ಬೆಂಗಳೂರು, ಮಾ.13 www.bengaluruwire.com: ಪ್ರಸ್ತುತ ಕೊಲ್ಲಿ ರಾಷ್ಟ್ರಗಳ ಯುದ್ಧದ ಹಿನ್ನೆಲೆಯಲ್ಲಿ ಎಲ್ ಪಿಜಿ (LPG) ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಆದರೆ, ರಾಜ್ಯದಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸ್ಪಷ್ಟಪಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಇಲಾಖೆಯ ಆಯುಕ್ತರು, ರಾಜ್ಯ ಸರ್ಕಾರವು ಪ್ರಮುಖ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಮ್ ಕಾರ್ಪೊರೇಷನ್ (BPC) ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಮ್ ಕಾರ್ಪೊರೇಷನ್ (HPC) ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ರಾಜ್ಯದಲ್ಲಿ ಸದ್ಯಕ್ಕೆ ಅಡುಗೆ ಅನಿಲದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದ್ದು, ಗ್ರಾಹಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಅನಗತ್ಯ ಬುಕಿಂಗ್ ಮಾಡಬೇಡಿ:
ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗದಂತೆ ತಡೆಯಲು ಗ್ರಾಹಕರು ಸಹಕರಿಸಬೇಕು. ಆತಂಕಕ್ಕೆ ಒಳಗಾಗಿ ತುರ್ತು ಮತ್ತು ಅನಗತ್ಯವಾಗಿ ಸಿಲಿಂಡರ್ ಬುಕಿಂಗ್ ಮಾಡಬೇಡಿ. ಮಾರುಕಟ್ಟೆಯಲ್ಲಿ ಸಮತೋಲನ ಕಾಪಾಡಲು ಪೂರೈಕೆಗೆ ತಕ್ಕಂತೆ ಬಳಕೆ ಮಾಡಬೇಕು ಎಂದು ಇಲಾಖೆ ಮನವಿ ಮಾಡಿದೆ.

ಅಗತ್ಯ ಸೇವೆಗಳಿಗೆ ಆದ್ಯತೆ:
ಸರ್ಕಾರಿ ಆಸ್ಪತ್ರೆಗಳು, ವಿದ್ಯಾರ್ಥಿನಿಲಯಗಳು, ಅಂಗನವಾಡಿ, ಶಾಲೆ-ಕಾಲೇಜು ಮತ್ತು ಕಾರಾಗೃಹಗಳಂತಹ ಅಗತ್ಯ ಸೇವೆ ಒದಗಿಸುವ ಸಂಸ್ಥೆಗಳಿಗೆ ಅಡುಗೆ ಅನಿಲದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ವಹಿಸಲು ತೈಲ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.
ಅಕ್ರಮ ಎಸಗಿದರೆ ಜೈಲು ಶಿಕ್ಷೆ:
ಗ್ಯಾಸ್ ಸಿಲಿಂಡರ್‌ಗಳ ಅನಧಿಕೃತ ದಾಸ್ತಾನು, ಸಾಗಾಣಿಕೆ ಅಥವಾ ರೀಫಿಲ್ಲಿಂಗ್ ಮಾಡುವವರ ವಿರುದ್ಧ ‘ಅಗತ್ಯ ವಸ್ತುಗಳ ಕಾಯ್ದೆ 1955’ (Essential Commodities Act 1955) ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.





















