ನವದೆಹಲಿ : ತೌಕ್ತೆ ಚಂಡ ಮಾರುತದಿಂದಾಗಿ ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ಮೂವರು ಮೀನುಗಾರರನ್ನು ರಾಜ್ಯದ ಭಾರತೀಯ ಕರಾವಳಿ ರಕ್ಷಣಾ ಪಡೆ (ಐಸಿಜಿ) ಯ ವಿಕ್ರಮ್ ನೌಕೆಯ ಸಹಾಯದಿಂದ ರಕ್ಷಣೆ ಮಾಡಲಾಗಿದೆ.
ಕೇರಳದ ಕರಾವಳಿಯಲ್ಲಿ ತೌಕ್ತೆ ಚಂಡಮಾರುತದಿಂದ ಕಣ್ಣೂರು ಮೂಲದ ಮೂವರು ಮೀನುಗಾರರು ಐಎಫ್ ಬಿ ಐಎನ್ ಡಿ ಕೆಎಲ್ 08 ಎಮ್ ಒ 2536 ಮೀನುಗಾರಿಕೆಯ ದೋಣಿಯ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಇದರಿಂದಾಗಿ ಮೂವರು ಮೀನುಗಾರರು ಸಮುದ್ರದ ಮಧ್ಯೆಯೇ ಸಿಕ್ಕಿಹಾಕಿಕೊಂಡಿದ್ದರು.
ಮೇ 14 ರಾತ್ರಿಯಿಂದ ವಿಕ್ರಮ್ ನೌಕೆಯಲ್ಲಿ ಐಸಿಜಿಯ ಪಡೆಯವರು ಹುಡುಕಾಟ ಮತ್ತು ರಕ್ಷಣಾ ಕಾರ್ಯ ಆರಂಭಿಸಿ ಮೂವರನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ ಎಂದು ಐಸಿಜಿಯ ಕಮಾಂಡರ್ ಡಿಐಜಿ ವೆಂಕಟೇಶ್ ಹೇಳಿದ್ದಾರೆ.
ಭಾರತೀಯ ಕರಾವಳಿ ಪಡೆಯ ರಕ್ಷಣೆಯಲ್ಲಿರುವ ಮೂವರು ಮೀನುಗಾರರ ಆರೋಗ್ಯವಾಗಿದ್ದು, ಅವರಿಗೆ ಆಹಾರ ನೀಡಲಾಗಿದೆ. ಸದ್ಯದಲ್ಲೆ ಅವರನ್ನು ಕೇರಳ ಮೀನುಗಾರಿಕೆ ಇಲಾಖೆ ಹಾಗೂ ಕೊಚ್ಚಿ ಕರಾವಳಿ ಭದ್ರತಾ ಪಡೆಯವರಿಗೆ ಹಸ್ತಾಂತರಿಸಲಾಗುತ್ತದೆ ಎಂದವರು ತಿಳಿಸಿದ್ದಾರೆ.
ತೌಕ್ತೆ ಚಂಡಮಾರುತ ಮತ್ತಷ್ಟು ತೀವ್ರವಾಗಲಿದೆ
ಅರಬ್ಬಿ ಸಮುದ್ರದಲ್ಲಿನ ಲಕ್ಷದ್ವೀಪದಲ್ಲಿ ಕೇಂದ್ರಿಕರಿಸಿದ್ದ ತೌಕ್ತೆ ಚಂಡಮಾರುತ ಮತ್ತಷ್ಟು ತೀವ್ರಗೊಂಡಿದ್ದು ಗುಜರಾತ್ ಕರಾವಳಿಯತ್ತ ಸಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಶನಿವಾರ ಬೆಳಿಗ್ಗೆ ಆಗ್ನೇಯ ಪೂರ್ವ ಮಧ್ಯ ಅರಬ್ಬಿ ಸಮುದ್ರದ ಮೇಲೆ ಅಪ್ಪಳಿಸಿರುವ ತೌಕ್ತೆ ಚಂಡಮಾರುತ ಗುಜರಾತ್ ಕರಾವಳಿಯತ್ತ ಗಂಟೆಗೆ 160 ಕಿ.ಮೀ ವೇಗದಲ್ಲಿ ಸಾಗುತ್ತಿದೆ ಎಂದು ಹೇಳಿದೆ.
ತೌಕ್ತೆ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳಲ್ಲಿದ್ದು ಅರಬ್ಬಿ ಸಮುದ್ರದ ಕರಾವಳಿ ತೀರಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಐಎಂಡಿ ಅಧಿಕಾರಿಗಳು ಹೇಳಿದ್ದಾರೆ.
ಈ ಸೈಕ್ಲೋನ್ ಮುಂದಿನ 12 ಗಂಟೆಗಳಲ್ಲಿ ಗುಜರಾತ್ ಕರಾವಳಿ ಅಪ್ಪಳಿಸುವ ಸಾಧ್ಯತೆ ಇದೆ. ಗಾಳಿಯ ವೇಗವನ್ನು ಅಂದಾಜಿಸಿದರೆ ಇದು ದುರ್ಬಲಗೊಳ್ಳುವ ಲಕ್ಷಣಗಳಿಲ್ಲ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜನೆ ಮಾಡಿದೆ.
ಸದ್ಯ ತೌಕ್ತೆ ಚಂಡಮಾರುತ ಲಕ್ಷದ್ವೀಪದ ಅಮಿನಿ ದೀವಿಯ ಉತ್ತರ- ವಾಯುವ್ಯ ಭಾಗದಿಂದ 190 ಕಿ.ಮೀ ದೂರದಲ್ಲಿದೆ. ಇನ್ನು ಆರು ಗಂಟೆಗಳಲ್ಲಿ ತೌಕ್ತೆ ಚಂಡಮಾರುತ ತೀವ್ರವಾಗಲಿದೆ. ಮುಂದಿನ 12 ಗಂಟೆಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಸೈಕ್ಲೋನ್ ಉತ್ತರ- ವಾಯುವ್ಯ ಭಾಗದತ್ತ ಸಾಗಿ ಗುಜರಾತ್ ಕರಾವಳಿ ಪೋರ್ ಬಂದರ್ ಹಾಗೂ ನಲಿಯಾವನ್ನು ಮೇ 18 ರಂದು ಹಾದು ಹೋಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.