ಬೆಂಗಳೂರು, ಮಾ.11 www.bengaluruwire.com: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿ ಮತ್ತು ಇಂಧನ ಪೂರೈಕೆಯಲ್ಲಿನ ವ್ಯತ್ಯಯ ಈಗ ರಾಜ್ಯದ ಮುಜರಾಯಿ ಇಲಾಖೆಯ ‘ಎ’ ದರ್ಜೆಯ ದೇವಸ್ಥಾನಗಳ ಮೇಲೆ ನೇರ ಪರಿಣಾಮ ಬೀರಿದೆ.
ಭಕ್ತರಿಗೆ ಪ್ರತಿದಿನ ನೀಡಲಾಗುವ ಅನ್ನದಾಸೋಹ ಹಾಗೂ ಪ್ರಸಾದ ವಿನಿಯೋಗಕ್ಕೆ ವಾಣಿಜ್ಯ ಸಿಲಿಂಡರ್‌ಗಳ ಕೊರತೆ ಎದುರಾಗಿದ್ದು, ಹಲವು ದೇವಸ್ಥಾನಗಳು ಸಂಕಷ್ಟಕ್ಕೆ ಸಿಲುಕಿವೆ.
ಕುಕ್ಕೆ ಸುಬ್ರಹ್ಮಣ್ಯ: ಮೆನುವಿನಲ್ಲಿ ಕಡಿತ, ಕಟ್ಟಿಗೆ ಒಲೆಯತ್ತ ಚಿತ್ತ
ಪ್ರತಿದಿನ ಸರಾಸರಿ 10,000 ಭಕ್ತರಿಗೆ ದಾಸೋಹ ನಡೆಸುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಿತ್ಯ 20 ಸಿಲಿಂಡರ್‌ಗಳ ಅಗತ್ಯವಿದೆ. ಗ್ಯಾಸ್ ಅಭಾವದಿಂದಾಗಿ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಅನ್ನ, ಸಾಂಬಾರ್ ಜೊತೆ ಇದ್ದ ಎರಡು ಪಲ್ಯಗಳನ್ನು ಒಂದಕ್ಕೆ ಸೀಮಿತಗೊಳಿಸಲಾಗಿದೆ. “ಮುಂಜಾಗ್ರತೆಯಾಗಿ ಎರಡು ಲೋಡ್ ಕಟ್ಟಿಗೆ ತರಿಸಲಾಗಿದ್ದು, ಅನಿವಾರ್ಯವಾದರೆ ಕಟ್ಟಿಗೆ ಒಲೆಯಲ್ಲೇ ಅಡುಗೆ ಮಾಡಲಾಗುವುದು” ಎಂದು ದೇವಸ್ಥಾನದ ಅಧಿಕಾರಿ ಅರವಿಂದ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಎಚ್‌ಪಿ ಗ್ಯಾಸ್ ಏಜೆನ್ಸಿಗೆ ತುರ್ತು ಪೂರೈಕೆಗೆ ಮನವಿ ಮಾಡಲಾಗಿದೆ.

ಬನಶಂಕರಿ ದೇವಸ್ಥಾನ: ಶುಕ್ರವಾರದಿಂದ ಪ್ರಸಾದ ಬಂದ್ ಭೀತಿ?:
ಬನಶಂಕರಿ ದೇವಸ್ಥಾನದಲ್ಲಿ ವಾಣಿಜ್ಯ ಅಡುಗೆ ಅನಿಲ ಪೂರೈಕೆಯಲ್ಲಿ ಕೊರತೆಯಾಗಿರುವುದರಿಂದ ಪ್ರಸಾದ ಮಾಡಲು ಗ್ಯಾಸ್(Gas) ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ 3 ಸಾವಿರದಿಂದ 4 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಿದರೆ ಶುಕ್ರವಾರ ಹಾಗೂ ಮಂಗಳವಾರ 4 ರಿಂದ 5 ಸಾವಿರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಬೆಳಗ್ಗೆ ಭಕ್ತಾದಿಗಳಿಗೆ ಪೊಂಗಲ್, ಪುಳಿಯೊಗರೆ, ರೈಸ್ ಬಾತ್‌ಗಳನ್ನು ಪ್ರಸಾದವಾಗಿ ನೀಡಿದರೆ ಮಧ್ಯಾಹ್ನ ಅನ್ನ ಸಾಂಬರ್ ನೀಡಲಾಗುತ್ತದೆ. ಸಂಜೆಯೂ ಪ್ರಸಾದ ವಿತರಿಸಲಾಗುತ್ತದೆ.
ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ವಾಣಿಜ್ಯ ಸಿಲಿಂಡರ್‌ಗಳ ತೀವ್ರ ಅಭಾವ ತಲೆದೋರಿದೆ. ಕೇವಲ 4 ಸಿಲಿಂಡರ್‌ಗಳು ಮಾತ್ರ ಬಾಕಿ ಇವೆ. “ಇದು ನಾಳೆ ಸಂಜೆಯವರೆಗೆ ಮಾತ್ರ ಸಾಕಾಗಬಹುದು. ಸಿಲಿಂಡರ್ ಪೂರೈಕೆಯಾಗದಿದ್ದರೆ ಶುಕ್ರವಾರದಿಂದ ಪ್ರಸಾದ ವಿತರಣೆ ನಿಲ್ಲಿಸಬೇಕಾದೀತು” ಎಂದು ದೇವಸ್ಥಾನದ ಮೂಲಗಳು ಆತಂಕ ವ್ಯಕ್ತಪಡಿಸಿವೆ.
ಕೊಲ್ಲೂರು ಮತ್ತು ನಂಜನಗೂಡು: ಸದ್ಯಕ್ಕೆ ಪರಿಸ್ಥಿತಿ ಸುಸ್ಥಿತಿಯಲ್ಲಿದೆ:
ಕೊಲ್ಲೂರು ದೇವಸ್ಥಾನದಲ್ಲಿ ಸೀಸನ್ ಅಲ್ಲದ ಸಂದರ್ಭದಲ್ಲಿ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಸಂದರ್ಭದಲ್ಲಿ 10,000-12,000 ಭಕ್ತರಿಗೆ ಪ್ರಸಾದ ಹಾಗೂ ಲಡ್ಡು ವಿತರಣೆ ನೀಡಲಾಗುತ್ತೆ. ಏಪ್ರಿಲ್-ಮೇ ತಿಂಗಳಲ್ಲಿ, ಶಾಲಾ-ಕಾಲೇಜುಗಳಿಗೆ ರಜಾ ಹಾಗೂ ಹಬ್ಬದ ಸಂದರ್ಭದಲ್ಲಿ 15,000 ರಿಂದ 16,000 ಭಕ್ತರು ಪ್ರತಿದಿನ ಊಟ ವಿತರಣೆಯಾಗುತ್ತದೆ. ಪ್ರತಿದಿನ 15-16 ಗ್ಯಾಸ್ ಸಿಲೆಂಡರ್ ಬೇಕಾಗುತ್ತದೆ, ಸೀಸನ್ ಸಮಯ 20 ಸಿಲೆಂಡರ್ ಬೇಕು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸದ್ಯ 43 ವಾಣಿಜ್ಯ ಸಿಲಿಂಡರ್‌ಗಳ ದಾಸ್ತಾನು ಇದೆ. ಅಲ್ಲದೆ, ಗೃಹ ಬಳಕೆಯ ಅನಿಲ ಸಂಪರ್ಕ ಇರುವುದರಿಂದ ಸದ್ಯಕ್ಕೆ ಸಮಸ್ಯೆಯಾಗಿಲ್ಲ ಎಂದು ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಾರಕ್ಕೆ 20 ವಾಣಿಜ್ಯ ಗ್ಯಾಸ್ ಸಿಲೆಂಡರ್ ಬೇಕಾಗುತ್ತೆ. ಪ್ರತಿದಿನ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಭಕ್ತರಿಗೆ ನೀಡಲಾಗುತ್ತದೆ. ಹುಣ್ಣಿಮೆ, ಭಾನುವಾರ, ಸೋಮವಾರ, ಚಿಕ್ಕ- ದೊಡ್ಡ ಜಾತ್ರೆ, ಗಿರಿಜಾ ಕಲ್ಯಾಣೋತ್ಸವ, ಸರ್ಕಾರಿ ರಜಾದಿನಗಳು, ಕಾರ್ತಿಕ ಮಾಸದಲ್ಲಿ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.
ಶ್ರೀಕಂಠೇಶ್ವರ ದೇವಸ್ಥಾನದಲ್ಲೂ ಸದ್ಯ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಧಾರ್ಮಿಕ ದತ್ತಿ ಅಧಿಕಾರಿ ಸಿ.ಜೆ. ಕೃಷ್ಣ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 15 ದಿನಗಳ ತನಕ ಗ್ಯಾಸ್ ಸಂಗ್ರಹವಿದೆ:
ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸದ್ಯಕ್ಕೆ 15 ದಿನಗಳಿಗೆ ಆಗುವಷ್ಟು ವಾಣಿಜ್ಯ ಸಿಲಿಂಡರ್ ಸಂಗ್ರಹವಿದೆ. ಇವತ್ತು ಎಚ್ ಪಿ ಹಾಗೂ ಇಂಡೇನ್ ಗ್ಯಾಸ್ ಏಜನ್ಸಿ ಅವರಿಗೆ ಗ್ಯಾಸ್ ಸಿಲೆಂಡರ್ ಪೂರೈಸುವಂತೆ ಕೇಳಿದ್ದೇವೆ. ಪ್ರತಿದಿನ ಬೆಳಗ್ಗೆ 1,300 ಜನಕ್ಕೆ, ಮಧ್ಯಾಹ್ನ 3,000 ಜನಕ್ಕೆ, ಸಂಜೆ 1,000 ಸರಾಸರಿಯಾಗಿ ದೇವಸ್ಥಾನದಿಂದ ಪ್ರಸಾದ ವಿನಿಯೋಗ ಮಾಡುತ್ತೇವೆ. ಒಟ್ಟಾರೆ ಪ್ರತಿದಿನ ಸರಾಸರಿಯಾಗಿ 5000 ಜನರಿಗೆ ಪ್ರಸಾದ ರೂಪದಲ್ಲಿ ಊಟ ಬಡಿಸಲಾಗುತ್ತದೆ. ದೇವಿ ದೇವಸ್ಥಾನವಾದ್ದರಿಂದ ಮಂಗಳವಾರ, ಶನಿವಾರ ದಿನಗಳಲ್ಲಿ ಕನಿಷ್ಠ 10,000 ಜನಕ್ಕೆ ಪ್ರಸಾದ ವಿನಿಯೋಗ ಆಗುತ್ತೆ ಎಂದು ದೇವಸ್ಥಾನದ ಧಾರ್ಮಿಕ ದತ್ತಿ ಅಧಿಕಾರಿ ರೂಪಾ.ಎಂ.ಜೆ ಬೆಂಗಳೂರು ವೈರ್ ಗೆ ಮಾಹಿತಿ ನೀಡಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧ ಮುಂದುವರಿದರೆ, ಮುಂಬರುವ ಏಪ್ರಿಲ್-ಮೇ ತಿಂಗಳ ‘ಸೀಸನ್’ ಸಮಯದಲ್ಲಿ ಲಕ್ಷಾಂತರ ಭಕ್ತರಿಗೆ ಪ್ರಸಾದ ನೀಡಲು ಮುಜರಾಯಿ ಇಲಾಖೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. (AI Graphic Poster Courtesy : Gemini)




















