ಬೆಂಗಳೂರು : ತುರ್ತು ಸಂದರ್ಭ, ಅದರಲ್ಲೂ ನೈಸರ್ಗಿಕ ವಿಕೋಪದಂಥ ದುರಂತಗಳು ಎದುರಾದಾಗ ಎಲ್ಲೆಂದರಲ್ಲಿ ಸಾಗಿಸಬಹುದಾದ 100 ಹಾಸಿಗೆಗಳ ಹೈಟೆಕ್ ಮಾಡ್ಯುಲರ್ ಐಸಿಯು ಘಟಕ ನಗರದಲ್ಲಿ ತಲೆ ಎತ್ತಿದೆ.
ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೇವಲ ಮೂರು ತಿಂಗಳ ಅವಧಿಯಲ್ಲಿ ಈ 100 ಹಾಸಿಗೆಗಳ ಐಸಿಯುವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಲೋಕಾರ್ಪಣೆ ಮಾಡಿದ್ದಾರೆ.
ಈ ಮೂಲಕ ಇಂದಿನಿಂದ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ. ಇಂಥ ಐಸಿಯುಗಳು ಹೆಚ್ಚು ಪರಿಣಾಮಕಾರಿ. ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದಾಗಿದೆ.
ಭಾರತದಲ್ಲಿ ಇಂತಹ ಹೈಟೆಕ್ ಮಾಡ್ಯುಲರ್ ಐಸಿಯು ಪ್ರಯೋಗ ಮೊತ್ತಮೊದಲನೆಯದಾಗಿದೆ. ಕೋವಿಡ್‌ನಂಥ ಸಂಕಷ್ಟ ಪರಿಸ್ಥಿತಿಯೂ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ಈ ಐಸಿಯು ಘಟಕವನ್ನು ಬಳಕೆ ಮಾಡಬಹುದು.
ಹಲವು ದಾನಿಗಳ ನೆರವಿನಿಂದ ಈ ಘಟಕವನ್ನು ಸ್ಥಾಪನೆ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅತ್ಯಂತ ಕಡಿಮೆ ಅವಧಿಯಲ್ಲಿ ಮಾಡ್ಯೂಲರ್ ಐಸಿಯು ಸ್ಥಾಪಿಸಿರುವುದು ಶ್ಲಾಘನೀಯ. ಇದರಿಂದ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ.
ಜಯದೇವ ಹೃದ್ರೋಗ ಆಸ್ಪತ್ರೆ ವತಿಯಿಂದ 50 ಹಾಸಿಗೆಯ ಕ್ಯಾಥ್ ಲ್ಯಾಬ್ ಸ್ಥಾಪನೆ ಹಾಗೂ 50 ಹಾಸಿಗೆಯ ಟ್ರಾಮಾ ಕೇರ್ ಸೆಂಟರ್ ಹಾಗೂ 150 ಹಾಸಿಗೆಯ ತಾಯಿ- ಮಗು ಚಿಕಿತ್ಸಾ ಕೇಂದ್ರವನ್ನು ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದರು.
ನಂತರ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಶಸ್ತ್ರಚಿಕಿತ್ಸಾ ಘಟಕ ಹಾಗೂ ಕ್ಲೀನ್ ರೂಮುಗಳನ್ನು ಅಭಿವೃದ್ಧಿಪಡಿಸುವ ಬೆಂಗಳೂರು ಮೂಲದ ʼರಿನ್ಯಾಕ್’ ಎಂಬ ಕಂಪನಿ ಇವುಗಳನ್ನು ಅತ್ಯಾಧುನಿಕ ಮಾಡ್ಯುಲರ್ ಐಸಿಯು ಅಭಿವೃದ್ಧಿಪಡಿಸಿದೆ. ಈ ಕಂಪನಿಗೆ ನಾನು ಭೇಟಿ ನೀಡಿ, ಎಲ್ಲ ರೀತಿಯ ಪರಿಶೀಲನೆ ಮಾಡಿ, ಕಡಿಮೆ ದರದಲ್ಲಿ ಜಾಗತಿಕ ಮಟ್ಟದ ಗುಣಮಟ್ಟ ದೃಷ್ಟಿಯಲ್ಲಿ ಇಟ್ಟುಕೊಂಡು ಈ ಐಸಿಯು ಘಟಕಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಮಾಡ್ಯುಲರ್ ಐಸಿಯು ಹೇಗಿರುತ್ತೆ?
ಸರಕು ಸಾಗಣೆ ಮಾಡುವ ಕಂಟೇನರ್ʼಗಳ ಮಾದರಿ ಇಟ್ಟುಕೊಂಡು ಈ ಐಸಿಯುಗಳನ್ನು ಸಿದ್ಧಪಡಿಸಲಾಗಿದೆ. ಪ್ರತೀ ಒಂದು ಕಂಟೇನರ್ʼನಲ್ಲಿ ಐದು ಐಸಿಯು ಹಾಸಿಗೆಗಳಿರುತ್ತದೆ. ಈ ರೀತಿ 20 ಕಂಟೇನರ್ ಸೇರಿ ಒಟ್ಟು 100 ಹಾಸಿಗೆಗಳು ಲಭ್ಯ ಇರುತ್ತವೆ.
ಎಲ್ಲ ಮಾಡ್ಯೂಲರ್ ಐಸಿಯುಗಳ ನಿರ್ವಹಣೆಗೆ ತಜ್ಞ ವೈದ್ಯರು, ಅರೆವೈದ್ಯ ಸಿಬ್ಬಂದಿ, ನರ್ಸುಗಳು ಸೇರಿ ಒಟ್ಟು 150 ಮಂದಿ ಸಿಬ್ಬಂದಿಯನ್ನು ನೇಮಿಸಲಾಗಿದೆ.
ಪ್ರತಿ ಐಸಿಯು ಗಾತ್ರ 12.135 X 3.3 X 2.62 ಮೀಟರ್ ನಷ್ಟಿದೆ. ಯಾವುದೇ ವಾತಾವರಣಕ್ಕೂ ಸರಿಹೊಂದುವ ತಾಂತ್ರಿಕ ಸೌಲಭ್ಯ, ಕುಶಲತೆಯನ್ನು ಇವು ಹೊಂದಿದೆ.
ಹೈ ಸ್ಪೀಡ್ ವೈಫೈ, ಪ್ರತ್ಯೇಕ ಲ್ಯಾನ್ ಕೇಬಲ್, ಎಚ್‌ಡಿ ಕ್ಯಾಮೆರಾಗಳು, ಸೆಂಟ್ರಲ್ ಮಾನಿಟರಿಂಗ್ ಸಿಸ್ಟಂ, ಪ್ರತ್ಯೇಕ ನೀರು ಮತ್ತು ಒಳಚರಂಡಿ ವ್ಯವಸ್ಥೆ ಪ್ರತಿ ಮಾಡ್ಯೂಲರ್ ಐಸಿಯುಗೂ ಇರುತ್ತದೆ. ಜತೆಗೆ, ಸೆಂಟ್ರಲ್ ಮಾನಿಟರಿಂಗ್ ಸಿಸ್ಟಮ್ ಮೂಲಕ ವೈದ್ಯರು ಎಲ್ಲೇ ಇದ್ದರೂ ಸುಲಭವಾಗಿ ಈ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಚಿಕಿತ್ಸೆ ನೀಡಬಹುದು.
ಲಿಕ್ವಿಡ್ ಆಕ್ಸಿಜನ್ (ದ್ರವರೂಪದ ಆಮ್ಲಜನಕ) ವ್ಯವಸ್ಥೆ ಇರುತ್ತದೆ. ಇದರ ಪ್ರಮಾಣವನ್ನು 2,000 ಲೀಟರುಗಳಿಂದ 8,000 ಲೀಟರಿಗೆ ಹೆಚ್ಚಿಸಲಾಗಿದೆ. ಹವಾನಿಯಂತ್ರಿತ ವ್ಯವಸ್ಥೆ ಜತೆಗೆ, ಶುದ್ಧ ಗಾಳಿ ತುಂಬಿಸಿ ಕಂಪ್ಲೀಟ್ ಏರ್ʼಟೈಟ್ ಮಾಡಲಾಗಿರುತ್ತದೆ. ನಮ್ಮ ದೇಶದಲ್ಲೇ ಇಂತಹ ವ್ಯವಸ್ಥೆ ಇದೇ ಮೊದಲು ಎನ್ನಲಾಗಿದೆ.
ನಮ್ಮ ಸಂಶೋಧಕರು, ತಜ್ಞರ ಸೃಜನಶೀಲತೆಗೆ ಇದೊಂದು ಉತ್ತಮ ಉದಾಹರಣೆ. ಪ್ರಸಕ್ತ ಕಾಲದ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಅತ್ಯಾಧುನಿಕವಾಗಿ ರೂಪಿಸಲಾಗಿದೆ. ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಹಾಗೂ ಬಳಸಲಾಗಿರುವ ಎಲ್ಲ ಉಪಕರಣಗಳು ಉತ್ತಮವಾಗಿದೆ ಎಂದು ಹೇಳುತ್ತಾರೆ ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯರು.
ಹೈಟೆಕ್ ಮಾಡ್ಯುಲರ್ ಐಸಿಯು ಘಟಕ ಉದ್ಘಾಟನಾ ಸಮಾರಂಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಶಾಸಕ ದಿನೇಶ್ ಗುಂಡೂರಾವ್ ಹಾಜರಿದ್ದರು.