ಬೆಂಗಳೂರು ( www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರದಾದ್ಯಂತ ನೆಟ್ಟ ಗಿಡಗಳ ಪೈಕಿ ಮೂರು ವರ್ಷಗಳ ನಿರ್ವಹಣೆ ಮುಗಿದ ಶೇ.60 ಮರಗಳು ಮಾತ್ರ ಬದುಕಿದೆ. ಲಕ್ಷಾಂತರ ಮಂದಿಗೆ ಆಮ್ಲಜನಕದ ಮೂಲವಾಗಬೇಕಿದ್ದ ಬರೋಬ್ಬರಿ 1 ಲಕ್ಷ ಮರಗಳು ನಾಶವಾಗಿದೆ….!
ಕಳೆದ 6 ವರ್ಷಗಳಲ್ಲಿ ಮೂರು ವರ್ಷದ ನಿರ್ವಹಣೆ ಅವಧಿ ಮುಗಿದ 2,62,426 ಗಿಡಗಳ ಪೈಕಿ ಶೇ.60 ಗಿಡಗಳು ಮಾತ್ರ ಬದುಕಿದೆ ಎಂದು ಅರಣ್ಯ ಅಧಿಕಾರಿಗಳ ಹೇಳಿಕೆಯನ್ನು ಗಣನೆಗೆ ತೆಗೆದುಕೊಂಡರೆ, ಉಳಿದ ಶೇ.40 ರಷ್ಟು ಮರಗಳು ವಿವಿಧ ಕಾರಣಗಳಿಗೆ ಬದುಕಿಲ್ಲವಂತೆ. ಅಂದರೆ 1.04 ಲಕ್ಷ ಮರಗಳು ನಾಶವಾಗಿದೆ ಎಂದು ಹೇಳುತ್ತಿದ್ದಾರೆ.
ನಗರದಲ್ಲಿ 2015-16 ರಿಂದ 202-21 ರ ಆರು ವರ್ಷದಲ್ಲಿ (2018-19 ಹೊರತುಪಡಿಸಿ) ಬಿಬಿಎಂಪಿ ಅರಣ್ಯ ವಿಭಾಗದಿಂದ ವಿವಿಧ ಜಾತಿಯ ಒಟ್ಟು 4.81 ಲಕ್ಷ ಗಿಡಗಳನ್ನು ನೆಡಲಾಗಿದೆ. ಇಷ್ಟು ಗಿಡ ನೆಡಲು ಅರಣ್ಯ ವಿಭಾಗಕ್ಕೆ ಅಂದಾಜು 26.50 ಕೋಟಿ ರೂ.ಗಳು ಕರ್ಚಾಗುತ್ತೆ. ಆ ಪೈಕಿ ಮೂರು ವರ್ಷದ ವೆಚ್ಚದ ಮಾಹಿತಿಯನ್ನು ಮಾತ್ರ ಬಿಬಿಎಂಪಿ ಅಧಿಕಾರಿಗಳು ನೀಡಿದ್ದಾರೆ. ಗಿಡ ನೆಡುವಿಕೆ ಹಾಗೂ ನಿರ್ವಹಣೆಗೆ ಬರೋಬ್ಬರಿ 15.5 ಕೋಟಿ ರೂಪಾಯಿ ಹಣವನ್ನು ಅರಣ್ಯ ವಿಭಾಗ ಕರ್ಚು ಮಾಡಿದ್ದಾಗಿ ಅಧಿಕೃತ ದಾಖಲೆಗಳು ಹೇಳುತ್ತಿದೆ. 2020-21 ನೇ ಸಾಲಿನ ಕಾಮಗಾರಿಗೆ ಇನ್ನೂ ಬಿಲ್ ಪಾವತಿಸಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಪ್ರತಿ ಗಿಡ ನೆಟ್ಟು 3 ವರ್ಷ ನಿರ್ವಹಣೆಗೆ 750 ರೂ. ಪಾವತಿ..!
ಬಿಬಿಎಂಪಿ ವ್ಯಾಪ್ತಿಯಲ್ಲಿ ಗಿಡವನ್ನು ನಿಗಧಿತ ಪ್ರಮಾಣದ ಗುಂಡಿ ತೋಡಿ, ಬಿದಿರಿನ ಬೇಲಿಯೊಂದಿಗೆ ನೆಟ್ಟು, ನಿಯಮಿತವಾಗಿ ನೀರು, ಗೊಬ್ಬರ ಹಾಕಿ ಬೆಳಸಿ ನಿರ್ವಹಣೆ ಮಾಡಲು ಪ್ರತಿ ಗಿಡಕ್ಕೆ 650 ರೂ. ಹಾಗೂ ಎರಡು ವರ್ಷಗಳ ನಿರ್ವಹಣೆಗೆ 100 ರೂ. ಹಣ ಸೇರಿದರೆ ಪ್ರತಿ ಗಿಡಕ್ಕೆ 750 ರೂ.ಗಳನ್ನು ಬಿಬಿಎಂಪಿ ಅರಣ್ಯ ವಿಭಾಗ ಗುತ್ತಿಗೆದಾರರಿಗೆ ನೀಡುತ್ತಿದೆ.
ಇನ್ನೊಂದೆಡೆ ಹೈಕೋರ್ಟ್ ಬೆಂಗಳೂರಿನ ನಗರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಕಾರಣಕ್ಕೆ ನಿಂತಿದ್ದ ಮರಗಣತಿ ಕಾರ್ಯವನ್ನು ತೀವ್ರಗೊಳಿಸುವಂತೆ ಕಿವಿ ಹಿಂಡಿದೆ. ಏಪ್ರಿಲ್ 2019 ರಲ್ಲೇ ಬೆಂಗಳೂರು ಎನ್ವಿರಾನ್ ಮೆಂಟ್ ಟ್ರಸ್ಟ್ ಮತ್ತು ದತ್ತಾತ್ರೇಯ ದೇವರೆ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ, ರಾಜ್ಯದಲ್ಲಿ 1976ರಲ್ಲೇ ಕರ್ನಾಟಕ ಮರ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿದೆ.
ಆದರೆ ನಾಲ್ಕು ದಶಕವಾದರೂ ಮರಗಣತಿ ಆಗದ ಬಗ್ಗೆ ಪಾಲಿಕೆ ಹಾಗೂ ಜಿಲ್ಲಾಡಳಿತದ ಕಿವಿ ಹಿಂಡಿತ್ತು. ಈತನಕ ನಗರ ಜಿಲ್ಲೆಯಲ್ಲಿ 71 ಸಾವಿರ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 18,000 ಮರಗಳನ್ನಷ್ಟೆ ಗಣತಿ ಮಾಡಲಾಗಿದೆ.
“ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ಗಿಡಗಳ ನಿರ್ವಹಣೆಗೆ ಗುತ್ತಿಗೆದಾರರು ನಿರಂತರವಾಗಿ ನಿಗಾವಹಿಸಲು ಆಳುಗಳನ್ನು ಬಿಟ್ಟಿರುತ್ತಾರೆ. ಪಾಲಿಕೆ ಸರಹದ್ದಿನ ಒಳಗೆ ಶೇ.40 ರಷ್ಟು ಗಿಡಗಳು ಮೂರು ವರ್ಷದ ನಿರ್ವಹಣೆ ನಂತರ ನಗರದಲ್ಲಿನ ವೇಗದ ಅಭಿವೃದ್ಧಿ ಕೆಲಸಗಳು, ರಸ್ತೆ ಅಗಲೀಕರಣ ಮೊದಲಾದ ಹಲವು ಕಾರಣಗಳಿಗೆ ನಾಶವಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ ಮರಗಣತಿ ನಡೆಸಲು ಮರ ವಿಙ್ಞನ ಮತ್ತು ತಾಂತ್ರಿಕ ಸಂಸ್ಥೆ ಜೊತೆ 3 ವರ್ಷಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದಿನ ಡಿಸೆಂಬರ್ ಒಳಗೆ ಮರಗಣತಿ ಕಾರ್ಯ ಮುಗಿಯಲಿದೆ. ಕೋವಿಡ್ ಕಾರಣಕ್ಕೆ ಮರ ಗಣತಿ ಕಾರ್ಯ ನಿಂತಿತ್ತು. ಆದರೂ ನಮ್ಮ ಅರಣ್ಯಾಧಿಕಾರಿಗಳು 18 ಸಾವಿರ ಮರಗಳ ಗಣತಿ ಕೆಲಸ ಮುಗಿಸಿದ್ದಾರೆ.”
– ರಂಗನಾಥ್, ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ
ಬೆಂಗಳೂರಿನ ತೆರಿಗೆದಾರರ ಪೈಸೆ ಪೈಸೆಗೂ ಲೆಕ್ಕ ಇಡಬೇಕಾದ ಉತ್ತರದಾಯಿತ್ವ ಇದ್ದರೂ ಅರಣ್ಯ ವಿಭಾಗದ ಅಧಿಕಾರಿಗಳು ಮಾತ್ರ ಇವುಗಳಿಗೆ ಸೂಕ್ತ ಲೆಕ್ಕ- ದಾಖಲೆಗಳನ್ನು ವಿಭಾಗ ಇಟ್ಟಂತಿಲ್ಲ. ಪಾಲಿಕೆ ವೆಬ್ ಸೈಟ್ ನಲ್ಲಿ ಅರ್ಧಂಬರ್ಧ ಮಾಹಿತಿಯನ್ನು ಜನರ ಕಣ್ಣೊರೆಸಲು ಹಾಕಿದ್ದಾರೆ.
ಸಸಿಗಳನ್ನು ಹಾಕುವಾಗ, ನಿರ್ವಹಣೆ ಮಾಡುವಾಗ ಗುತ್ತಿಗೆ ಕಾಮಗಾರಿಗಳ ಷರತ್ತಿನಲ್ಲಿ ಹಾಕಿದ ಬಹುತೇಕ ಕಂಡೀಷನ್ ಗಳನ್ನು ಗುತ್ತಿಗೆದಾರರು ಪಾಲಿಸದೆ ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ. ಒಂದೊಮ್ಮೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆ ನಿಯಮಗಳನ್ನು ಪೂರ್ಣವಾಗಿ ಪಾಲನೆ ಮಾಡಿದ್ದರೆ ನಗರದಲ್ಲಿ ಕಳೆದ ಮೂರು ವರ್ಷದಲ್ಲಿ ನೆಟ್ಟ ಗಿಡಗಳ ಪೈಕಿ ಅವುಗಳ ಬದುಕುಳಿಯುವ ಪ್ರಮಾಣ ಶೇ.60 ರಷ್ಟು ಕುಸಿಯುತ್ತಿರಲಿಲ್ಲ.
ಪರಿಸರ ಕಾರ್ಯಕರ್ತರು, ಪರಿಸರ ವಿಙ್ಞನಿಗಳ ಆಕ್ರೋಶ
ಬಿಬಿಎಂಪಿ ಅರಣ್ಯ ಅಧಿಕಾರಿಗಳು ಹಾಗೂ ಅರಣ್ಯ ಗಿಡ ನೆಡುವ ಗುತ್ತಿಗೆದಾರರ ಅಪವಿತ್ರ ಮೈತ್ರಿಯಿಂದ ನಗರದ ಪರಿಸರ ಹದಗೆಡುತ್ತಿದೆ ಎಂದು ಪರಿಸರ ತಙ್ಞರು, ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪಾಲಿಕೆ ಅರಣ್ಯ ವಿಭಾಗ ನೆಟ್ಟ ಗಿಡಗಳ ಪೈಕಿ ಶೇ.60 ರಷ್ಟು ಮರಗಿಡಗಳು ಮಾತ್ರ ಬದುಕುಳಿದಿರುವುದು ನಿಜಕ್ಕೂ ಆತಂಕಕಾರಿ ವಿಚಾರ. ವಾಸ್ತವವಾಗಿ ಯಾವ ಏರಿಯಾದಲ್ಲಿ? ಯಾವ ಜಾತಿಯ? ಎಷ್ಟು ಗಿಡ ನೆಡಲಾಗಿದೆ? ಎಷ್ಟು ಗಿಡಗಳು ಬದುಕುಳಿದಿದೆ? ಎಂಬ ಬಗ್ಗೆ ನಿಖರ ಮಾಹಿತಿಯನ್ನು ಬಿಬಿಎಂಪಿ ತನ್ನ ವೆಬ್ ಸೈಟ್ ನಲ್ಲಿ ಕಾಲ ಕಾಲಕ್ಕೆ ಅಪಲೋಡ್ ಮಾಡಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಮರಗಣತಿ ವೇಗವಾಗಿ ಮುಗಿಸಿದರೆ ನಗರದ ಮರ ಗಿಡಗಳ ಸಂರಕ್ಷಣೆಗೆ, ಯೋಜನೆ ರೂಪಿಸಲು ಸಾಧ್ಯವಾಗಲಿದೆ.”
– ವಿಜಯ್ ನಿಶಾಂತ್, ಬೆಂಗಳೂರು ಜೀವ ವೈವಿಧ್ಯತಾ ನಿರ್ವಹಣಾ ಸಮಿತಿ ಸದಸ್ಯ
ನಗರದಲ್ಲಿ ವಾಸ್ತವದಲ್ಲಿ ಆಗುತ್ತಿರುವುದೇನು?
• ಬಿಬಿಎಂಪಿ ಗುತ್ತಿಗೆ ಷರತ್ತಿನಲ್ಲಿ ನಿಗಧಿಪಡಿಸಿದ ಪ್ರಮಾಣದಲ್ಲಿ ಸಸಿ ನೆಡಲು ಗುಂಡಿ ಆಳ, ವಿಸ್ತಾರ ಹಾಗೂ ವಿನ್ಯಾಸವನ್ನು ಕಾಯ್ದುಕೊಳ್ಳುತ್ತಿಲ್ಲ.
• ಎರಡು ಗಿಡಗಳ ಮಧ್ಯೆ ಅವೈಜ್ಞಾನಿಕ ವಾಗಿ ಗಿಡ ನೆಡುತ್ತಿರುವುದರಿಂದ ಆಸ್ತಿ ಮಾಲೀಕರು ಹಲವು ಬಾರಿ ತಮ್ಮ ಓಡಾಟಕ್ಕೆ ಅಡ್ಡಿಯಾಗುವ ಗಿಡವನ್ನು ತೆರವು ಮಾಡುತಿದ್ದಾರೆ.
• ಗಿಡ ವಾಲದಂತೆ ಎಲ್ಲೆಡೆ ಕಡ್ಡಿಯನ್ನು ಕಟ್ಟುವ ಕೆಲಸ ಆಗುತ್ತಿಲ್ಲ.
• ಒಂದು ಗಿಡ ನೆಟ್ಟ ಮೇಲೆ ಆ ಗಿಡಕ್ಕೆ ಕನಿಷ್ಠ 50 ಲೀಟರ್ ನೀರುಣಿಸಬೇಕು. ಬೇಸಿಗೆ ಸೇರಿದಂತೆ ವಿವಿಧ ಕಾಲದಲ್ಲಿ ನೀರು ಹಾಕುವ ಕೆಲಸ ಸರಿಯಾಗಿ ಆಗುತ್ತಿಲ್ಲ.
• ಸಸಿ ನೆಟ್ಟ ಮೇಲೆ ಕನಿಷ್ಠ ಎರಡು ಬಾರಿ ಗೊಬ್ಬರ ಹಾಕುವ ಪರಿಪಾಠ ಎಲ್ಲೂ ಹಾಕುವ ಪರಿಪಾಠವೇ ಇಲ್ಲ.
• ಗಿಡಗಳಿಗೆ ರಾಸಾಯನಿಕ ಗೊಬ್ಬರ ಹಾಕುವ ಮಾತು ದೂರನೇ ಆಗಿದೆ.
• ಎರಡು ವರ್ಷ ಗಿಡ ನಿರ್ವಹಣೆ ನಂತರ ಹಣ ನೀಡುವಾಗ ಅರಣ್ಯಾಧಿಕಾರಿಗಳು ಗುತ್ತಿಗೆದಾರಿಗೆ ಬಿಲ್ಲಿಂಗ್ ಮಾಡುವಾಗ ಸ್ಥಳ ಪರಿಶೀಲನೆ ನಡೆಸಿ ಮಾಡುತ್ತಿರುವುದೇ ಅನುಮಾನ.
” ಬೆಂಗಳೂರಿನಾದ್ಯಂತ 2017ರಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಐಐಎಸ್ ಸಿಯ ಪರಿಸರ ವಿಙ್ಞನ ವಿಭಾಗದಿಂದ ಮರಗಳ ಗಣತಿ ಕಾರ್ಯವನ್ನು ನಡೆಸಿದಾಗ ನಗರದಲ್ಲಿ ಒಟ್ಟು 14.78 ಲಕ್ಷ ಮರಗಳಿರುವುದು ಕಂಡು ಬಂದಿತ್ತು. ಇದೀಗ ಬಿಬಿಎಂಪಿಯು ತನ್ನ ವ್ಯಾಪ್ತಿಯಲ್ಲಿ ಮರಗಣತಿ ಆರಂಭಿಸಿದ್ದರೂ ಈತನಕ ಶೇ.15ರಷ್ಟು ಪ್ರಗತಿ ಸಾಧಿಸಿಲ್ಲ. ಪ್ರತಿ ಮರದ ಗಣತಿಯ ಜಿಯೋಟ್ಯಾಗ್ ಮಾಹಿತಿಯನ್ನು ಪಾಲಿಕೆ ವೆಬ್ ಸೈಟ್ ಗೆ ಹಾಕಬೇಕು. ಬಿಬಿಎಂಪಿ ಮರ-ಗಿಡ ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುತ್ತಿಲ್ಲ. ಸ್ಥಳೀಯರನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಹಣ ಕರ್ಚು ಮಾಡಿದರೂ ಸೂಕ್ತ ನಿರ್ವಹಣೆ ಇಲ್ಲದೆ ಗಿಡಗಳು ಬೆಳವಣಿಗೆಯಾಗುತ್ತಿಲ್ಲ. ವಾರ್ಡ್ ಮಟ್ಟದಲ್ಲಿ 1.5 -2 ಹೆಕ್ಟೇರ್ ಕಿರು ಅರಣ್ಯ ಬೆಳೆಸಿದರೆ ನಗರದ ಪರಿಸರ ಸಮತೋಲನವಿರಲಿದೆ.”
– ಪ್ರೊ.ಟಿ.ವಿ.ರಾಮಚಂದ್ರ, ಪರಿಸರ ವಿಙ್ಞನಿ
ಪಟ್ಟಭದ್ರ ಹಿತಾಸಕ್ತಿಯ ಗುತ್ತಿಗೆದಾರರನ್ನು ಸಾಕುತ್ತಿರುವ ಅರಣ್ಯ ವಿಭಾಗ :
ಪ್ರತಿ ವರ್ಷವೂ ನಿರ್ದಿಷ್ಟ ಪ್ರಮಾಣದ ಗುತ್ತಿಗೆದಾರರೇ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಾಂಟ್ರಾಕ್ಟ್ ಗಳನ್ನು ಪಡೆಯುತ್ತಿದ್ದಾರೆ. ನಗರದಲ್ಲಿ ಕಸದ ಮಾಫಿಯಾಕ್ಕೆ ಕಾರಣವಾಗಿದ್ದ ಕಾಂಟ್ರಾಕ್ಟರ್ ಗಳೇ ದಶಕಗಳ ಕಾಲ ಬಿಬಿಎಂಪಿಯಲ್ಲಿ ಪಾರುಪತ್ಯ ಸಾಧಿಸಿದಂತೆ, ಅರಣ್ಯ ವಿಭಾಗದಲ್ಲೂ ಹೊರಗಿನಿಂದ ಹೊಸ ಗುತ್ತಿಗೆದಾರರು ಪಾಲಿಕೆ ಅರಣ್ಯ ವಿಭಾಗದ ಟೆಂಡರ್ ಪಡೆಯಲು ಆಗುತ್ತಿಲ್ಲ. ಆ ರೀತಿ ಗುತ್ತಿಗೆದಾರರು ಹಾಗೂ ಅರಣ್ಯಾಧಿಕಾರಿಗಳ ಒಳ ಒಪ್ಪಂದದಂತೆ ಟೆಂಡರ್ ಕಂಡೀಷನ್ ಗಳನ್ನು ಹಾಕಿ, ಹೊರಗಿನವರಿಗೆ ಪರೋಕ್ಷವಾಗಿ ಟೆಂಡರ್ ಪಡೆಯದಂತೆ ಮಾಡಲಾಗುತ್ತಿದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
“ಬಿಬಿಎಂಪಿ ಅರಣ್ಯ ವಿಭಾಗದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ? ಹಿಂದೆ ಗಿಡ ಬದುಕುಳಿಯುತ್ತಿದ್ದ ಪ್ರಮಾಣಕ್ಕೂ ಈಗಿನ ಪ್ರಮಾಣಕ್ಕೂ ಯಾವ ರೀತಿ ವ್ಯತ್ಯಾಸ ಕಂಡು ಬಂದಿದೆ? ಗಿಡ-ಮರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುವ ಸಂಬಂಧ ಅರಣ್ಯ ಇಲಾಖೆ ಕಾರ್ಯ ವೈಖರಿ ಬಗ್ಗೆ ಕೂಡಲೇ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಇಲಾಖೆಯಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಲು ಸೂಚಿಸುತ್ತೇನೆ.”
– ಗೌರವ್ ಗುಪ್ತಾ, ಮುಖ್ಯ ಆಯುಕ್ತರು, ಬಿಬಿಎಂಪಿ
48 ಕಾಮಗಾರಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಗುತ್ತಿಗೆ 7 ಕಾಂಟ್ರಾಕ್ಟರ್ ಗಳಿಗೆ :
ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ನೀಡಿದ ಅಧಿಕೃತ ಮಾಹಿತಿ ಪ್ರಕಾರ, 2015-16 ರಿಂದ 2019-20 ರ ಅವಧಿಯಲ್ಲಿ ಪಾಲಿಕೆಯ 8 ಜೋನ್ ಗಳಲ್ಲಿ 48 ಗುತ್ತಿಗೆ ಕಾಮಗಾರಿಗಳನ್ನು 20 ಜನ ಗುತ್ತಿಗೆದಾರರಿಗೆ ನೀಡಲಾಗಿದೆ. ಆದರೆ ಆ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ 28 ಕಾಮಗಾರಿ ಗುತ್ತಿಗೆಯನ್ನು ಅಧಿಕಾರಿಗಳ “ವಿಶೇಷ ಪ್ರೀತಿ” ಹಾಗೂ “ಕಾಳಜಿ” ಕಾರಣದಿಂದ ಕೇವಲ 7 ಜನ ಕಾಂಟ್ರಾಕ್ಟರ್ ಗಳಿಗೆ ಹಂಚಿಕೆಯಾಗಿದೆ.
ಒಂದಲ್ಲ ಒಂದು ವಲಯಗಳಲ್ಲಿ ಗಿಡಗಳನ್ನು ನೆಟ್ಟು- ನಿರ್ವಹಣೆ ಮಾಡಲು ಪದೇ ಪದೇ ಕಾಂಟ್ರಾಕ್ಟ್ ಪಡೆದ ಗುತ್ತಿಗೆದಾರರ ಹೆಸರು ಹಾಗೂ ಗುತ್ತಿಗೆ ಪಡೆದ ಸಂಖ್ಯೆಗಳ ವಿವರ ಹೀಗಿದೆ : ಸುರೇಶ್ – 6 ಗುತ್ತಿಗೆ ಕೆಲಸ ಪಡೆದುಕೊಂಡರೆ, ಶಿವಣ್ಣ 5 ಬಾರಿ, ಗಿರಿಜ ಮತ್ತು ಶಂಕರಪ್ಪ 4 ಬಾರಿ ಹಾಗೂ ನರೇಶ್, ವೆಂಕಟೇಶಪ್ಪ, ಸತೀಶ್ ಕುಮಾರ್ ತಲಾ 3 ರಂತೆ ಗುತ್ತಿಗೆ ಕೆಲಸಗಳನ್ನು ಅರಣ್ಯ ವಿಭಾಗದಲ್ಲಿ ತೆಗೆದುಕೊಂಡಿದ್ದಾರೆ.
ಒಟ್ಟಾರೆ ಅರಣ್ಯ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈ ಎಲ್ಲಾ ಪ್ರಕರಣಗಳಿಂದ ತಿಳಿದು ಬರುತ್ತಿದೆ. ಒಟ್ಟಾರೆ ಬಿಬಿಎಂಪಿ ಅರಣ್ಯ ಇಲಾಖೆಯ ಜಟ್ಟುಗಟ್ಟಿದ ಆಡಳಿತಕ್ಕೆ ಚುರುಕು ಮುಟ್ಟಿಸುವ ಹಾಗೂ ಭ್ರಷ್ಟಾಚಾರ ಗಳಿಗೆ ಶೀಘ್ರವೇ ಕಡಿವಾಣ ಹಾಕಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ.