ಕೋವಿಡ್ ಹಿನ್ನಲೆಯಲ್ಲಿ ಈ ಬಾರಿಯ ಏರ್ ಶೋ-2021 ಈ ತನಕ ನಡೆದಿರುವ ಸಾಂಪ್ರದಾಯಿಕ ಏರ್ ಇಂಡಿಯಾ ಶೋಗಳಿಗಿಂತ ಭಿನ್ನವಾಗಿದೆ. ಹೈಬ್ರೀಡ್ ಮಾದರಿಯಲ್ಲಿ ಏರ್ ಶೋನ ಸಂಪೂರ್ಣ ಕಾರ್ಯಕ್ರಮ ಪ್ರಸಾರವಾಗಲಿದೆ.
ಬೆಂಗಳೂರು : ಯಲಹಂಕ ವಾಯುನೆಲೆಯಲ್ಲಿ ಇದೇ ಫೆ.3 ರಿಂದ ಮೂರು ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಕೋವಿಡ್ ಹಿನ್ನಲೆಯಲ್ಲಿ ಅಗತ್ಯ ಮುಂಜಾಗ್ರತೆ ಹಾಗೂ ಭದ್ರತೆಗಳನ್ನು ಕೈಗೊಳ್ಳಲಾಗುತ್ತಿದೆ. ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿದೆ.
ಈ ಕುರಿತು ಶುಕ್ರವಾರ ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನಕ್ಕಾಗಿ ಕೈಗೊಂಡಿರುವ ಪೂರ್ವಸಿದ್ಧತೆಗಳ ಕುರಿತು ವಾಯುಪಡೆಯ ಏರ್ ಆಫೀಸರ್ ಕಮಾಂಡರ್ ಶೈಲೇಂದ್ರ ಸೂದ್ ಮತ್ತಿತರ ಹಿರಿಯ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಳೆದ ನಾಲ್ಕೈದು ತಿಂಗಳಿನಿಂದಲೇ ಏರ್ ಶೋ ಕಾರ್ಯಕ್ರಮಕ್ಕೆ ಪೂರ್ವಸಿದ್ಧತೆಗಳನ್ನು ಕೈಗೊಂಡಿದೆ. ತುರ್ತು ಚಿಕಿತ್ಸೆ, ವೈದ್ಯೋಪಚಾರ, ವಿಪತ್ತು ನಿರ್ವಹಣೆ, ವೈಮಾನಿಕ ಅಪಾಯ, ಅನುಮಾನಾಸ್ಪದ ದ್ರೋಣ್ ಹಾರಾಟ ತಡೆಗಟ್ಟುವಿಕೆ ಸೇರಿದಂತೆ ಮತ್ತಿತರ ಪರಿಸ್ಥಿತಿ ಎದುರಿಸಲು ಸಿದ್ದವಾಗಿದ್ದೇವೆ ಎಂದು ಮಾಹಿತಿ ನೀಡಿದರು.
ನೆಲಮಟ್ಟದಲ್ಲಿ ಶಸ್ತ್ರಸಜ್ಜಿತ ಭದ್ರತಾ ಪಡೆಗಳನ್ನು ನಿಯೋಜಿಸಲಾಗುವುದು. ಯಲಹಂಕ ವಾಯುನೆಲೆಯಲ್ಲಿ ಮೂರು ಹಂತದ ಭದ್ರತೆ ಒದಗಿಸಲಾಗುತ್ತದೆ. ಕಳೆದ ಬಾರಿಯಂತೆ ಅಗ್ನಿ ಅವಘಡ ಸಂಭವಿಸಿದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಾಹನ ನಿಲ್ದಾಣದಲ್ಲಿ ಹುಲ್ಲು ಬೆಳೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಆ ಜಾಗವನ್ನು ಸಮತಟ್ಟು ಮಾಡಲಾಗಿದ್ದು, ಯಾವುದೇ ಅಗ್ನಿ ಅವಘಡ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ವಿಂಗ್ ಕಮಾಂಡರ್ ಬೆನಿವಾಲ್ ತಿಳಿಸಿದರು.
https://youtube.be/m8ZZFFbz0x4
ಪ್ರಥಮ ಬಾರಿಗೆ ಸೂರ್ಯಕಿರಣ್ – ಸಾರಂಗ್ ಜೋಡಿ ಮೋಡಿ ಭಾರತೀಯ ಸೇನೆಯ ಸೂರ್ಯಕಿರಣ ಹಾಗೂ ಸಾರಂಗ್ ಜೊತೆಯಾಗಿ ಪ್ರಥಮ ಬಾರಿಗೆ ವೈಮಾನಿಕ ಪ್ರದರ್ಶನ ನೀಡಲಿದೆ. ಚಿನೂಕ್ ಹೆಲಿಕಾಪ್ಟರ್ ಮೊದಲ ಬಾರಿಗೆ ಏರ್ ಶೋನಲ್ಲಿ ಪಾಲ್ಗೊಳ್ಳತ್ತಿದೆ. ಡಕೊಟಾ, ಲಘು ಯುದ್ಧ ವಿಮಾನ, ಸುಖೋಯ್-30 ಸೇರಿದಂತೆ ಹಲವು ವಿಮಾನಗಳು ವೈಮಾನಿಕ ಕಸರತ್ತು ನೀಡಲಿದೆ. ವಿದೇಶಿ ವಿಮಾನಗಳ ಹಾರಾಟವನ್ನು ನಿರೀಕ್ಷಿಸಲಾಗಿದೆ.
ಉದ್ಘಾಟನಾ ದಿನದಂದು 42 ವಿಮಾನಗಳಿಂದ ಕಸರತ್ತು :ಈ ಬಾರಿಯ 13ನೇ ಆವೃತ್ತಿಯ ಏರ್ ಶೋ- 2021ನಲ್ಲಿ 42 ವಿಮಾನಗಳು ಸ್ಥಿರ ಪ್ರದರ್ಶನದಲ್ಲಿರಲಿವೆ. ಫೆ.3 ರ ಉದ್ಘಾಟನಾ ದಿನದಂದು ಎಲ್ ಸಿಎ, ಹಾಕ್, ರಫಾಲ್, ಎಲ್ ಯುಎಚ್, ಜಾಗ್ವಾರ್ ಸೇರಿದಂತೆ 41 ವಿಮಾನಗಳು ವೈಮಾನಿಕ ಕಸರತ್ತು ನಡೆಸಲಿದೆ.
ಹೈಬ್ರೀಡ್ ಮಾದರಿಯ ವೈಮಾನಿಕ ಪ್ರದರ್ಶನ: ವೈಮಾನಿಕ ಕಸರತ್ತು ಪ್ರತಿದಿನ ಬೆಳಿಗ್ಗೆ 9 ರಿಂದ 12 ಗಂಟೆ ತನಕ ಹಾಗೂ ಮಧ್ಯಾಹ್ನ 2 ರಿಂದ 5 ರ ತನಕ ಇರಲಿದೆ.ಇದೇ ಮೊದಲ ಬಾರಿಗೆ ಹೈಬ್ರಿಡ್ ಮಾದರಿಯಲ್ಲಿ ಏರ್ ಶೋ ಕಾರ್ಯಕ್ರಮ ಪ್ರಸಾರವಾಗಲಿದೆ. ಕೋವಿಡ್ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಏರೊ ಇಂಡಿಯಾ- 2021 ಆಂಡ್ರಾಯ್ಡ್ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಂಡು ಏರೊ ಇಂಡಿಯಾ ಕಾರ್ಯಕ್ರಮ ನೋಡಬಹುದಾಗಿದೆ.
ಆರ್ ಟಿಪಿಸಿಆರ್ ಪರೀಕ್ಷಾ ವರದಿ ಕಡ್ಡಾಯ :ವೈಮಾನಿಕ ಪ್ರದರ್ಶನಕ್ಕೆ ಬರುವವರು 72 ಗಂಟೆಗಳಿಗೆ ಮೀರದಂತೆ ಹಳೆಯದಲ್ಲದ ಕೋವಿಡ್ ಆರ್ ಟಿ-ಪಿಸಿಆರ್ ಪರೀಕ್ಷಾ ವರದಿ ತೋರಿಸಿ ಪ್ರವೇಶ ಪಡೆಯಬೇಕಿದೆ. ವೈಮಾನಿಕ ಪ್ರದರ್ಶನ ಸಂದರ್ಭದಲ್ಲಿ ಕೋವಿಡ್ ಲಕ್ಷಣ ಕಂಡುಬಂದಲ್ಲಿ ಅಂತಹವರಿಗೆ ಐಸೊಲೇಷನ್ ಗೆ ಒಳಪಡಿಸಲು ಕ್ರಮ ಕೈಗೊಳ್ಳಲಿದೆ. ಪ್ರತಿಯೊಬ್ಬರಿಗೂ ಮಾಸ್ಕ್ ಧರಿಸಿಬಂದರಷ್ಟೆ ಏರ್ ಶೋ ಗೆ ಪ್ರವೇಶ.
ಏರ್ ಶೋ ಪ್ರವೇಶಕ್ಕೆ ಮಿತಿ : 13ನೇ ಆವೃತ್ತಿಯಲ್ಲಿ ಏರ್ ಶೋ ಸ್ಥಿರ ಪ್ರದರ್ಶನಕ್ಕೆ ಪ್ರತಿದಿನದ ಪ್ರವೇಶ ಮಿತಿ 15,000 ಆಗಿದ್ದರೆ, ವಾಯು ಪ್ರದರ್ಶನ ಜಾಗಕ್ಕೆ ಪ್ರತಿದಿನ ಕೇವಲ 3,000 ಜನರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಸಾಮಾನ್ಯ ಜನರು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ 500 ರೂ. ನೀಡಿ ಇ- ಟಿಕೇಟ್ ಪಡೆದು ಏರ್ ಶೋ ಉದ್ಘಾಟನಾ ದಿನ ಮಧ್ಯಾಹ್ನ 1 ಗಂಟೆಯಿಂದ ಮತ್ತು ಪ್ರತಿದಿನ (ಫೆ.5ರ ತನಕ) ಬೆಳಗ್ಗೆ 9 ಗಂಟೆಯಿಂದ ವೈಮಾನಿಕ ಪ್ರದರ್ಶನ ನಡೆಯುವ ಸ್ಥಳಕ್ಕೆ ಆಗಮಿಸಬಹುದು. ಬ್ಯುಸಿನೆಸ್ ವಿಸಿಟರ್ ಅರ್ಧ ದಿನಕ್ಕೆ 2,500 ರೂ. ಹಣಕಟ್ಟಿ ಇ-ಟಿಕೆಟ್ ಪಡೆದು ಪ್ರವೇಶ ಪಡೆಯಬಹುದು. ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಇ-ಟಿಕೇಟ್ ಲಭ್ಯವಾಗಲಿದೆ.