ಬೆಂಗಳೂರು : ಕರೋನಾ ಲಾಕ್ ಡೌನ್ ಬಳಿಕ ರಾಜ್ಯದಲ್ಲಿ ಆರ್ಥಿಕ ಸಂಪನ್ಮೂಲ ಕುಸಿತ ಕಂಡರೆ ಸರ್ಕಾರದ ಸ್ವಾಯಕ್ತ ಸಂಸ್ಥೆ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (ಜೆಎಲ್ ಆರ್)ನ ಪ್ರವಾಸಿಗರ ಸಂಖ್ಯೆ ಹಾಗೂ ನಿವ್ವಳ ಆದಾಯ 2020ರ ಸೆಪ್ಟೆಂಬರ್ ನಿಂದ 7 ತಿಂಗಳ ಅವಧಿಯಲ್ಲಿ ಗಮನಾರ್ಹ ಏರಿಕೆ ಕಂಡಿದೆ.
ಅಕ್ಟೋಬರ್ ತಿಂಗಳು ಹೊರತುಪಡಿಸಿ ಈ ವರ್ಷದ ಮಾರ್ಚ್ ತಿಂಗಳ ತನಕ ಜೆಎಲ್ ಆರ್ ನ ಶರಾವತಿ ಅಡ್ವೆಂಚರ್ ಕ್ಯಾಂಪ್, ಗಾಳಿಬೊರೆ ನೇಚರ್ ಕ್ಯಾಂಪ್, ಕಬಿನಿ ರಿವರ್ ಲಾಡ್ಜ್, ಕಾಳಿ ಅಡ್ವೆಂಚರ್ ಕ್ಯಾಂಪ್, ಭಗವತಿ ನೇಚರ್ ಕ್ಯಾಂಪ್ ಸೇರಿದಂತೆ 27 ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು.
2019-20 ರ ಅವಧಿಗೆ ಹೋಲಿಸಿದಲ್ಲಿ 2020-21ರಲ್ಲಿ ಏಳು ತಿಂಗಳ ಅವಧಿಯಲ್ಲಿ 7 ಕೋಟಿ ರೂ. ಹೆಚ್ಚಿನ ನಿವ್ವಳ ಆದಾಯ ಗಳಿಸಿದೆ. ಇದು 40 ವರ್ಷಗಳ ಸಂಸ್ಥೆಯ ಕಾರ್ಯಾಚರಣೆ ಅವಧಿಯಲ್ಲೇ ಉತ್ತಮ ಸಾಧನೆ ಮಾಡಿದ ಸಂದರ್ಭ ಎಂದು ಹೇಳುತ್ತಾರೆ ಜೆಎಲ್ ಆರ್ ಅಧಿಕಾರಿಗಳು.
ಕಳೆದ ವರ್ಷ ಮಾರ್ಚ್ ನಲ್ಲಿ ಜೆಎಲ್ ಆರ್ ಬ್ಯುಸಿನೆಸ್ ಕರೋನಾ ಲಾಕ್ ಡೌನ್ ಕಾರಣಕ್ಕೆ ಕುಸಿತ ಕಂಡಿದ್ದು ಜೂನ್ 2020 ರ ತನಕ ಮುಂದುವರೆದಿತ್ತು.
ಆದರೆ ರಾಜ್ಯದ ವಿವಿಧೆಡೆ 27 ಕಡೆಗಳಲ್ಲಿ ಕಾಡು- ನದಿ, ಸಮುದ್ರ ತೀರ ಇರುವ ಕಡೆಗಳಲ್ಲಿ ರೆಸಾರ್ಟ್, ಲಾಡ್ಜ್ ಮತ್ತು ಅತ್ಯಾಕರ್ಷಕ ಕ್ಯಾಂಪ್ ಗಳನ್ನು ಹೊಂದಿರುವ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಸಂಸ್ಥೆ ಪೋಸ್ಟ್ ಲಾಕ್ ಡೌನ್ ನಂತರ ಸೂಕ್ತ ಕೋವಿಡ್ ನಿಯಮಾವಳಿ ಅನುಷ್ಠಾನಕ್ಕೆ ತಂದಿತ್ತು.
ಲಾಕ್ ಡೌನ್ ನಿಂದ ಬೇಸೆತ್ತ ಮನಸುಗಳಿಗೆ ಪುಳಕ
ಜೆಎಲ್ ಆರ್ ರೆಸಾರ್ಟ್, ಕ್ಯಾಂಪ್ ಗಳಲ್ಲಿ ಕೋವಿಡ್ ನಿಂದ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿತ್ತು. ಅಲ್ಲದೆ ಗುಂಪುಗೂಡುವಿಕೆಗೆ ಅವಕಾಶ ನೀಡಿರಲಿಲ್ಲ. ಸೀಮಿತ ಸಂಖ್ಯೆಯ ವಸತಿ ಸೌಲಭ್ಯ ಕಲ್ಪಿಸಿದ ಕಾರಣಕ್ಕೆ ಲಾಕ್‌ಡೌನ್ ನಲ್ಲಿ ಮನೆಯೊಳಗೆ ಬಂಧಿಯಾಗಿದ್ದ ಜನರಿಗೆ ಪರಿಸರದ ಮಧ್ಯೆ ಸ್ವಚ್ಛಂದವಾಗಿ ವಿಹರಿಸಲು ಜೆಎಲ್ ಆರ್ ನಲ್ಲಿ ಅವಕಾಶ ಸಿಕ್ಕಿತ್ತು.
ಲಾಕ್ ಡೌನ್ ನಿಂದ ಬೇಸತ್ತಿದ್ದ ಮನಸುಗಳಿಗೆ ಪರಿಸರದ ಮಧ್ಯೆ, ಹರಿಯುವ ನದಿ ತೀರದಲ್ಲಿ ಹಾಯಾಗಿ ಸ್ನೇಹಿತರು, ಕುಟುಂಬದೊಂದಿಗೆ ರಿಲಾಕ್ಸ್ ಮಾಡಲು ಜೆಎಲ್ ಆರ್ ರೆಸಾರ್ಟ್, ಕ್ಯಾಂಪ್ ಚಟುವಟಿಕೆಗಳು ಹೊಸ ಚೇಂಜ್ ನೀಡಿತ್ತು.
ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಜೆಎಲ್ ಆರ್ ಬುಕಿಂಗ್ಸ್ ಏರಿಕೆಯಾಗಿತ್ತು. ಅಕ್ಟೋಬರ್ ನಲ್ಲಿ ಕರೋನಾ ಪ್ರಕರಣ ಹೆಚ್ಚಾಗಿ ರೆಸಾರ್ಟ್ ಗೆ ಬೇಡಿಕೆ ಕಡಿಮೆಯಾಯ್ತು. ಡಿಸೆಂಬರ್ ನಲ್ಲಿ ಜನರಿಗೆ ಕೈಗೆಟಕುವ ಅತ್ಯಾಕರ್ಷಕ ದರ ಪ್ರಕಟಿಸಿದ ಮೇಲೆ ಜೆಎಲ್ ಆರ್ ಬುಕಿಂಗ್ ನಲ್ಲಿ ಹೆಚ್ಚಳವಾಯ್ತು.
“ಕೋವಿಡ್-19 ಸಾಂಕ್ರಾಮಿಕ ರೋಗ ಜನರ ಪ್ರವಾಸ ಮತ್ತು ಆತಿಥ್ಯದ ದೃಷ್ಟಿಕೋನವನ್ನೆ ಬದಲಾಯಿಸಿ ಬಿಟ್ಟಿದೆ. ಪ್ರವಾಸಿಗರು ಈಗ ಕಡಿಮೆ ಜನಸಂದಣಿ, ಸುರಕ್ಷಿತವಾಗಿರುವ ಪರಿಸರ ಆಧಾರಿತ ಟೂರಿಸಂ ಮತ್ತು ರೆಸಾರ್ಟ್ ಗೆ ಆದ್ಯತೆ ಕೊಡುತ್ತಿದ್ದಾರೆ. ಪೋಸ್ಟ್ ಲಾಕ್ ಡೌನ್ ನಂತರ ಜೆಎಲ್ ಆರ್ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಆದ್ದರಿಂದ ಜೆಎಲ್ ಆರ್ ವಹಿವಾಟು ಹಿಂದಿಗಿಂತ ಉತ್ತಮವಾಗಿದೆ.”
– ಕುಮಾರ್ ಪುಷ್ಕರ್, ವ್ಯವಸ್ಥಾಪಕ ನಿರ್ದೇಶಕ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್
ಶೇ.40ರಷ್ಟು ಬುಕಿಂಗ್ ಏರಿಕೆ
ಹಿಂದಿನ ವರ್ಷದಲ್ಲಿ (2019-20) ಸೆಪ್ಟೆಂಬರ್ ನಿಂದ ಮಾರ್ಚ್ ವರೆಗಿನ 7 ತಿಂಗಳ ಅವಧಿಯಲ್ಲಿ ಶೇ.32 ರಷ್ಟು ಬುಕಿಂಗ್ ನಿಂದ 32.65 ಕೋಟಿ ರೂ. ಆದಾಯ ಬಂದಿತ್ತು. ಆದರೆ ಕಳೆದ ವರ್ಷ (2020-21) ಇದೇ ಅವಧಿಯಲ್ಲಿ ರೆಸಾರ್ಟ್ ಬುಕಿಂಗ್ ಪ್ರಮಾಣ ಶೇ.40 ರಷ್ಟು ಏರಿಕೆಯಾಗಿ 39.43 ಕೋಟಿ ರೂ. ಹಣ ಸಂಗ್ರಹವಾಗಿತ್ತು. ಅಂದರೆ 14,000 ಬೆಡ್ ನೈಟ್ಸ್ ಬುಕಿಂಗ್ ಆಗಿತ್ತು.
ಇದೀಗ ರಾಜ್ಯದಲ್ಲಿ ಮತ್ತೆ ಮಾರ್ಚ್- ಏಪ್ರಿಲ್ ನಲ್ಲಿ ಕರೋನಾ ಎರಡನೇ ಅಲೆಯಿಂದ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಅಂತರಾಜ್ಯ ಪ್ರಯಾಣ ಸಾಕಷ್ಟು ಕಡಿಮೆಯಾಗಿದೆ. ಜೆಎಲ್ ಆರ್ ಗೆ ಮಹಾರಾಷ್ಟ್ರ, ಬೆಂಗಳೂರಿನಿಂದ ಹೋಗುವವರೆ ಜಾಸ್ತಿ. ಆದರೆ ಕರೋನಾ ಹೆಚ್ಚಾಗುತ್ತಿರುವ ಕಾರಣ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಗೆ ಭೇಟಿ ನೀಡುವವರ ಸಂಖ್ಯೆ ಮತ್ತೆ ಇಳಿಮುಖ ಕಂಡಿದೆ.
ಅತಿಥಿಗಳ ಸುರಕ್ಷತೆಗೆ ಆದ್ಯ ಗಮನ ನೀಡುವ ಜೆಎಲ್ ಆರ್, ಕೋವಿಡ್ ನಿಯಮಾವಳಿಗಳ ಅನುಷ್ಠಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಕೋವಿಡ್ ಸಂಕಷ್ಠ ಆದಷ್ಟು ಶೀಘ್ರವಾಗಿ ನಿವಾರಣೆಯಾಗಿ ಸಾಮಾನ್ಯ ಪರಿಸ್ಥಿತಿ ಬಂದರೆ ಜೆಎಲ್ ಆರ್ ಗೆ ಭೇಟಿ ನೀಡುವವರ ಸಂಖ್ಯೆ ಮತ್ತೆ ಹೆಚ್ಚಳವಾಗುವ ಸಾಧ್ಯತೆಯಿದೆ.