ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ರಾಕೇಟ್ ರೀತಿ ಏರಿಕೆಯಾಗುತ್ತಿರುವ ಮಧ್ಯೆಯೇ, ಸೋಂಕು ನಿಯಂತ್ರಣಕ್ಕಾಗಿ ಬಿಬಿಎಂಪಿ ಅಲ್ಲದೆ ನಗರ ಪೊಲೀಸರು ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳವರ ಮೇಲೆ ದಂಡ ಪ್ರಯೋಗ ಮುಂದುವರೆಸಿದೆ.
ಏಪ್ರಿಲ್ 1 ರಿಂದ 11 ದಿನಗಳ ಅವಧಿಯಲ್ಲಿ ನಗರ ಪೊಲೀಸರು ವಿವಿಧೆಡೆ ಕಾರ್ಯಾಚರಣೆ ನಡೆಸಿ ಮಾಸ್ಕ್ ಧರಿಸದ 32,330 ಜನರಿಂದ 80.29 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದ 1,284 ಪ್ರಕರಣಗಳಲ್ಲಿ 3.20 ಲಕ್ಷ ರೂ. ಫೈನ್ ಅನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ನಗರ ಪೊಲೀಸರು ಮಾಸ್ಕ್ ಧರಿಸದ ಸರಾಸರಿ 2 ಸಾವಿರ ಜನರಿಗೆ ದಂಡ ವಿಧಿಸುತ್ತಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಈ ಸರಾಸರಿ 3 ರಿಂದ 4 ಸಾವಿರ ಜನರಿಗೆ ಕೋವಿಡ್ ನಿಯಮ ಉಲ್ಲಂಘಿಸುವ ಕಾರಣಕ್ಕೆ ಫೈನ್ ಹಾಕುತ್ತಿದ್ದಾರೆ.
ಅಲ್ಲದೆ ಏಪ್ರಿಲ್ 1 ರಿಂದ 11 ರ ತನಕ ಕೋವಿಡ್ ನಿಯಮಾವಳಿ ಗಾಳಿಗೆ ತೂರಿದ 24 ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದ್ದಾರೆ.
ನಗರದಲ್ಲಿ 56,545 ಕೋವಿಡ್ ಸಕ್ರಿಯ ಪ್ರಕರಣ
ಬೆಂಗಳೂರಿನಲ್ಲಿ ಸೋಮವಾರ 6,387 ಕೋವಿಡ್ ಪಾಸಿಟಿವ್ ಪ್ರಕರಣ ಧೃಡ ಪಟ್ಟಿದೆ. ಇದರೊಂದಿಗೆ ರಾಜಧಾನಿಯಲ್ಲಿ ಒಟ್ಟು 56,545 ಸಕ್ರಿಯ ಪ್ರಕರಣಗಳು ಕಂಡುಬಂದಿದೆ.
ಖಾಸಗಿ ಕೋವಿಡ್ ಆರೈಕೆ ಕೇಂದ್ರ ಆರಂಭಕ್ಕೆ ಸೂಚನೆ
ಕೋವಿಡ್ ನಿಯಂತ್ರಣಕ್ಕಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವಗುಪ್ತ ನಗರದ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ಅಸೋಸಿಯೇಷನ್ (ಫಾನಾ) ಮುಖ್ಯಸ್ಥರು, ಖಾಸಗಿ ಹೋಟೆಲ್ ಸಂಘದ ಪ್ರಮುಖರೊಂದಿಗೆ ಸೋಮವಾರ ವರ್ಚುವಲ್ ಸಭೆ ನಡೆಸಿದರು.
ಸಭೆಯಲ್ಲಿ, ರೋಗಲಕ್ಷಣ ಕಾಣಿಸದ ಕೋವಿಡ್ ಸೋಂಕು ಪೀಡಿತರಿಗಾಗಿ ಖಾಸಗಿ ಆರೈಕೆ ಕೇಂದ್ರಗಳನ್ನು ತೆರೆಯುವ ಬಗ್ಗೆ ಚರ್ಚಿಸಿದರು. 50 ರಿಂದ 100 ಹಾಸಿಗೆಗಳಿರುವ ಹೋಟೆಲ್ ಗಳಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ತಕ್ಷಣವೇ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಮನವಿ ಮಾಡಿದರು.
ಮನೆಯಲ್ಲಿ ಪ್ರತ್ಯೇಕ ಕೊಠಡಿ, ಶೌಚಾಲಯ ಸೌಲಭ್ಯವಿಲ್ಲದ ರೋಗಲಕ್ಷಣ ವಿರದ ಸೋಂಕು ಪೀಡಿತರಿಗೆ ಈ ಆರೈಕೆ ಕೇಂದ್ರದಲ್ಲಿ ಉಳಿಯಲು ಅನುಕೂಲ ಮಾಡಿಕೊಡಲು ಕೋರಿದರು.
ಪ್ರತಿ ಹೋಟೆಲ್ ನಲ್ಲಿ ಖಾಸಗಿ ಆಸ್ಪತ್ರೆಯಿಂದ ಓರ್ವ ನರ್ಸ್ ಹಾಗೂ ವೈದ್ಯರು, ಆಂಬ್ಯುಲೆನ್ಸ್ ಒದಗಿಸುವುದು. ಸೋಂಕಿತರಿಗೆ ಸರಿಯಾದ ಊಟದ ವ್ಯವಸ್ಥೆ, ಸ್ವಚ್ಛತೆ ಕಾಪಾಡುವ ಸಿಬ್ಬಂದಿಗೆ ಪಿಪಿಇ ಕಿಟ್, ಸಂಗ್ರಹವಾದ ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಸಂಬಂಧ ಹೋಟೆಲ್ ಮತ್ತು ಖಾಸಗಿ ಆಸ್ಪತ್ರೆ ಗಳು ಪರಸ್ಪರ ಒಪ್ಪಂದ ಮಾಡಿಕೊಳ್ಳುವಂತೆ ಗೌರವಗುಪ್ತ ತಿಳಿಸಿದರು.