ಬೆಂಗಳೂರು : ರಾಜ್ಯ ಸರ್ಕಾರ ಇದೇ ಏಪ್ರಿಲ್ ನಲ್ಲಿ ಬೆಂಗಳೂರು ಮಿಷನ್ 2022 ಅಡಿಯಲ್ಲಿ ತುರಹಳ್ಳಿಯ ಸಂರಕ್ಷಿತ ಅರಣ್ಯ ಪ್ರದೇಶವನ್ನು ಬೃಹತ್ ವೃಕ್ಷ್ಯೋದ್ಯಾನವನ್ನಾಗಿ ಮಾಡಲು ಹೊರಟಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸ್ಥಳೀಯರು, ಪರಿಸರ ಪ್ರೇಮಿಗಳು ಸರ್ಕಾರದ ಈ ನಡೆಯನ್ನು ಖಂಡಿಸಿ ತುರಹಳ್ಳಿ ಕಿರು ಅರಣ್ಯ ಸಂರಕ್ಷಿತ ಪ್ರದೇಶದ ಮುಂದೆ ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಯಾವುದೇ ಕಾರಣಕ್ಕೂ ಸಂರಕ್ಷಿತ ಅರಣ್ಯ ಪ್ರದೇಶವನ್ನು ಮರಗಳ ಉದ್ಯಾನವನ ಮಾಡಲು ಬಿಡುವುದಿಲ್ಲ ಎಂದು ಸರ್ಕಾರ ಮತ್ತು ಅರಣ್ಯ ಇಲಾಖೆ ವಿರುದ್ಧ ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು. ಈ ಪ್ರತಿಭಟನಾ ಕಾರ್ಯಕ್ರಮಕ್ಕೆ ನಗರದ ಹಲವು ನಾಗರೀಕ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಪರಿಸರ ಸಂಘಟನೆಗಳು ಬೆಂಬಲ ಸೂಚಿಸಿದ್ದವು.
ರಾಜಧಾನಿ ಬೆಂಗಳೂರಿನಲ್ಲಿ ಸಾವಿರಾರು ಉದ್ಯಾನಗಳಿವೆ. ಆ ಉದ್ಯಾನವನಗಳನ್ನು ನಿರ್ವಹಣೆ ಮಾಡೋಕೆ ರಾಜ್ಯ ಸರ್ಕಾರವಾಗಲಿ, ಬಿಬಿಎಂಪಿಗೆ ಆಗಲಿ ಸರಿಯಾಗಿ ಅನುದಾನ ನೀಡುತ್ತಿಲ್ಲ. ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗದ ಸರ್ಕಾರವೀಗ ಬನಶಂಕರಿ 6ನೇ ಹಂತದ ಬಳಿಯಿರುವ ತುರಹಳ್ಳಿ ಮೀಸಲು ಕಿರು ಅರಣ್ಯ ಸಂರಕ್ಷಿತ ಪ್ರದೇಶವನ್ನು ಬೃಹತ್ ವೃಕ್ಷ್ಯೋದ್ಯಾನವನ್ನಾಗಿ ಮಾಡಲು ಹೊರಟಿದೆ. ಇದು ಸ್ಥಳೀಯರು ಹಾಗೂ ಪರಿಸರಪ್ರೇಮಿಗಳ ನಿದ್ದೆಗೆಡೆಸಿದೆ. 597 ಎಕರೆ ವಿಸ್ತೀರ್ಣದ ತುರಹಳ್ಳಿ ಮೀಸಲು ಕಿರು ಅರಣ್ಯ ಸಂರಕ್ಷಿತ ಪ್ರದೇಶ ಬೆಂಗಳೂರಿಗೆ ಹೊಂದಿಕೊಂಡಂತಿರುವ ಏಕೈಕ ದೊಡ್ಡ ಅರಣ್ಯ ಪ್ರದೇಶವಾಗಿದೆ.
ಬಿಡಿಎ ಈ ಹಿಂದೆ ಅನಧಿಕೃತವಾಗಿ ಸ್ವಾಧೀನಪಡಿಸಿಕೊಂಡಿದ್ದ 38 ಎಕರೆ ಜಾಗವನ್ನು ಸರ್ಕಾರ ವಶಪಡಿಸಿಕೊಂಡು ಪುನಃ ಅರಣ್ಯ ಇಲಾಖೆಗೆ ನೀಡಿದೆ. ಆ ಜಾಗದಲ್ಲಿ ಅರಣ್ಯ ಇಲಾಖೆ ಈಗಾಗಲೇ ಸಾವಿರಾರು ಗಿಡಗಳನ್ನು ನೆಟ್ಟು ಆ ಪ್ರದೇಶದಲ್ಲಿ ವೃಕ್ಷ್ಯಾಧ್ಯಾನ ನಿರ್ಮಾಣ ಮಾಡಿದೆ. ಅದನ್ನೇ ಟ್ರೀಪಾರ್ಕ್ ಆಗಿ ಬಳಸಿಕೊಳ್ಳಲಿ. ಅದರ ಜೊತೆಗೆ ತುರಹಳ್ಳಿ ಕಿರು ಅರಣ್ಯ ಸಂರಕ್ಷಿತ ಪ್ರದೇಶವನ್ನು ಸೇರಿಸಿಕೊಂಡು ಬೃಹತ್ ಮರಗಳ ಉದ್ಯಾನವನ ಮಾಡುವುದು ಸರಿಯಲ್ಲ. ಇದು ಅರಣ್ಯ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದೆ. ಮೀಸಲು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಟ್ರೀಪಾರ್ಕ್ ಮಾಡಲು ಬಿಡುವುದಿಲ್ಲ.
– ಜೋಸೆಫ್ ಹೂವರ್, ಪರಿಸರ ಹೋರಾಟಗಾರ
ಇದಕ್ಕೆ ಹೊಂದಿಕೊಂಡಂತೆಯೇ ಒಂದೂವರೆ ಕಿಲೋ ಮೀಟರ್ ಅಂತರದಲ್ಲಿ 572 ಎಕರೆ ವಿಸ್ತೀರ್ಣದ ರಾಜ್ಯ ಮೀಸಲು98 ಸಂರಕ್ಷಿತರ ಅರಣ್ಯವಿದೆ. ಎರಡು ಅರಣ್ಯಗಳು ನೈಸ್ ರಸ್ತೆ ಹಾಗೂ ಬಿಡಿಎನ ಬನಶಂಕರಿ 6ನೇ ಹಂತದ ಲೇಔಟ್ ಅಭವೃದ್ಧಿಯಿಂದಾಗಿ 6 ಭಾಗಗಳಾಗಿ ಹೋಳಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1100 ಎಕರೆಗೂ ಹೆಚ್ಚಿನ ವಿಸ್ತೀರ್ಣದ ಅರಣ್ಯ ಪ್ರದೇಶ ಬಹುಶಃ ರಾಜ್ಯದ ಯಾವುದೇ ನಗರ ಪಾಲಿಕೆ ವ್ಯಾಪ್ತಿಯಲ್ಲಿಲ್ಲ. ಇಂತಹ ಜೀವ ವೈವಿಧ್ಯತೆಯ ತಾಣದಲ್ಲಿ ರಾಜ್ಯ ಸರ್ಕಾರ ಅರಣ್ಯ ಇಲಾಖೆಯ ಮೂಲಕ ಬೃಹತ್ ವೃಕ್ಷ್ಯೋದ್ಯಾನ ಮಾಡುವ ಅವಶ್ಯಕತೆಯಿಲ್ಲ ಎಂದು ಪರಿಸರ ಪ್ರೇಮಿಗಳು ಹೇಳಿದ್ದಾರೆ.
ತುರಹಳ್ಳಿ ಕಿರು ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಏನಿಲ್ಲವೆಂದರೂ ಕನಿಷ್ಠ 150 ರಿಂದ 200 ನವಿಲುಗಳಿವೆ. ಈ ತಾಣವು ರಾಷ್ಟ್ರಪಕ್ಷಿಯಾದ ನವಿಲುಗಳಿಗೆ ಅತ್ಯುತ್ತಮ ಆವಾಸ ಸ್ಥಾನವಾಗಿದೆ. ಅಳವಿನಂಚಿನಲ್ಲಿರುವ ಪ್ರಬೇಧಗಳ ಪಟ್ಟಿಯಲ್ಲಿರುವ ನವಿಲುಗಳ ಸಂರಕ್ಷಣೆಗಾಗಿ ಈ ಪ್ರದೇಶವನ್ನು ನವಿಲು ಸಂರಕ್ಷಿತ ಪ್ರದೇಶವೆಂದು ಘೋಷಿಸುವಂತೆ ಅರಣ್ಯ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಗಳಿಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದೆವು. ಪಿಸಿಸಿಎಫ್ ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ತುರಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಟ್ರೀಪಾರ್ಕ್ ಮಾಡುವುದು ಜೀವ ವೈವಿಧ್ಯತೆ ಸಂರಕ್ಷಣೆ ದೃಷ್ಟಿಯಿಂದ ಉತ್ತಮ ಕ್ರಮವಲ್ಲ.
– ಕುಮಾರ್, ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ತಂಡದ ಮುಖ್ಯಸ್ಥ, ಬೆಂಗಳೂರು ನಗರ ಗೌರವ ವನ್ಯಜೀವಿ ಪರಿಪಾಲಕ
ತುರಹಳ್ಳಿ ಅರಣ್ಯ ಜೈವಿಕ ಸಂಪತ್ತಿನ ಆಗರ :
ಈ ಪ್ರದೇಶದಲ್ಲಿ ಬಿದಿರು, ಯುಕಿಲಿಪ್ಟಸ್ ಸೇರಿದಂತೆ 1,60,000 ಹೆಚ್ಚು ವಿವಿಧ ರೀತಿಯ, ಜಾತಿಯ ಮರಗಿಡಗಳಿದ್ದು, ಸುತ್ತಮುತ್ತಲ ಪರಿಸರವನ್ನು ತಂಪಾಗಿರಿಸಿದೆ. ಇಲ್ಲಿರುವ ಸಸ್ಯ ಸಂಪತ್ತುಗಳ ಪೈಕಿ ಶೇಕಡ 80ರಷ್ಟು ಗಿಡಗಳು ಗಿಡಮೂಲಿಕೆಗಳಾಗಿವೆ. ಇದಲ್ಲದೆ ಈ ಕಿರು ಅರಣ್ಯದಲ್ಲಿ ಚಿರತೆ, ಮುಂಗುಸಿ, ಜಿಂಕೆ, ಮುಳ್ಳು ಹಂದಿ, ಕಾಡು ಮೊಲ, ಕಾಡು ಪಾಪ, ನವಿಲು, ಉದ್ದನೆಯ ಬಾಲದ ಅಪರೂಪದ ಇಲಿ, ತೋಡ ಸೇರಿದಂತೆ ಹಲವು ಜೀವ ಸಂತತಿಗಳಿವೆ. ಹೆಬ್ಬಾವು, ನಾಗರಹಾವು ಸೇರಿದಂತೆ 28 ವಿವಿಧ ರೀತಿಯ ಸರೀಸೃಪಗಳಿಗೆ ತುರಹಳ್ಳಿ ಅರಣ್ಯ ಪ್ರದೇಶ ಆವಾಸ ಸ್ಥಾನವಾಗಿದೆ. ಇದರ ಜೊತೆಗೆ 125 ವಿವಿಧ ಪಕ್ಷಿ ಪ್ರಬೇಧಗಳಿವೆ. ಅವುಗಳ ಪೈಕಿ 38 ಅಪರೂಪದ ಪಕ್ಷಿ ಸಂಕುಲಗಳಿಗೆ ಆಶ್ರಯ ಒದಗಿಸಿದೆ.
ಬಯೋಪಾರ್ಕ್ ಪ್ರಸ್ತಾವನೆ ಹಿಂಪಡೆದಿದ್ದ ಅರಣ್ಯ ಇಲಾಖೆ :
ಬೆಂಗಳೂರು ಅರಣ್ಯ ವಿಭಾಗದ ವ್ಯಾಪ್ತಿಗೆ ಬರುವ ತುರಹಳ್ಳಿ ಕಿರು ಅರಣ್ಯ ಪ್ರದೇಶ ಕುರುಚಲು ಕಾಡುಗಳಾದರೆ, ತುರಹಳ್ಳಿ ಮೀಸಲು ಅರಣ್ಯ ಪ್ರದೇಶ ರಾಜ್ಯ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಮೈಸೂರು ಸಂಸ್ಥಾನದಲ್ಲಿದ್ದಾಗ ಈ ಸ್ಥಳವನ್ನು ಅರಣ್ಯ ಇಲಾಖೆಗೆ ಅಂದಿನ ಸರ್ಕಾರ ಹಸ್ತಾಂತರ ಮಾಡಿತ್ತು. 2019ರಲ್ಲಿ ಅರಣ್ಯ ಇಲಾಖೆ ಸ್ಟೇಟ್ ಫಾರೆಸ್ಟ್ ಸ್ಥಾನಮಾನದ ಅರಣ್ಯದಲ್ಲಿ ಬಯೋಪಾರ್ಕ್ ಮಾಡುವ ಪ್ರಸ್ತಾವನೆ ಇಟ್ಟಾಗ ಪರಿಸರ ತಜ್ಞರು, ಆಸಕ್ತರು ಅದರಿಂದಾಗುವ ಅಪಾಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಹೀಗಾಗಿ ಆ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು ಎನ್ನಲಾಗಿದೆ.
ಬೆಂಗಳೂರು ಮಿಷನ್- 2022ರ ಅಡಿಯಲ್ಲಿ ನಗರದಲ್ಲಿರುವ 102 ಎಕರೆ ಪ್ರದೇಶದ ಕಾಡುಗೋಡಿ ಹಾಗೂ 98 ಎಕರೆ ವಿಸ್ತೀರ್ಣದ ಮಾಚೊಹಳ್ಳಿಯಲ್ಲಿ ಬೃಹತ್ ವೃಕ್ಷೋದ್ಯಾನ ಮಾಡಲು ಹೊರಟಿದೆ. ಆ ಪೈಕಿ ತುರಹಳ್ಳಿಯಲ್ಲಿನ ಕಿರು ಅರಣ್ಯ ಪ್ರದೇಶದಲ್ಲಿ ಇದೇ ಏಪ್ರಿಲ್ ತಿಂಗಳಿನಲ್ಲಿ ಟ್ರೀಪಾರ್ಕ್ ಸಿದ್ಧಪಡಿಸಿ ಉದ್ಘಾಟನೆ ಮಾಡಲಾಗುವುದು, ಕಾಡುಗೋಡಿಯಲ್ಲಿ ಮೇ ತಿಂಗಳ ವೇಳೆಗೆ ಹಾಗೂ ಮಾಚೊಹಳ್ಳಿಯಲ್ಲಿ ಜೂನ್ ತಿಂಗಳಲ್ಲಿ ಟ್ರೀಪಾರ್ಕ್ ಮಾಡಿ ಲೋಕಾರ್ಪಣೆ ಮಾಡಲಾಗುವುದು ಎಂದು ಇತ್ತಿಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರು ಮಿಷನ್-2022 ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಘೋಷಿಸಿದ್ದರು. ಇದಾದ ಬಳಿಕ ತುರಹಳ್ಳಿ ಅರಣ್ಯ ಪ್ರದೇಶವನ್ನು ಬೃಹತ್ ವೃಕ್ಷೋದ್ಯಾನವಾಗಿ ಮಾಡದಂತೆ ಸ್ಥಳೀಯರು, ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.