ಬೆಂಗಳೂರು : ವಿಶ್ವದಲ್ಲಿಯೇ ಮೊಟ್ಟ ಮೊದಲ ಹೈಬ್ರಿಡ್ ಏರ್ ಶೋಗೆ ಇಂದಿನಿಂದ ಚಾಲನೆ ದೊರಕಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಯಲಹಂಕ ವಾಯುನೆಲಯಲ್ಲಿ 13ನೇ ಆವೃತ್ತಿಯ ಏರ್ ಶೋವನ್ನು ಉದ್ಘಾಟಿಸಿದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ, ಭಾರತೀಯ ವಾಯುಸೇನೆ ಹಾಗೂ ಏರೊ ಇಂಡಿಯಾ 2021 ಧ್ವಜ ಹೊತ್ತು ಹಗುರ ಯುದ್ಧ ಹೆಲಿಕಾಪ್ಟರ್ ಗಳು ಆಕರ್ಷಕವಾಗಿ ನೀಲಾಕಾಶದಲ್ಲಿ ಗಾಂಭೀರ್ಯದಿಂದ ಸಾಗಿದವು.
ನಂತರ ಭಾರತೀಯ ವಾಯುಪಡೆಗೆ 83 ಅತ್ಯಾಧುನಿಕ ಹಗುರ ಯುದ್ಧ ವಿಮಾನ (ಎಲ್ ಸಿಎ) ತೇಜಸ್ ಅನ್ನು ಉತ್ಪಾದಿಸಿಕೊಡುವಂತೆ ಹಿಂದೂಸ್ತಾನೆ ಏರೊನಾಟಿಕ್ಸ್ ಲಿಮಿಟೆಡ್ ಗೆ ಸಾಂಕೇತಿಕವಾಗಿ ಖರೀದಿ ಆದೇಶವನ್ನು ರಕ್ಷಣಾ ಸಚಿವರು ಹಸ್ತಾಂತರಿಸಿದರು.
ಇದೇ ವೇಳೆ ಮಾತನಾಡಿದ ರಾಜನಾಥ್ ಸಿಂಗ್, ಏಷ್ಯಾದ ಅತಿದೊಡ್ಡ ಏರ್ ಶೋ ವನ್ನುಆಯೋಜನೆ ಮಾಡಲು ಸಹಕಾರ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದರು. ಬಸವಣ್ಣ, ವಿಶ್ವೇಶ್ವರಯ್ಯ ನವರು ಹುಟ್ಟಿದ ನಾಡು ಕರುನಾಡು ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಕರೋನಾ ವಿಚಾರದಲ್ಲಿ ಭಾರತ ವಿಶ್ವದಲ್ಲೇ ಎಲ್ಲರಗಿಂತ ಒಂದು ಹೆಜ್ಜೆ ಮುಂದಿದೆ. ಭಾರತದಲ್ಲಿ ತಯಾರಿಸಿದ 2 ಕೋವಿಡ್ ಲಸಿಕೆಗಳನ್ನು ಇತರ ರಾಷ್ಟ್ರಗಳಿಗೂ ಪೂರೈಸಲಾಗುತ್ತಿದೆ. ವಸುದೈವ ಕುಟುಂಬಕಮ್ ಎಂಬ ಆಶಯದಂತೆ ವಿಶ್ವದ ಆರೋಗ್ಯ ಕಾಪಾಡಸಲು ಈ ಮೂಲಕ ಮುಂದಾಗಿದೆ ಎಂದ ಅವರು, 2021ರ ಏರ್ ಶೋ ನಲ್ಲಿ ಇರಾನ್, ಮಾಲ್ಡೀವ್ಸ್, ಉಕ್ರೇನ್ ಸೇರಿದಂತೆ ಹಲವು ದೇಶಗಳು ಪಾಲ್ಗೊಂಡಿವೆ ಎಂದು ಅವರು ಹೇಳಿದರು.
ಆತ್ಮನಿರ್ಭರ ಭಾರತ ನಿರ್ಮಾಣದ ಅಡಿಯಲ್ಲಿ ದೇಶದ ರಕ್ಷಣಾ ವ್ಯವಸ್ಥೆ ಬಲಪಡಿಸಲು ಹಾಗೂ ಅತ್ಯಾಧುನಿಕರಣಗೊಳಿಸಲು 30 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಮೀಸಲಿಡಲಾಗಿದೆ. ಹೊಸ ತಂತ್ರಜ್ಞಾನದ ಮೂಲಕ ಸೇನೆ ಬಲಪಡಿಸಲು ಸರ್ಕಾರ ಬದ್ಧವಿದೆ. ಈಗಾಗಲೇ ಉಗ್ರರ ಹಾವಳಿ ಇಡೀ ವಿಶ್ವವನ್ನು ಕಾಡುತ್ತಿದೆ. ದೇಶದ ಗಡಿ ಭದ್ರತೆಗೆ ಅಪಾಯ ಉಂಟುಮಾಡುವ ಯಾವುದೇ ಉಗ್ರ ಚಟುವಟಿಕೆಗಳನ್ನು ಮುಲಾಜಿಲ್ಲದೆ ಮಟ್ಟ ಹಾಕಲಾಗುತ್ತದೆ.
ಏರೊ ಇಂಡಿಯಾ ಶೋ ನಮ್ಮ ಶಕ್ತಿ ಪ್ರದರ್ಶನದ ಕಾರ್ಯಕ್ರಮ ಕೂಡ ಹೌದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶತ್ರು ರಾಷ್ಟ್ರಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದರು.
ಆತ್ಮನಿರ್ಭರ್ ಆಶಯದಂತೆ ರಾಜ್ಯ ಸಾಗುತ್ತಿದೆ :
ಮುಖ್ಯಮಂತ್ರಿ ಬಿ.ಎಸ್.ಯಡಿಯಪ್ಪ ಮಾತನಾಡಿ, ಈ ಬಾರಿಯ ಏರ್ ಶೋನಲ್ಲಿ 540 ದೇಶೀಯ ಪ್ರದರ್ಶಕರು, 77 ವಿದೇಶಿ ಪ್ರದರ್ಶಕರು ಭಾಗಿಯಾಗಿದ್ದಾರೆ. ಬೆಂಗಳೂರು ಶಿಕ್ಷಣ, ಸ್ಟಾರ್ಟ್ ಅಪ್ ವಹಿವಾಟಿಗೆ ಅತ್ಯುತ್ತಮ ಸ್ಥಳ. ದೇಶದ ಒಟ್ಟಾರೆ ವೈಮಾನಿಕ ತಯಾರಿಕೆಯ ಪೈಕಿ ಶೇ.65ರಷ್ಟು ಕರ್ನಾಟಕದಲ್ಲೇ ಉತ್ಪಾದನೆಯಾಗುತ್ತದೆ. ಒಂದು ಸಾವಿರ ಎಕರೆ ವಿಸ್ತೀರ್ಣದ ಏರೋಸ್ಪೇಸ್ ಪಾರ್ಕ್ ದೇವನಹಳ್ಳಿಯಲ್ಲಿ ಸಿದ್ಧವಾಗುತ್ತಿದೆ. ಎರಡು ಅಂತರಾಷ್ಟ್ರೀಯ ಹಾಗೂ ಐದು ಡೊಮೆಸ್ಟಿಕ್ ವಿಮಾನನಿಲ್ದಾಣ ರಾಜ್ಯದಲ್ಲಿ ಈಗಾಗಲೇ ಇದೆ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಆಶಯದಂತೆ ರಾಜ್ಯವೂ ನಡೆಯುತ್ತಿದೆ ಎಂದು ಹೇಳಿದರು.
ಮೂರು ದಿನಗಳ ವೈಮಾನಿಕ ಪ್ರದರ್ಶನ ಕಾರ್ಯಕ್ರಮ ದಿನವಾದ ಬುಧವಾರ, ಸೂರ್ಯ ಕಿರಣ್, ಸಾರಂಗ್, ತೇಜಸ್ ಯುದ್ಧ ವಿಮಾನ, ಡಕೋಟ, ಹಾಕ್, ಸುಖೋಯ್, ರಫಾಲ್, ಡಾರ್ನಿಯರ್-228, ಎಎಲ್ ಹೆಚ್, ಎಮ್ ಐ-17 ಹೆಲಿಕಾಪ್ಟರ್ ಗಳು ಅತ್ಯಾಕರ್ಷಕವಾಗಿ ಪ್ರದರ್ಶನ ನೀಡಿದವು.
ಯುಎಸ್ ನಿಂದ 26 ಗಂಟೆ ಹಾರಾಟ ನಡೆಸಿ ಬಂದ ಬಿ-1ಬಿ ಬಾಂಬರ್ :
ಅಮೆರಿಕ ರಕ್ಷಣಾಪಡೆಯ ಬೆನ್ನಲುಬಾಗಿರುವ ಬಿ-1ಬಿ ಬಾಂಬರ್ ಲಾನ್ಸರ್ ಏರ್ ಕ್ರಾಫ್ಟ್ ಕೂಡ ಈ ಬಾರಿಯ ಏರೊ ಇಂಡಿಯಾ ಶೋನಲ್ಲಿ ಪಾಲ್ಕೊಳ್ಳುತ್ತಿದೆ. ಇದಕ್ಕಾಗಿ ಅಮೆರಿಕದ ದಕ್ಷಿಣ ಡಕೋಟಾ ವಾಯುನೆಲೆಯಿಂದ ದೀರ್ಘವಧಿ ಸಾಗುವ ಈ ಬಾಂಬರ್ ವಿಮಾನ, 26 ಗಂಟೆಗಳ ಕಾಲ ಹಾರಾಟ ನಡೆಸಿ ಬೆಂಗಳೂರಿಗೆ ಬಂದಿಳಿದಿದೆ.
ಮೂರು ದಿನಗಳ ಕಾಲದ ಏರ್ ಶೋನಲ್ಲಿ ರಕ್ಷಣೆ, ಸಂಶೋಧನೆ, ತಂತ್ರಜ್ಞಾನ, ವೈಮಾನಿಕ ಕ್ಷೇತ್ರಗಳಲ್ಲಿ 200ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಬೀಳುವ ನಿರೀಕ್ಷೆಯಿದೆ. ಕೋವಿಡ್ ಸಂಕಷ್ಟದಲ್ಲೂ ಹೈಬ್ರಿಡ್ ಮಾದರಿಯಲ್ಲಿ ಏರ್ ಶೋ ನಡೆಸುತ್ತಿರುವ ರಕ್ಷಣಾ ಇಲಾಖೆಯ ಕ್ರಮಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.