ಬೆಂಗಳೂರು : ಬ್ರಾಹ್ಮಣ ಸಮುದಾಯ ಬಲಯುತ ಆಗಬೇಕಾದರೆ ತಮ್ಮ ಸಮುದಾಯದ ಬಗ್ಗೆ ಸ್ವಾಭಿಮಾನ, ಒಗ್ಗಟ್ಟು ಏರ್ಪಡುವಂತ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಅಭಿಪ್ರಾಯಪಟ್ಟಿದ್ದಾರೆ.
ಮಂತ್ರಾಲಯ ಮೂಲ ಮಠ ಹಾಗೂ ಸಮಾನ ಮನಸ್ಕ ಮಾಧ್ಯಮ ಮಿತ್ರ ವೇದಿಕೆ ವಿಕಾಸದಿಂದ ಭಾನುವಾರ ಜಯನಗರ ನಂಜನಗೂಡು ಮಠದಲ್ಲಿ “ಬ್ರಾಹ್ಮಣರ ಐಕ್ಯತೆ ಮತ್ತು ಅಭಿವೃದ್ಧಿ” ಕುರಿತ ಸಮಾಲೋಚನಾ ಕಾರ್ಯಕ್ರಮದಲ್ಲಿ ಮಂತ್ರಾಲಯ ಶ್ರೀಗಳಾದ ಸುಭುದೇಂದ್ರ ತೀರ್ಥರ ಜೊತೆ ಸಾನಿಧ್ಯವಹಿಸಿ ಅವರು ಮಾತನಾಡುತ್ತಿದ್ದರು.
ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಮುಂದಿನ 50 ವರ್ಷ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕಿದೆ. ಅದಕ್ಕೆ ಪೂರ್ವದಲ್ಲಿ ಬ್ರಾಹ್ಮಣ ಸಮುದಾಯದ ಸಂಸ್ಕೃತಿ, ಮೌಲ್ಯ ಉಳಸಲು, ಸ್ವಾಭಿಮಾನ ಹಾಗೂ ಒಗ್ಗಟ್ಟು ಹೆಚ್ಚಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ಬ್ರಾಹ್ಮಣ ಸಮುದಾಯದ ಒಳಗೇ ವೈವಾಹಿಕ ಸಂಬಂಧಗಳು ಏರ್ಪಾಡಾಗಬೇಕು, ವಿನಃ ಅನ್ಯ ಜಾತಿಯವರೊಂದಿಗೆ ವಿವಾಹ ಸಂಬಂಧ ಹೊಂದಬಾರದು ಎಂದು ಸುಗುಣೇಂದ್ರ ಶ್ರೀಗಳು ಕರೆ ನೀಡಿದ್ದಾರೆ.
ದೇಶದಲ್ಲಿ ಆರ್ಥಿಕ ಆಧಾರದಲ್ಲಿ ಸಾಮಾನ್ಯ ಜನರಿಗೆ ಸೌಕರ್ಯಗಳನ್ನು, ಸೌಲಭ್ಯಗಳನ್ನು ಒದಗಿಸಬೇಕು. ಆದರೆ ಈಗ ಜಾತಿ ಆಧಾರದಲ್ಲಿ ಸೌಕರ್ಯ ಒದಗಿಸುತ್ತಿರುವುದು ಸರಿಯಲ್ಲ. ಭಾರತದ ಅಭಿವೃದ್ಧಿಗೆ ಸಮಾನ ನಾಗರೀಕ ಸಂಹಿತೆ ಜಾರಿಗೆ ತರಬೇಕು. ಕಾನೂನಿನಲ್ಲಿನ ಪಕ್ಷಪಾತ ವ್ಯವಸ್ಥೆಯನ್ನು ತೊಡೆದುಹಾಕಲು ಇದು ಸಕಾಲ.
ಬ್ರಾಹ್ಮಣ ಸಮಾಜ ಇದರ ನೇತೃತ್ವವಹಿಸಬೇಕು. ನಮ್ಮ ಸಮಾಜದ ಅಭಿವೃದ್ಧಿ ಜೊತೆಗೆ ಇತರ ಸಮಾಜದ ಅಭ್ಯುದ್ಯಯ ಮಾಡೋಣ ಎಂದು ಶ್ರೀಗಳು ಹೇಳಿದರು.
ಬಳಿಕ ಮಾತನಾಡಿದ ಮಂತ್ರಾಲಯ ಮಠದ ಡಾ.ಶ್ರೀ.ಸುಭುದೇಂದ್ರ ಶ್ರೀಗಳು, ತ್ರಿಮತಸ್ಥ ಬ್ರಾಹ್ಮಣ ಸಮುದಾಯಗಳಿಗೆ ಬ್ರಾಹ್ಮಣ ಸಮಾಜದ ಮಹತ್ವವನ್ನು ಮೊದಲಿಗೆ ತಿಳಿಸಿಕೊಡಬೇಕು. ಸಮುದಾಯದ ಏಳ್ಗೆಗೆ ಕ್ರಿಯಾತ್ಮಕ ಕೆಲಸಗಳಿಗೆ ಚಾಲನೆ ಸಿಗಬೇಕು. ಆ ನಿಟ್ಟಿನಲ್ಲಿ ಚಿಕ್ಕ ವಯಸ್ಸಿನಲ್ಲಿ ಸಮುದಾಯದ ಮಕ್ಕಳಿಗೆ ಉತ್ತಮ ಸಂಸ್ಕಾರ ಒದಗಿಸಿ ಕೊಡಬೇಕು ಎಂದು ಕಿವಿಮಾತು ಹೇಳಿದರು.
ಬ್ರಾಹ್ಮಣ ಸಂಘಟನೆಯಲ್ಲಿ ಬೇರೆ ಬೇರೆ ಆಚಾರ, ವಿಚಾರ, ಸಂಘ- ಸಂಸ್ಥೆಗಳಲ್ಲಿ ಭಿನ್ನತೆಯಿದೆ. ಆದರೂ ಭಿನ್ನತೆಯಲ್ಲೂ ಗಾಯತ್ರಿ ಮಂತ್ರದ ಉಪಾಸನೆಯ ಮೂಲಕ ನಮ್ಮ ಸಮುದಾಯದ ಏಕತೆಯನ್ನು ಕಾಪಾಡಿಕೊಳ್ಳೋಣ.
ನಮ್ಮ ರಾಜ್ಯದಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮವನ್ನು ರಾಜ್ಯ ಸರ್ಕಾರ ಸ್ಥಾಪಿಸಿದೆ. ನಮ್ಮಲ್ಲಿ ಜಾತಿಗಣತಿ ಆಗಬೇಕಾದರೆ ಜಾತಿಸೂಚಕದಲ್ಲಿ “ಹಿಂದೂ ಬ್ರಾಹ್ಮಣ” ಎಂದು ನಮೂದಿಸಬೇಕು. ಆಗ ನಮ್ಮ ಸಂಖ್ಯೆ ಸಮಾಜದಲ್ಲಿ ಎಷ್ಟು ಇರಲಿದೆ ಎಂದು ಗೊತ್ತಾಗಲಿದೆ.
ಇಂದು ಎಲ್ಲಾ ಕಡೆ ರಾಜಕೀಯ ನಡೆಯುತ್ತಿರುವಾಗ, ನಮ್ಮ ಜಾತಿ ಹೇಳಿಕೊಳ್ಳುವುದಕ್ಕೆ ಹಿಂಜರಿಕೆ ಏಕೆ? ಸಮುದಾಯದ ಏಕತೆ ಮೂಡಿಸಲು ಎಲ್ಲಾ ತ್ರಿಮಸ್ಥ ಪೀಠಾಧಿಪತಿಗಳಿದ್ದಾರೆ. ಏನೇ ಭಿನ್ನಾಭಿಪ್ರಾಯ ಇದ್ದರೂ ಬದಿಗಿಟ್ಟು ಸಮುದಾಯವಾಗಿ ಒಗ್ಗಟ್ಟಾಗೋಣ ಎಂದು ಡಾ.ಶ್ರೀ. ಸುಭುದೇಂದ್ರ ಶ್ರೀಗಳು ಸಲಹೆ ನೀಡಿದರು.
ವಿಪ್ರ ಸಮಾಜದ ಹೋಟೆಲ್ ಉದ್ಯಮ, ಮಾಹಿತಿ ತಂತ್ರಙ್ಞನ, ವೈದ್ಯಕೀಯ, ಶಿಕ್ಷಣ, ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ವಿವಿಧ ಬ್ರಾಹ್ಮಣ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದಾರೆ. ಸಮುದಾಯದ ತ್ರಿಮಸ್ಥರ ಒಗ್ಗಟ್ಟಿಗಾಗಿ ಇಂದಿನ ಈ ಸಮಲೋಚನಾಸಭೆಯ ಮೂಲಕ ಪ್ರಾರಂಭಿಸೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಬ್ರಾಹ್ಮಣ ಸಮುದಾಯದ ಐಕ್ಯತೆಗಾಗಿ, ಅಭಿವೃದ್ಧಿಗೆ ಹಲವು ಸಲಹೆ- ಸೂಚನೆ ನೀಡಿದರು.