಿದೆ.
ಕೆಎಸ್ ಆರ್ ಟಿಸಿಯ 4 ಸಾವಿರ ಬಸ್ ಕಾರ್ಯಾಚರಣೆ ಆರಂಭ :
ಇನ್ನು ರಾಜ್ಯದಲ್ಲಿ 4,000 ಕೆಎಸ್ಆರ್ ಟಿಸಿ ಬಸ್ಸುಗಳು ಸಂಚಾರ ಆರಂಭಿಸಿದ್ದು, ಬಿಎಂಟಿಸಿನಲ್ಲಿ ಅನ್ವಯಿಸಿದ ನಿಯಮಗಳನ್ನು ಇಲ್ಲೂ ಪಾಲಿಸಲಾಗುತ್ತಿದೆ. ಆದರೆ ಕೆಎಸ್ಆರ್ಟಿಸಿ ಗೆ ಯಾವುದೇ ಸಮಯದ ನಿರ್ಬಂಧವಿಲ್ಲ.
ರಾತ್ರಿ ವೇಳೆಯಲ್ಲು ಕೆಎಸ್ಆರ್ ಟಿಸಿ ಬಸ್ಸುಗಳ ಕಾರ್ಯಾಚರಣೆ ಮಾಡಲಿದೆ. ಅನ್ಲಾಕ್ 2.O ನಲ್ಲಿ ರಾಜ್ಯಾದ್ಯಂತ ಕೆಎಸ್ ಆರ್ ಟಿಸಿ ದಿನಂಪ್ರತಿ ಒಟ್ಟು 2,000 ರಿಂದ 2,500 ಸಾವಿರ ಬಸ್ಸುಗಳ ಕಾರ್ಯಾಚರಣೆ ನಡೆಸಿತ್ತು.
ರಾಜ್ಯದ ಮೊದಲ ದರ್ಜೆಯ ದೇವಾಲಯಗಳಲ್ಲಿ ಭಕ್ತರಿಗೆ ಅವಕಾಶ ನೀಡಿದೆ. ಹೀಗಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನಲೆಯಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಸಾರಿಗೆ ನಿಗಮ ಮಾಡಿಕೊಂಡಿದೆ.
ಇಂದಿನಿಂದ ವಾರದ ಎಲ್ಲ ದಿನವೂ ಮೆಟ್ರೊ ಸೇವೆ :
ಸೋಮವಾರದಿಂದ ವಾರದ ಎಲ್ಲಾ ದಿನವೂ ಮೆಟ್ರೋ ಸಂಚಾರ ಸೇವೆ ಒದಗಿಸಲಿದೆ. ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಮೆಟ್ರೋ ಸಂಚರಿಸಲಿದೆ. ಸೋಮವಾರ ದಿಂದ ಶುಕ್ರವಾರದ ವರೆಗೆ ಜನದಟ್ಟಣೆ ಸಮಯದಲ್ಲಿ 5 ನಿಮಿಷದಿಂದ, ಜನದಟ್ಟಣೆಯಿಲ್ಲದ ಸಮಯದಲ್ಲಿ15 ನಿಮಿಷ ಅಂತರದಲ್ಲಿ ಮೆಟ್ರೋ ಸೇವೆ ಆರಂಭವಾಯಿತು. ಶನಿವಾರ ಹಾಗೂ ಭಾನುವಾರ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಮೆಟ್ರೋ ಓಡಾಟ ನಡೆಸಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಹಸಿರು ಹಾಗೂ ನೇರಳೆ ಎರಡು ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕೋವಿಡ್ ಹಿನ್ನಲೆ ಮೆಟ್ರೋ ದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಅನ್ಲಾಕ್ 2.0 ನಲ್ಲಿ 50 ರಷ್ಟು ಮಾತ್ರ ಪ್ರಯಾಣಿಕರಿಗೆ ಮಾತ್ರ ಮೆಟ್ರೊ ನಿಗಮ ಅವಕಾಶ ನೀಡಿತ್ತು.