ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಸೋಮವಾರ ಅಪರೂಪದಲ್ಲಿ ಅಪರೂಪದ ಅತಿಥಿಯೊಂದು ವೈಟ್ ಫೀಲ್ಡ್ ಅಪಾರ್ಟ್ ಮೆಂಟ್ ವೊಂದಕ್ಕೆ ಅಚಾನಕ್ಕಾಗಿ ಭೇಟಿಕೊಟ್ಟಿತ್ತು.
ನಗರದಲ್ಲಿ ನೂರಾರು ಜಾತಿಯ ಪಕ್ಷಿಗಳು ವಲಸೆ ಬಂದು ಹೋಗುತ್ತವೆ. ಕೆಲವೊಂದು ಇಲ್ಲೇ ಶಾಶ್ವತ ಆವಾಸ ಸ್ಥಾನಹೊಂದುತ್ತವೆ. ಆದರೆ ಅವುಗಳಲ್ಲಿ ಬಿಳಿ ರಣಹದ್ದು ಬಹಳ ಅಪರೂಪದ ಪಕ್ಷಿ.
ರಾಮನಗರದ ರಾಮದೇವರ ಬೆಟ್ಟದ ಬಳಿ ರಣಹದ್ದುಗಳ ಪಕ್ಷಿಧಾಮವಿದೆ. ಆ ಭಾಗದಲ್ಲಿ ಕಂಡುಬರುವ ಈ ರಣಹದ್ದು ಸೋಮವಾರ ವೈಟ್ ಫೀಲ್ಡ್ ಅಪಾರ್ಟ್ ಮೆಂಟ್ ಮನೆಯೊಂದರ ಬಾಲ್ಕನಿಗೆ ಹಾರುಬಂದು ಕುಳಿತಿತ್ತು. ಆ ಪಕ್ಷಿಯು ಸಾಮಾನ್ಯ ಹದ್ದು ಎಂದುಕೊಂಡು ಮನೆಯವರು ಬಿಬಿಎಂಪಿ ಅರಣ್ಯ ಘಟಕಕ್ಕೆ ಕರೆಮಾಡಿ ತಿಳಿಸಿದ್ದರು.
ಸ್ಥಳಕ್ಕೆ ಕೂಡಲೇ ಆಗಮಿಸಿದ ಪಾಲಿಕೆ ವನ್ಯಜೀವಿ ಕಾರ್ಯಕರ್ತ ರಾಜೇಶ್, ಬಹಳ ಬಳಲಿದ್ದ ಆ ರಣಹದ್ದನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವನ್ಯಜೀವಿ ಆಸ್ಪತ್ರೆಗೆ ಸ್ಥಳಾಂತರಿಸಿದರು.
ಈ ಬಗ್ಗೆ ಬೆಂಗಳೂರು ವೈರ್ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು, ” ಇಂಗ್ಲೀಷ್ ನಲ್ಲಿ ಈಜಿಪ್ಟಿಯನ್ ವಲ್ಚರ್ ಎನ್ನುವ ಈ ಬಿಳಿ ರಣಹದ್ದು 8 ವರ್ಷಗಳ ಹಿಂದೆ ಎಂ.ಜಿ.ರಸ್ತೆಯ ಯುಟಿಲಿಟಿ ಬಿಲ್ಡಿಂಗ್ ಮೇಲ್ಭಾಗದಲ್ಲಿ ಕಂಡುಬಂದಿತ್ತು. ಅದಾದ ಬಳಿಕ ಈಗಲೇ ಈ ಪಕ್ಷಿ ನೋಡಿದ್ದು. ಅಳಿವಿನಂಚಿನ ಈ ಪಕ್ಷಿ ಯ ಆವಾಸ ಸ್ಥಾನ ನಗರೀಕರಣದಿಂದಾಗಿ ನಾಶವಾಗಿದೆ. ನಗರದಲ್ಲಿ ಆದಷ್ಟು ಹಸಿರನ್ನು ಉಳಿಸಿ ಬೆಳಸುವ ಅಗತ್ಯವಿದೆ” ಎಂದು ಹೇಳುತ್ತಾರೆ.
ಒಂದೂವರೆಯಿಂದ ಎರಡು ತಿಂಗಳ ವಯಸ್ಸಿನ ಈ ಬಿಳಿ ರಣಹದ್ದು, ಆಚಾನಕ್ಕಾಗಿ ಗೂಡಿನಿಂದ ತಪ್ಪಿಸಿಕೊಂಡು ವೈಟ್ ಫೀಲ್ಡ್ ನ ಅಪಾರ್ಟ್ ಮೆಂಟ್ ವೊಂದರ ಮನೆಯ ಬಾಲ್ಕನಿಗೆ ಹಾರಿ ಬಂದಿರಬಹುದು. ಈ ಬಿಳಿ ರಣಹದ್ದುಗಳು ಪರಿಸರದ ಸ್ನೇಹಿ ಕೀಟನಿಯಂತ್ರಕಗಳಾಗಿವೆ ಎನ್ನುತ್ತಾರೆ ಅವರು.
ಅಷ್ಟಾಗಿ ಮನುಷ್ಯರ ಕಣ್ಣಿಗೆ ಗೋಚರವಾಗದು
ಸಾಮಾನ್ಯವಾಗಿ ಅತಿ ಎತ್ತರದಲ್ಲಿ ಗೂಡು ಕಟ್ಟುವ ಬಿಳಿ ರಣಹದ್ದು ಸಾಮಾನ್ಯವಾಗಿ ಎಲ್ಲರ ಕಣ್ಣಿಗೆ ಗೋಚರವಾಗದು. ಸತ್ತ ಪ್ರಾಣಿ, ಪಕ್ಷಿಗಳೇ ಈ ಹಕ್ಕಿಗಳಿಗೆ ಆಹಾರ. ಶಕ್ತಿಗಾಗಿ ಇವುಗಳ ಮೂಳೆಗಳನ್ನು ತಮ್ಮ ಹರಿತವಾದ ಮತ್ತು ಬಲಯುತ ಕೊಕ್ಕುಗಳಿಂದ ಕುಕ್ಕಿ ತಿನ್ನುತ್ತವೆ.
ದಿನಕ್ಕೆ 100- 120 ಕಿ.ಮೀ ಹಾರುವ ಸಾಮರ್ಥ್ಯ
ಆಹಾರವನ್ನು ಅರಿಸಿ ಪ್ರತಿದಿನ ಸರಾಸರಿ 100 ರಿಂದ 120 ಕಿಲೋ ಮೀಟರ್ ದೂರದ ತನಕ ಹಾರುವ ಸಾಮರ್ಥ್ಯ ಹೊಂದಿದೆ. ಈ ಬಿಳಿರಣಹದ್ದುಗಳು ದೇಶದ ಒಳಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಆಗಾಗ ವಲಸೆ ಹೋಗುತ್ತದೆ.
ದಕ್ಷಿಣ ಭಾರತದಲ್ಲಿ ಚಳಿ, ಮಳೆಗಾಲವಿದ್ದಾಗ ಉತ್ತರ ಭಾರತದತ್ತ, ಅಲ್ಲಿ ಚಳಿ- ಮಳೆ ಪ್ರಾರಂಭವಾದಾಗ ಇತ್ತ ಕಡೆ ವಲಸೆ ಹೋಗಿಬರುವ ರಣಹದ್ದುಗಳಿರುತ್ತವೆ. ರಾಮನಗರ ಸುತ್ತಮುತ್ತಲ ಪ್ರದೇಶದಲ್ಲಿಯೂ ಶಾಶ್ವತವಾಗಿಯೂ ನೆಲೆಸುವ ಪಕ್ಷಿಗಳಿವೆ ಎಂದು ಹೇಳುತ್ತಾರೆ ಪಕ್ಷಿ ತಙ್ಞರು.
ಬಿಳಿ ರಣಹದ್ಧು ಸಾಮಾನ್ಯವಾಗಿ 25 ರಿಂದ 30 ವರ್ಷದವರೆಗೂ ಬದುಕುತ್ತವೆ. ಇಂತಹ ಅಪರೂಪದ ಹಕ್ಕಿ- ಪಕ್ಷಿಗಳನ್ನು ಹಸಿರು ಪರಿಸರ ಕಾಪಾಡುವ ಮೂಲಕ ನಗರದ ಜನರು ರಕ್ಷಿಸಬಹುದು. ಇದು ಬೆಂಗಳೂರು ವೈರ್ ನ ಕಾಳಜಿ ಕೂಡ.