ನವದೆಹಲಿ, ಮಾ.14 www.bengaluruwire.com: ದೇಶದ ಆಹಾರ ಉದ್ಯಮಿಗಳಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ.
ಇನ್ನುಮುಂದೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನೀಡುವ ನೋಂದಣಿ ಪ್ರಮಾಣಪತ್ರ ಹಾಗೂ ಪರವಾನಗಿಗಳು ಜೀವಿತಾವಧಿ (Perpetual Validity) ಮಾನ್ಯತೆ ಹೊಂದಿರಲಿವೆ. ವ್ಯಾಪಾರ-ವಹಿವಾಟನ್ನು ಇನ್ನಷ್ಟು ಸುಗಮಗೊಳಿಸುವ (Ease of Doing Business) ನಿಟ್ಟಿನಲ್ಲಿ ಈ ಐತಿಹಾಸಿಕ ಸುಧಾರಣೆಗಳನ್ನು ತರಲಾಗಿದೆ.
ನವೀಕರಣದ ಅಗತ್ಯವಿಲ್ಲ:
ಈ ಹಿಂದೆ ಪ್ರತಿ 1 ರಿಂದ 5 ವರ್ಷಕ್ಕೊಮ್ಮೆ ಪರವಾನಗಿ ನವೀಕರಿಸುವ (Renewal) ಅನಿವಾರ್ಯತೆ ಇತ್ತು. ಆದರೆ ಹೊಸ ನಿಯಮದ ಪ್ರಕಾರ, ಒಮ್ಮೆ ಪರವಾನಗಿ ಪಡೆದರೆ ಅದು ಶಾಶ್ವತವಾಗಿರಲಿದೆ. ಆದರೆ, ಆಹಾರ ವ್ಯವಹಾರ ನಡೆಸುವವರು (FBO) ನಿಯಮಿತವಾಗಿ ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದಾಗುವ ಸಾಧ್ಯತೆಯೂ ಇರುತ್ತದೆ.

ನೋಂದಣಿ ಮಿತಿಯಲ್ಲಿ ಭಾರಿ ಹೆಚ್ಚಳ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೋಂದಣಿಗೆ ಅಗತ್ಯವಿರುವ ವಾರ್ಷಿಕ ವಹಿವಾಟು ಮಿತಿಯನ್ನು ಈ ಹಿಂದೆ ಇದ್ದ 12 ಲಕ್ಷ ರೂಪಾಯಿಗಳಿಂದ 1.5 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ. ಈ ಮಹತ್ವದ ಬದಲಾವಣೆಯು ಮಾರ್ಚ್ 10ರಿಂದಲೇ ಜಾರಿಗೆ ಬಂದಿದೆ ಎಂದು ಎಫ್‌ಎಸ್‌ಎಸ್‌ಎಐ ತಿಳಿಸಿದೆ.
ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ:
ನಗರಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ನೋಂದಾಯಿತರಾಗಿರುವ ಬೀದಿಬದಿ ಆಹಾರ ವ್ಯಾಪಾರಿಗಳು ಇನ್ಮುಂದೆ ಎಫ್‌ಎಸ್‌ಎಸ್‌ಎಐ ಅಡಿಯಲ್ಲಿ ಸ್ವಯಂಚಾಲಿತವಾಗಿ ‘ಡೀಮ್ಡ್ ನೋಂದಾಯಿತ’ (Deemed Registered) ಎಂದು ಪರಿಗಣಿಸಲ್ಪಡುತ್ತಾರೆ. ಇದರಿಂದ ಸಣ್ಣ ವ್ಯಾಪಾರಿಗಳು ಪ್ರತ್ಯೇಕವಾಗಿ ನೋಂದಣಿ ಮಾಡಿಸುವ ತೊಂದರೆ ತಪ್ಪಿದಂತಾಗಿದೆ.
ಬೆಂಗಳೂರು ಹೋಟೆಲುಗಳ ಸಂಘವು ಈ 2023ರ ಮೇ ತಿಂಗಳಿನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನಸುಖ್ ಮಾಂಡವೀಯ ಹಾಗೂ ಎಫ್ಎಸ್ಎಸ್ಎಎಸ್ಐ ಅಧಿಕಾರಿಗಳನ್ನು ಭೇಟಿ ಮಾಡಿ, ಎಫ್ಎಸ್ಎಸ್ಎಎಸ್ಐ ಪರವಾನಗಿಯನ್ನು ಪ್ರತಿ 1 ರಿಂದ 5 ವರ್ಷಕ್ಕೊಮ್ಮೆ ಪರವಾನಗಿ ನವೀಕರಿಸುವ ಅವಶ್ಯಕತೆಯಿತ್ತು. ಈ ಪರವಾನಗಿ ಒಮ್ಮೆ ವಿತರಿಸಿದರೆ ಅದರ ಮಾನ್ಯತೆ ಶಾಶ್ವತವಾಗಿಸುವಂತೆ ಮನವಿ ಪತ್ರ ನೀಡಿ, ನಿರಂತರವಾಗಿ ಈ ಬಗ್ಗೆ ಇಲಾಖೆ ಹಾಗೂ ಎಫ್ಎಸ್ಎಸ್ಎಎಸ್ಐ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿತ್ತು. ಅಲ್ಲದೆ ತಮ್ಮ ಬೇಡಿಕೆ ಸಾಕಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ನೆರವನ್ನು ಪಡೆದಿತ್ತು. ಇದೀಗ ಕೇಂದ್ರ ಸರ್ಕಾರ ತಮ್ಮ ಕೋರಿಕೆಯನ್ನು ಪರಿಗಣಿಸಿದ್ದಕ್ಕೆ ಬೆಂಗಳೂರು ಹೋಟೆಲುಗಳ ಸಂಘವು ಕೃತಜ್ಞತೆಯನ್ನು ಸಲ್ಲಿಸಿದೆ.




















