ಬೆಂಗಳೂರು, ಮಾ.15 www.bengaluruwire.com: ಬೆಂಗಳೂರಿನ ಹೃದಯಭಾಗದ ಐತಿಹಾಸಿಕ ಹಲಸೂರು ಕೆರೆಯ ಸಮಗ್ರ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದೆ.
ಕಳೆದ ಎರಡು ದಶಕಗಳಿಂದ ಶೇಖರಣೆಯಾಗಿದ್ದ ಹೂಳನ್ನು ತೆಗೆಯುವ ಮೂಲಕ ಕೆರೆಯ ಒಡಲನ್ನು ಶುಚಿಗೊಳಿಸಿ, ನಗರದ ಪ್ರಮುಖ ಆಕರ್ಷಣೀಯ ತಾಣವನ್ನಾಗಿ ರೂಪಿಸಲಾಗುತ್ತಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಹೂಳೆತ್ತುವುದರಿಂದ ಅಂತರ್ಜಲಕ್ಕೆ ಬಲ:
ಸುಮಾರು 25 ವರ್ಷಗಳಿಂದ ಕೆರೆಯಲ್ಲಿ ಸಂಗ್ರಹವಾಗಿದ್ದ ಮಲಿನಯುಕ್ತ ಹೂಳನ್ನು (Desilting) ಸಂಪೂರ್ಣವಾಗಿ ತೆಗೆಯಲಾಗುತ್ತಿದೆ. ಇದರಿಂದ ಕೆರೆಯ ಆಳ ಹೆಚ್ಚಾಗಲಿದ್ದು, ನೀರಿನ ಸಂಗ್ರಹ ಸಾಮರ್ಥ್ಯ ಗಣನೀಯವಾಗಿ ವೃದ್ಧಿಸಲಿದೆ. ಈ ಕ್ರಮವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಲು ಸಹಕಾರಿಯಾಗಲಿದೆ.

ವಾಯುವಿಹಾರಿಗಳಿಗೆ ಡಬಲ್ ಲೇಯರ್ ವಾಕ್‌ವೇ:
ನಾಗರಿಕರ ಆರೋಗ್ಯ ಮತ್ತು ವಿಶ್ರಾಂತಿಯನ್ನು ಗಮನದಲ್ಲಿಟ್ಟುಕೊಂಡು ಕೆರೆಯ ಸುತ್ತ ಎರಡು ಹಂತದ ಸುಲಭ ನಡಿಗೆ ಮಾರ್ಗ (Two Level Walkway) ನಿರ್ಮಾಣ ಮಾಡಲಾಗುತ್ತಿದೆ. ಇದರೊಂದಿಗೆ ಸುರಕ್ಷತೆಗಾಗಿ ಆಕರ್ಷಕ ಗ್ರಿಲ್‌ಗಳನ್ನು ಅಳವಡಿಸಲಾಗುತ್ತಿದ್ದು, ಇಡೀ ಪರಿಸರಕ್ಕೆ ಹೊಸ ಕಳೆ ಬರಲಿದೆ.
ಪ್ರಮುಖ ಅಭಿವೃದ್ಧಿ ಕಾರ್ಯಗಳು:
ದ್ವೀಪಗಳ ಪುನರ್ನಿರ್ಮಾಣ: ಕೆರೆಯಲ್ಲಿನ ದುಸ್ಥಿತಿಯಲ್ಲಿದ್ದ 3 ದ್ವೀಪಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮರುನಿರ್ಮಾಣ ಮಾಡಲಾಗುತ್ತಿದೆ.
ಸಂಪರ್ಕ ಸೇತುವೆ: ಕೆರೆಯ ಪ್ರದೇಶವನ್ನು ಸಮೀಪದ ಉದ್ಯಾನವನದೊಂದಿಗೆ ಜೋಡಿಸಲು ಸುಂದರ ಸಂಪರ್ಕ ಸೇತುವೆ ನಿರ್ಮಾಣವಾಗುತ್ತಿದೆ.
NDRF ತರಬೇತಿಗೆ ಅನುಕೂಲ: ಕೆರೆಯ ಆಳ ಹೆಚ್ಚಾಗುವುದರಿಂದ ಸೈನ್ಯ ಹಾಗೂ NDRF ಸಿಬ್ಬಂದಿಗಳ ತರಬೇತಿ ಚಟುವಟಿಕೆಗಳಿಗೆ ಇದು ವರದಾನವಾಗಲಿದೆ.
ಹೊಸ ಕಲ್ಯಾಣಿ: ಧಾರ್ಮಿಕ ಚಟುವಟಿಕೆಗಳಿಗಾಗಿ ಪ್ರತ್ಯೇಕ ಹೊಸ ಕಲ್ಯಾಣಿಯನ್ನು ನಿರ್ಮಿಸಲಾಗುತ್ತಿದೆ.
ಪರಿಸರ ಸಮತೋಲನ ಕಾಯ್ದುಕೊಳ್ಳುವುದರ ಜೊತೆಗೆ, ವಾಯುವಿಹಾರಿಗಳಿಗೆ ಆಸನಗಳ ವ್ಯವಸ್ಥೆ ಮತ್ತು ಹಸಿರು ಉದ್ಯಾನವನ ಅಭಿವೃದ್ಧಿಪಡಿಸುವ ಮೂಲಕ ಹಲಸೂರು ಕೆರೆಯನ್ನು ಬೆಂಗಳೂರಿನ ‘ಗ್ರೀನ್ ಹಬ್’ ಆಗಿ ಪರಿವರ್ತಿಸುವುದು ನಮ್ಮ ಗುರಿ ಎಂದು ಆಯುಕ್ತರು ತಿಳಿಸಿದ್ದಾರೆ.




















