ಬೆಂಗಳೂರು : ಬಿಬಿಎಂಪಿ ಅಂದ್ರೆನೇ ಬೃಹತ್ ಭ್ರಷ್ಟಾಚಾರ ಮಾಡುವ ಪಾಲಿಕೆ ಎಂಬಂತಾಗಿದೆ. ದೀಪಾವಳಿ ಹಬ್ಬದ ಕಸ ವಿಲೇವಾರಿಯಲ್ಲೂ ಹಣ ಲೂಟಿ ಮಾಡಿರೋ ಪ್ರಕರಣ ಇದೀಗ ಹೊಸದಾಗಿ ಸೇರ್ಪಡೆಯಾಗಿದೆ.
ಬಿಬಿಎಂಪಿ ಕೇಂದ್ರ ಕಚೇರಿಯಿಂದ ಕೂಗಳತೆ ದೂರದಲ್ಲಿರೋ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ (119), ಹಾಗೂ ಸುಂಕೇನಹಳ್ಳಿ ವಾರ್ಡ್ (142) ಗಳಲ್ಲಿ ದೀಪಾವಳಿ ಕಸ ವಿಲೇವಾರಿ ಬಿಲ್ಲಿಂಗ್ ವಿಚಾರದಲ್ಲಿ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬೆಂಗಳೂರು ವೈರ್ ಗೆ ಲಭಿಸಿರುವ ದಾಖಲೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ.
2019-20ನೇ ಆರ್ಥಿಕ ವರ್ಷದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 26 ಅಕ್ಟೋಬರ್ ನಿಂದ 31ರ ದಿನಾಂಕದ ವರೆಗೆ ಅಂದರೆ 6 ದಿನಗಳಲ್ಲಿ 119 ಹಾಗೂ 142 ವಾರ್ಡ್ ಗಳಲ್ಲಿ ಉತ್ಪತ್ತಿಯಾದ ದೀಪಾವಳಿ ಹಬ್ಬದ ಕಸವನ್ನು ವಿಲೇವಾರಿ ಮಾಡಲು ಪರಿಶುದ್ಧ ವೆಂಚರ್ಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು.
ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿದ್ದ ಪರಿಶುದ್ಧ ಸಂಸ್ಥೆಗೆ ಕೇವಲ ಆ 6 ದಿನಗಳು ಮಾತ್ರ 119 ವಾರ್ಡ್ ನಲ್ಲಿ ತಾತ್ಕಾಲಿಕವಾಗಿ ಹೆಚ್ಚುವರಿ ಕಾರ್ಮಿಕರು ಹಾಗೂ ವಾಹನಗಳನ್ನು ನಿಯೋಜಿಸಿಕೊಂಡು ತ್ಯಾಜ್ಯ ವಿಲೇವಾರಿ ಮಾಡಿದ್ದಕ್ಕೆ ಪಾಲಿಕೆ ದಕ್ಷಿಣ ವಲಯದ ಹಣಕಾಸು ಉಪನಿಯಂತ್ರಕರು ಬರೋಬ್ಬರಿ 15.55 ಲಕ್ಷ ರೂ. ಬಿಲ್ ಪಾವತಿಸಿದ್ದಾರೆ. 142 ವಾರ್ಡ್ ನಲ್ಲಿ ಇದೇ ಅವಧಿಗೆ ಒಟ್ಟಾರೆ 11.32 ಲಕ್ಷ ರೂ. ಬಿಲ್ ಪಾವತಿ ಮಾಡಲಾಗಿದೆ.
ಹೀಗೆ ಬಿಲ್ ಪಾವತಿ ಮಾಡುವ ಮುನ್ನ ಧರ್ಮರಾಯ ಸ್ವಾಮಿ ವಾರ್ಡ್ ನಲ್ಲಿ ಆ 6 ದಿನಗಳಲ್ಲಿ ಎಷ್ಟು ಕಸ ಸಂಗ್ರಹ ಮಾಡಲಾಗಿದೆ? ಇದಕ್ಕಾಗಿ ವಾಹನ ನೋಂದಣಿ ಸಂಖ್ಯೆಯೊಂದಿಗೆ ಎಷ್ಟು ಆಟೋ ಟಿಪ್ಪರ್, ಕಾಂಪ್ಯಾಕ್ಟರ್ ಗಳನ್ನು ಬಳಸಲಾಗಿದೆ? ಎಷ್ಟು ಹೆಚ್ಚುವರಿ ಪೌರ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ? ಕಸವನ್ನು ಎಲ್ಲಿಗೆ ಕೊಂಡೊಯ್ದು ವಿಲೇವಾರಿ ಮಾಡಲಾಗಿದೆ? ಎಂಬಿತ್ಯಾದಿ ಮಾಹಿತಿಯನ್ನು ಕಸದ ಗುತ್ತಿಗೆ ಪಡೆದ ಪರಿಶುದ್ಧ್ ವೆಂಚರ್ಸ್ ತನ್ನ ಬಿಲ್ಲಿಂಗ್ ನಲ್ಲಿ ನಮೂದಿಸಿಲ್ಲ.
ಮಾಸಿಕ ಬಿಲ್ ಮಾಡುವಾಗ ಪ್ರತಿ ಕಸದ ಗುತ್ತಿಗೆದಾರರು ತಮ್ಮ ಕಸದ ವಾಹನಗಳ ಗಾಡಿ ನಂಬರ್ ಜೊತೆಗೆ ಅವುಗಳ ಆರ್ ಎಫ್ ಐಡಿ ಆಧಾರಿತ ಅಟೆಂಡೆನ್ಸ್ ಕಾಪಿ, ಕಾರ್ಮಿಕರ ಪಿಎಫ್- ಇಎಸ್ ಐ ಮಾಹಿತಿ, ವಾಹನಗಳ ಕಾರ್ಯನಿರ್ವಹಣಾ ವರದಿಯನ್ನು ಲಗತ್ತಿಸುತ್ತಾರೆ. ದೀಪಾವಳಿ ಹಬ್ಬದ ಕಸ ವಿಲೇವಾರಿ ಬಿಲ್ ಪಾವತಿ ವಿಚಾರದಲ್ಲಿ ಈ ಎಲ್ಲ ಪ್ರಕ್ರಿಯೆಗಳನ್ನು ಗಾಳಿಗೆ ತೂರಿರುವುದು ಕಂಡುಬರುತ್ತಿದೆ.
ಇದರ ಬಗ್ಗೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಲಿ, ಸೂಪರಿಟೆಂಡೆಂಟ್ ಎಂಜಿನಿಯರ್ ಆಗಲಿ ಆಕ್ಷೇಪಿಸಿಲ್ಲ. ಹಣ ಪಾವತಿಸುವ ಪಾಲಿಕೆ ದಕ್ಷಿಣ ವಲಯ ಸಹಾಯಕ ನಿಯಂತ್ರಕರು ತುಟಿಕ್ ಪಿಟಿಕ್ ಅಂದಿಲ್ಲ. ಪಾಲಿಕೆ ದಕ್ಷಿಣ ವಲಯದ ಜಂಟಿ ಆಯುಕ್ತರು ಕಣ್ಣುಮುಚ್ಚಿಕೊಂಡು ದಾಖಲೆಗಳಿಗೆ ಸಹಿ ಮಾಡಿದ್ದಾರೆ.
“ನನ್ನ ಇತಿಮಿತಿಯಲ್ಲಿ ಬಿಲ್ ಗೆ ಸಲ್ಲಿಸಿದ ಎಲ್ಲ ದಾಖಲೆ ನೋಡಿ, ಪರಿಶೀಲನೆ ಮಾಡಿ ಬಿಲ್ ಪೇಮೆಂಟ್ ಮಾಡಿದ್ದೇನೆ. ನಾನೊಬ್ಬನೆ ಅಧಿಕಾರಿಯಲ್ಲ ಎಇಇ, ಎಸ್ ಇ, ಜೆಸಿ ಎಲ್ಲರೂ ದಾಖಲೆ ಪರಿಶೀಲಿದ್ದಾರೆ. ದೀಪಾವಳಿ ಹಬ್ಬದ ಕಸದಲ್ಲಿ ಅಕ್ರಮ ನಡೆದಿದೆ ಅಥವಾ ಇಲ್ಲ ಎಂಬ ಬಗ್ಗೆ ನಾನು ಏನೂ ಹೇಳಲ್ಲ.”
– ರವಿ, ಬಿಬಿಎಂಪಿ ದಕ್ಷಿಣ ವಲಯ ಉಪನಿಯಂತ್ರಕ
ದೀಪಾವಳಿ ಕಸ ವಿಲೇವಾರಿಯಲ್ಲಿ ಹೇಗೆ ಅಕ್ರಮ ನಡೆದಿದೆ?
ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿ ಸಾಮಾನ್ಯ ದಿನಗಳಲ್ಲಿ 45 ರಿಂದ 50 ಟನ್ ಕಸ ಉತ್ಪತ್ತಿಯಾದರೆ, ಹಬ್ಬ- ಹರಿದಿನಗಳಲ್ಲಿ ದಿನಕ್ಕೆ 10 ಟನ್ ಹೆಚ್ಚುವರಿ ಕಸ ಉತ್ಪತ್ತಿಯಾದರೆ ಹೆಚ್ಚೆಚ್ಚು.
ಒಂದು ಕಾಂಪ್ಯಾಕ್ಟರ್ 10 ಟನ್ ತ್ಯಾಜ್ಯವನ್ನು ಏಕ ಕಾಲಕ್ಕೆ ಸರಬರಾಜು ಮಾಡುವ ಸಾಮರ್ಥ್ಯ ಹೊಂದಿದೆ. ಇನ್ನು ಒಂದು ಆಟೊ ಟಿಪ್ಪರ್ 700 ರಿಂದ 750 ಕೆಜಿ ಕಸ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಆಟೊ ಟಿಪ್ಪರ್, ಕಸವನ್ನು ಕಾಂಪ್ಯಾಕ್ಟರ್ ಅಥವಾ ಟಿಪ್ಪರ್ ಲಾರಿಗೆ ಶಿಫ್ಟ್ ಮಾಡುವ ಸ್ಥಳದ ತನಕ ಕೊಂಡೊಯ್ಯತ್ತೆ. ಅಲ್ಲಿಂದ ಕಾಂಪ್ಯಾಕ್ಟರ್ ಬೆಳ್ಳಳ್ಳಿ ಭೂಭರ್ತಿ ಘಟಕ ಅಥವಾ ಇನ್ನಿತರೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೊಂಡೊಯ್ದು ತ್ಯಾಜ್ಯವನ್ನು ವಿಲೇವಾರಿ ಮಾಡುತ್ತದೆ.
ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿ ಪ್ರತಿದಿನ ಹೆಚ್ಚುವರಿಯಾಗಿ ಉತ್ಪತ್ತಿಯಾದ 10 ಟನ್ ದೀಪಾವಳಿ ಕಸವನ್ನು ಸಂಗ್ರಹಿಸಲು 13 ಆಟೊ ಟಿಪ್ಪರ್ ಬಳಸಿಕೊಳ್ಳಬೇಕಾಗುತ್ತೆ.
ಈ ವಾರ್ಡ್ ನ ಗುತ್ತಿಗೆದಾರರಿಗೆ ಸಾಮಾನ್ಯವಾಗಿ ಮಾಸಿಕ ಬಿಲ್ ಪಾವತಿಸುವಾಗ ಒಂದು ಆಟೊ ಟಿಪ್ಪರ್ ಗೆ 30 ದಿನಕ್ಕೆಂದು ಚಾಲಕ ಮತ್ತು ಕ್ಲೀನರ್ ವೇತನ ಸೇರಿ 56,316 ರೂ. ಹಣವನ್ನು ಬಿಲ್ ಪಾವತಿ ಮಾಡುತ್ತೆ. ಒಂದು ಆಟೋಗೆ ದಿನಕ್ಕೆ ಕಸ ಸಂಗ್ರಹಿಸಲು 1,877 ರೂಪಾಯಿ ಅಂತ ಲೆಕ್ಕ ಹಾಕಿದರೂ 13 ಆಟೋ 6 ದಿನ ಕಾರ್ಯ ನಿರ್ವಹಿಸಿದಕ್ಕೆ 1.46 ಲಕ್ಷ ರೂ. ಬಿಲ್ ಮೊತ್ತವಾಗಲಿದೆ.
ಇನ್ನು ಮಿಶ್ರ ಕಸ ವಿಲೇವಾರಿ ಮಾಡುವ ಬೆಳ್ಳಳ್ಳಿ ಕ್ವಾರಿಗೆ ಕಸ ಕೊಂಡೊಯ್ಯಲು ಪ್ರತಿ ಕಾಂಪ್ಯಾಕ್ಟರ್ ಗೆ ತಿಂಗಳಿಗೆ 1.86 ಲಕ್ಷ ರೂ. ಬಿಬಿಎಂಪಿಯಿಂದ ಕಸ ಕಾಂಟ್ರಾಕ್ಟರ್ ಗೆ ಪಾವತಿಸಲಾಗುತ್ತೆ. ಅಂದರೆ ಒಂದು ದಿನ ಕಸ ಸರಬರಾಜು ಮಾಡಲು 6,228 ರೂ. ಆದಂತಾಯ್ತು.
ಹೀಗಿದ್ದಾಗ 10 ಟನ್ ಕಸವನ್ನು ಕೊಂಡೊಯ್ಯುವ ಸಾಮರ್ಥ್ಯದ ಒಂದು ಕಾಂಪ್ಯಾಕ್ಟರ್ ಅನ್ನು 6 ದಿನ ಬಳಸಿಕೊಂಡರೆ 37,368 ರೂ. ಗಳಾಗುತ್ತೆ. ಜೆಸಿಬಿ ಯಂತ್ರ ಬಳಕೆ ಸೇರಿ ಒಟ್ಟಾರೆಯಾಗಿ ಲೆಕ್ಕ ಹಾಕಿದರೆ 6 ದಿನಕ್ಕೆ, ಕಸದ ಕಾಂಟ್ರಾಕ್ಟರ್ ಗೆ ದೀಪಾವಳಿ ಹಬ್ಬದ ಹೆಚ್ಚುವರಿ ಕಸ ವಿಲೇವಾರಿಗಾಗಿ ಹೆಚ್ಚೆಂದರೆ 2 ಲಕ್ಷ ಮೊತ್ತದ ಬಿಲ್ ಪಾವತಿಸಬೇಕಾಗುತ್ತದೆ.
2 ಲಕ್ಷ ಬಿಲ್ ಆಗುವ ಕಡೆ 13.55 ಲಕ್ಷ ರೂ. ಹೆಚ್ಚುವರಿ ಬಿಲ್ ?
ಆದರೆ ಈ ಪ್ರಕರಣದಲ್ಲಿ ಒಟ್ಟಾರೆ 6 ದಿನಕ್ಕೆ 15.55 ಲಕ್ಷ ಬಿಲ್ ಮಾಡಲಾಗಿದ್ದು 13.55 ಲಕ್ಷ ರೂ. ಹಣವನ್ನು ಹೆಚ್ಚುವರಿಯಾಗಿ ಪಾವತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಏಕೆಂದರೆ ಸಾಮಾನ್ಯವಾಗಿ ಈ ವಾರ್ಡ್ ನಲ್ಲಿ ತಿಂಗಳಿಗೆ (30 ದಿನ) ಕಾರ್ಯನಿರ್ವಹಿಸಿದರೆ 32 ಲಕ್ಷ ಬಿಲ್ ಪಾವತಿಸಲಾಗುತ್ತದೆ. ಆದರೆ ದೀಪಾವಳಿ ಕಸದ ವಿಲೇವಾರಿ ಹೆಸರಲ್ಲಿ ಕೇವಲ 6 ದಿನಕ್ಕೆ 15.55 ಲಕ್ಷ ರೂ. ಬಿಲ್ ಮಾಡಲಾಗಿದೆ.
ಸುಂಕೇನಹಳ್ಳಿಯಲ್ಲಿ 6 ದಿನಕ್ಕೆ 11.32 ಲಕ್ಷ ಪೇಮೆಂಟ್?
ಇನ್ನು ಗಾಂಧಿ ಬಜಾರ್ ಬಿಟ್ಟರೆ ಬೇರೆ ಹೇಳಿಕೊಳ್ಳುವಂತಹ ದೊಡ್ಡ ಮಾರುಕಟ್ಟೆ ಸುಂಕೇನಹಳ್ಳಿ ವಾರ್ಡ್ (142) ನಲ್ಲಿಲ್ಲ. ಇಲ್ಲಿ ಹಬ್ಬದ ಸಂದರ್ಭದಲ್ಲಿ ಹೆಚ್ಚೆಂದರೂ 1 ಲೋಡ್ ಕಸ ಉತ್ಪತ್ತಿಯಾಗುತ್ತೆ. ಆದರೂ ದೀಪಾವಳಿ ತ್ಯಾಜ್ಯ ವಿಲೇವಾರಿಯಲ್ಲಿ 6 ದಿನಕ್ಕೆ ಒಟ್ಟಾರೆ 11.32 ಲಕ್ಷ ರೂ. ಬಿಲ್ ಪಾವತಿ ಮಾಡಲಾಗಿದೆ.
ಈ ವಾರ್ಡ್ ನಲ್ಲಿ 30 ದಿನ ಕಾರ್ಯನಿರ್ವಹಿಸುವಾಗಲೇ ಮಾಸಿಕ ಬಿಲ್ 18 ಲಕ್ಷ ರೂ. ಆಸುಪಾಸಿನಲ್ಲಿ ಪಾವತಿಸಲಾಗುತ್ತೆ. ಹೀಗಿರುವಾಗ 6 ದಿನಕ್ಕೆ 11.32 ಲಕ್ಷ ರೂ. ಮೊತ್ತ ಪಾವತಿಸಿರುವುದನ್ನು ಗಮನಿಸಿದರೆ ಎಂತಹವರಿಗೂ ಇಲ್ಲಿ ಭ್ರಷ್ಟಾಚಾರ ನಡೆದಿರುವುದು ತಿಳಿದು ಬರುತ್ತದೆ.
ಹಬ್ಬದ ಬಿಲ್ ಅಕ್ರಮದ ಬಗ್ಗೆ ಚಿಕ್ಕಪೇಟೆ ವಿಭಾಗದ ಎಇಇ ನರಸಿಂಹಯ್ಯ ಅವರನ್ನು ಬೆಂಗಳೂರು ವೈರ್ ಸಂಪರ್ಕಿಸಿದಾಗ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ನಗರದಾದ್ಯಂತ ಹಬ್ಬದ ಕಸದಲ್ಲಿ ಕೋಟ್ಯಾಂತರ ರೂ. ಅಕ್ರಮ ನಡೆದಿರುವ ಸಾಧ್ಯತೆ !!
ಬಿಲ್ ಪಾವತಿ ಮಾಡುವ ಮುನ್ನ ಕಾನೂನು ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ದಾಖಲೆಗಳಿಂದ ಸ್ಪಷ್ಟವಾಗಿ ಕಂಡು ಬಂದಿದೆ. ಇದನ್ನೆಲ್ಲಾ ಗಮನಿಸಿದರೆ ಬೆಂಗಳೂರಿನಾದ್ಯಂತ ವಿವಿಧ ವಾರ್ಡ್ ಗಳಲ್ಲೂ ಸಂಕ್ರಾಂತಿ ಹಬ್ಬ, ಯುಗಾದಿ ಹಬ್ಬ, ಗಣೇಶನ ಹಬ್ಬ, ಆಯುಧಪೂಜೆ, ದೀಪಾವಳಿ ಹಬ್ಬದಲ್ಲಿ ಹೆಚ್ಚುವರಿ ಕಸದ ಹೆಸರಿನಲ್ಲಿ ಕೋಟ್ಯಾಂತರ ರೂ. ಅಕ್ರಮ ನಡೆದಿರುವುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಗುತ್ತಿಗೆದಾರರು ಮತ್ತು ಘನತ್ಯಾಜ್ಯ ವಿಲೇವಾರಿ ಅಧಿಕಾರಿಗಳು, ಲೆಕ್ಕಾಧಿಕಾರಿಗಳು ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆಸಿರುವ ಸಾಧ್ಯತೆಗಳ ಬಗ್ಗೆ ಮುಖ್ಯ ಆಯುಕ್ತ ಗೌರವ ಗುಪ್ತ ಕೂಲಂಕಷ ತನಿಖೆ ನಡೆಸಲು ಆದೇಶಿಸಿದರೆ ಸತ್ಯದ ಅನಾವರಣವಾಗಲಿದೆ.