ಬೆಂಗಳೂರು : ನಗರದ ಎಂಜಿ ರಸ್ತೆಯ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ-2021 ಸಮಾರಂಭಕ್ಕೆ ಕೋವಿಡ್ ಸೋಂಕು ಹಿನ್ನಲೆಯಲ್ಲಿ ಈ ಬಾರಿ ಸಾರ್ವಜನಿಕರಿಗೆ ಪ್ರವೇಶವಿಲ್ಲ.
ಭಾನುವಾರ ಗಣರಾಜ್ಯೋತ್ಸವ ಪೂರ್ವ ಸಿದ್ಧತಾ ಪರಿಶೀಲನೆ ನಡೆಸಿದ ನಂತರ ಜಿಲ್ಲಾಧಿಕಾರಿ ಶಿವಮೂರ್ತಿ, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಈ ವಿಷಯ ತಿಳಿಸಿದ್ದಾರೆ.
ಇಡೀ ಮಾಣಿಕ್ ಷಾ ಪರೇಡ್ ಗ್ರೌಂಡ್ ಮೈದಾನವನ್ನ ಸಿದ್ದ ಮಾಡಲಾಗಿದೆ. ಈ ಬಾರಿ 500 ಜನರಿಗೆ ಮಾತ್ರ ಆಸನದ ವ್ಯವಸ್ಥೆ ಮಾಡಲಾಗಿದೆ. ಆದರೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಲ್ಲ. ಕೊರೊನಾ ಹಿನ್ನಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ರಾಜ್ಯಪಾಲರು ಗಣರಾಜ್ಯೋತ್ಸವದ ದಿನ ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ಮಾಡಲಿದ್ದಾರೆ ಎಂದರು.
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ಬಾರಿ ಕೊರೊನಾ ಇರೋದ್ರಿಂದ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತೆ.
ಆಹ್ವಾನ ಪತ್ರಿಕೆ ಸಿಕ್ಕವರಿಗೆ ಮಾತ್ರ ಕಾರ್ಯಕ್ರಮಕ್ಕೆ ಬರಲು ಅನುಮತಿಯಿದೆ. ಭದ್ರತೆಯ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಪಾಸ್ ಇರುವವರು ಬೆಳಗ್ಗೆ 8:40 ರ ಒಳಗೆ ಮೈದಾನದ ಒಳಗೆ ಇರಬೇಕು. 7 ಡಿಸಿಪಿ, 16 ಎಸಿಪಿ ಗಳನ್ನು ನೇಮಕ ಮಾಡಲಾಗಿದೆ. ಗರುಡಾ ಫೋರ್ಸ್ ನ್ನು ನಾಳೆಯಿಂದ ನಿಯೋಜನೆ ಮಾಡಲಾಗುತ್ತೆ. ಅಗ್ನಿಶಾಮಕ ದಳ, ಡಿ ಸ್ವಾಟ್, ಆರ್.ಐ.ವಿ ಗಳನ್ನ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಸಿಗರೇಟ್, ಬೆಂಕಿಪೆಟ್ಟಿಗೆ, ಕರಪತ್ರಗಳು, ಬಣ್ಣದ ದ್ರಾವಣಗಳು, ವಿಡಿಯೋ ಮತ್ತು ಸ್ಟಿಲ್ ಕ್ಯಾಮರಾಗಳು, ನೀರಿನ ಬಾಟಲ್ ಹಾಗೂ ಕ್ಯಾನ್, ಶಸ್ತ್ರಾಸ್ತ್ರಗಳನ್ನು ಮೈದಾನದ ಒಳಗೆ ತರುವುದನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.ಗಣರಾಜ್ಯೋತ್ಸವ ದಿನ ನಡೆಯುವ ಕಾರ್ಯಕ್ರಮಗಳ ಕವಾಯತುಗಳನ್ನು ಜಿಲ್ಲಾಧಿಕಾರಿಗಳು, ಬಿಬಿಎಂಪಿ ಆಯುಕ್ತರು ಹಾಗೂ ಪೊಲೀಸ್ ಆಯುಕ್ತರು ತಾಲೀಮು ವೀಕ್ಷಿಸಿದರು. ನಂತರ ಕಮಲ್ ಪಂತ್ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಸೇನಾ, ಪೊಲೀಸ್ ತುಕಡಿಗಳಿಂದ ಈ ಮೂವರು ಅಧಿಕಾರಿಗಳು ಗೌರವ ವಂದನೆ ಸ್ವೀಕರಿಸಿದರು.
ರೈತರ ಪ್ರತಿಭಟನೆ ಅನುಮತಿ ಬಗ್ಗೆ ಸಭೆ ಬಳಿಕ ತೀರ್ಮಾನ :
ಗಣರಾಜ್ಯೋತ್ಸವ ದಿನದಂದು ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆಸಲು ಕೆಲವು ರೈತರು ಪ್ರತಿಭಟನೆಗೆ ಅನುಮತಿ ಕೋರಿದ್ದಾರೆ. ಇವತ್ತು ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ನಗರದ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.
ಕರೋನಾ ಸಾವಿನ ಸಂಖ್ಯೆ ಸೊನ್ನೆಗೆ ಇಳಿಕೆ :
ಕರೋನಾ ವಿಚಾರವಾಗಿ ನಗರದಲ್ಲಿ ಈ ಹಿಂದೆ ಪ್ರತಿ ದಿನ 6 ಸಾವಿರ ಕೇಸ್ ಬರುತ್ತಿತ್ತು. ಈಗ 100 ಕರೋನಾ ಕೇಸ್ ಮಾತ್ರ ಬರುತ್ತಿದೆ. ಸಾವಿನ ಸಂಖ್ಯೆ ಸೊನ್ನೆ ಆಗಿದೆ. ಯಾವುದೇ ಕಾರಣಕ್ಕೂ ಕರೋನಾ ಪರೀಕ್ಷೆ ಕಡಿಮೆ ಮಾಡಿಲ್ಲ ಎಂದು ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೊದಲ ಹಂತದಲ್ಲಿ ಯಾರು ಕರೋನಾ ಲಸಿಕೆ ಪಡೆಯಬೇಕು ಎಂಬ ಬಗ್ಗೆ ಕೇಂದ್ರದ ಸ್ಪಷ್ಟ ಮಾರ್ಗಸೂಚಿಯಿದೆ. ಯಾರಿಗೆ ಅಂದರೆ ಅವರಿಗೆ, ಪ್ರಭಾವಿಗಳೆಂದು ಅವರಿಗೆ ಲಸಿಕೆ ಕೊಡಲು ಸಾಧ್ಯವಿಲ್ಲ. ಅತಿಹೆಚ್ಚು ಲಸಿಕೆ ನೀಡಿಕೆ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಎರಡನೇ ಹಂತದ ಲಸಿಕೆಗಳು ಆರೋಗ್ಯ ಇಲಾಖೆಗೆ ಬಂದು ತಲುಪಿದೆ ಎಂದು ಮಾಹಿತಿ ನೀಡಿದರು.