ಬೆಂಗಳೂರು : ಬೃಹತ್ ಬೆಂಗಳೂರಿನ 2020-21ನೇ ಸಾಲಿನ ಬಜೆಟ್ ಅನುಷ್ಠಾನ ಶೇ.20ರಷ್ಟು ಆಗಿಲ್ಲ. ಇದಕ್ಕೆ ಪಾಲಿಕೆ ಅಧಿಕಾರಿಗಳು ಕೊಡ್ತಿರೋ ರೆಡಿಮೇಡ್ ಉತ್ತರ ಅಂದರೆ ಅದು ಕೋವಿಡ್ ಸೋಂಕು.
2020-21ನೇ ಸಾಲಿನ 10,899 ಕೋಟಿ ರೂಪಾಯಿ ಮೊತ್ತದ ಬಜೆಟ್ ಅನ್ನು ಹಿಂದಿನ ಮೇಯರ್ ಗೌತಮ್ ಕುಮಾರ್ 2020 ಏಪ್ರಿಲ್ 24 ರಂದು ಮಂಡಿಸಿದ್ದರು. ಆದರೆ ಅದಾದ ಎರಡೇ ದಿನಕ್ಕೆ ಬಜೆಟ್ ಗಾತ್ರ ಏಕಾಏಕಿ 10,716 ಕೋಟಿ ರೂಪಾಯಿ ಮೊತ್ತಕ್ಕೆ ಕುಸಿಯಿತು. ಅದಾದ ಬಳಿಕ ದೇಶವ್ಯಾಪಿ ಕೋವಿಡ್ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೇರಿದ ನಿರಂತರ ಲಾಕ್ ಡೌನ್, ಕೋವಿಡ್ ನಿಯಂತ್ರಣದ ನಿಯಮಾವಳಿಗಳಿಂದ ಪಾಲಿಕೆ ಆರ್ಥಿಕ ಸಂಪನ್ಮೂಲ ಒಂದು ಕಡೆ ಕುಸಿಯಿತು. ಮತ್ತೊಂದು ಕಡೆ ಪಾಲಿಕೆ ಬಜೆಟ್ ನಲ್ಲಿ ಪ್ರಸ್ತಾಪಿಸಿದ ಶೇಕಡ 20ರಷ್ಟು ಅಂಶಗಳೂ ಆರ್ಥಿಕ ವರ್ಷ ಪೂರ್ಣಗೊಳ್ಳಲು ಇನ್ನು ಕೇವಲ ಒಂದೂವರೆ ತಿಂಗಳಿಗಿಂತ ಕಡಿಮೆ ಅವಧಿಯಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ.
ಪ್ರತಿ ಬಾರಿ ಆಡಳಿತ ನಡೆಸುವ ಪಕ್ಷಗಳು ಬಜೆಟ್ ಮಂಡಿಸುವಾಗಲೂ ನಾವು ವಾಸ್ತವಿಕ ಬಜೆಟ್ ಮಂಡಿಸುತ್ತೇವೆ ಅಂತಾನೆ ಹೇಳುತ್ತಾರೆ. ಆದರೆ ಪಾಲಿಕೆಯ ಆರ್ಥಿಕ ಸಂಪನ್ಮೂಲಕ್ಕಿಂತ ಹೆಚ್ಚಿನ ಬಜೆಟ್ ಮಂಡಿಸಿ ಸಂಪೂರ್ಣವಾಗಿ ಆಯವ್ಯಯ ಮಂಡನೆಯಾದ ಉದಾಹರಣೆಯೇ ಇಲ್ಲ.
ಬಜೆಟ್ ನಲ್ಲಿ ಹೇಳಿದ್ದೊಂದು ಆಗಿದ್ದೊಂದು :
ನಗರದಲ್ಲಿರುವ 19 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಪೈಕಿ ಲಕ್ಷಾಂತರ ಆಸ್ತಿಗಳು ಬಿ-ಖಾತಾ ಇರುವಂತದ್ದೇ. ಅವುಗಳನ್ನು ಸರ್ಕಾರದ ಅನುಮೋದನೆ ಪಡೆದು ಎ-ಖಾತೆಗಳಾಗಿ ಪರಿವರ್ತನೆ ಮಾಡೋದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ ಪಾಲಿಕೆ ಕಂದಾಯ ಅಧಿಕಾರಿಗಳು ಅದರಲ್ಲೂ ಹೊಸ ವಲಯ ವ್ಯಾಪ್ತಿಯಲ್ಲಿರುವ ಅಧಿಕಾರಿಗಳು ಲಂಚದ ಹಣ ಪಡೆದು ದುಡ್ಡಿನ ಆಸೆಗೆ ಅನಧಿಕೃತವಾಗಿ ಬಿ- ಖಾತಾ ಆಸ್ತಿಗಳಿಗೆ ಎ- ಖಾತಾ ಮಾಡಿಕೊಡುತ್ತಿದ್ದಾರೆ ಎಂಬ ಸಾಕಷ್ಟು ಆರೋಪಗಳು ಕೇಳಿಬಂದಿದೆ. ಬಾಕಿ ಸುಧಾರಣಾ ಶುಲ್ಕ ಅಂದಾಜು 300 ಕೋಟಿ ರೂಪಾಯಿ ವಸೂಲು ಮಾಡುವುದಾಗಿ ತಿಳಿಸಲಾಗಿತ್ತು. ಆ ಕಡೆಯೂ ಪಾಲಿಕೆ ಅಧಿಕಾರಿಗಳು ಗಮನ ಹರಿಸಲಿಲ್ಲ. ಮೂಲಭೂತ ಸೌಕರ್ಯ, ರಸ್ತೆ ನಿರ್ವಹಣೆ, ಕೆರೆ ಅಭಿವೃದ್ಧಿ, ಉದ್ಯಾನವನ ಅಭಿವೃದ್ಧಿ ಕಾರ್ಯಕ್ರಮಗಳು ಸೂಕ್ತ ರೀತಿ ಜಾರಿಯಾಗಿಲ್ಲ.
ನೆಲಕಚ್ಚಿದ ಕಲ್ಯಾಣ ಕಾರ್ಯಕ್ರಮಗಳು :
ಪಾಲಿಕೆ ವ್ಯಾಪ್ತಿಯಲ್ಲಿರುವ 198 ವಾರ್ಡ್ ಗಳಲ್ಲಿ ಶೇ.24.10 ಅನುದಾನದ ಕಲ್ಯಾಣ ಕಾರ್ಯಕ್ರಮಗಳು ಸೇರಿದಂತೆ ಕಲ್ಯಾಣ ಇಲಾಖೆಯಲ್ಲಿ 1,025 ಕೋಟಿ ರೂಪಾಯಿ ವೆಚ್ಚ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ವಾಸ್ತವವಾಗಿ ಶೇಕಡ 20ರಷ್ಟು ಹಣವನ್ನು ಕರ್ಚುಮಾಡಿಲ್ಲ. ವಾರ್ಡ್ ನಲ್ಲಿ ಅಂಗವಿಕಲರಿಗೆ ಸೈಕಲ್ ವಿತರಣೆ, ಬಡ ಮಹಿಳೆಯರಿಗೆ ಟೈಲರಿಂಗ್ ಮಿಷಿನ್ ವಿತರಣೆ, ಒಂಟಿಮನೆ ಹೀಗೆ ಕಲ್ಯಾಣ ಕಾರ್ಯಕ್ರಮಗಳು ಯಾವುದೂ ಅನುಷ್ಠಾನವಾಗಿಲ್ಲ. ವಾರ್ಡ್ ಪ್ರಾಗ್ರಾಮ್ ಆಫ್ ವರ್ಕ್ಸ ಕೆಲಸಗಳು ಕೇವಲ ಬುಕ್ ನಲ್ಲೇ ಉಳಿದಿದೆ.
ಮೇಯರ್ ವೈದ್ಯಕೀಯ ಪರಿಹಾರ ನಿಧಿ ಅರ್ಜಿಗಳಿಗೆ ತ್ರಿಶಂಕು ಸ್ಥಿತಿ :
2020-21ರ ಬಜೆಟ್ ಮಂಡಿಸಿದ ಹಿಂದಿನ ಮೇಯರ್ ಗೌತಮ್ ಕುಮಾರ್ ಹಾಗೂ ಆಗಿದ್ದ ಕಮಿಷನರ್ ಸುನಿಲ್ ಕುಮಾರ್ ನಡುವಿನ ಶೀಥಲ ಸಮರದಿಂದಾಗಿ ಮೇಯರ್ ನಿಧಿಯಿಂದ ವೈದ್ಯಕೀಯ ಪರಿಹಾರ ನೀಡುವ ಕಡತಗಳು ವಿಲೇವಾರಿಯಾಗಲಿಲ್ಲ. ಆನಂತರ ಮೇಯರ್ ಅವಧಿ ಹಾಗೂ ಕಾರ್ಪೊರೇಟರ್ ಗಳ ಅವಧಿ ಪೂರ್ಣಗೊಂಡ ಬಳಿಕ ಕ್ಯಾನ್ಸರ್, ಕಿಡ್ನಿ ಕಾಯಿಲೆ ಯಂತಹ ಗಂಭೀರ ಆರೋಗ್ಯ ಸಮಸ್ಯೆಯಿಂದ ನರಳುವವರ ಚಿಕಿತ್ಸೆಗಾಗಿ ಸಲ್ಲಿಸಿದ್ದ 3 ರಿಂದ 4 ಕೋಟಿ ರೂಪಾಯಿ ಮೊತ್ತದ ಸಾವಿರಾರು ಅರ್ಜಿಗಳು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗುವ ಹಂತಕ್ಕೆ ಬಂದಿತ್ತು. ಜನಪ್ರತಿನಿಧಿಗಳ ಅವಧಿ ಮುಗಿದ ಹಿನ್ನಲೆಯಲ್ಲಿ ಪಾಲಿಕೆ ಆಯುಕ್ತರು ಹಣ ಬಿಡುಗಡೆಗೆ ತಡೆ ನೀಡಿದ್ದರು. ಹೀಗಾಗಿ ಆ ಹಣವೂ ಅನಾರೋಗ್ಯ ಪೀಡಿತರಿಗೆ ಬಿಡುಗಡೆಯಾಗಿಲ್ಲ.
ಬಜೆಟ್ ಅನುಷ್ಠಾನಕ್ಕೆ ನಿರ್ಲಕ್ಷ್ಯ :
ಈ ಬಗ್ಗೆ ಬೆಂಗಳೂರು ವೈರ್ ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮೇಯರ್ ಪದ್ಮಾವತಿ, ಬಿಬಿಎಂಪಿಯಲ್ಲಿ ಸಾಮಾನ್ಯವಾಗಿ ಪ್ರತಿವರ್ಷ ಶೇಕಡ 40 ರಿಂದ 45ರಷ್ಟು ಬಜೆಟ್ ಅನುಷ್ಠಾನಕ್ಕೆ ಬರುತ್ತಿತ್ತು. 2020ರಲ್ಲಿ ಕೋವಿಡ್ ಸೋಂಕು ಕಂಡುಬಂದ ಕಾರಣ ಹಾಗೂ ಜನಪ್ರತಿನಿಧಿಗಳ ಆಡಳಿತ ಮುಗಿದ ಹಿನ್ನಲೆಯಲ್ಲಿ ಅಧಿಕಾರಿಗಳು ಬಜೆಟ್ ಅನುಷ್ಠಾನಕ್ಕೆ ಹೆಚ್ಚು ಗಮನ ನೀಡಿಲ್ಲ.
ಹಾಗಾಗಿ ಪಾಲಿಕೆಯಲ್ಲಿ ಈ ಬಾರಿ ಶೇ.15ರಿಂದ 20ರಷ್ಟು ಆಯವ್ಯಯದ ಕಾರ್ಯಕ್ರಮಗಳು ಜಾರಿಗೆ ಬಂದಿಲ್ಲ. ಈಗ ರಾಜ್ಯ ಸರ್ಕಾರ ಬಿಬಿಎಂಪಿ ಕಾಯ್ದೆ-2020 ಅನುಷ್ಠಾನಕ್ಕೆ ತಂದು ಕೌನ್ಸಿಲರ್ ಗಳ ಅಧಿಕಾರವನ್ನು ಕಿತ್ತುಕೊಂಡಿದೆ. ಪಾಲಿಕೆ ಚುನಾವಣೆ ನಡೆಸಲು ಬೆಂಗಳೂರು ಶಾಸಕರ ಒತ್ತಡದ ಕಾರಣ ರಾಜ್ಯ ಸರ್ಕಾರ ಒಂದಲ್ಲಾ ಒಂದು ಕುಂಟುನೆಪ ಹೇಳುತ್ತಿದೆ. ಹೀಗಾದ್ರೆ ಬೆಂಗಳೂರಿನ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯೋದಾದ್ರು ಹೇಗೆ? ಎಂದು ಮಾಜಿ ಮೇಯರ್ ಪದ್ಮಾವತಿ ಬೇಸರ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರಿಗೆ ಮೊದಲು ಕಾಮಗಾರಿ ಪೂರ್ಣಗೊಳಿಸಿದ ಒಂದೂವರೆ ವರ್ಷದ ಒಳಗೆ ಪಾಲಿಕೆಯಿಂದ ಹಣ ಪಾವತಿಯಾಗುತ್ತಿತ್ತು. ಈಗ ಆ ಅವಧಿ 28 ತಿಂಗಳಿಗೆ ಏರಿಕೆಯಾಗಿದೆ. ಹೊಸ ಯೋಜನೆಗಳು ಕಾರ್ಯಗತವಾಗಲಿಲ್ಲ. ಕೋವಿಡ್ ಕಿಟ್ ಹಗರಣವೇ ಸಾಧನೆಯಾಯಿತು. 110 ಹಳ್ಳಿಗಳಿಗೆ ಅಗತ್ಯ ಸೌಕರ್ಯ ಕಲ್ಪಿಸುವಲ್ಲಿ ಪಾಲಿಕೆ ಆಡಳಿತ ಎಡವಿತು. ಕಸದ ಗುತ್ತಿಗೆದಾರರಿಗೆ ಆರೇಳು ತಿಂಗಳ ಹಣ ಪಾವತಿಯಾಗಿಲ್ಲ. ಆಡಳಿತಗಾರರು ಬಂದ ಮೇಲಂತೂ ಹಲವು ಕಾರ್ಯಕ್ರಮಗಳಿಗೆ ವರ್ಕ್ ಕೋಡ್ ನೀಡುವುದನ್ನೇ ನಿಲ್ಲಿಸಿದ್ದಾರೆ. ಒಟ್ಟಾರೆ 2021ರ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ್ದಾರೆ ವಿರೋಧ ಪಕ್ಷದ ಮಾಜಿ ನಾಯಕ ಶಿವರಾಜ್.
2021-22ರಲ್ಲಿ ವಾಸ್ತವಿಕ ಬಜೆಟ್ ಗೆ ಒತ್ತು :
ಈ ಬಾರಿ ಕೌನ್ಸಿಲರ್ ಗಳ ಬದಲಿಗೆ ಅಧಿಕಾರಿಗಳ ಬಳಿ ಪಾಲಿಕೆ ಆಡಳಿತ ಇರುವುದರಿಂದ ಪಾಲಿಕೆ ಆದಾಯಕ್ಕೆ ತಕ್ಕಂತೆ 2021-22ರ ಆಯವ್ಯಯ ಮಂಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಆಡಳಿತಗಾರರಾದ ಗೌರವ್ ಗುಪ್ತಾ ಹಾಗೂ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ನೇತೃತ್ವದಲ್ಲಿ ಹಲವು ಬಜೆಟ್ ಪೂರ್ವ ಚರ್ಚೆಗಳು ನಡೆಯುತ್ತಿದೆ. ಪಾಲಿಕೆಯಲ್ಲಿ ಆರ್ಥಿಕ ಶಿಸ್ತಿನ ಜಪ ಮಾಡುತ್ತಿರುವ ಮಂಜುನಾಥ್ ಪ್ರಸಾದ್ ಈ ಬಾರಿ ಶತಾಯ ಗತಾಯ 7 ಸಾವಿರ ಕೋಟಿ ರೂಪಾಯಿ ಒಳಗೆ ಬಜೆಟ್ ಮಂಡಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
2021-22ರಲ್ಲಿ 7 ಸಾವಿರ ಕೋಟಿ ರೂ. ಮೀರದ ಬಜೆಟ್ ಮಂಡನೆ ನಿರೀಕ್ಷೆ :
2020-21ರ ಬಜೆಟ್ ಅನುಷ್ಠಾನ ಹಾಗೂ 2021-2022ರ ಹೊಸ ಆಯವ್ಯಯ ಮಂಡನೆ ಕುರಿತಂತೆ ಬಿಬಿಎಂಪಿ ವಿಶೇಷ ಹಣಕಾಸು ಆಯುಕ್ತರಾದ ತುಳಸಿ ಮದ್ದಿಮನಿ, ಕೋವಿಡ್ ಸೋಂಕು ನಿಯಂತ್ರಣ ಕಾರ್ಯದಲ್ಲಿ ಪಾಲಿಕೆಯ ಅಧಿಕಾರಿಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಆರ್ಥಿಕ ಸಂಕಷ್ಠ ಸೇರಿದಂತೆ ಮೊದಲಾದ ಕಾರಣಗಳಿಂದ 2020-21ನೇ ಸಾಲಿನಲ್ಲಿ ಈ ತನಕ ಶೇಕಡ 25ರಷ್ಟು ಬಜೆಟ್ ಅನುಷ್ಠಾನವಾಗಿದೆ. 2021-22ನೇ ಸಾಲಿನಲ್ಲಿ ಪಾಲಿಕೆಯ ಆದಾಯ 5 ರಿಂದ 6 ಸಾವಿರ ಕೋಟಿ ರೂಪಾಯಿಯಿದ್ದು, 7 ಸಾವಿರ ಕೋಟಿ ರೂಪಾಯಿಗಳಿಗೆ ಮೀರದಂತೆ ಬಜೆಟ್ ಮಂಡಿಸುವ ಸಾಧ್ಯತೆಯಿದೆ ಎಂದು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಪಾಲಿಕೆ ಚುನಾವಣೆ ಮುಂದೂಡಿಕೆಗೆ ಮುಂದುವರೆದ ತಂತ್ರ :
ರಾಜ್ಯ ಸರ್ಕಾರದ ಬಜೆಟ್ ಮಂಡನೆಗೆ ಭರದಿಂದ ಪೂರ್ವಸಿದ್ಧತೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಪಾಲಿಕೆಯಲ್ಲೂ ರಾಜ್ಯ ಸರ್ಕಾರದ ಆಯವ್ಯಯದ ನಂತರ ಬಜೆಟ್ ಮಂಡಿಸಲು ತೆರೆಮರೆಯ ಕಸರತ್ತು ನಡೆಯುತ್ತಿದೆ. ಪಾಲಿಕೆಯಲ್ಲಿ ಕೌನ್ಸಿಲರ್ ಗಳು ಇಲ್ಲದ ಕಾರಣ ಅಧಿಕಾರಿಗಳ ಮೂಲಕ ಪರೋಕ್ಷವಾಗಿ ಆಡಳಿತ ನಡೆಸಲು ಬೆಂಗಳೂರು ಶಾಸಕರು ಒಂದಾಗಿ ರಾಜ್ಯ ಹಾಗೂ ಪಾಲಿಕೆ ಬಜೆಟ್ ನಲ್ಲಿ ತಮಗೆ ಬೇಕಾದಂತೆ ಯೋಜನೆಗಳಿಗೆ ಹಣ ಮೀಸಲಿಡಲು ಪ್ರಭಾವ ಬೀರುತ್ತಿದ್ದಾರೆ ಎಂದು ಗೊತ್ತಾಗಿದೆ. ಪಾಲಿಕೆ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರದ ಮೂಲಕ, ಸುಪ್ರೀಂಕೋರ್ಟ್ ನಲ್ಲಿ ಈಗಾಗಲೇ ಇರುವ ಪ್ರಕರಣದಲ್ಲಿ 243 ವಾರ್ಡ್ ಪುನರ್ ವಿಂಗಡಣೆ ಹಾಗೂ 2021ರ ಜನಗಣತಿ ಕಾರ್ಯಕ್ರಮದ ಕಾರಣ ನೀಡಿ, ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.