ಬೆಂಗಳೂರು : ದೇಶದ ಮೊತ್ತಮೊದಲ ಮಾನವಸಹಿತ ಗಗನಯಾನಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ. ಈ ನಡುವೆ ಏರೋ ಇಂಡಿಯಾದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್ ಆರ್ ಎಲ್) ದ ಪೆವಿಲಿಯನ್ ನಲ್ಲಿ ಗಗನಯಾನಿಗಳಿಗೆಂದು ರೆಡಿ ಟು ಈಟ್ ನಂತಹ ಸಿದ್ಧಪಡಿಸಿರುವ ತರಹೇವಾರಿ ಆಹಾರವನ್ನು ಪ್ರದರ್ಶನಕ್ಕೆ ಇಟ್ಟಿದೆ.
ಇದೇ ಮೊತ್ತ ಮೊದಲ ಬಾರಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ)ಯ ಭಾಗವಾಗಿರುವ ಡಿಎಫ್ ಆರ್ ಎಲ್, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮಹತ್ವದ ಗಗನಯಾನ ಯೋಜನೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿಲಿರುವ ಗಗನಯಾತ್ರಿಗಳಿಗೆ ಆಹಾರ ಸಿದ್ಧಪಡಿಸಿಕೊಡಲು ಒಪ್ಪಂದ ಮಾಡಿಕೊಂಡಿದೆ. ಕೋವಿಡ್ ಸೋಂಕು ಹಿನ್ನಲೆಯಲ್ಲಿ ಗಗನಯಾತ್ರೆಯ ನಿಗಧಿತ ಸಮಯ ಬದಲಾವಣೆಯಾಗಿದೆ. ಆದರೂ ಅದಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು ಸದ್ದಿಲ್ಲದೆ ನಿರಂತರವಾಗಿ ನಡೆಯುತ್ತಿದೆ.
ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಡಿಎಫ್ ಆರ್ ಎಲ್ ನಲ್ಲಿ ಮಾನವ ಸಹಿತ ಗಗನನೌಕೆಯಲ್ಲಿ ತೆರಳುತ್ತಿರುವ ಮೂವರು ಬಾಹ್ಯಾಕಾಶ ಯಾತ್ರಿಗಳಿಗೆ ಅಗತ್ಯವಾಗಿ ಬೇಕಾಗಿರುವ 35 ರೀತಿಯ ಆಹಾರ ಪದಾರ್ಥಗಳನ್ನು ಸಿದ್ದಪಡಿಸಿದೆ. ಡಿಎಫ್ ಆರ್ ಎಲ್ ಈತನಕ ವಿಶ್ವದ ಅತಿ ಎತ್ತರದ ಪ್ರದೇಶವಾದ ಸಿಯಾಚಿನ್ ನಲ್ಲಿ ಕಾರ್ಯನಿರ್ವಹಿಸುವ ಸೈನಿಕರು, ಅಂಟಾರ್ಟಿಕಾಕ್ಕೆ ಸಂಶೋಧನೆಗೆ ತೆರಳುವ ವಿಜ್ಞಾನಿಗಳು ಹೀಗೆ ವಿವಿಧ ಹವಾಮಾನ ವೈಪರಿತ್ಯದಲ್ಲಿ ಕೆಲಸ ಮಾಡುವವರಿಗೆಗಾಗಿ ವಿಶೇಷವಾಗಿ ಸಿದ್ಧಪಡಿಸಿದ ಆಹಾರವನ್ನು ಕನಿಷ್ಠ 6 ತಿಂಗಳು ಹಾಳಾಗದಂತೆ ಪ್ಯಾಕ್ ಮಾಡಿ ಪೂರೈಕೆ ಮಾಡುತ್ತಿತ್ತು.
ಆದರೀಗ ಇಸ್ರೋ ಗಗನಯಾನ ಯೋಜನೆಗೆ ಕನಿಷ್ಠ 1 ವರ್ಷ ಯಾವುದೇ ಪರಿಸ್ಥಿತಿಯಲ್ಲೂ ಆಹಾರ ಕೆಡದಂತೆ, ಪುಡಿಯಾಗದಂತೆ, ತನ್ನ ಪೋಷಕಾಂಶ ಅಂಶವನ್ನು ಕಳೆದುಕೊಳ್ಳದ ರೀತಿಯಲ್ಲಿ ಮೈಸೂರು ಆಹಾರ ಸಂಶೋಧನಾ ಪ್ರಯೋಗಾಲಯ ವಿವಿಧ ರೀತಿಯ ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರವನ್ನು ತಯಾರು ಮಾಡಿದೆ. ಅದನ್ನು 4 ಪದರಗಳುಳ್ಳ ಪೌಚ್ ನಲ್ಲಿ ಹಾಕಿಟ್ಟು ಪ್ಯಾಕ್ ಮಾಡಿದೆ. ಈ ಪ್ಯಾಂಕಿಗ್ ಪೌಚ್ 120 ಡಿಗ್ರಿ ಉಷ್ಣಾಂಶವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಬಾಹ್ಯಾಕಾಶದಲ್ಲಿ ತೆರಳುವ ಆಸ್ಟ್ರೊನಾಟ್ ಗಳಿಗೆ ಹೆಚ್ಚಿನ ಪೋಷಕಾಂಶವುಳ್ಳ, ಸರಿಯಾಗಿ ಜೀರ್ಣವಾಗುವ, ಶಕ್ತಿ ನೀಡುವ ಆಹಾರದ ಅಗತ್ಯವಾಗಿದೆ. ಇಂತಹ 34 ಆಹಾರ ಪದಾರ್ಥಗಳನ್ನು ಮೈಸೂರಿನ ಪ್ರಯೋಗಾಲಯದಲ್ಲಿ ಸಿದ್ದಪಡಿಸಲಾಗಿದೆ ಎಂದು ಡಿಎಫ್ ಆರ್ ಎಲ್ ನಿರ್ದೇಶಕ ಡಾ. ಅನಿಲ್ ದತ್ ಸೇಮವಾಲ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ರಷ್ಯಾದಿಂದ ತರಬೇತಿ ಮುಗಿಸಿ ಭಾರತಕ್ಕೆ ಗಗನಯಾನಿಗಳು ಬಂದಾಗ ಅವರುಗಳಿಗೆ ಡಿಎಫ್ ಆರ್ ಎಲ್ ಸಿದ್ದಪಡಿಸಿರುವ ವಿವಿಧ ರೀತಿಯ ಸಸ್ಯಹಾರಿ ಹಾಗೂ ಮಾಂಸಹಾರಿ ರೆಡಿ- ಟು ಈಟ್ ಆಹಾರವನ್ನು ನೀಡಲಾಗುತ್ತದೆ. ಅದರಲ್ಲಿ ತಮಗೆ ಹೊಂದಿಕೆಯಾಗುವ ಪದಾರ್ಥಗಳನ್ನು ಆಯ್ಕೆ ಮಾಡಿದರೆ ಅವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತೇವೆ. ಬಾಹ್ಯಾಕಾಶ ನೌಕೆಯಲ್ಲಿ ಯಾತ್ರೆಯ ಸಂದರ್ಭ ತಿನ್ನುವ ಮುಂಚೆ ಗಗನಯಾತ್ರಿಗಳು ಡಿಎಫ್ ಆರ್ ಎಲ್ ನೀಡಿರುವ ಆಹಾರ ಬಿಸಿಮಾಡುವ ಸಣ್ಣಬಾಕ್ಸ್ ನಲ್ಲಿಟ್ಟರೆ ಸಾಕು10 ನಿಮಿಷದ ಒಳಗೆ ಬಿಸಿಬಿಸಿ ತಿಂಡಿ- ಊಟ ಸಿದ್ಧವಿರುತ್ತೆ ಎಂದು ಹೇಳುತ್ತಾರೆ ಡಾ.ಅನಿಲ್ ದತ್.
ಮೈಸೂರಿನ ಆಹಾರ ಸಂಶೋಧನಾ ಪ್ರಯೋಗಾಲಯವು ಏರ್ ಶೋ ಪ್ರದರ್ಶನ ಮಳಿಗೆಯಲ್ಲಿ ಪೊಷಕಾಂಶ ಭರಿತ ಮಿಠಾಯಿಗಳು, ಉಪ್ಪಿನಕಾಯಿ, ಟಮೊಟೊ ಸಾಸ್, ವೆಜ್ ಪಲಾವ್, ಚಪಾತಿ, ಪರೋಟ, ದಾಲ್ ಕರಿ, ಅನ್ನ- ಸಾಂಬಾರ್, ಇನ್ ಸ್ಟೆಂಟ್ ಕಾಫಿ, 250 ಮಿ.ಲಿ ಕುಡಿಯುವ ನೀರು ಸೇರಿದಂತೆ ಹಲವು ಪದಾರ್ಥಗಳನ್ನು ಪ್ರದರ್ಶನಕ್ಕೆ ಇಟ್ಟಿದೆ. ಈ ಪದಾರ್ಥಗಳನ್ನು ಶುದ್ಧ ವಾತಾವರಣದಲ್ಲಿ, ಧನಾತ್ಮಕ ಒತ್ತಡವಿರುವ ಪರಿಸರ ಹೊಂದಿರುವ ಅತ್ಯಾಧುನಿಕ ಮತ್ತು ವಿಶೇಷ ಅಡುಗೆ ಮನೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಇಸ್ರೋದ ಮೂವರು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ 7 ದಿನಗಳ ಕಾಲ ಉಳಿದುಕೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ಗಗನಯಾನಿಗಳಿಗೆ ಅಗತ್ಯವಾದ ಆಹಾರ ಸಿದ್ಧಪಡಿಸಿಕೊಡುವಂತೆ ಇಸ್ರೋ ಡಿಎಪ್ ಆರ್ ಎಲ್ ಜೊತೆ ಈ ಹಿಂದೆ ಒಪ್ಪಂದ ಮಾಡಿಕೊಂಡಿತ್ತು. 4 ಗಗನಯಾತ್ರಿಗಳಿಗೆ ಸಂಪೂರ್ಣ ಗಗನಯಾನ ಕೈಗೊಳ್ಳುವ ಬಗ್ಗೆ ದೈಹಿಕ, ಮಾನಸಿಕ ತರಬೇತಿ, ತಾಂತ್ರಿಕ ನೈಪುಣ್ಯತೆ, ಸ್ಪೇಸ್ ಕ್ರಾಫ್ಟ್ ನಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ತರಬೇತಿ ಆರಂಭವಾಗಿದೆ. ಸುರಕ್ಷಿತವಾಗಿ ಬಾಹ್ಯಾಕಾಶದಿಂದ ಭೂಮಿಗೆ ಮರಳುವುದು ಸೇರಿದಂತೆ ಹಲವು ಆಯಾಮಗಳಲ್ಲಿ ಫೆಬ್ರವರಿ 2020ರಿಂದ ರಷ್ಯಾದಲ್ಲಿ 11 ತಿಂಗಳ ತರಬೇತಿ ನಡೆಯುತ್ತಿದೆ.
4 ಗಗನಯಾತ್ರಿಗಳು ಸದ್ಯ ರಷ್ಯಾದ 11 ತಿಂಗಳ ಕಠಿಣ ತರಬೇತಿಯಲ್ಲಿ ತೊಡಗಿದ್ದಾರೆ. ಅವರ ತರಬೇತಿ 2021ರ ಮೊದಲ ತ್ರೈಮಾಸಿಕ ಅವಧಿಯಾದ ಜೂನ್ ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆನಂತರ ದೇಶದಲ್ಲಿನ ಇಸ್ರೋ ಕೇಂದ್ರದಲ್ಲಿ ಗಗನಯಾನದ ತರಬೇತಿಗೆಂದು ವಿನ್ಯಾಸಗೊಳಿಸಲಾದ ಬಾಹ್ಯಾಕಾಶ ನೌಕೆಯ ಮಾದರಿಯಲ್ಲಿ ಟ್ರೈನಿಂಗ್ ನೀಡಲಾಗುತ್ತದೆ. 2022ಕ್ಕೆ ಮುಂಚಿತವಾಗಿ ಇಸ್ರೋ ಶ್ರೀಹರಿಕೋಟಾ ಉಡಾವಣಾ ಸ್ಥಳದಿಂದ ಭಾರತದ ಅತಿ ಭಾರತದ ರಾಕೇಟ್ ಬಾಹುಬಲಿ ಜಿಎಸ್ಎಲ್ ವಿ- ಮಾರ್ಕ್ 3 ರಾಕೇಟ್ ಮೂಲಕ ಮೂವರು ಗಗನಯಾತ್ರಿಗಳು ಸ್ಪೇಸ್ ಕ್ರಾಫ್ಟ್ ಮೂಲಕ ತೆರಳಲಿದ್ದಾರೆ.
ಗಗನಯಾತ್ರಿಗಳಿಗೆ ಸಂಪೂರ್ಣ ತರಬೇತಿ ನೀಡುವ ಕುರಿತಂತೆ ಇಸ್ರೋ ರಷ್ಯಾದ ಬಾಹ್ಯಾಕಾಶ ಸಂಸ್ಥೆಯ ಜೊತೆ 2019ರ ಜೂನ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದಾದ ಬಳಿಕೆ ಭಾರತದ ನಾಲ್ವರು ಗಗನಯಾತ್ರಿಗಳಿಗೆ ಗಗರಿನ್ ಕಾಸ್ಮೊನಾಟ್ ತರಬೇತಿ ಕೇಂದ್ರ ಸೇರಿದಂತೆ ಹಲವು ಕಡೆಗಳಲ್ಲಿ ಕಠಿಣ ತರಬೇತಿ ನೀಡಲಾಗುತ್ತಿದೆ.