ಬೆಂಗಳೂರು, ಮಾ.16 www.bengaluruwire.com: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಬೆಂಗಳೂರಿನ ಐದು ನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ನೌಕರರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೆ ಸಾರ್ವಜನಿಕರಿಗೆ ಮತ್ತು ಸರ್ಕಾರದ ಬೊಕ್ಕಸಕ್ಕೆ ವಂಚಿಸುತ್ತಿದ್ದಾರೆ ಎಂದು ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಕೂಡಲೇ ಎಲ್ಲಾ ಕಚೇರಿಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ಪದ್ಧತಿ ಜಾರಿಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಪ್ರಸ್ತುತ ಜಿಬಿಎ ಮತ್ತು ಐದು ಪಾಲಿಕೆಗಳಲ್ಲಿ ಒಟ್ಟು 2,818 ಅಧಿಕಾರಿ ಹಾಗೂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ನಿಯಮದ ಪ್ರಕಾರ ಬೆಳಿಗ್ಗೆ 10 ಗಂಟೆಗೆ ಹಾಜರಾಗಿ ಸಂಜೆ 5 ರವರೆಗೆ ಕರ್ತವ್ಯ ನಿರ್ವಹಿಸಬೇಕಿದ್ದರೂ, ಶೇ. 50ಕ್ಕಿಂತ ಹೆಚ್ಚು ನೌಕರರು ಬೆಳಿಗ್ಗೆ 11 ರಿಂದ 12 ಗಂಟೆಯವರೆಗೂ ಕಚೇರಿಗೆ ಬರುವುದಿಲ್ಲ. ಇದು ಕೇವಲ ಕರ್ತವ್ಯ ಲೋಪವಲ್ಲ, ಬದಲಿಗೆ ಬೃಹತ್ ಪ್ರಮಾಣದ ಮಾನವ ಸಂಪನ್ಮೂಲ ವಂಚನೆಯಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಗಿತಗೊಂಡ ಬಯೋಮೆಟ್ರಿಕ್ ವ್ಯವಸ್ಥೆ:

2014ರಲ್ಲಿ ಬಿಬಿಎಂಪಿಯ ಎಲ್ಲಾ ವಲಯ ಮತ್ತು ಕೇಂದ್ರ ಕಚೇರಿಗಳಲ್ಲಿ ಬಯೋಮೆಟ್ರಿಕ್ ಕಡ್ಡಾಯಗೊಳಿಸಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಅನುಮಾನಾಸ್ಪದ ಕಾರಣಗಳಿಂದ ಕೇವಲ ಒಂದು ವರ್ಷದಲ್ಲಿ ಈ ಪದ್ಧತಿಯನ್ನು ಕೈಬಿಡಲಾಗಿದೆ. ಈ ಹಿಂದೆ ಆಯುಕ್ತರು ದಿಢೀರ್ ಭೇಟಿ ನೀಡಿ ಗೈರುಹಾಜರಿ ದಾಖಲಿಸುವ ಮೂಲಕ ಶಿಸ್ತು ಕಾಪಾಡುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಈ ತಪಾಸಣೆಯೂ ನಿಂತು ಹೋಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆಯುಕ್ತರಿಗೆ ನೇರ ಸವಾಲು:
“ಸಾರ್ವಜನಿಕರ ತೆರಿಗೆ ಹಣದಿಂದ ಪೂರ್ಣ ಪ್ರಮಾಣದ ವೇತನ ಪಡೆಯುವ ನೌಕರರು ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಬೇಕು. ಜಿಬಿಎ ಮುಖ್ಯ ಆಯುಕ್ತರು ಮತ್ತು ಪಾಲಿಕೆಗಳ ಆಯುಕ್ತರು ವಾರಕ್ಕೊಮ್ಮೆಯಾದರೂ ಮುನ್ಸೂಚನೆ ಇಲ್ಲದೆ ಕಚೇರಿಗಳಿಗೆ ದಿಢೀರ್ ಭೇಟಿ ನೀಡಲಿ. ಆಗ ಹಾಜರಾತಿ ಪುಸ್ತಕದಲ್ಲಿ ನಡೆಯುತ್ತಿರುವ ಅಕ್ರಮ ಬಯಲಾಗುತ್ತದೆ” ಎಂದು ರಮೇಶ್ ಸವಾಲು ಹಾಕಿದ್ದಾರೆ.
ಬೆಂಗಳೂರಿನ ನಾಗರಿಕರ ಮತ್ತು ತೆರಿಗೆದಾರರ ಪರವಾಗಿ, ಕೂಡಲೇ ಡಿಜಿಟಲ್ ತಂತ್ರಜ್ಞಾನದ ಮೂಲಕ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಿ, ಈ ಪಾಲಿಕೆಗೆ ಹಾಗೂ ಸಾರ್ವಜನಿಕರಿಗೆ ಆಗುವ ಅನಾನುಕೂಲಕ್ಕೆ ಅಂತ್ಯ ಹಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.




















