ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಸೋಂಕಿನ ಪ್ರಕರಣಗಳು ಒಂದೇ ಸಮನೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯಪಾಲ ವಾಜುಬಾಯಿ ವಾಲಾ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಜೊತೆ ಸೋಮವಾರ ಸಮಾಲೋಚನೆ ನಡೆಸಿದರು.
ರಾಜಭವನದಲ್ಲಿ ನಡೆದ ಸಮಾಲೋಚನೆ ಸಂದರ್ಭದಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಸಕ್ತ ಪರಿಸ್ಥಿತಿ, ಸೋಂಕು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಂದ ರಾಜ್ಯಪಾಲರು ಮಾಹಿತಿ ಪಡೆದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವಿದ್ ಅಖ್ತರ್ ಕೂಡ ಇದೇ ಸಂದರ್ಭದಲ್ಲಿ ಹಾಜರಿದ್ದು, ಕೋವಿಡ್-19 ಕುರಿತಂತೆ ರಾಜ್ಯಪಾಲ ವಜುಬಾಯಿ ವಾಲಾರಿಗೆ ಸುಧೀರ್ಘ ವರದಿಯನ್ನು ಸಲ್ಲಿಸಿದರು.
ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚಳ ಆಗಿರುವುದಕ್ಕೆ ರಾಜ್ಯಪಾಲರ ಕಳವಳ ವ್ಯಕ್ತಪಡಿಸಿದರು. ರಾಜಧಾನಿಯಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ತಟೆಗಟ್ಟುವಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳು, ನೈಟ್ ಕರ್ಪ್ಯೂ ಜಾರಿ ಮಾಡಿರುವುದು, ಕೋವಿಡ್ ಕುರಿತಂತೆ ಜನಜಾಗೃತಿ ಮೂಡಿಸುತ್ತಿರುವುದು.
ವ್ಯಾಕ್ಸಿನೇಷನ್ ನೀಡುತ್ತಿರುವುದು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.
ಭಾನುವಾರ ವಿಧಾನಸೌಧದಲ್ಲಿ ರಾಜ್ಯ ಮಟ್ಟದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ವಿಷನ್ ಗ್ರೂಪ್ ತಙ್ಞರು ಆರೋಗ್ಯ ಸಚಿವ ಡಾ.ಸುಧಾಕರ್ ಜೊತೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ತಙ್ಞರು ಕೋವಿಡ್ ಎರಡನೇ ಅಲೆ ರಾಜ್ಯದಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ್ದರು.
ಈ ಹಿನ್ನಲೆಯಲ್ಲಿ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳ ಜೊತೆ ನಡೆಸಿದ ಸಭೆ ಬಹಳ ಮಹತ್ವದ್ದಾಗಿದೆ.