ಬೆಂಗಳೂರು : ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವ ಕಳೆದ ಬಾರಿಯಂತೆ ಈ ಬಾರಿ ಸರಳ ಮತ್ತು ಸೀಮಿತ ಸಂಖ್ಯೆಯಲ್ಲಿ ಆಚರಣೆಗೆ ಬಿಬಿಎಂಪಿ ಅವಕಾಶ ನೀಡುವ ಸಾಧ್ಯತೆಯಿದೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮುಖ್ಯ ಆಯುಕ್ತ ಗೌರವ ಗುಪ್ತ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಧರ್ಮರಾಯ ಸ್ವಾಮಿದೇವಸ್ಥಾನ ವ್ಯವಸ್ಥಾಪನಾ ಸಮಿತಿ, ಉತ್ಸವ ಸಮಿತಿಯವರು ಪಾಲ್ಗೊಂಡು ಕರಗ ಉತ್ಸವ ಕುರಿತಂತೆ ಸಲಹೆ, ಸೂಚನೆಗಳನ್ನು ನೀಡಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಆರ್.ರಮೇಶ್ ಪಾಲ್ಗೊಂಡು ಕರಗ ಉತ್ಸವಕ್ಕೆ 50 ರಿಂದ 100 ಮಂದಿಗೆ ಅವಕಾಶ ನೀಡುವಂತೆ ಸಭೆಯಲ್ಲಿ ಕೋರಿದರು. ಆದರೆ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್, ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೀಮಿತ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಲು ಅವಕಾಶ ನೀಡುವಂತೆ ಆಗ್ರಹಿಸಿದರು.
ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಆಯುಕ್ತ ಗೌರವ ಗುಪ್ತಾ, ಕಳೆದ ಬಾರಿ ವ್ಯವಸ್ಥಾಪನ ಸಮಿತಿ, ಉತ್ಸವ ಸಮಿತಿ ಇರಲಿಲ್ಲ. ಈಗ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಉತ್ಸವ ಸಮಿತಿ ರಚನೆ ಮಾಡಲಾಗಿದೆ.
ಈಗ ದೇವಸ್ಥಾನ ಸಮೀಪ ಸಾಕಷ್ಟು ಕೋವಿಡ್ ಕೇಸ್ ಇವೆ. ಹಾಗಾಗಿ ನಿಯಂತ್ರಿತ ಜನರಿದ್ದು ಮಾತ್ರ ಕರಗ ಉತ್ಸವ ಮಾಡಲು ಸಭೆಯಲ್ಲಿ ಸಲಹೆಗಳು ಬಂದಿದೆ. ಏ.17ರಂದು ಡಿಸಿ ನೇತೃತ್ವದಲ್ಲಿ ಸೀಮಿತ ಸಂಖ್ಯೆಯಲ್ಲಿ ಸಭೆ ನಡೆಸಿ ಉತ್ಸವದ ಬಗ್ಗೆ ಸ್ಪಷ್ಟ ವರದಿ ನೀಡಲು ಹೇಳಿದ್ದೇನೆ. ಆನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕರಗ ಉತ್ಸವ ಕಳೆದ ಬಾರಿ ದೇವಸ್ಥಾನ ಒಳ ಆವರಣದಲ್ಲಿ ಮಾತ್ರ ಮಾಡಲು ಅವಕಾಶ ನೀಡಲಾಗಿತ್ತು. ಈ ಬಾರಿ ಕರಗ ಏಪ್ರಿಲ್ 19 ರಿಂದ ಆರಂಭವಾಗಿ 27ಕ್ಕೆ ಮುಗಿಯಲಿದೆ. ಅದೇ ರೀತಿ ಆಚರಿಸಲು ಪೊಲೀಸರು ಮತ್ತು ಅಧಿಕಾರಿಗಳು ಹೇಳಿದ್ದಾರೆ.
ಕರಗದ ಭಾರೀ ಮೆರವಣಿಗೆಗೆ ಅವಕಾಶವಿಲ್ಲ
ಕೋವಿಡ್ ಹೆಚ್ಚಳ ಹಿನ್ನಲೆಯಲ್ಲಿ ಸಮನ್ವಯತೆ ಕಾಯ್ದುಕೊಳ್ಳುವ ಅವಶ್ಯಕತೆಯಿದೆ. ಕರಗ ಮೆರವಣೆಗೆಗೆ ಅವಕಾಶ ವಿಲ್ಲ. ಧರ್ಮರಾಯ ದೇವಸ್ಥಾನದ ಮುಂದೆ, ಶಕ್ತಿ ದೇವತೆ ಇರುವ ಪಾಲಿಕೆ ಆವರಣ, ಸಂಪಂಗಿರಾಮ ನಗರದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ನೀಡುವ ಬಗ್ಗೆ ಡಿಸಿ ಸಭೆ ನಡೆಸಿ ವರದಿ ನೀಡಿದ ಬಳಿಕ ತೀರ್ಮಾನಿಸುತ್ತೇವೆ ಎಂದು ಗೌರವಗುಪ್ತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೋದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಕೋವಿಡ್ ಪ್ರಕರಣ ಹೆಚ್ಚಾಗಿದೆ. ಹಾಗಾಗಿ ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಸಾರ್ವಜನಿಕರು ಕೋವಿಡ್ ಕಾರಣ ಮನೆಯಲ್ಲೇ ಇರಬೇಕು. ಸುರಕ್ಷತೆಗೆ ಆದ್ಯತೆ ಕೊಡಬೇಕು. ಇನ್ನು ಪಬ್ ಬಾರ್ ರೆಸ್ಟೋರೆಂಟ್ ನಲ್ಲಿ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಉದ್ಯಮ ಮತ್ತು ಕೈಗಾರಿಕೆಗಳಿಗೆ ವಹಿವಾಟು ನಡೆಸಲು ಇರಲಿಲ್ಲ.
ನಗರದಲ್ಲಿ ಐಸಿಯು ವೆಂಟಿಲೇಟರ್ ಸೀಮಿತ ಸಂಖ್ಯೆಯಲ್ಲಿದೆ
ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಶೇ.50 ಹಾಸಿಗೆ ಮೀಸಲಿಡಲು, 6,000 ಬೆಡ್ ಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಗುರುತಿಸಿದ್ದೇವೆ. 2 ಸಾವಿರ ಹಾಸಿಗೆಗಳು ಬಿಬಿಎಂಪಿಗೆ ಕೋವಿಡ್ ಚಿಕಿತ್ಸೆಗಾಗಿ ನಮಗೆ ಲಭ್ಯವಾಗಿದೆ. ಈಗ ಕೇಂದ್ರೀಯ ಬೆಡ್ ಅಲಾಟ್ ಮೆಂಟ್ ನಿರ್ವಹಣೆ ಮೂಲಕ ಇದನ್ನು ರೋಗಿಗಳ ಚಿಕಿತ್ಸೆಗಾಗಿ ನೀಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋಮ್ ಐಸೊಲೇಷನ್ ಹೆಚ್ಚು ಆಸಕ್ತಿವಹಿಸುತ್ತಿದ್ದಾರೆ, ಸುರಕ್ಷಿತ ಗುಣಮುಖಕ್ಕೆ ಆದ್ಯತೆ ಕೊಡುತ್ತಿದ್ದಾರೆ. ಕೋವಿಡ್ ಸೋಂಕು ಇದ್ದವರು ರೋಗ ಉಲ್ಬಣವಾಗಿ ಕೊನೆ ಹಂತದಲ್ಲಿ ಬಂದು ವೆಂಟಿಲೇಟರ್ ಗಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ.
ಐಸಿಯು ವೆಂಟಿಲೇಟರ್ ಬೆಡ್ ಗಳ ಸಂಖ್ಯೆ ಸೀಮಿತವಾಗಿದೆ. ಹಾಗಾಗಿ ಸೋಂಕು ಗುಣಲಕ್ಷಣ ಕಂಡುಬಂದ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಬಂದರೆ ಬೇಗ ಗುಣಮುಖವಾಗಬಹುದು. ನಮ್ಮಲ್ಲಿ ಹಾಸಿಗೆಗಳ ಕೊರತೆ ಇಲ್ಲ ಎಂದು ಗೌರವ ಗುಪ್ತಾ ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಐಸಿಯು, ಆಕ್ಸಿಜನೇಡ್ 6 ಪಟ್ಟು ಹೆಚ್ಚು ಮಾಡಲಾಗಿದೆ. ಬೆಡ್ಸ್, ಐಸಿಯು ವೆಂಟಿಲೇಟರ್ ಬೆಡ್ ಕೂಡ ಹೆಚ್ಚಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸಭೆಯೊಂದರಲ್ಲಿ, ಹೆಚ್ಚುವರಿಯಾಗಿ ಒಂದು ಸಾವಿರ ಐಸಿಯು ವೆಂಟಿಲೇಟರ್ ಒದಗಿಸುವುದಾಗಿ ಹೇಳಿದ್ದಾರೆ.
ಕೋವಿಡ್ ಶವ ಸಂಸ್ಕಾರಕ್ಕೆ ಹೆಚ್ಚುವರಿ ಕ್ರಿಮಿಟೋರಿಯಂ
ನಮ್ಮಲ್ಲಿ 13 ಪೈಕಿ 4 ಎಲೆಕ್ಟ್ರಿಕ್ ಕ್ರಿಮಿಟೋರಿಯಂ ಕೋವಿಡ್ ಶವ ಸಂಸ್ಕಾರಕ್ಕಾಗಿ ಮೀಸಲಿಡಲಾಗಿದೆ. ಈ ಕ್ರಿಮಿಟೋರಿಯಂ ಸಂಖ್ಯೆ ಹೆಚ್ಚಳ ಮಾಡುತ್ತೇವೆ. ವಲಯ ಮಟ್ಟದಲ್ಲಿ ಬಾಕಿ ಸಂಬಳ ನೀಡಲು ಕೊಡಲು ಕೂಡಲೇ ಕ್ರಮ ಕೈಗೊಳ್ಳುತ್ತೇವೆ.
ಈಗ ಇರುವ ಆಂಬ್ಯುಲೆನ್ಸ್ ಜೊತೆಗೆ ಪ್ರತಿ ವಿಧನಾಸಭಾ ಕ್ಷೇತ್ರದಲ್ಲಿ ಅಡ್ವಾನ್ಸ್ ಲೈಫ್ ಸಪೋರ್ಟ್ ಇರುವ ಆಂಬುಲೆನ್ಸ್ ಬಾಡಿಗೆಗೆ ಪಡೆಯಲು ಕ್ರಮ ಕೈಗೊಳ್ಳುತ್ತೇವೆ. 8 ವಲಯಗಳಲ್ಲಿ ಕೋವಿಡ್ ವಾರ್ ರೂಮ್ ಗಳ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗಾಗಿ ಪ್ರಕಟಿಸುತ್ತೇವೆ. ಮನೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ವಾರ್ ರೂಮ್ ನಿಂದ ಸಹಾಯ ಪಡೆಯಬಹುದು ಎಂದರು.
ಕಳೆದ ಬಾರಿ 6 ಸಾವಿರ ಬೆಡ್ ಇರುವ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ್ದೆವು. ಈಗ ವಲಯ ಮಟ್ಟದಲ್ಲಿ 50 ಬೆಡ್ ಗಳಿರುವ ಹೋಟೆಲ್, ಇನ್ನಿತರ ಸ್ಥಳಗಳನ್ನು ಗುರುತಿಸಲಾಗುತ್ತಿದೆ.
ಈಗ ಸಣ್ಣ ಮಟ್ಟದ ಎರಡು ಕೋವಿಡ್ ಕೇರ್ ಸೆಂಟರ್ ಇದೆ. ಇನ್ನು ಮೂರು ದಿನದಲ್ಲಿ 10 ಕೋವಿಡ್ ಕೇರ್ ಕೇಂದ್ರಗಳು ಪ್ರಾರಂಭವಾಗಲಿದೆ. ಇದರಿಂದ 1,500 ಹಾಸಿಗೆಗಳು ಲಭ್ಯವಾಗಲಿದೆ.
ಬಿಬಿಎಂಪಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪಾಲಿಕೆಗೆ ಸೇರಿದ ಆಮಬುಲೆನ್ಸ್ ಇದೆ, ವಾರ್ ರೂಮ್ ಜೊತೆ ಇವು ಸಂಪರ್ಕ ಹೊಂದಿವೆ. ಲಾಕ್ ಡೌನ್ ಆದರೆ ಜನರಿಗೆ ತೊಂದರೆ ಆಗುತ್ತದೆಯೇ ಹೊರತು, ಪಾಲಿಕೆ ಲಾಕ್ ಡೌನ್ ಆದರೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿದೆ ಎಂದು ಮುಖ್ಯ ಆಯುಕ್ತರು ಸಮರ್ಥಿಸಿಕೊಂಡರು.