ಬೆಂಗಳೂರು, ಮಾ.14 www.bengaluruwire.com : ಇರಾನ್, ಇಸ್ರೇಲ್ ಮತ್ತು ಅಮೆರಿಕಾ ನಡುವಿನ ಸಂಘರ್ಷ ತೀವ್ರಗೊಂಡು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಏರುಪೇರಾಗುತ್ತಿದೆ. ಆದರೆ ರಾಜ್ಯದಲ್ಲಿ ಆ ಸಮಸ್ಯೆಯಿಲ್ಲ ಅಂತಿದೆ ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ (AKFPT).
ಆದರೆ, ಕರ್ನಾಟಕ ರಾಜ್ಯಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಎಕೆಎಫ್ ಪಿಟಿ ಸಾರ್ವಜನಿಕರಿಗೆ ಭರವಸೆ ನೀಡಿದೆ.
ಜಾಗತಿಕ ಸಂಘರ್ಷ ಮತ್ತು ಪೂರೈಕೆ ಜಾಲ:
ಕಳೆದ 15 ದಿನಗಳಿಂದ ನಡೆಯುತ್ತಿರುವ ಅಂತರರಾಷ್ಟ್ರೀಯ ಬೆಳವಣಿಗೆಗಳು ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ತೈಲ ಸಾಗಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬೆಳವಣಿಗೆಗಳು ಜನರಲ್ಲಿ ಇಂಧನ ಕೊರತೆಯ ಆತಂಕ ಮೂಡಿಸಿವೆ. ಇದನ್ನು ಗಮನಿಸಿರುವ AKFPT, ರಾಜ್ಯದ ಜನತೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದೆ.

ತೈಲ ಕಂಪನಿಗಳ ಸನ್ನದ್ಧತೆ:
ರಾಜ್ಯದ ಪ್ರಮುಖ ಆಯಿಲ್ ಮಾರ್ಕೆಟಿಂಗ್ ಕಂಪನಿಗಳಾದ (OMCs) ಇಂಡಿಯನ್ ಆಯಿಲ್ (IOC), ಭಾರತ್ ಪೆಟ್ರೋಲಿಯಂ (BPCL), ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಮತ್ತು ಮಂಗಳೂರು ರಿಫೈನರಿ (MRPL) ಕಂಪನಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಟರ್ಮಿನಲ್‌ಗಳಿಂದ ಪೆಟ್ರೋಲ್ ಬಂಕ್‌ಗಳಿಗೆ (Retail Outlets) ಇಂಧನ ಸರಬರಾಜು ಸುಗಮವಾಗಿ ನಡೆಯುತ್ತಿದೆ ಎಂದು ಸಂಘಟನೆ ಖಚಿತಪಡಿಸಿದೆ.
ಸಾರ್ವಜನಿಕರಿಗೆ ಸಂಘಟನೆಯ ಮನವಿಯೇನು?:
“ರಾಜ್ಯದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಲಭ್ಯವಿದೆ. ಸಾರ್ವಜನಿಕರು ಅನಗತ್ಯವಾಗಿ ಇಂಧನ ಸಂಗ್ರಹಿಸಲು ಮುಂದಾಗಬಾರದು. ‘ಪ್ಯಾನಿಕ್ ಬೈಯಿಂಗ್’ ಮಾಡುವುದರಿಂದ ಸರಬರಾಜು ವ್ಯವಸ್ಥೆಯ ಮೇಲೆ ಅನಗತ್ಯ ಒತ್ತಡ ಉಂಟಾಗುತ್ತದೆ,” ಎಂದು AKFPT ತಂಡ ಮನವಿ ಮಾಡಿದೆ. ಪ್ರಸ್ತುತ ರಿಫೈನರಿಯಿಂದ ಗ್ರಾಹಕರ ವಾಹನಗಳವರೆಗೆ ತಲುಪುವ ಇಡೀ ವ್ಯವಸ್ಥೆ ಸುಸ್ಥಿತಿಯಲ್ಲಿದ್ದು, ಯಾವುದೇ ಅಡೆತಡೆಯಿಲ್ಲದೆ ಸೇವೆ ಮುಂದುವರಿಯಲಿದೆ ಎಂದು ಫೆಡರೇಶನ್ ಸ್ಪಷ್ಟಪಡಿಸಿದೆ.



















