ಪೂರ್ವದ ಮುತ್ತು ಎಂದು ಹೆಸರಾದ ಗೋವಾ, ಮಲಬಾರ್ ತೀರದಲ್ಲಿ ಬರುವ ಸುಂದರ ಪ್ರವಾಸಿ ತಾಣಗಳ ರಾಜ್ಯ. ಗೋವಾ ಎಂದರೆ ತಕ್ಷಣಕ್ಕೆ ನಮಗೆ ಜ್ಞಾಪಕ ಬರೋದು ಮನಸಿಗೆ ಮುದ ಕೊಡುವ ಬೀಜ್, ಕ್ಯಾಸಿನೋ, ತರಹೇವಾರಿ ಅಪರೂಪದ ವಿನ್ಯಾಸದ ಚರ್ಚ್, ಮೋಜು- ಮಸ್ತಿ, ಸಮುದ್ರದಲ್ಲಿನ ಜಲಕ್ರೀಡೆಗಳು ಮತ್ತು ಬಿಂದಾಸ್ ಟೂರ್. ಆದರೆ ಕರೊನಾ ಸೋಂಕಿನ ಪರಿಣಾಮದಿಂದಾಗಿ ಪ್ರವಾಸಿ ತಾಣಕ್ಕೆ ಹೆಸರಾದ ಗೋವಾ ಪ್ರವಾಸೋದ್ಯಮಕ್ಕೂ ಸಾಕಷ್ಟು ಏಟು ಬಿದ್ದಿದೆ. 365 ದಿನವೂ ಟೂರಿಸಮ್ ಸ್ಥಳವಾದ ಗೋವಾದಲ್ಲಿ ಕರೋನಾ ಲಾಕ್ ಡೌನ್ ನಂತರದಲ್ಲಿನ ಪರಿಸ್ಥಿತಿ ಸಾಕಷ್ಟು ಬದಲಾಗಿದೆ.
ಸಾಮಾನ್ಯವಾಗಿ ಗೋವಾಗೆ ನವೆಂಬರ್ ನಿಂದ ಮಾರ್ಚ್ ತನಕವೂ ಪ್ರವಾಸಿಗರ ಭೇಟಿ ಹೆಚ್ಚಾಗಿರುತ್ತದೆ. ಅದರಲ್ಲೂ ಡಿಸೆಂಬರ್ ನಲ್ಲಿ ಕ್ರಿಸ್ ಮಸ್ ಸಂಭ್ರಮಾಚರಣೆಗಾಗಿ ಟೂರಿಸ್ಟ್ ಗಳ ಭೇಟಿ ಅತಿಹೆಚ್ಚಾಗಿರುತ್ತದೆ. ಹಗಲಿನಗಿಂತ ಗೋವಾದ ಸಂಜೆಯ ಕರಾಮತ್ತಿನ ಲೈಫ್ ಸ್ಟೈಲ್ ನಿಂದ ಬೇರೆಯದೇ ಲೋಕ ಸೃಷ್ಟಿಯಾಗಿರುತ್ತೆ. ಕರೋನಾ ಸೋಂಕು ಹರಡುವಿಕೆ ಮುಂಚೆ ಗೋವಾದ ಪ್ರವಾಸಕ್ಕೆ ಹೋಲಿಸಿದರೆ, ಪ್ರಸ್ತುತ ಶೇಕಡ 20 ರಿಂದ 30ರಷ್ಟು ಪ್ರವಾಸಿಗರು ಮಾತ್ರ ಗೋವಾಗೆ ಭೇಟಿ ಕೊಡುತ್ತಿದ್ದಾರೆ. ವರ್ಷಕ್ಕೆ ಸರಾಸರಿ 25 ರಿಂದ 30 ಲಕ್ಷಕ್ಕೂ ಅಧಿಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ಟೂರ್ ಸ್ಪಾಟ್ ನಲ್ಲಿ ಕರೋನಾ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತಿದೆ.
ನಿಧಾನವಾಗಿ ಗರಿಗೆದರುತ್ತಿದೆ ಟೂರಿಸಂ ಚಟುವಟಿಕೆ :
ಆರು ತಿಂಗಳುಗಳ ಕಾಲ ಲಾಕ್ ಡೌನ್ ವೇಳೆಯಲ್ಲಿ ಎಲ್ಲಾ ಕಡೆಗಳಂತೆ ಗೋವಾದಲ್ಲೂ ಪ್ರವಾಸಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಬ್ಧವಾಗಿತ್ತು. ಈ ಡಿಸೆಂಬರ್ ನಲ್ಲಿ ಕೋವಿಡ್ ಕಾರಣದಿಂದಾಗಿ ಕ್ರಿಸ್ ಮಸ್ ಸಂಭ್ರಮಾಚರಣೆಯೂ ಇರಲಿಲ್ಲ. ಜನವರಿಯಿಂದ ನಿಧಾನವಾಗಿ ಪ್ರವಾಸಿಗರ ಭೇಟಿ ನೀಡುವ ಪ್ರಮಾಣ ನಿಧಾನವಾಗಿ ಏರಿಕೆಯಾಗುತ್ತಿದೆ. ಸ್ಥಳೀಯರು ಮಾತ್ರ ಕರೋನಾ ಸೋಂಕಿಗೆ ಭಯಪಡದೆ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರ್ಭಯವಾಗಿ ತೊಡಗಿದ್ದಾರೆ. ಆದರೆ ಪ್ರವಾಸಿಗರ ಕಾರಣಕ್ಕೆ ಹೋಟೆಲ್, ಹೋಂಸ್ಟೇ, ರೆಸಾರ್ಟ್ ಗಳಲ್ಲಿ ಕರೋನಾ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವರ್ಷಪೂರ್ತಿ ಪ್ರವಾಸಿ ತಾಣಕ್ಕೆ ಹೆಸರಾದ ಪೋರ್ಚುಗೀಸರ ಸಂಸ್ಕೃತಿಯ ನಾಡಿನಲ್ಲಿ ಕರೋನಾ ಸೋಂಕಿನ ಭೀತಿಯಿಂದಾಗಿ ಪ್ರವಾಸಿ ಚಟುವಟಿಕೆಗಳು ಕಳೆದ ವರ್ಷದ ಡಿಸೆಂಬರ್ ನಂತರ ಕೊಂಚವಾಗಿ ಚೇತರಿಕೆ ಕಂಡುಬರುತ್ತಿದೆ. ಇದರ ಮಧ್ಯೆ ಕರೋನಾ ಎರಡನೇ ಅಲೆಯ ಭೀತಿ ಪ್ರವಾಸಿಗರಲ್ಲಿನ ಆತಂಕ ಮೂಡಿಸಿದೆ. ಗೋವಾಗೆ ದೇಶೀಯವಾಗಿ ಬಂದು ಹೋಗುವವರಷ್ಟೆ ಕಾಣಸಿಗುತ್ತಿದ್ದಾರೆ. ವಿದೇಶಿಗರು ಕೋವಿಡ್ ಕಾರಣದಿಂದ ಸದ್ಯ ಇಲ್ಲಿಗೆ ಬರುತ್ತಿಲ್ಲ.
ಅಮರನಾಥ್, ಟೂರ್ ಆಪರೇಟರ್, ಮಾತಾ ಟ್ರಾವಲ್ಸ್
ಸಾಮಾನ್ಯವಾಗಿ ಗೋವಾಗೆ 20 ರಿಂದ 45 ವಯೋಮಾನದವರು ಭೇಟಿ ನೀಡುವುದೇ ಹೆಚ್ಚು. ಇಲ್ಲಿ ಸಾಕಷ್ಟು ಬೀಚ್ ಗಳಿದ್ದರೂ ಗೋವಾದ ಬೀಜ್ ಗಳ ರಾಣಿ ಎನಿಸಿರುವ ಕಾಲಂಗೋಟ್ ಬೀಚ್, ಬಾಗಾ ಬೀಚ್, ಅಂಜುಮಾನ್ ಬೀಚ್, ವಾಗಟಾರ್ ಬೀಚ್, ಕಾಂಡೊಲಿಮ್ ಬೀಚ್, ಕೋಲ್ವಾ ಬೀಚ್ ಸಖತ್ ಪ್ರಸಿದ್ಧ ತಾಣವಾಗಿದೆ. ಉಳಿದಂತೆ ಅಗೋಡಾ ಕೋಟೆ, ಲೈಟ್ ಹೌಸ್, ಮಂಗೇಶ್ ದೇವಸ್ಥಾನ, ನೂರಾರು ವರ್ಷಗಳಿಂದ ಕೆಡದೆ ಸಂರಕ್ಷಿಸಿಟ್ಟಿರುವ ಫ್ರಾನ್ಸಿಸ್ ಕ್ಸೇವಿಯರ್ ಎಂಬ ಕ್ರೈಸ್ತ ಪಾದ್ರಿಯೊಬ್ಬರ ಪಾರ್ಥೀವ ಶರೀರವಿರುವ ಬಾಮ್ ಜೀಸಸ್ ಬೆಸಲಿಕಾ ಚರ್ಚ್, ಓಲ್ಡ್ ಗೋವಾ ಕೆಥಡ್ರಲ್ ಚರ್ಚ್, ವಿವಿಧ ರೀತಿಯ ಕ್ಯಾಸಿನೋ, ಕ್ರೂಸರ್ ನಲ್ಲಿ ಪ್ರಯಾಣ, ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಸೇರಿದಂತೆ ಜಲಕ್ರೀಡೆಗಳು ಪ್ರಮುಖವಾಗಿದೆ.
ಮೊದಲೆಲ್ಲಾ ಬಸ್, ವಿಮಾನ, ರೈಲು, ಖಾಸಗಿ ವಾಹನಗಳ ಮೂಲಕ ಗೋವಾದ ಬೀಚ್, ಚರ್ಚ್, ಕ್ಯಾಸಿನೋ ಮತ್ತಿತರ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಆದರೆ ಕೋವಿಡ್ ಕಾರಣದಿಂದ ಪ್ರವಾಸಿಗರು ಹೆಚ್ಚಾಗಿ ಈಗ ಕಾರು, ಜೀಪ್ ನಂತಹ ಸ್ವಂತ ಹಾಗೂ ಬಾಡಿಗೆ ವಾಹನಗಳಲ್ಲಿ ಬಂದು ಹೋಗುತ್ತಿದ್ದಾರೆ. ಹೆಚ್ಚು ಜನರು ಇರುವ ಸ್ಥಳಗಳಿಗೆ ಭೇಟಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಪ್ರವಾಸವನ್ನೇ ಜೀವನವಾಗಿಸಿಕೊಂಡವರ ಸ್ಥಿತಿ ದಯನೀಯವಾಗಿದೆ.
ಟೂರ್ ಆಪರೇಟರ್ ಮಹೇಂದ್ರನ್
ಗೋವಾಗೆ ಸಾಮಾನ್ಯವಾಗಿ ಕೆನಡಾ, ಪೋರ್ಚುಗಲ್, ರಷ್ಯಾ, ಸ್ಪೇನ್ ಸೇರಿದಂತೆ ವಿವಿಧ ದೇಶಗಳಿಂದ ಟೂರಿಸ್ಟ್ ಗಳು ಭೇಟಿ ಕೊಡುತ್ತಾರೆ. ಕೋವಿಡ್ ನಂತರದಲ್ಲಿ ವಿದೇಶಿಯರ ಓಡಾಟವೇ ಇಲ್ಲದಂತಾಗಿದೆ. ಬೀದಿ ವ್ಯಾಪಾರಿಗಳ ಸುಳಿವೇ ಕಡಿಮೆಯಾಗಿದೆ. ಪ್ರವಾಸಿಗರಿಂದ ತುಂಬಿ ತುಳುಕುತಿದ್ದ ಬೀದಿಗಳಲ್ಲಿ ವ್ಯಾಪಾರವಿಲ್ಲದೆ ಅಂಗಡಿಗಳು ಬಿಕೋ ಅನ್ನುತ್ತಿದೆ. ಮಹಾರಾಷ್ಟ್ರ, ಕರ್ನಾಟಕದ ಗಡಿಗೆ ಅಂಟಿಕೊಂಡಿರುವ ಗೋವಾ ಎಂಬ ಸುಂದರ ಪ್ರವಾಸಿ ತಾಣ ಮೊದಲಿನಂತಾಗಲೂ ಕೋವಿಡ್ ಮಹಾಮರಿಯ ಕರಿನೆರಳು ಕಡಿಮೆಯಾಗಬೇಕಿದೆ.