ಬೆಂಗಳೂರು : ಕೋವಿಡ್ 19 ಮಹಾಮಾರಿ ಮೊದಲ ಅಲೆ ಹಾಗೂ ಎರಡನೇ ಅಲೆಗೆ ಈತನಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಯ ಒಟ್ಟು 43ಕ್ಕೂ ಹೆಚ್ಚು ಅಧಿಕಾರಿ ಮತ್ತು ನೌಕರರು ಸಾವನ್ನಪ್ಪಿದ್ದಾರೆ.
ಆದರೆ ಈತನಕ ಕರೋನಾ ಸೋಂಕು ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮವಹಿಸಿ ದುಡಿದ ಸಿಬ್ಬಂದಿ ಮೃತಪಟ್ಟಿದ್ದಾರೆ. ಆದರೆ ಅವರ ಕುಟುಂಬಕ್ಕೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಪ್ಯಾಕೇಜ್ ಯೋಜನೆಯಡಿ ತಲಾ 30 ಲಕ್ಷ ರೂಪಾಯಿ ಹಣ ಇನ್ನೂ ತಲುಪಿಲ್ಲ.
ಈ ಕುರಿತಂತೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಪಾಲಿಕೆ ಮುಖ್ಯ ಆಯುಕ್ತರಾಗಿರುವ ಗೌರವಗುಪ್ತ ಅವರಿಗೆ ಮೇ 15ರ ಶನಿವಾರ ಪತ್ರ ಬರೆದು ಕೂಡಲೇ ಆರ್ಥಿಕ ಸೌಲಭ್ಯ ಮಂಜೂರು ಮಾಡುವಂತೆ ಒತ್ತಾಯಿಸಿದ್ದಾರೆ.
ಆರು ತಿಂಗಳಿಂದ ರಾಜ್ಯ ಆರೋಗ್ಯ ಇಲಾಖೆಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಪ್ಯಾಕೇಜ್ ಯೋಜನೆಯಡಿ ತಲಾ 30 ಲಕ್ಷ ರೂಪಾಯಿ ಹಣ ನೀಡುವಂತೆ ಕಡತವನ್ನು ಕಳುಹಿಸಿದ್ದರೂ ಈತನಕ ಒಂದು ಕುಟುಂಬಕ್ಕೂ ಆರ್ಥಿಕ ಸೌಲಭ್ಯ ಲಭಿಸಿಲ್ಲ.
ಪಾಲಿಕೆಯಿಂದಲೂ ಈ ಕುಟುಂಬದ ಸದಸ್ಯರಿಗೆ ಗಳಿಕೆ ರಜೆ, ಪಿಂಚಣಿ ಅಥವಾ ಅನುಕಂಪದ ಆಧಾರದ ಮೇಲೆ ಅವರ ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ಸಿಕ್ಕಿಲ್ಲ. ಹೀಗಾಗಿ ಬಿಬಿಎಂಪಿಯಲ್ಲಿ ಕೋವಿಡ್ ನಿಯಂತ್ರಣ ಕರ್ತವ್ಯದಲ್ಲಿರುವ ಉಳಿದ ಸಿಬ್ಬಂದಿ ಉತ್ಸಾಹ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪಾಲಿಕೆ ಮುಖ್ಯ ಆಯುಕ್ತರು ಹಾಗೂ ರಾಜ್ಯ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ.
– ಅಮೃತ್ ರಾಜ್, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ
ಇನ್ನು ಅದೇ ರೀತಿ ನಗರದ ಶುಚಿಮಿತ್ರರಾದ 15 ರಿಂದ 20 ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕರೋನಾ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಾರೆ. ಅವರಿಗೂ ಪಾಲಿಕೆಯಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂದು ಅವರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೂ ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಮೃತ್ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 1 ರಿಂದ ಮೇ 15 ರ ತನಕ ಈವರೆಗೆ ಪಾಲಿಕೆಯ 13ಕ್ಕೂ ಹೆಚ್ಚು ನೌಕರರು ಕೋವಿಡ್ ಸೋಂಕಿನಿಂದ ಮೃತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರನ್ನು ಬೆಂಗಳೂರು ವೈರ್ ಸಂಪರ್ಕಿಸಿದಾಗ, ಈ ವಿಷಯದ ಬಗ್ಗೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರೊಂದಿಗೆ ಮಾತನಾಡಿ ಪ್ರತಿಕ್ರಿಯಿಸುತ್ತೇನೆ ಎಂದಷ್ಟೆ ಹೇಳಿದರು.